ಬಸ್ರೂರು: ಉಳ್ಳೂರು ಕಾರ್ತಿಕೇಯ ದೇವಸ್ಥಾನಕ್ಕೆ ಹೋಗುವ ದಾರಿಯಲ್ಲಿ ಕೋಳ್ಕೆರೆಯ ಅನಂತರ ಜಟ್ಟು ಮಕ್ಕಿಯಿಂದ ಐದು ಮುಡಿ ಪ್ರದೇಶದವರೆಗೆ ಸುಮಾರು 1000 ಮೀ.ಉದ್ದದ ರಸ್ತೆಯ ಆಸುಪಾಸಿನ ಪ್ರದೇಶದ ಸುಮಾರು 40ರಿಂದ 50 ಮನೆಗಳಿಗೆ ಲೋವೋಲ್ಟೇಜ್ ಸಮಸ್ಯೆಯಾಗುತ್ತಿದೆ.
ಕಳೆದ 15 ವರ್ಷಗಳಿಂದ ಈ ಲೋವೋಲ್ಟೇಜ್ ಸಮಸ್ಯೆಯಿದ್ದು, ಈ ಪರಿಸರದಲ್ಲಿ ವಿದ್ಯುತ್ ಕಂಬಗಳಲ್ಲಿ ಹಲವು ವರ್ಷಗಳಿಂದ ಕೇವಲ ಎರಡೇ ತಂತಿಗಳಿವೆ!
ಇಲ್ಲಿನ ಲೋವೋಲ್ಟೇಜ್ ಸಮಸ್ಯೆ ಯಿಂದ ಮನೆಯಲ್ಲಿ ಯಾವುದೇ ಗೃಹ ಬಳಕೆಯ ವಸ್ತುಗಳನ್ನು ಉಪಯೋಗಿಸಲು ಸಾಧ್ಯವಾಗುತ್ತಿಲ್ಲ.
ಗ್ರಾಮಸ್ಥರು ಮೆಸ್ಕಾಂಗೆ ಈ ಬಗ್ಗೆ ಪದೇ ಪದೇ ಸಂಪರ್ಕಿಸಿದಾಗ ಸದ್ಯ ನಮ್ಮಲ್ಲಿ ಯಾವುದೇ ಅನುದಾನವಿಲ್ಲ. ಯಾವುದಾದರೂ ಅನುದಾನ ಬಂದ ಕೂಡಲೇ ಲೋವೋಲ್ಟೇಜ್ ಸಮಸ್ಯೆ ಯನ್ನು ಸರಪಡಿಸಲಾಗುವುದು ಎಂದು ಹೇಳುತ್ತಾರೆಯೇ ವಿನಃ ಯಾವುದೇ ಪರಿಹಾರಕ್ಕೆ ಮುಂದಾಗಿಲ್ಲ. ಇನ್ನು ಎಷ್ಟು ವರ್ಷಗಳನ್ನು ನಾವು ಹೀಗೆಯೇ ಕಾಯಬೇಕು ಎನ್ನುವುದು ಸ್ಥಳೀಯರ ಪ್ರಶ್ನೆಯಾಗಿದೆ.