Advertisement

ಹಚ್ಚ ಹಸಿರಿನ ಕಾನನ ಮಧ್ಯೆ ವಿರಮಿಸಿದ ಪ್ರೇಮಿಗಳು

07:32 AM Feb 15, 2019 | |

ಚಿಕ್ಕಬಳ್ಳಾಪುರ: ಜಿಲ್ಲಾದ್ಯಂತ ಪ್ರೇಮಿಗಳ ದಿನಾಚರಣೆಯದ್ದೇ ಸದ್ದು, ಪ್ರೇಮಿಗಳ ಪಾಲಿಗೆ ಸ್ಪರ್ಗವಾಗಿರುವ ನಂದಿಬೆಟ್ಟ, ಅವುಲುಬೆಟ್ಟ, ಸ್ಕಂದಗಿರಿ, ಕೈಲಾಸಗಿರಿ ಹೀಗೆ ಎಲ್ಲಿ ನೋಡಿದರೂ ಪ್ರೇಮಿಗಳ ಕಲರವ ಗುರುವಾರ ಎದ್ದು ಕಾಣುತ್ತಿತ್ತು. ವಿಶೇಷವಾಗಿ ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಜಿಲ್ಲೆಯ ಪ್ರವಾಸಿ ತಾಣಗಳಿಗೆ ಲಗ್ಗೆ ಹಾಕಿ ತಮ್ಮದೇ ಲೋಕದಲ್ಲಿ ದಿನವಿಡೀ ವಿರಮಿಸುವ ಮೂಲಕ ಪ್ರೇಮಿಗಳ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಿಕೊಂಡು ದೃಶ್ಯಗಳು ಎಲ್ಲೆಡೆ ಕಂಡು ಬಂತು.

Advertisement

ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆಗಳಿಂದ ಚಿಕ್ಕಬಳ್ಳಾಪುರದ ಐತಿಹಾಸಿಕ ನಂದಗಿರಿಧಾಮಕ್ಕೆ ಪ್ರೇಮಿಗಳ ದಂಡು ಆಗಮಿಸಿತ್ತು. ಪ್ರೀತಿ, ಪ್ರೇಮದಾಟದಲ್ಲಿ ಮುಳುಗಿರುವ ಕೆಲ ಯುವಕ, ಯುವತಿಯರು ನಂದಿಬೆಟ್ಟಕ್ಕೆ ಆಗಮಿಸಿ ಅಲ್ಲಿನ ಹಚ್ಚ ಹಸಿರಿನಿಂದ ಕೂಡಿರುವ ಪ್ರಾಕೃತಿಕ ಸೌಂದರ್ಯದಲ್ಲಿ ದಿನವಿಡೀ ವಿರಮಿಸಿದರೆ ಮತ್ತೆ ಕೆಲವರು ಸೆಲ್ಫಿ ಖ್ಯಾತಿಯ ಅವುಲುಬೆಟ್ಟಕ್ಕೆ ಆಗಮಿಸಿ ಪರಸ್ಪರ ಸೆಲ್ಫಿ ತೆಗೆದುಕೊಂಡು ಪ್ರೇಮಿಗಳ ದಿನಾಚರಣೆಯನ್ನು ಸಂಭ್ರಮಿಸಿದ ದೃಶ್ಯಗಳು ಕಂಡುಬಂದವು. 

ಸ್ಕಂದಗಿರಿಗೆ ಟ್ರಕ್ಕಿಂಗ್‌: ಜಿಲ್ಲೆಯಲ್ಲಿ ಟ್ರಕ್ಕಿಂಗ್‌ ಪ್ರಿಯರ ಮೋಹಕ ಸೆಲೆಯಾಗಿರುವ ಸ್ಕಂದಗಿರಿ ಬೆಟ್ಟಕ್ಕೂ ಪ್ರೇಮಿಗಳು ಮುಗಿಬಿದ್ದಿದ್ದರು. ನಸುಕಿನಲ್ಲಿಯೆ ಸಂಗಾತಿಗಳೊಂದಿಗೆ ಯುವ ಜೋಡಿಗಳು ಟ್ರಕ್ಕಿಂಗ್‌ ಕೈಗೊಂಡು ಸಂಭ್ರಮಿಸಿದರು. ವಿಶೇಷವಾಗಿ ಬೆಂಗಳೂರಿನಿಂದ ಐಟಿ, ಬಿಟಿ ಟೆಕ್ಕಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.

ಬಿಗಿ ಪೊಲೀಸ್‌ ಭದ್ರತೆ: ಪ್ರೇಮಿಗಳ ದಿನಾಚರಣೆ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ಸೇರಿದಂತೆ ನೈತಿಕ ಪೊಲೀಸ್‌ಗಿರಿ ಪ್ರದರ್ಶನ ಆಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾದ್ಯಂತ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು. ವಿಶೇಷವಾಗಿ ನಂದಿ ದೇಗುಲ, ಕೈಲಾಸಗಿರಿ ಹಾಗೂ ಸ್ಕಂದಗಿರಿ ಬೆಟ್ಟಗಳ ಸಮೀಪ ಪೊಲೀಸರು ಹೆಚ್ಚುವರಿ ಬಂದೋಬಸ್ತ್ ಮಾಡಿದ್ದರು.

