Advertisement

ಬಡವರಿಗೆ ಕಡಿಮೆ ದರದಲ್ಲಿ ಮದ್ಯ!

10:36 PM Dec 31, 2019 | Lakshmi GovindaRaj |

ಬೆಂಗಳೂರು: ಮನೆ ಬಾಗಿಲಿಗೆ ಮದ್ಯ ಡೆಲಿವರಿ ನೀಡುವುದಾಗಿ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿದ್ದ ಅಬಕಾರಿ ಸಚಿವ ಎಚ್‌.ನಾಗೇಶ್‌, ಈಗ, “ಬಡವರಿಗೆ ಕಡಿಮೆ ದರದಲ್ಲಿ ಮದ್ಯ (ಚೀಪ್‌ ಲಿಕ್ಕರ್‌) ಕಲ್ಪಿಸಿಕೊಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ’ ಎಂದು ತಿಳಿಸಿದ್ದಾರೆ. ಆದರೆ, ಬಿಜೆಪಿ ವಲಯದಲ್ಲಿ ಟೀಕೆ ವ್ಯಕ್ತವಾಗುತ್ತಿದ್ದಂತೆ ಸಂಜೆ “ಉಲ್ಟಾ’ ಹೊಡೆದಿದ್ದಾರೆ.

Advertisement

ಬಡ ಜನರು ಹೆಚ್ಚು ಬಳಕೆ ಮಾಡುವ ಕಡಿಮೆ ದರದ ಮದ್ಯ ಪೂರೈಕೆ ಸೂಕ್ತವಲ್ಲವೇ ಎಂಬ ಸುದ್ದಿಗಾರರ ಪ್ರಶ್ನೆಗೆ, ಇಂತಹ ಬೇಡಿಕೆ ಬಹಳ ಹಿಂದಿನಿಂದಲೂ ಇರುವುದು ನಿಜ ಎಂದು ಮಾತ್ರ ಹೇಳಿದೆ ಎಂದು ತಿಳಿಸಿದ್ದಾರೆ. ಇನ್ನು ಪ್ರಸ್ತುತ ಅಗ್ಗದ ಮದ್ಯ ಅಥವಾ ಸಬ್ಸಿಡಿ ಮದ್ಯದ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಪತ್ರಿಕಾ ಹೇಳಿಕೆ ಮೂಲಕ ಸ್ಪಷ್ಟನೆಯನ್ನೂ ನೀಡಿದ್ದಾರೆ.

ಏನಾಯ್ತು?: ಬೆಳಗ್ಗೆ ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಬಡವರು ಬಳಕೆ ಮಾಡುತ್ತಿರುವ ಮದ್ಯದ ದರ ದುಬಾರಿಯಾಗಿದೆ. ಹೀಗಾಗಿ, ಕಡಿಮೆ ಬೆಲೆಯ ಗುಣಮಟ್ಟದ ಮದ್ಯ ಪೂರೈಕೆ ಬಗ್ಗೆ ಚರ್ಚಿಸಲಾಗುತ್ತಿದೆ ಎಂದು ಹೇಳಿದ್ದರು. ಕಡಿಮೆ ಬೆಲೆ ಮದ್ಯ ಪೂರೈಕೆಗೆ ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ಎಂಎಸ್‌ಐಎಲ್‌ ಮೂಲಕ ಮಳಿಗೆ ತೆರೆಯಲಾಗುವುದು.

ಇದರಿಂದ ಗ್ರಾಮೀಣ ಭಾಗದ ಕಿರಾಣಿ ಅಂಗಡಿಗಳಲ್ಲಿ ಹೆಚ್ಚಿನ ಬೆಲೆಗೆ ಮದ್ಯ ಮಾರಾಟ ಮಾಡುವುದು ತಪ್ಪುತ್ತದೆ. ಆರೋಗ್ಯಕ್ಕೆ ಹಾನಿಯಾಗದ ರೀತಿಯಲ್ಲಿ ಕಡಿಮೆ ದರದಲ್ಲಿ ಮದ್ಯ ತಯಾರಿಸಬೇಕಾಗಿದೆ. ಹಿಂದಿನ ಸಿದ್ದರಾಮಯ್ಯ ಅವರ ಸರ್ಕಾರದ ಅವಧಿಯಲ್ಲೇ ಇಂತಹದ್ದೊಂದು ಪ್ರಸ್ತಾವನೆ ಇತ್ತು. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಮುಂದಿನ ಬಜೆಟ್‌ ವೇಳೆಗೆ ಬಡವರಿಗೆ ಸಿಹಿ ಸುದ್ದಿ ಕೊಡಲಾಗುವುದು.

ಸಾರಾಯಿ ನಿಷೇಧ ನಂತರ ಬಡವರಿಗೆ ಕಡಿಮೆ ದರದಲ್ಲಿ ಮದ್ಯ ಕಲ್ಪಿಸಬೇಕೆಂಬ ಉದ್ದೇಶದಿಂದ ಅಂದಿನ ಕಾಲದಲ್ಲೇ ಕಡಿಮೆ ಬೆಲೆ ಮದ್ಯ ತರಲಾಗಿತ್ತು. ಆದರೆ, ವರ್ಷದಿಂದ ವರ್ಷಕ್ಕೆ ಅದರ ಬೆಲೆ ಹೆಚ್ಚಳವಾದ ಹಿನ್ನೆಲೆಯಲ್ಲಿ ಈಗ ಖರೀದಿ ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದರು. ರಾಜ್ಯದಲ್ಲಿ ಸದ್ಯಕ್ಕೆ ಮದ್ಯ ನಿಷೇಧಿಸುವ ಪ್ರಸ್ತಾಪವಿಲ್ಲ. ಹೊಸ ವೈನ್‌ ಶಾಪ್‌ ತೆರೆಯಲು ಅನುಮತಿ ನೀಡುವುದಿಲ್ಲ.

