Advertisement

ಅಂಗನವಾಡಿಗೆ ಕಳಪೆ ಆಹಾರ ಪೂರೈಕೆ: ಅಧಿಕಾರಿ ತರಾಟೆಗೆ

03:22 PM Jan 17, 2021 | Team Udayavani |

ಕನಕಗಿರಿ: ತಾಲೂಕು ವ್ಯಾಪ್ತಿಯಲ್ಲಿರುವ ಅಂಗನವಾಡಿ ಕೇಂದ್ರಗಳಿಗೆ ಕಳಪೆ ಆಹಾರ ಪೂರೈಕೆ ಮಾಡುತ್ತಿದ್ದು, ಈ ಬಗ್ಗೆ ಏನು
ಕ್ರಮ ಕೈಗೊಂಡಿದ್ದೀರಿ ಎಂದು ತಾಪಂ ಅಧ್ಯಕ್ಷೆ ಗೌರಮ್ಮ ಜಡಿಯಪ್ಪ ಅವರು, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ವೇತಾ ಅವರನ್ನು ತರಾಟೆಗೆ ತೆಗೆದುಕೊಂಡರು.

Advertisement

ಪಟ್ಟಣದ ಎಪಿಎಂಸಿ ಶ್ರಮಿಕರ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ತಾಪಂ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅಂಗನವಾಡಿ ಕಾರ್ಯಕರ್ತರು ಮಕ್ಕಳಿಗೆ ಹಾಗೂ ಗರ್ಭಿಣಿಯರಿಗೆ ಪ್ರತಿ ತಿಂಗಳ ಆಹಾರ ಹಂಚಿಕೆ
ಮಾಡುತ್ತಿಲ್ಲ. ಇದರಿಂದ ಪಾಲಕರು ಮತ್ತು ಸಾರ್ವಜನಿಕರು ನಮ್ಮನ್ನು ಪ್ರಶ್ನಿಸುತ್ತಿದ್ದಾರೆ. ಪ್ರತಿ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ವಾಸ್ತವ ತಿಳಿಯಿರಿ ಎಂದರು.

ರೈತರಿಗೆ ಕಳಪೆ ಮಟ್ಟದ ಬೀಜಗಳನ್ನು ವಿವಿಧ ಕಂಪನಿಗಳು ಪೂರೈಕೆ ಮಾಡುತ್ತಿವೆ. ರೈತರು ಬಿತ್ತನೆ ಮಾಡಿದರೂ ಸರಿಯಾಗಿ ನಾಟಿ ಆಗುವುದಿಲ್ಲ. ಕಳಪೆ ಬೀಜ ಪೂರೈಕೆ ಮಾಡುವ ಕಂಪನಿಗಳ ಮೇಲೆ ಯಾಕೆ ಕ್ರಮ ಕೈಗೊಂಡಿಲ್ಲ. ಕೂಡಲೇ ಈ ಬಗ್ಗೆ ತನಿಖೆ ಮಾಡಿ ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳಿ ಎಂದು ಸಹಾಯಕ ಕೃಷಿ ನಿರ್ದೇಶಕ ತಿಪ್ಪೇಸ್ವಾಮಿಗೆ ಸೂಚನೆ ನೀಡಿದರು. ತಾಲೂಕು ಮಟ್ಟದ ಅಧಿ ಕಾರಿಗಳು ಕಚೇರಿಯಲ್ಲಿ ಕುಳಿತುಕೊಳ್ಳದೇ ತಮ್ಮ ವ್ಯಾಪ್ತಿಯ ಕಾರ್ಯ ಪ್ರದೇಶಕ್ಕೆ ಭೇಟಿ ನೀಡಬೇಕು. ಇದರಿಂದ
ಜನರ ಸಮಸ್ಯೆ ತಿಳಿಯಲು ಸಾಧ್ಯವಾಗುತ್ತದೆ ಎಂದರು.