ದೇಗುಲಗಳಲ್ಲಿ ವಿಶೇಷ ಪೂಜೆ: ಜಿಲ್ಲೆಯ ಚಿಂತಾಮಣಿ ತಾಲೂಕಿನ ಕೈವಾರ, ಗೌರಿಬಿದನೂರು ವಿಧುರಾಶ್ವತ್ಥ, ಬಾಗೇಪಲ್ಲಿ ಗಡಿದಂ ಸೇರಿದಂತೆ ಜಿಲ್ಲೆಯ ಪ್ರಮುಖ ದೇವಾಲಯಗಳಲ್ಲಿ ಪ್ರೇಮಿಗಳ ದಂಡು ನೆರೆದು ದೇವರುಗಳಿಗೆ ಪೂಜೆ, ಅಭಿಷೇಕ ಮಾಡಿಸುವ ಮೂಲಕ ತಮ್ಮ ಇಷ್ಟಾರ್ಥಗಳನ್ನು ಸಿದ್ಧಿಸಿಕೊಂಡರು. ಐತಿಹಾಸಿಕ ನಂದಿಯ ಭೋಗನಂದೀಶ್ವರ, ಚಿಂತಾಮಣಿ ಕೈವಾರದ ಯೋಗಿ ನಾರೇಯಣ, ಕೈಲಾಸಗಿರಿಯ ಗವಿ ಗಂಗಧಾರೇಶ್ವರ ದೇವಾಲಯಕ್ಕೂ ಬೆಳಗ್ಗೆಯಿಂದ ಸಂಜೆಯವರೆಗೂ ಪ್ರೇಮಿಗಳು ಭೇಟಿ ನೀಡಿ ಪೂಜೆ ಸಲ್ಲಿಸಿದ ದೃಶ್ಯಗಳು ಸಾಮಾನ್ಯವಾಗಿತ್ತು.

Advertisement

ಪ್ರೇಮಿಗಳ ದಿನಾಚರಣೆಗೆ ಎಬಿವಿಪಿ ಧಿಕ್ಕಾರ 
ಚಿಕ್ಕಬಳ್ಳಾಪುರ:
ಜಿಲ್ಲಾದ್ಯಂತ ಒಂದೆಡೆ ಪ್ರೇಮಿಗಳು ತಮ್ಮ ದಿನಾಚರಣೆಯ ಸಂಭ್ರಮೋಲ್ಲಾಸದಲ್ಲಿ ತೊಡಗಿದ್ದರೆ, ಮತ್ತೂಂದೆಡೆ ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್‌  ನೇತೃತ್ವದಲ್ಲಿ ಕಾಲೇಜು ವಿದ್ಯಾರ್ಥಿನಿಯರು “ನನ್ನ ದೇಶ ನನ್ನ ಪ್ರೇಮ’ ಘೋಷಣೆಯಡಿ ಪ್ರೇಮಿಗಳ ದಿನಕ್ಕೆ ಧಿಕ್ಕಾರ ಕೂಗಿ ಪೊಲೀಸರಿಗೆ ಹಾಗೂ ಸೈನಿಕರಿಗೆ ರûಾ ಬಂಧನ ಕಟ್ಟಿ ಗಮನ ಸೆಳೆದರು.

ನಗರದ ಹೊರ ವಲಯದ ಚದಲುಪುರದಲ್ಲಿರುವ ನಂದಿ ಪೊಲೀಸ್‌ ಠಾಣೆ ಹಾಗೂ ಸೈನಿಕ ಕ್ಯಾಂಪ್‌ನಲ್ಲಿರುವ ರಕ್ಷಣಾ ಇಲಾಖೆ ಅಧಿಕಾರಿಗಳಿಗೆ ರಾಖೀ ಕಟ್ಟಿ ಪ್ರೇಮಿಗಳ ದಿನಾಚರಣೆಗೆ ವಿರೋಧ ವ್ಯಕ್ತಪಡಿಸಿದರು. ಎಬಿವಿಪಿ ವಿದ್ಯಾರ್ಥಿ ಮುಖಂಡ ಮಂಜುನಾಥರೆಡ್ಡಿ ಮಾತನಾಡಿ, ದೇಶಿ ಸಂಸ್ಕೃತಿಯ ಪ್ರತೀಕವಾಗಿ ಆಚರಿಸಲ್ಪಡುವ ಅಸಹ್ಯಕರ ಪ್ರೇಮಿಗಳ ದಿನಾಚಾರಣೆಯನ್ನು ಬದಲಿಸಿ ಈ ದಿನವನ್ನು ದೇಶಪ್ರೇಮ ದಿನಾಚರಣೆಯನ್ನಾಗಿ ಆಚರಿಸಬೇಕಿದೆ ಎಂದರು. 

ವಿದೇಶಿ ಸಂಸ್ಕೃತಿ ಭಾರತೀಯ ಸಂಸ್ಕೃತಿಯನ್ನು ಹಾಳು ಮಾಡುತ್ತಿದೆ. ಯುವಕ, ಯುವತಿಯರು ಜ.1ರ ಹೊಸ ವರ್ಷಾಚಾರಣೆ ಮತ್ತು ಫೆ.14 ರಂದು ಪ್ರೇಮಿಗಳ ದಿನವೆಂದು ತಪ್ಪು ದಾರಿಗೆ ತಳ್ಳಲಾಗುತ್ತಿದೆ. ಇದಕ್ಕೆಲ್ಲಾ ಕಡಿವಾಣ ಹಾಕಲು ಭಾರತೀಯ ಸಂಸ್ಕೃತಿಯಲ್ಲಿ ದೇಶ ಪ್ರೇಮ ದಿನಾಚಾರಣೆಯನ್ನಾಗಿ ಆಚರಿಸಬೇಕೆಂದರು.

Advertisement

Udayavani is now on Telegram. Click here to join our channel and stay updated with the latest news.

Next