Advertisement

ಅಗತ್ಯವಿರುವ ಕಡೆ ಎಂಎಸ್‌ಐಎಲ್‌ನವರೇ ಮಳಿಗೆ ತೆರೆಯುತ್ತಾರೆ. ಬಜೆಟ್‌ನಲ್ಲಿ ನಿಗದಿಪಡಿಸಿದ್ದ ಆದಾಯ ಸಂಗ್ರಹಣೆಯತ್ತ ಇಲಾಖೆ ದಾಪುಗಾಲು ಹಾಕಿದೆ. ಸುಮಾರು 16 ಸಾವಿರ ಕೋಟಿ ರೂ.ಸಂಗ್ರಹವಾಗಿದೆ. ಈ ತಿಂಗಳಲ್ಲಿ ಹೆಚ್ಚು ಆದಾಯ ಸಂಗ್ರಹವಾಗಿದೆ ಎಂದು ಹೇಳಿದ್ದರು.

ಆದರೆ, ಸಚಿವರು ಬಡವರಿಗೆ ಸಬ್ಸಿಡಿ ದರದಲ್ಲಿ ಮದ್ಯ ಪೂರೈಕೆ ಮಾಡಲು ಮುಂದಾಗಿದ್ದಾರೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಬಿಜೆಪಿ ವಲಯದಲ್ಲಿ ತೀವ್ರ ಟೀಕೆ ವ್ಯಕ್ತವಾಯಿತು. ಇನ್ನು ಖುದ್ದು ಮುಖ್ಯಮಂತ್ರಿ ಯಡಿಯೂರಪ್ಪ, ಸಚಿವರನ್ನು ಸಂಪರ್ಕಿಸಿ ಇಂತಹ ವಿವಾದದ ಹೇಳಿಕೆ ಕೊಡುವ ಅಗತ್ಯ ಏನು? ಬಡವರಿಗೆ ಸಬ್ಸಿಡಿ ದರದಲ್ಲಿ ಮದ್ಯ ಕೊಡುವ ಮೂಲಕ ನಾವು ಮದ್ಯಪಾನ ಪ್ರೋತ್ಸಾಹಿಸಬೇಕೇ? ಎಂದು ತರಾಟೆಗೆ ತೆಗೆದುಕೊಂಡರು ಎಂದು ಹೇಳಲಾಗಿದೆ.

ಸಂಜೆ ವೇಳೆಗೆ ಸ್ಪಷ್ಟನೆ: ಸಿಎಂ ತರಾಟೆ ತೆಗೆದುಕೊಂಡ ಬಳಿಕ ಸಂಜೆ ವೇಳೆಗೆ ಸಚಿವರ ಕಚೇರಿಯಿಂದ ಸ್ಪಷ್ಟನೆ ಕಳುಹಿಸಲಾಯಿತು. ಅದರಲ್ಲಿ ಕಡಿಮೆ ದರದ ಉತ್ತಮ ಗುಣಮಟ್ಟದ ಮದ್ಯ ಸರಬರಾಜು ಬಗ್ಗೆ ಬೇಡಿಕೆ ಇದೆಯಷ್ಟೇ. 2013ರಿಂದಲೂ ಪ್ರಸ್ತಾವನೆ ಇತ್ತು. ತಾನು ಸಚಿವನಾದ ನಂತರ ಆ ರೀತಿಯ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದೆ ಸಲ್ಲಿಸಿಲ್ಲ ಎಂದು ಸಚಿವ ನಾಗೇಶ್‌ ಹೇಳಿದ್ದಾರೆ.

ರಾತ್ರಿ 1ಗಂಟೆವರೆಗೆ ಬೆಂಗಳೂರಲ್ಲಿ ಮದ್ಯ: ಅಬಕಾರಿ ಇಲಾಖೆ ನಿಯಮದ ಪ್ರಕಾರ ಸಿಎಲ್‌-2 (ಎಂಆರ್‌ಪಿ ಔಟ್‌ ಲೆಟ್‌ ಮತ್ತು ವೈನ್ಸ್‌ ಸ್ಟೋರ್)ಗಳಲ್ಲಿ ರಾತ್ರಿ 10.30 ರವರೆಗೆ, ಸಿಎಲ್‌-9(ಬಾರ್‌ ಅಂಡ್‌ ರೆಸ್ಟೋರೆಂಟ್‌, ಪಬ್‌)ಗಳಲ್ಲಿ ಬೆಂಗಳೂರು ಕಮೀಷನರೇಟ್‌ ವ್ಯಾಪ್ತಿಯಲ್ಲಿ ರಾತ್ರಿ 1 ಗಂಟೆವರೆಗೆ, ಉಳಿದ ಕಡೆ 11.30 ರವರೆಗೆ ಮದ್ಯ ಪೂರೈಕೆ ಮಾಡಬಹುದು ಎಂದು ಅಬಕಾರಿ ಸಚಿವ ಎಚ್‌.ನಾಗೇಶ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next