Advertisement

ಹೆಸರು ಕೆಡಿಸುತ್ತಿರುವ ಸರ್ಕಾರ!

04:49 PM Sep 08, 2020 | Suhan S |

ಹುಬ್ಬಳ್ಳಿ: ಹೆಸರು ಖರೀದಿ ಕೇಂದ್ರ ಆರಂಭಿಸುವ  ನಿಟ್ಟಿನಲ್ಲಿ ಮಂಗಳವಾರ ನಡೆಯುವ ಕೃಷಿ ಕುರಿತು ರಾಜ್ಯ ಸಂಪುಟ ಉಪ ಸಮಿತಿ ಸಭೆಯಲ್ಲಿ ಮಹತ್ವದ ತೀರ್ಮಾನ ಹೊರಬೀಳುವ ನಿರೀಕ್ಷೆ ಇದೆ. ಅದೇ ರೀತಿ ರಾಜ್ಯ ಪ್ರತಿನಿಧಿಸುವ ಕೇಂದ್ರ ಸಚಿವರು, ಸಂಸದರು ಕೇಂದ್ರದಲ್ಲಿ ಧ್ವನಿ ಎತ್ತಲು ಮುಂದಾಗಬೇಕೆಂಬ ಒತ್ತಾಯವೂ ಕೇಳಿ ಬಂದಿದೆ.

Advertisement

ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ನೇತೃತ್ವದ ಕೃಷಿ ಕುರಿತ ಸಂಪುಟ ಉಪ ಸಮಿತಿ ಮಂಗಳವಾರ ಸಭೆ ಸೇರಲಿದ್ದು, ಖರೀದಿ ಕೇಂದ್ರ ತ್ವರಿತವಾಗಿ ಆರಂಭಿಸುವ ಕುರಿತು ಕೇಂದ್ರದಿಂದ ಒಪ್ಪಿಗೆ ಪಡೆಯುವ ನಿಟ್ಟಿನಲ್ಲಿಯಾವ ನಿರ್ಧಾರ ಕೈಗೊಳ್ಳಲಿದೆ ಎಂದು ರೈತರು ಎದುರು ನೋಡುತ್ತಿದ್ದಾರೆ. ರಾಜ್ಯದಲ್ಲಿ ಈ ಬಾರಿ ಮುಂಗಾರು ಹಂಗಾಮಿಗೆ ಸುಮಾರು 4.40 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಹೆಸರು ಬೆಳೆ ಬೆಳೆಯಲಾಗಿದ್ದು, ಹೆಸರಿಗೆ ಬೆಲೆ ಇಲ್ಲದ್ದರಿಂದ, ಕನಿಷ್ಠ ಬೆಂಬಲ ಬೆಲೆಯಡಿ ಖರೀದಿಸಲು ಖರೀದಿ ಕೇಂದ್ರ ಆರಂಭಿಸಲು ಕೇಂದ್ರ ಸರ್ಕಾರ ಒಪ್ಪಿಗೆ ಅವಶ್ಯವಾಗಿದೆ.

ಈ ಸಲದ ಮುಂಗಾರು ಹಂಗಾಮಿನಲ್ಲಿ ಹೆಸರು ಬೆಳೆ ಉತ್ತಮವಾಗಿ ಬಂದಿತ್ತಾದರೂ ಜುಲೈನಿಂದ ಆರಂಭವಾದ ಮಳೆಯಿಂದ ವಿವಿಧ ಕಡೆಗಳಲ್ಲಿ ಹಾನಿಗೀಡಾಗಿದೆ. ಅಷ್ಟು ಇಷ್ಟು ಕೈಗೆ ಬಂದ ಬೆಳೆಗೆಬೆಲೆ ಇಲ್ಲವಾಗಿರುವುದು ರೈತರನ್ನು ಕೆಂಗಡಿಸುವಂತೆ ಮಾಡಿದೆ. ಕೇಂದ್ರ ಸರ್ಕಾರ ಕ್ವಿಂಟಲ್‌ ಹೆಸರಿಗೆ 7,196 ರೂ. ಬೆಂಬಲ ಬೆಲೆ ಘೋಷಿಸಿದೆಯಾದರೂ ಮಾರುಕಟ್ಟೆಯಲ್ಲಿ 3,500ರಿಂದ 6,800ರೂ.ವರೆಗೆ ಖರೀದಿಸಲಾಗುತ್ತಿದೆ.

