Advertisement

ಅಜೆಕಾರು ಭಾಗದಲ್ಲಿ ಲೋ ವೋಲ್ಟೇಜ್ ಸಮಸ್ಯೆ

11:36 PM Aug 01, 2019 | Sriram |

ಅಜೆಕಾರು: ಅಜೆಕಾರು ಹಾಗೂ ಸುತ್ತಲ ಗ್ರಾಮಗಳಲ್ಲಿ ವಿದ್ಯುತ್‌ ಲೋ ವೋಲ್ಟೇಜ್ ಸಮಸ್ಯೆ ನಿರಂತರವಾಗಿದ್ದು ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಸಬ್‌ಸ್ಟೇಶ‌ನ್‌ ನಿರ್ಮಾಣ ಮಾಡುವಂತೆ ದಶಕಗಳಿಂದ ಮನವಿ ಮಾಡುತ್ತಾ ಬಂದಿದ್ದರೂ ಸಬ್‌ಸ್ಟೇಶ‌ನ್‌ ನಿರ್ಮಾಣ ಇನ್ನೂ ಪ್ರಕ್ರಿಯೆ ಹಂತದಲ್ಲಿಯೇ ಇದೆ.

Advertisement

4 ಗ್ರಾ.ಪಂ. ಹಾಗೂ 4 ಕಂದಾಯ ಗ್ರಾಮಗಳನ್ನು ಸೇರಿಸಿ ಅಜೆಕಾರು ಕೇಂದ್ರಿತವಾಗಿ ಮೆಸ್ಕಾಂ ಸಬ್‌ಸ್ಟೇಶ‌ನ್‌ ನಿರ್ಮಾಣ ಮಾಡುವಂತೆ ಹಲವು ವರ್ಷಗಳಿಂದ ನಿರಂತರ ಮನವಿ ಮಾಡಲಾಗುತ್ತಿದೆ. ಅಲ್ಲದೆ ಸಬ್‌ಸ್ಟೇಶ‌ನ್‌ ನಿರ್ಮಾಣಕ್ಕಾಗಿ ಅಜೆಕಾರು ಮಂಗಳಾನಗರ ತಿರುವಿನಲ್ಲಿ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯದ ಹಿಂಭಾಗದಲ್ಲಿ ಸುಮಾರು 2.50 ಎಕ್ರೆ ಜಾಗವನ್ನು 2 ವರ್ಷಗಳ ಹಿಂದೆಯೇ ಖಾದಿರಿಸಲಾಗಿದೆ.

2015ರಲ್ಲಿ 110 ಕೆವಿಯ ಪ್ರಸ್ತಾವನೆ ಸಲ್ಲಿಸಲಾಗಿತ್ತಾದರೂ ಲೋಡ್‌ ಗ್ರೋತ್‌ ಕಡಿಮೆ ಇರುವುದಾಗಿ ಕೆಪಿಟಿಸಿಎಲ್‌ ಪ್ರಸ್ತಾವನೆಯನ್ನು ತಿರಸ್ಕರಿಸಿತ್ತು. ನಂತರದ ದಿನಗಳಲ್ಲಿ 18 ಎಂವಿಎ 33/1 ಕೆವಿಯ ಸಬ್‌ಸ್ಟೇಶ‌ನ್‌ ಅಜೆಕಾರಿನಲ್ಲಿ ನಿರ್ಮಾಣ ಮಾಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.

ಈ ಪ್ರಸ್ತಾವನೆಗೆ ಆಗಸ್ಟ್‌ 8, 2018ರಂದು ಮೆಸ್ಕಾಂನ ಟೆಕ್ನಿಕಲ್‌ ಎಡ್ವೆçಸರಿ ಕಮಿಟಿಯಿಂದ ಅನುಮತಿ ಸಿಕ್ಕಿದ್ದು ಅನಂತರ 9 ಕೋ. ರೂ.ಯ ಅಂದಾಜು ಪಟ್ಟಿ ತಯಾರಿಸಿ ಮೆಸ್ಕಾಂನ ಉನ್ನತಾಧಿಕಾರಿಗಳಿಗೆ ಸ್ಥಳೀಯ ಅಧಿಕಾರಿಗಳು ಸಲ್ಲಿಸಿದ್ದಾರೆ. ಅದಕ್ಕೆ ಇನ್ನು ಆಡಳಿತಾತ್ಮಕ ಅನುಮೋದನೆ ಸಿಗಬೇಕಾಗಿದೆ.

