ವಿಜಯಪುರ : ಅನ್ಯ ಕೋಮಿಗೆ ಸೇರಿದ ಯುವಕನನ್ನು ಪ್ರೀತಿಸಿದ್ದಕ್ಕಾಗಿ ತಂದೆಯೋರ್ವ ತನ್ನ ಮಗಳು ಹಾಗೂ ಆಕೆಯ ಪ್ರಿಯಕರನನ್ನು ಹತ್ಯೆ ಮಾಡಿರುವ ಘಟನೆ ನಡೆದಿದೆ.
ಮರ್ಯಾದಾ ಹತ್ಯೆಗೆ ಬಲಿಯಾದ ಪ್ರೇಮಿಗಳನ್ನು ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಸಲಾದಹಳ್ಳಿ ಗ್ರಾಮದ ಬಸವರಾಜ ಮಡಿವಾಳಪ್ಪ ಬಡಿಗೇರಿ (19), ಖಾನಾಪುರದ ದವಲಬಿ ಬಂದಗಿಸಾಬ್ ತಂಬದ (18) ಎಂದು ಗುರುತಿಸಲಾಗಿದೆ.
ದವಲಬಿ ತಂಬದ ದಲಿತ ಸಮುದಾಯಕ್ಕೆ ಸೇರಿದ ಬಸವರಾಜ ಎಂಬ ಯುವಕನನ್ನು ಪ್ರೀತಿಸಿದ್ದೇ ಮರ್ಯಾದಾ ಹತ್ಯೆಯ ಜೋಡಿ ಕೊಲೆಗೆ ಕಾರಣವಾಗಿದೆ.
ದವಲಬಿ ಹಾಗೂ ಬಸವರಾಜ ಇವರು ಪರಸ್ಪರ ಪ್ರೀತಿಸುತ್ತಿದ್ದ ವಿಷಯ ಯುವತಿ ಮನೆವರಿಗೆ ತಿಳಿದು, ವಿರೋಧ ವ್ಯಕ್ತಪಡಿಸಿದ್ದರು. ಆದರೆ ಮನೆಯವರ ವಿರೋಧದ ಮಧ್ಯೆಯೂ ಯುವಪ್ರೇಮಿಗಳು ಮಂಗಳವಾರ ಮಧ್ಯಾಹ್ನ ಹೊಲದಲ್ಲಿ ಪರಸ್ಪರ ಭೇಟಿಯಾಗಿದ್ದರು. ಈ ವೇಳೆಯಲ್ಲೇ ಯುವತಿಯ ತಂದೆ ಅಲ್ಲಿಗೆ ಬಂದಿದ್ದು, ಇಬ್ಬರನ್ನು ಕಂಡು ಕುಪಿತನಾಗಿದ್ದಾನೆ. ಅಲ್ಲದೇ ಕಲ್ಲು ಹಾಗೂ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.
ಈ ಕುರಿತು ಕಲಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ, ಆದರೆ ಕೃತ್ಯಕ್ಕೆ ಸಂಬಂಧಿಸಿದಂತೆ ಈ ವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ಎಸ್ಪಿ ಅನುಪಮ್ ಅಗರವಾಲ ತಿಳಿಸಿದ್ದಾರೆ.