ಇಂದು ಎಲ್ಲಿ ನೋಡಿದ್ರು, 3ಜಿ, 4ಜಿ, ಸ್ಮಾರ್ಟ್ ಫೋನ್‌ಗಳದ್ದೇ ಜಮಾನ. ದಿನದಿಂದ ದಿನಕ್ಕೆ ತಂತ್ರಜ್ಞಾನ ಬೆಳೆಯುತ್ತ ನಮಗೇ ಗೊತ್ತಿಲ್ಲದಂತೆ ನಮ್ಮನ್ನು ಆವರಿಸಿಕೊಳ್ಳುತ್ತಿದೆ. ಇನ್ನು ಈ ತಂತ್ರಜ್ಞಾನದ ಜೊತೆಯಲ್ಲಿಯೇ ಅಪರಾಧ ಲೋಕ ಕೂಡ ವಿಸ್ತಾರವಾಗುತ್ತ ಹೋಗುತ್ತಿದೆ. ಹಿಂದೆ ನೇರವಾಗಿ ನಡೆಯುತ್ತಿದ್ದ ಪಾತಕ ಕೃತ್ಯಗಳು ಇಂದು ತೆರೆಮರೆಯಲ್ಲಿ ನಡೆಯುತ್ತಿವೆ. ಆಧುನಿಕತೆ ಬೆಳೆದಂತೆ, ನಾಗರೀಕತೆ ವಿಸ್ತಾರವಾದಂತೆ ಅಷ್ಟೇ ವೇಗದಲ್ಲಿ ಪಾತಕ ಲೋಕ ಕೂಡ ಬೆಳೆಯುತ್ತಿದೆ. ಇದೇ ವಿಷಯವನ್ನು ಇಟ್ಟುಕೊಂಡು ಇಲ್ಲೊಂದು ಹೊಸಬರ ತಂಡ ಅದನ್ನು “ನಾನು ನಮ್ಮುಡ್ಗಿ ಖರ್ಚ್‌ಗೊಂದ್ ಮಾಫಿಯಾ’ ಎಂಬ ಹೆಸರಿನಲ್ಲಿ ಚಿತ್ರ ರೂಪದಲ್ಲಿ ತೆರೆಮೇಲೆ ಹೇಳಲು ಹೊರಟಿದೆ.
ಬಹುತೇಕ ಹೊಸ ಪ್ರತಿಭೆಗಳೆ ಸೇರಿ ನಿರ್ಮಿಸಿರುವ “ನಾನು ನಮ್ಮುಡ್ಗಿ ಖರ್ಚ್‌ಗೊಂದ್ ಮಾಫಿಯಾ’ ಚಿತ್ರದ ಮೊದಲ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಹಿಂದೆ “ದಿಲ್ದಾರ’ ಚಿತ್ರವನ್ನು ನಿರ್ದೇಶಿಸಿದ್ದ ಅಮರ್ ಸಾಳ್ವ ಮತ್ತು ಚಲ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ಅಮರ್ ಸಾಳ್ವ, “ತಂತ್ರಜ್ಞಾನ ಜನರಿಗೆ ಹತ್ತಿರವಾಗುತ್ತಿದ್ದಂತೆ, ಅದರ ದುರುಪಯೋಗ ಕೂಡ ಹೆಚ್ಚಾಗುತ್ತಿದೆ. ಅನ್‌ಲೈನ್ ಇಂದು ಜನರಿಗೆ ಎಷ್ಟರ ಮಟ್ಟಿಗೆ ವರವಾಗಿದೆಯೋ, ಅಷ್ಟೇ ದೊಡ್ಡ ಶಾಪವಾಗಿಯೂ ಪರಿಣಮಿಸುತ್ತಿದೆ. ಸೈಬರ್ ಕ್ರೈಂ ಅನ್ನುವುದು ನಾಗರೀಕ ಜಗತ್ತಿಗೆ ಹೊಸ ಸವಾಲುಗಳನ್ನು ತಂದಿಡುತ್ತಿದೆ. ಅದರಲ್ಲೂ ಫೋರ್ನೋಗ್ರಫಿಯಂತಹ ಗಂಭೀರ ಅಪರಾಧಗಳು ನಾಗರೀಕ ಸಮಾಜವನ್ನು ತಲೆ ತಗ್ಗಿಸುವಂತೆ ಮಾಡುತ್ತಿವೆ. ಕೆಲ ವರ್ಷಗಳ ಹಿಂದೆ ಬೆಂಗಳೂರಿನ ಹೊರವಲಯದಲ್ಲಿ ನಡೆದ ಇಂಥದ್ದೇ ಘಟನೆಯೊಂದನ್ನು ಆಧರಿಸಿ ಈ ಚಿತ್ರ ಮಾಡುತ್ತಿದ್ದೇವೆ. ತುಂಬ ಸಮಯ ನನ್ನ ಮನಸನ್ನು ಕಾಡಿದ ಘಟನೆ ಇದು. ನೈಜ ಘಟನೆಯನ್ನು ಆಧಾರವಾಗಿಟ್ಟುಕೊಂಡು ಈ ಚಿತ್ರವನ್ನು ತರುತ್ತಿದ್ದೇವೆ’ ಎನ್ನುತ್ತಾರೆ ಅವರು.