ಮರ್ಣೆ, ಕಡ್ತಲ, ವರಂಗ, ಶಿರ್ಲಾಲು ಗ್ರಾಮ ಪಂಚಾಯತ್‌ ವ್ಯಾಪ್ತಿ ಹಾಗೂ ಅಂಡಾರು, ಹೆರ್ಮುಂಡೆ, ಎಳ್ಳಾರೆ, ಕುಕ್ಕುಜೆ ಕಂದಾಯ ಗ್ರಾಮಗಳ ವ್ಯಾಪ್ತಿಯು ಈ ಸಬ್‌ಸ್ಟೇಶ‌ನ್‌ ವ್ಯಾಪ್ತಿಯಲ್ಲಿ ಬರುವುದರಿಂದ ಈ ಗ್ರಾಮಗಳ ನಾಗರೀಕರಿಗೆ ಅನುಕೂಲವಾಗಲಿದೆ.

Advertisement

ಈ ಗ್ರಾಮಗಳು ಈಗ ಕಾರ್ಕಳ ಮತ್ತು ಹೆಬ್ರಿ ಸಬ್‌ಸ್ಟೇಶ‌ನ್‌ ವ್ಯಾಪ್ತಿಯಲ್ಲಿ ಬರುವುದರಿಂದ ಲೋ ವೋಲ್ಟೇಜ್ ಸಮಸ್ಯೆ ನಿರಂತರವಾಗಿದೆ. ಅಲ್ಲದೆ ಮಳೆಗಾಲದಲ್ಲಿ ಕಾರ್ಕಳ ಹೆಬ್ರಿ ಭಾಗದಲ್ಲಿ ವಿದ್ಯುತ್‌ ತಂತಿಗಳ ಮೇಲೆ ಮರದ ಕೊಂಬೆಗಳು ಬಿದ್ದಾಗ ಅಜೆಕಾರು ಭಾಗದಲ್ಲಿ

ವಿದ್ಯುತ್‌ ಸಮಸ್ಯೆ ಉಂಟಾಗುತ್ತದೆ. ಈ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಅಜೆಕಾರು ಮೆಸ್ಕಾಂ ಸಬ್‌ಸ್ಟೇಷನ್‌ ತ್ವರಿತವಾಗಿ ನಿರ್ಮಾಣವಾಗಬೇಕಿದೆ ಎಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.

ಖಾದಿರಿಸಿದ ಜಾಗದಲ್ಲಿ ಮರ
ಮೆಸ್ಕಾಂ ಸಬ್‌ಸ್ಟೇಷನ್‌ ನಿರ್ಮಾಣ ಮಾಡಲು ಖಾದಿರಿಸಲಾದ ಜಾಗದಲ್ಲಿ ಸಾಮಾಜಿಕ ಅರಣ್ಯ ಇಲಾಖೆಯು ಹಲವು ವರ್ಷಗಳ ಹಿಂದೆ ಅಕೇಶಿಯಾ ಮರಗಳನ್ನು ನಾಟಿ ಮಾಡಿದೆ. ಈ ಮರಗಳನ್ನು ತೆರವುಗೊಳಿಸುವಂತೆ ಸಾಮಾಜಿಕ ಅರಣ್ಯ ಇಲಾಖೆಗೆ ಕಳೆದ 2 ವರ್ಷಗಳಿಂದ ಮರ್ಣೆ ಪಂಚಾಯತ್‌ ಆಡಳಿತವು ನಿರಂತರ ಮನವಿ ಮಾಡಿದರೂ ಈವರೆಗೆ ಮರಗಳ ತೆರವು ಆಗಿಲ್ಲ. ಸಬ್‌ಸ್ಟೇಷನ್‌ ನಿರ್ಮಾಣಕ್ಕೆ ಮೆಸ್ಕಾಂ ಆಡಳಿತಾತ್ಮಕ ಅನುಮೋದನೆ ತಕ್ಷಣ ದೊರೆತರೂ ಈ ಜಾಗದಲ್ಲಿ ಅಕೇಶಿಯಾ ಮರಗಳು ತುಂಬಿರುವುದರಿಂದ ಸಮಸ್ಯೆ ಉಂಟಾಗಲಿದೆ. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ಮರಗಳ ತೆರವು ಮಾಡುವಲ್ಲಿ ಹೆಚ್ಚಿನ ಮುತುವರ್ಜಿ ವಹಿಸಬೇಕಾಗಿದೆ.