ಇದನ್ನೂ ಓದಿ:ರೈತರು- ಜನರ ಅಭಿವೃದ್ದಿಗೆ ಯಡಿಯೂರಪ್ಪ ಯಾವುದೇ ರೀತಿ ಹಿಂದೆ ಬಿದ್ದಿಲ್ಲ: ಅಮಿತ್ ಶಾ

ಪಟ್ಟಣದಲ್ಲಿರುವ ಕರ್ನಾಟಕ ಪಬ್ಲಿಕ್‌ ಶಾಲೆಯಲ್ಲಿ ಇನ್ನು ಎಲ್‌ಕೆಜಿ ಪ್ರವೇಶ ಪ್ರಕ್ರಿಯೆ ಮುಕ್ತಾಯಗೊಂಡಿಲ್ಲ. ಇದರಿಂದ ವಿದ್ಯಾರ್ಥಿಗಳ ಪಾಲಕರು ಆತಂಕದಲ್ಲಿದ್ದಾರೆ. ಕೂಡಲೇ ಆಯ್ಕೆ ಪ್ರಕ್ರಿಯೆ ಮುಗಿಸಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರಗೌಡ ಅವರಿಗೆ ಅಧ್ಯಕ್ಷೆ ಸೂಚಿಸಿದರು. ನಂತರ ಮಾತನಾಡಿದ ಬಿಇಒ ಸೋಮಶೇಖರಗೌಡ, ಶಾಲೆ
ಪ್ರಾರಂಭವಾಗುವುದರೊಳಗೆ ಆಯ್ಕೆ ಪ್ರಕ್ರಿಯೆ ಮುಗಿಸಲಾಗುವುದು ಎಂದರು.

Advertisement

ನಂತರ ತಾಪಂ ಸದಸ್ಯ ಬಸವಂತಗೌಡ ಪಾಟೀಲ ರಾಜೀವ್‌ ಗಾಂಧಿ ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ ತಾಲೂಕಿನ
ತಿಪ್ಪನಾಳ ಗ್ರಾಮದಲ್ಲಿ ನಿರ್ಮಾಣ ಮಾಡಿರುವ ಕೆರೆಯಿಂದ ಕೆಲ ಹಳ್ಳಿಗಳಿಗೆ ನೀರು ಒದಗಿಸಲು ಯೋಜನೆಯಿದೆ. ಆದರೆ ನಿರ್ವಹಣೆ ಮಾಡಲು ಗುತ್ತಿಗೆ ಪಡೆದಿರುವವರು ಸರಿಯಾಗಿ ಗ್ರಾಮಗಳಿಗೆ ನೀರು ಸರಬರಾಜು ಮಾಡುತ್ತಿಲ್ಲ. ಈ ಬಗ್ಗೆ ನೀವು
ಏನು ಕ್ರಮ ಕೈಗೊಂಡಿದ್ದೀರಿ. ಯಾಕೆ ಅವರ ಮೇಲೆ ಯಾವುದೇ ರೀತಿ ಕ್ರಮ ಕೈಗೊಂಡಿಲ್ಲ. ಕೂಡಲೇ ಈ ಬಗ್ಗೆ ಗಮನ ಹರಿಸಿ ಸೂಕ್ತ ವ್ಯವಸ್ಥೆ ಮಾಡಬೇಕೆಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗ ಅಭಿಯಂತರ ಚಿದಾನಂದ ಅವರಿಗೆ ಸೂಚಿಸಿದರು. ಇದೇ ವೇಳೆ ತಾಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆಯನ್ನಾಗಿ ಶಿವಮ್ಮ ಚವ್ಹಾಣ ಅವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷೆ ಭೀಮಮ್ಮ ರಾಮನಗೌಡ, ತಾಪಂ ಸದಸ್ಯರಾದ ಮಲ್ಲಿಕಾರ್ಜುನಗೌಡ ಪಾಟೀಲ, ಕನಕಪ್ಪ
ತಳವಾರ, ಪರಸಪ್ಪ, ತಾಪಂ ಇಒ ಡಾ| ಡಿ. ಮೋಹನ್‌ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಗ್ರಾಪಂ ಅಭಿವೃದ್ಧಿ
ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next