10 ಜಿಲ್ಲೆಗಳಲ್ಲಿ ಪ್ರಮುಖ ಬೆಳೆ: ದೇಶದಲ್ಲಿ ಹೆಸರು ಬೆಳೆಯುವ ಪ್ರಮುಖ ಐದು ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ಒಟ್ಟು ಹೆಸರು ಉತ್ಪನ್ನದಲ್ಲಿ ಮಹಾರಾಷ್ಟ್ರ ನಂತರದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದ್ದು, ಶೇ.17.46ರಷ್ಟು ಪಾಲು ಪಡೆದಿದೆ. ಸುಮಾರು 4,000 ವರ್ಷಗಳ ಹಿಂದೆಯೇ ರಾಜ್ಯದಲ್ಲಿ ಹೆಸರು ಬಳಕೆಯ ಪ್ರಸ್ತಾಪವಿದೆ. ರಾಜ್ಯದಲ್ಲಿ ಪ್ರಮುಖ ಹತ್ತು ಜಿಲ್ಲೆಗಳಲ್ಲಿ ಮುಂಗಾರು ಹಂಗಾಮಿಗೆ ಹೆಸರು ಪ್ರಮುಖ ಬೆಳೆಯಾಗಿದೆ. ಗದಗ ಜಿಲ್ಲೆಯಲ್ಲಿ ಹೆಚ್ಚಿನ ಪ್ರದೇಶದಲ್ಲಿ ಹೆಸರು ಬೆಳೆಯಲಾಗುತ್ತಿದೆ. ಕಲಬುರಗಿ, ಧಾರವಾಡ, ಬೆಳಗಾವಿ, ರಾಯಚೂರು, ವಿಜಯಪುರ, ಹಾವೇರಿ ಜಿಲ್ಲೆಗಳಲ್ಲಿ ಹೆಸರು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ.

ಪ್ರತಿ ಎಕರೆಗೆ ಹೆಸರು ಬೆಳೆಯಲು ಕನಿಷ್ಟವೆಂದರೆ 10-12 ಸಾವಿರ ರೂ. ವೆಚ್ಚವಾಗುತ್ತದೆ. ಎಕರೆಗೆ 3-4 ಕ್ವಿಂಟಲ್‌ನಷ್ಟು ಫ‌ಸಲು ಬರುತ್ತದೆ. ಮಾರುಕಟ್ಟೆಯಲ್ಲಿ ಯಂತ್ರದಿಂದ ರಾಶಿ ಮಾಡಿದ ಹೆಸರಿಗೆ 3,500ರಿಂದ 4,500ರೂ.ವರೆಗೆ ಹಾಗೂ ಸಾಂಪ್ರದಾಯಕವಾಗಿ ರಾಶಿ ಮಾಡಿದ ಹೆಸರಿಗೆ ಗರಿಷ್ಠ 6,800 ರೂ. ವರೆಗೆ ಖರೀದಿಸಲಾಗುತ್ತಿದೆ. ಈ ಬಾರಿ ಹೆಸರು ಬಿತ್ತನೆ ಬೀಜವನ್ನು 15,000 ರೂ.ಗೆ ಕ್ವಿಂಟಲ್‌ ನಂತೆ ತಂದಿದ್ದೇವೆ. ಬೆಳೆದ ಹೆಸರನ್ನು ಕ್ವಿಂಟಲ್‌ಗೆ 3,500ರಿಂದ 4,500ರೂ.ಗೆ ಕೇಳುತ್ತಿದ್ದಾರೆ ಎಂಬುದು ರೈತರ ಅಳಲು.