ರೈತರಿಗೆ ಅನುಕೂಲ
ಅಜೆಕಾರಿನಲ್ಲಿ ಸಬ್‌ಸ್ಟೇಶ‌ನ್‌ ನಿರ್ಮಾಣ ಮಾಡುವುದರಿಂದ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ. ಅಜೆಕಾರು ಪರಿಸರದಲ್ಲಿ ಬಹುತೇಕ ಜನರು ಭತ್ತ, ಅಡಿಕೆ ಕೃಷಿಯನ್ನೇ ಅವಲಂಬಿಸಿದ್ದು ಬೇಸಗೆಯಲ್ಲಿ ವಿದ್ಯುತ್‌ ಲೋ ವೋಲ್ಟೇಜ್ ಸಮಸ್ಯೆಯಿಂದಾಗಿ ಕೃಷಿಗೆ ನೀರುಣಿಸಲು ಸಮಸ್ಯೆ ಉಂಟಾಗುತ್ತಿದೆ. ಸಬ್‌ಸ್ಟೇಶ‌ನ್‌ ನಿರ್ಮಾಣವಾದಲ್ಲಿ ಈ ಸಮಸ್ಯೆಗೆ ಪರಿಹಾರ ಸಿಗುವ ಜತೆಗೆ ಹೆಚ್ಚು ಹೆಚ್ಚು ಜನರು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಕೃಷಿ ಭೂಮಿ ಪಾಳು ಬಿಡುವುದನ್ನು ತಡೆಯಬಹುದಾಗಿದೆ.

ಮರಗಳ
ತೆರವಿಗೆ ಸೂಚನೆ
ಅಜೆಕಾರಿನಲ್ಲಿ ಮೆಸ್ಕಾಂ ಸಬ್‌ಸ್ಟೇಶ‌ನ್‌ ನಿರ್ಮಾಣದ ಆಡಳಿತಾತ್ಮಕ ಪ್ರಕ್ರಿಯೆ ನಡೆಯುತ್ತಿದ್ದು ಅನುಮೋದನೆ ಅನಂತರ ಟೆಂಡರ್‌ ನಡೆಯಲಿದ್ದು ಅನಂತರ ತ್ವರಿತವಾಗಿ ಕಾಮಗಾರಿ ಪ್ರಾರಂಭಗೊಳ್ಳಲಿದೆ. ಇದಕ್ಕೂ ಮುನ್ನ ಅರಣ್ಯ ಇಲಾಖೆಯವರು ಖಾಯ್ದಿರಿಸಿದ ಜಾಗದಲ್ಲಿರುವ ಅಕೇಶಿಯಾ ಮರಗಳನ್ನು ತೆರವು ಮಾಡುವಂತೆ ಮರ್ಣೆ ಪಂಚಾಯತ್‌ ಆಡಳಿತ ಸೂಚನೆ ನೀಡಬೇಕಿದೆ.
-ರಘುನಾಥ್‌ ನಾಯಕ್‌, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಮೆಸ್ಕಾಂ, ಹೆಬ್ರಿ

ಮನವಿ ನೀಡಲಾಗಿದೆ
ಅಜೆಕಾರಿನಲ್ಲಿ ಮೆಸ್ಕಾಂ ಸಬ್‌ಸ್ಟೇಶ‌ನ್‌ ತ್ವರಿತವಾಗಿ ನಡೆಯಬೇಕಾಗಿದ್ದು ಖಾಯ್ದಿರಿಸಿದ ಸ್ಥಳದಲ್ಲಿರುವ ಮರಗಳನ್ನು ತೆರವುಗೊಳಿಸುವಂತೆ ಸಾಮಾಜಿಕ ಅರಣ್ಯ ಇಲಾಖೆಗೆ 2 ವರ್ಷಗಳಿಂದ ಮನವಿ ಮಾಡಿದರೂ ಮರಗಳ ತೆರವು ನಡೆದಿಲ್ಲ. ಈ ಬಗ್ಗೆ ಶಾಸಕರಿಗೆ ಹಾಗೂ ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಲಾಗುವುದು.
-ದಿನೇಶ್‌ ಕುಮಾರ್‌, ಅಧ್ಯಕ್ಷರು ಮರ್ಣೆ ಗ್ರಾಮ ಪಂಚಾಯತ್‌

ಪ್ರಸ್ತಾವನೆ ಸಲ್ಲಿಕೆ
ಖಾಯ್ದಿರಿಸಿದ ಜಾಗದಲ್ಲಿರುವ ಮರ ಕಟಾವು ಮಾಡುವಂತೆ ಮರ್ಣೆ ಗ್ರಾ.ಪಂ. ಹಾಗೂ ಮೆಸ್ಕಾಂ ಇಲಾಖೆ ಮನವಿ ಮಾಡಿದ್ದು ಮರಗಳನ್ನು ಕಟಾವು ಮಾಡುವಂತೆ ಕುಂದಾಪುರ ಪ್ರಾದೇಶಿಕ ವಿಭಾಗಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
-ವಾರಿಜಾಕ್ಷಿ, ವಲಯ ಅರಣ್ಯ ಅಧಿಕಾರಿ, ಸಾಮಾಜಿಕ ಅರಣ್ಯ ಕಾರ್ಕಳ

Advertisement

Udayavani is now on Telegram. Click here to join our channel and stay updated with the latest news.

Next