ಉಪ್ಪಿನಂಗಡಿ: ಅಡುಗೆ ಅನಿಲ ಸಾಗಾಟ ಮಾಡುತ್ತಿದ್ದ ಟ್ಯಾಂಕರೊಂದು ಚಾಲಕನ ನಿಯಂತ್ರಣ ತಪ್ಪಿ ಮಗುಚಿದ ಪರಿಣಾಮ ಅನಿಲ ಸೋರಿಕೆಯಾದ ಘಟನೆ ಶನಿವಾರ ರಾತ್ರಿ 11 ಗಂಟೆ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ 75ರ ಬೆದ್ರೋಡಿಯಲ್ಲಿ ಸಂಭವಿಸಿದೆ. ಇದರಿಂದಾಗಿ ಪರಿಸರದಲ್ಲಿ ಸ್ವಲ್ಪ ಹೊತ್ತು ಆತಂಕ ನೆಲೆಸಿತ್ತು.
ಮಂಗಳೂರಿನಿಂದ ಬೆಂಗಳೂರಿನತ್ತ ಸಾಗುತ್ತಿದ್ದ ಟ್ಯಾಂಕರ್ ಉಪ್ಪಿನಂಗಡಿ ಸಮೀಪದ ಬಜತ್ತೂರು ಗ್ರಾಮದ ಬೆದ್ರೋಡಿ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮಗುಚಿಬಿದ್ದಿತು. ಘಟನೆ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ ಸ್ಥಳೀಯ ಯುವಕರು ಉಪ್ಪಿನಂಗಡಿಯಲ್ಲೇ ಇತರ ವಾಹನಗಳಿಗೆ ತಡೆಯೊಡ್ಡುವ ಮೂಲಕ ಹೆಚ್ಚಿನ ಅನಾಹುತ ತಪ್ಪಿಸಿದರು. ಸ್ಥಳಕ್ಕೆ ಧಾವಿಸಿದ ಉಪ್ಪಿನಂಗಡಿ ಪೊಲೀಸರು ಹಾಗೂ ಪುತ್ತೂರು ಸಂಚಾರ ಪೊಲೀಸರು ಘಟನಾ ಸ್ಥಳದಲ್ಲಿ ಸೂಕ್ತ ರಕ್ಷಣಾ ಕ್ರಮಗಳನ್ನು ಕೈಗೊಂಡರು.
ಪರಿಸರದಲ್ಲಿ ಅನಿಲದ ವಾಸನೆ ಹರಡಿದ್ದು, ಮನೆಗಳಲ್ಲಿ ಯಾವುದೇ ಕಾರಣಕ್ಕೂ ಬೆಂಕಿ, ವಿದ್ಯುತ್ ಬಳಸದಂತೆ ಸೂಚಿಸಲಾಯಿತು. ಮುಂಜಾಗ್ರತಾ ಕ್ರಮವಾಗಿ ಪುತ್ತೂರು, ಬಂಟ್ವಾಳ, ಬೆಳ್ತಂಗಡಿ, ಮಂಗಳೂರು ಕಡೆಗಳಿಂದ ಅಗ್ನಿಶಾಮಕ ದಳವನ್ನು ಕರೆಯಿಸಲಾಗಿತ್ತು.
ಅಪಘಾತದಿಂದಾಗಿ ಬೆಂಗಳೂರು – ಮಂಗಳೂರು ನಡುವೆ ಪ್ರಯಾಣಿಕ ವಾಹನಗಳನ್ನು ಸ್ವಲ್ಪ ಸಮಯ ತಡೆಹಿಡಿಯಲಾಯಿತು, ಬಳಿಕ ಪರ್ಯಾಯ ಮಾರ್ಗದಲ್ಲಿ ಸಂಚಾರ ಮುಂದುವರಿಸಿದವು. ಅಪಘಾತಕ್ಕೀಡಾದ ಟ್ಯಾಂಕರ್‌ನಿಂದ ಇನ್ನೊಂದು ಟ್ಯಾಂಕರ್‌ಗೆ ಅನಿಲವನ್ನು ವರ್ಗಾಯಿಸುವ ಪ್ರಕ್ರಿಯೆ ರವಿವಾರ ಮಧ್ಯಾಹ್ನ 2.30ರ ವೇಳೆಗೆ ಪೂರ್ಣಗೊಂಡು ಹೆದ್ದಾರಿಯಲ್ಲಿ ಸಂಚಾರ ಪುನರಾರಂಭಗೊಂಡಿತು.
ಟ್ಯಾಂಕರ್ ಚಾಲಕ ಬೆಂಗಳೂರು ಮೂಲದ ಪುಷ್ಪರಾಜ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಉಪ್ಪಿನಂಗಡಿ ಪೊಲೀಸ್ ಠಾಣಾ ಎಸ್‌ಐ ನಂದ ಕುಮಾರ್ ಹಾಗೂ ಪುತ್ತೂರು ಸಂಚಾರ ಠಾಣೆ ಎಸ್‌ಐ ನಾರಾಯಣ ರೈ ನೇತೃತ್ವದಲ್ಲಿ ಸೂಕ್ತ ಬಂದೋಬಸ್ತು ಕೈಗೊಳ್ಳಲಾಯಿತು.