ಅಂಗೈಗೆ ಮೊಬೈಲ್ ಎಂಬ ಸಂಗಾತಿ ಬಂದ ಬಳಿಕ, ಪ್ರೀತಿ ಪ್ರೇಮ ಪ್ರಣಯದ ವರಸೆಯೇ ಬದಲಾಗಿದೆಯೆ? ಅದರಲ್ಲೇನು ವಿಶೇಷ ಎಂದು ಪ್ರಶ್ನಿಸುತ್ತಾರೆ, ಹೊಸತಲೆಮಾರಿನ ಪ್ರೇಮಿಗಳು. ಉದ್ದುದ್ದ ಪ್ರೇಮ ಪತ್ರ ಬರೆಯಲೂ ಓದಲೂ ಪುರುಸೊತ್ತಿಲ್ಲದಾಗ ಈ ಮೊಬೈಲ್ ಎಷ್ಟೊಂದು ಸಹಾಯ ಮಾಡಿದೆ.
ಆಕೆಯೊಡನೆ ಮಾತಿಗೆ ಸಮಯ ಸಿಗಬೇಕೆಂದಿಲ್ಲ. ಯಾವುದೇ ಕೆಲಸ ಮಾಡುತ್ತ, ಮಾತಿನ ಎಳೆಯೊಂದನ್ನು ಉಳಿಸಿಕೊಳ್ಳಬಹುದು. ಅವನಾದರೂ ಅಷ್ಟೇ, ಮೃದುವಾವ ಧ್ವನಿಯಲ್ಲಿ ಕಳುಹಿಸುವ ಸಂದೇಶಗಳನ್ನು ಕಳುಹಿಸುತ್ತಲೇ ಇರುತ್ತಾನೆ. ಮೊಬೈಲ್‌ನ ಇಯರ್‌ಫೋನ್ ಕಿವಿಗಂಟಿಸಿಕೊಂಡೇ ಇರುವ ಆಕೆ, ಸುಮ್ಮನೇ ವಾಟ್ಸಾಪ್ ತೆರೆದು, ಧ್ವನಿ ಸಂದೇಶದ ಮೇಲೆ ಬೆರಳಿಟ್ಟರೆ ಸಾಕು, ಅವನ ಮಾತುಗಳನ್ನು ಕೇಳಿ ಕೆನ್ನೆ ಕೆಂಪು. ಮಾಡುವ ಕೆಲಸ ಅಲ್ಲಿಯೇ ಬಿಟ್ಟು, ಮತ್ತೆ ಸಂದೇಶ ಟೈಪ್ ಮಾಡಲು ಓಡುತ್ತಾಳೆ.
ತಂತ್ರಜ್ಞಾನ ಅಭಿವೃದ್ಧಿ ಹೊಂದುತ್ತ, ಚಾಟಿಂಗ್, ಟೆಕ್ಸ್‌ಟಿಂಗ್, ವಾಯ್ಸಿಂಗ್ ಎಂಬುದು ಪ್ರೇಮಯಾನದ ಅವಿಭಾಜ್ಯ ಅಂಗವಾಗಿದೆ. ತಡರಾತ್ರಿಯವರೆಗೆ ಮಾತಿಗೆ ಮಾತು ಸೇರಿಸುತ್ತ ಕುಳಿತುಕೊಳ್ಳುವ ಪ್ರೇಮಿಗೆ, ಆಕೆ ತನ್ನ ಮುಂದೆಯೇ ಇದ್ದಾಳೆ ಎನ್ನುವ ಭಾವ ಮೂಡಿಬಿಡುತ್ತದೆ. ನಿರಂತರ ಧ್ವನಿಯನ್ನು ಆಲಿಸುತ್ತಲೇ ಇರಬೇಕೆಂಬ ಆಸೆ ನೆರವೇರಲು ಕ್ಷಣಮಾತ್ರವೂ ಬೇಕಾಗಿಲ್ಲ.
ಪ್ರೇಮದ ಗುಂಗಿನಲ್ಲಿ ಇರುವವರಿಗೆ ಈ ತಂತ್ರಜ್ಞಾನ ಕೊಡುವ ಸೌಕರ್ಯಗಳಿಂದ ಉಂಟಾಗುವ ಒಳಿತುಕೆಡುಕುಗಳೇನು ಎಂಬುದು ಅರಿವಿಗೆ ಬರಲಿಕ್ಕಿಲ್ಲ. ಆದರೆ, ಚಾಟಿಂಗ್‌ನ ಮುಂದುವರೆದ ಹಂತವಾಗಿ ಸೆಕ್ಸ್‌ಟಿಂಗ್‌ಗೆ ಶರಣಾಗುವ ಅಪಾಯಗಳ ಬಗ್ಗೆ ಎಚ್ಚರಿಕೆ ಇರಲೇಬೇಕು.
ಸುಮ್ಮನೇ ಸುತ್ತಾಟಕ್ಕೊಬ್ಬ ಸಂಗಾತಿ ಬೇಕೆಂಬ ತುಡಿತ ಇರುವವರಿಗಾಗಿ ಡೇಟಿಂಗ್ ಆ್ಯಪ್‌ಗ್ಳು ಸಾವಿರಾರು ಇವೆ. ಆದರೆ, ಜನಪ್ರಿಯ ಡೇಟಿಂಗ್ ಆ್ಯಪ್‌ಟಿಂಡರ್ ಬಗ್ಗೆಯೂ ಇತ್ತೀಚೆಗೆ ಅಪಸ್ವರಗಳು ಕೇಳಿ ಬಂದಿತ್ತು. ಟಿಂಡರ್ ಬಳಕೆದಾರರ ಪೈಕಿ ಶೇ. 72ರಷ್ಟು ಮಂದಿ ಒಂದಲ್ಲ ಒಂದು ಕಾರಣಕ್ಕೆ ವ್ಯಕ್ತಿಗಳನ್ನು ಬ್ಲಾಕ್ ಮಾಡಿದ್ದುಂಟು ಎಂದು ಅಧ್ಯಯನ ವರದಿಯೊಂದು ಹೇಳಿದೆ.
ಪ್ರೀತಿಯ ಗುಂಗಿನಲ್ಲಿ ಚಾಟಿಂಗ್, ಟೆಕ್ಸ್‌ಟಿಂಗ್ ಅಥವಾ ಸೆಕ್ಸ್‌ಟಿಂಗ್ ಎನ್ನುವುದು ಕೆಲ ಹೊತ್ತಿನವರೆಗೆ ಆಕರ್ಷಕವಾಗಿ ಕಂಡರೂ, ಅದು ವೈಯಕ್ತಿಕ ಸ್ವಾತಂತ್ರ್ಯವನ್ನು ಉಲ್ಲಂ ಸುವ, ಕೆಟ್ಟ ಭಾಷೆಯನ್ನು ಬಳಸುವ ಹಂತಕ್ಕೆ ಹೋದಾಗ, ವೈಯಕ್ತಿಕ ಜೀವನವೇ ಅಲ್ಲೋಲಕಲ್ಲೋಲವಾಗುವುದುಂಟು.
ಹಿತಮಿತವಾಗಿದ್ದರೆ ತಂತ್ರಜ್ಞಾನವೂ ಚಂದ.
-ಸುಷ್ಮಾ ರಾವ್