Advertisement

ಖರೀದಿ ಕೇಂದ್ರದಿಂದ ದರ ಏರುಮುಖ: ಹೆಸರು ಖರೀದಿ ಕೇಂದ್ರ ಆರಂಭಿಸಿದರೆ ಮಾರುಕಟ್ಟೆಯಲ್ಲಿ ಸಹಜವಾಗಿಯೇ ಹೆಸರಿನ ದರ ಹೆಚ್ಚಳವಾಗಲಿದೆ. 2018-19ರಲ್ಲಿ ಕೇಂದ್ರ ಸರ್ಕಾರ ರಾಜ್ಯದಲ್ಲಿ ಸುಮಾರು 23,250 ಮೆಟ್ರಿಕ್‌ ಟನ್‌, 2019-20ರಲ್ಲಿ 12,226 ಮೆಟ್ರಿಕ್‌ ಟನ್‌ ಹೆಸರು ಖರೀದಿಗೆ ಕ್ರಮ ಕೈಗೊಂಡಿತ್ತು. ಕ್ರಮವಾಗಿ ಕ್ವಿಂಟಲ್‌ ಹೆಸರಿಗೆ 6,975 ರೂ. ಹಾಗೂ 7,050 ರೂ.ಬೆಂಬಲ ಬೆಲೆ ನಿಗದಿಪಡಿಸಲಾಗಿತ್ತು. ಈ ಬಾರಿಯೂ ಬೆಂಬಲ ಬೆಲೆಯಲ್ಲಿ ಹೆಸರು ಖರೀದಿಸಿದರೆ ಕ್ವಿಂಟಲ್‌ಗೆ 7,156 ರೂ. ದರ ಸಿಗಲಿದ್ದು, ಕೈಗೊಂದಿಷ್ಟು ಲಾಭ ದೊರೆಯಲಿದೆ ಎಂಬ ನಿರೀಕ್ಷೆ ರೈತರದ್ದಾಗಿದೆ. ಸರ್ಕಾರ ಖರೀದಿ ಕೇಂದ್ರ ಆರಂಭಿಸುವ ಭರವಸೆಯಲ್ಲೇ ಕೆಲ ತಿಂಗಳು ಕಳೆದಿದ್ದು, ರೈತರ ಫ‌ಸಲು ಮಾರುಕಟ್ಟೆಯಲ್ಲಿ ಮಾರಾಟವಾದ ಮೇಲೆ ಖರೀದಿ ಕೇಂದ್ರ ಆರಂಭಿಸಿದರೆ ಪ್ರಯೋಜನವಿಲ್ಲ. ತ್ವರಿತವಾಗಿ ಆರಂಭಿಸಬೇಕೆಂಬುದು ರೈತ ಹೋರಾಟಗಾರರ ಒತ್ತಾಯವಾಗಿದೆ.

ತಪ್ಪು ಲೆಕ್ಕ ನೀಡುತ್ತಿದೆಯೇ ಕೃಷಿ ಇಲಾಖೆ? :ಪ್ರಸಕ್ತ ಮುಂಗಾರು ಹಂಗಾಮಿಗೆ ರಾಜ್ಯದಲ್ಲಿ 4.40 ಲಕ್ಷ ಹೆಕ್ಟೇರ್‌ನಲ್ಲಿ ಹೆಸರು ಬಿತ್ತಲಾಗಿದ್ದು, ಮಳೆಗೆ ಸಿಕ್ಕು ಸುಮಾರು 45-50 ಸಾವಿರ ಟನ್‌ನಷ್ಟು ಬೆಳೆ ನಾಶವಾಗಿರಬಹುದು. ಆದರೆ, ಅಂದಾಜು 4 ಲಕ್ಷಕ್ಕೂ ಅಧಿಕ ಟನ್‌ ಹೆಸರು ಫ‌ಸಲು ಬಂದಿದೆ. ಆದರೆ, ಕೃಷಿ ಇಲಾಖೆ ಅಧಿಕಾರಿಗಳು 1.54 ಲಕ್ಷ ಹೆಸರು ಫ‌ಸಲು ಬಂದಿದೆ ಎಂದು ಹೇಳುತ್ತಿರುವುದು ರೈತಪರ ಹೋರಾಟಗಾರರ ಆಕ್ರೋಶಕ್ಕೆ ಕಾರಣವಾಗಿದೆ. ರಾಜ್ಯ ಸರ್ಕಾರತೋರಿಸುವ ಫ‌ಸಲಿನ ಶೇ.25 ಮಾತ್ರ ಖರೀದಿ ಕೇಂದ್ರದಿಂದ ಖರೀದಿಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡುತ್ತದೆ. ಕಡಿಮೆ ಖರೀದಿಯಾದರೆ ರೈತರಿಗೆ ನಷ್ಟವಾಗಲಿದೆ ಎಂಬುದು ಅವರ ವಾದ.

 

-ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next