ಹುಬ್ಬಳ್ಳಿ: 5 ರೂ.ಗೆ ಪ್ಯಾಂಟ್,10 ರೂ.ಗೆ ಚೂಡಿದಾರ, 50 ರೂ.ಗೆ ಸೀರೆ! ತಮಾಷೆ ಮಾಡುವುದಕ್ಕೂ ಒಂದು ಮಿತಿ ಇರಬೇಕು ಎಂದು ಮೂಗು ಮುರಿಯಬೇಡಿ. ಪ್ರತಿ ಶನಿವಾರ ಹುಬ್ಬಳ್ಳಿ ನಗರದ ಹೃದಯ ಭಾಗ ದುರ್ಗದ ಬಯಲು ಮರಾಠಾ ಗಲ್ಲಿ ಬಳಿಯ ಕೋಳಿ ಮಾರುಕಟ್ಟೆಯಲ್ಲಿ ಇಂಥದೊಂದು ವಹಿವಾಟು ನಡೆಯುತ್ತದೆ.
ಬಡವರ ಅರಿವೆ ಬೇಡಿಕೆ ನೀಗುವ ಈ ವಿಶಿಷ್ಟ ಸಂಯೋಜನೆಯ ಮಾರುಕಟ್ಟೆಗೆ ಜನಜಂಗುಳಿಯೇ ಸೇರಿರುತ್ತದೆ. ಇಡೀ ವಾರ ನಗರ ಸುತ್ತಿ ಉತ್ತಮವಾಗಿರುವ ಹಳೇ ಬಟ್ಟೆಗಳನ್ನು ಸಂಗ್ರಹಿಸಿ ಪ್ರತಿ ಶನಿವಾರ ಬೆಳಗ್ಗೆಯಿಂದ ಸಂಜೆವರೆಗೆ ಮಾರಾಟ ಮಾಡುವ ವಿಶಿಷ್ಟ ವ್ಯವಹಾರ ಇದು.
ಊರೆಲ್ಲ ಸುತ್ತಿ ಬಟ್ಟೆ ಸಂಗ್ರಹ: ಸುಮಾರು ಮೂರ್‍ನಾಲ್ಕು ತಲೆಮಾರುಗಳಿಂದ ನಗರದಲ್ಲಿ ಮನೆಗೆ ಬೇಕಾಗುವ ಬಾಂಢೆ ಸಾಮಾನುಗಳನ್ನು ಮಾರಾಟ ಮಾಡುವ ಸುಮಾರು 50 ಜನರ ತಂಡ ಪ್ರತಿ ಶನಿವಾರ ಈ ಬಟ್ಟೆ ವ್ಯಾಪಾರ ನಡೆಸುತ್ತದೆ. ಈ ತಂಡ ನಗರದೆಲ್ಲೆಡೆ ಸಂಚಾರ ಮಾಡಿ ಅಡುಗೆಗೆ ಬೇಕಾದ ಪಾತ್ರೆ-ಸಾಮಗ್ರಿಗಳನ್ನು ಮಾರಾಟ ಮಾಡುತ್ತಾರೆ. ಈ ಪಾತ್ರೆಗಳಿಗೆ ಹಳೇ ಬಟ್ಟೆಗಳನ್ನು(ಉತ್ತಮವಾಗಿರುವ) ಪಡೆಯುತ್ತಾರೆ. ಪಾತ್ರೆ ದರ ಹೆಚ್ಚಾಗಿದ್ದರೆ ಒಂದಿಷ್ಟು ಹಣ ಕೂಡ ಪಡೆಯುತ್ತಾರೆ.
ಖರೀದಿಸುವವರು ಯಾರು?: ಒಮ್ಮೆ ತೊಟ್ಟ ಬಟ್ಟೆಗಳನ್ನು ಮರು ತೊಡುವವರು ಯಾರು ಎಂದು ಬಹುತೇಕರು ಆಡಿಕೊಳ್ಳುವುದುಂಟು. ಈ ಬಟ್ಟೆಗಳನ್ನು ಗ್ಯಾರೇಜ್‌ನಲ್ಲಿ ಕೆಲಸ ಮಾಡುವವರು, ಗಾರೆ ಕೆಲಸ ಮಾಡುವರು, ಚಿಂದಿ ಆಯುವವರು, ಸ್ಲಂಗಳಲ್ಲಿ ವಾಸಿಸುವ ಬಡವರು, ಹೋಟೆಲ್‌ಗಳಲ್ಲಿ ಕೆಲಸ ಮಾಡುವವರು ಸೇರಿದಂತೆ ಇನ್ನಿತರ ಕೆಲಸಗಳಿಗೆ ಈ ಬಟ್ಟೆಗಳನ್ನು ಖರೀದಿಸಿ ತೆಗೆದುಕೊಂಡು ಹೋಗುತ್ತಾರೆ.
ಕೋವಿಡ್‌ನಿಂದ ಹೊಡೆತ: ಕೋವಿಡ್ ಬಂದಾಗಿನಿಂದ ವ್ಯಾಪಾರದಲ್ಲಿ ಹೊಡೆತ ಬಿದ್ದಿದೆ. ಪಾತ್ರೆಗಳನ್ನು ಖರೀದಿಸಿ ಹಳೇ ಬಟ್ಟೆಗಳನ್ನು ನೀಡುತ್ತಿದ್ದರು. ಕೋವಿಡ್ ಕಾರಣ ನಮ್ಮ ವ್ಯಾಪಾರಕ್ಕೆ ಯಾರೂ ಮುಂದೆ ಬರುತ್ತಿಲ್ಲ. ಆದರೆ ಕಳೆದ ಕೆಲವು ದಿನಗಳಿಂದ ವ್ಯಾಪಾರದಲ್ಲಿ ಕೊಂಚ ಬದಲಾವಣೆ ಕಂಡಿದ್ದು, ಮುಂದೇನು ಎಂಬುದನ್ನು ಕಾದು ನೋಡಬೇಕಾಗಿದೆ ಎನ್ನುತ್ತಾರೆ ಮಾರುಕಟ್ಟೆ ವ್ಯಾಪಾರಸ್ಥರು.