ಇನ್ನು ಚಿತ್ರದ ಹೆಸರೇ ಹೇಳುವಂತೆ, “ನಾನು ನಮ್ಮುಡ್ಗಿ ಖರ್ಚ್‌ಗೊಂದ್ ಮಾಫಿಯಾ’ ಚಿತ್ರ ಒಂದು ಹುಡುಗ, ಹುಡುಗಿ ಮತ್ತೂಂದು ಹಣ ಮಾಡುತ್ತಿರುವ ಮಾಫಿಯಾ ಇಷ್ಟು ಸಂಗತಿಗಳ ಸುತ್ತ ಸುತ್ತುತ್ತದೆಯಂತೆ. ಚಿತ್ರದಲ್ಲಿ ಒಂದು ಕ್ಯೂಟ್ ಲವ್‌ಸ್ಟೋರಿ, ಜೊತೆಗೊಂದು ಕ್ರೈಂ ಕಹಾನಿ ಎರಡೂ ಇದೆ ಎನ್ನುತ್ತದೆ ಚಿತ್ರತಂಡ. “ನಾನು ನಮ್ಮುಡ್ಗಿ ಖರ್ಚ್‌ಗೊಂದ್ ಮಾಫಿಯಾ’ ಚಿತ್ರದಲ್ಲಿ ನವ ನಟ ಶ್ಯಾಂ ಸುಂದರ್, ಶ್ರದ್ಧಾ ಬೆಣಗಿ, ವರ್ಧನ್ ಶೆಟ್ಟಿ, ಉದಯ್ ಮತ್ತಿತರರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರದ ಹಾಡುಗಳಿಗೆ ವಿಕ್ರಂ ವರ್ಮನ್ ಸಂಗೀತ ಸಂಯೋಜನೆಯಿದೆ. ಗೌತಮ್ ಶ್ರೀವತ್ಸ ಹಿನ್ನೆಲೆ ಸಂಗೀತ ನೀಡಿದ್ದಾರೆ. ಚಿತ್ರಕ್ಕೆ ಕುಮಾರ್. ಎಂ ಛಾಯಾಗ್ರಹಣವಿದೆ. “ಪವರ್ ಟಾಕೀಸ್’ ಬ್ಯಾನರ್‌ನಲ್ಲಿ ಶ್ರೀನಿವಾಸ ಗೌಡ ಎನ್.ಸಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚಿತ್ರವನ್ನು ಬೆಂಗಳೂರು, ಕೆಜಿಎಫ್ ಸುತ್ತಮುತ್ತ ಚಿತ್ರೀಕರಿಸಲಾಗಿದೆ.
ಸದ್ಯ “ನಾನು ನಮ್ಮುಡ್ಗಿ ಖರ್ಚ್‌ಗೊಂದ್ ಮಾಫಿಯಾ’ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಇತ್ತೀಚೆಗೆ ತನ್ನ ಟ್ರೇಲರ್ ಬಿಡುಗಡೆ ಮಾಡುವ ಮೂಲಕ ಪ್ರಮೋಷನ್ ಕೆಲಸಗಳಿಗೆ ಚಾಲನೆ ನೀಡಿದೆ. ಚಿತ್ರತಂಡ ಪ್ಲಾನ್ ಪ್ರಕಾರ ಎಲ್ಲವೂ ನಡೆದರೆ, ಇದೇ ಫೆಬ್ರವರಿ ಅಂತ್ಯಕ್ಕೆ ಚಿತ್ರ ತೆರೆಗೆ ಬರಲಿದೆ.