ಈಗಂತೂ ಕನ್ನಡದಲ್ಲಿ ಕೆಲ ಚಿತ್ರಗಳ ಶೀರ್ಷಿಕೆಗಳೇ ಗಮನಸೆಳೆಯುತ್ತಿವೆ. ಅದರಲ್ಲೂ ಆಡುಭಾಷೆಯ ಶೀರ್ಷಿಕೆಗಳದ್ದೇ ಕಾರುಬಾರು. ಆ ಸಾಲಿಗೆ “ಗಾಂಚಲಿ’ ಎಂಬುದೂ ಒಂದು. ಈ ಶೀರ್ಷಿಕೆ ಕೇಳಿದೊಡನೆ, ಯಾರಿಗಾದರೂ ನಿಂದಿಸಿದ ನೆನಪಾಗುತ್ತೆ. ಬಹುತೇಕ ಹೊಸಬರೇ ಸೇರಿ ಮಾಡಿರುವ ಈ ಚಿತ್ರಕ್ಕೆ “ಗಾಂಚಲಿ’ ಶೀರ್ಷಿಕೆ ಕಥೆಗೆ ಪೂರಕವಾಗಿದೆಯಂತೆ. ಚಿತ್ರ ಮುಗಿದಿದ್ದು, ಈಗ ಬಿಡುಗಡೆಗೆ ಸಜ್ಜಾಗಿದೆ. ಚಿತ್ರಕ್ಕೆ ಯು/ಎ ಪ್ರಮಾಣ ಪತ್ರವೂ ಸಿಕ್ಕಾಗಿದೆ. ಇತ್ತೀಚೆಗೆ ಚಿತ್ರದ ಟ್ರೇಲರ್ ತೋರಿಸುವ ಮೂಲಕ ಪತ್ರಕರ್ತರ ಜೊತೆ ಮಾತುಕತೆ ನಡೆಸಿತು ಚಿತ್ರತಂಡ.
ಚಿತ್ರಕ್ಕೆ ಆರಂಭದಲ್ಲಿದ್ದ ನಿರ್ದೇಶಕರು ಈಗಿಲ್ಲ. ಅದಕ್ಕೆ ಕಾರಣ ಹೇಳದ ಚಿತ್ರತಂಡ, ನಿರ್ದೇಶನ ಸ್ಥಾನಕ್ಕೆ ಜೈ ಮಾರುತಿ ಪ್ರೊಡಕ್ಷನ್ಸ್ ಹೆಸರಿಟ್ಟು, ಆ ಮೂಲಕ ನವೆಂಬರ್ 30 ರಂದು ರಿಲೀಸ್ ಮಾಡಲು ತಯಾರಿ ನಡೆಸಿದೆ. ಡಿಡಿಎನ್ ಅಶೋಕ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಆದರ್ಶ್ ಈ ಚಿತ್ರದ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಮೊದಲು ಮಾತು ಶುರುಮಾಡಿದ್ದು ಆದರ್ಶ್. “ಇದು ನನ್ನ ಕನಸಿನ ಚಿತ್ರ. ಶೀರ್ಷಿಕೆ ಸಾಕಷ್ಟು ಅರ್ಥ ಕೊಡುತ್ತೆ. ಶೀರ್ಷಿಕೆ ಹಾಗಿದ್ದರೂ, ಚಿತ್ರತಂಡದಲ್ಲಿರೋ ಯಾರಿಗೂ “ಗಾಂಚಲಿ’ ಇಲ್ಲ. ಕಥೆಗೆ ಈ ಶೀರ್ಷಿಕೆ ಸರಿಹೊಂದಿದೆ. ಇಲ್ಲಿ ಮೂವರು ಬಾಲ್ಯ ಸ್ನೇಹಿತರ ಕಥೆ ಇದೆ. ಅವರಲ್ಲಿ ಹಣ ಇಲ್ಲ, ಆದರೂ ಗಾಂಚಲಿಗೇನೂ ಕಮ್ಮಿ ಇಲ್ಲ. ಆ ಗಾಂಚಲಿ ಏನೆಂಬುದೇ ಕಥೆ. ಪಕ್ಕಾ ಕಮರ್ಷಿಯಲ್ ಅಂಶ ಇಟ್ಟುಕೊಂಡು ಬರುತ್ತಿರುವ ಚಿತ್ರವಿದು. ಒಂದು ಆಪ್ತವಾದ ಗೆಳೆತನದ ವಿಷಯದ ಜೊತೆಗೆ ಪ್ರೀತಿ ಗೀತಿ ಇತ್ಯಾದಿ ಅಂಶಗಳಿವೆ’ ಎನ್ನುತ್ತಾರೆ ಆದರ್ಶ್.
ನಾಯಕಿ ಪ್ರಕೃತಿಗೆ ಇದು ಎರಡನೇ ಚಿತ್ರ. ಈ ಹಿಂದೆ “ಡೇಸ್ ಆಫ್ ಬೋರಾಪುರ’ದಲ್ಲಿ ನಟಿಸಿದ್ದರು. ಅವರಿಲ್ಲಿ ಸ್ಲಂ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರಂತೆ. ಪಕ್ಕಾ ಲೋಕಲ್ ಭಾಷೆಯಲ್ಲಿ ಮಾತನಾಡಿರುವ ಪ್ರಕೃತಿಗೆ ಇಲ್ಲಿ ಎರಡು ಶೇಡ್ ಇರುವ ಪಾತ್ರವಿದೆಯಂತೆ.
ಚಿತ್ರದಲ್ಲಿ ಗೆಳೆಯನಾಗಿ ಕಾಣಿಸಿಕೊಂಡಿರುವ ಅಜಯ್ ಅವರಿಗೆ ಒಳ್ಳೆಯ ಅನುಭವ ಆಗಿದೆಯಂತೆ. “ಗಾಂಚಲಿ’ ಚಿತ್ರ ನೋಡಿದವರಿಗೆ ಶೀರ್ಷಿಕೆ ಯಾಕಿಡಲಾಗಿದೆ ಎಂಬುದು ಅರ್ಥವಾಗುತ್ತೆ. ಇಲ್ಲಿ ಮೂವರು ಗೆಳೆಯರ ನಡುವಿನ ಕಥೆ ಇದೆ. ಜೊತೆಗೆ ಪ್ರೀತಿ, ಪ್ರೇಮ ಎಲ್ಲವೂ ಇದೆ. ನಾನಿಲ್ಲಿ ಲವ್ವರ್ ಬಾಯ್ ಪಾತ್ರ ಮಾಡಿದ್ದಾಗಿ ಹೇಳಿಕೊಂಡರು ಅಜಯ್.
ಮತ್ತೂಬ್ಬ ನಟ ಮಹೇಶ್ ಕೂಡ ಗೆಳೆಯರಾಗಿ ನಟಿಸಿದ್ದಾರಂತೆ. ಅವರಿಲ್ಲಿ ಸಾಕಷ್ಟು ಸ್ಟಂಟ್ ಮಾಡಿದ್ದು, ಬಹುತೇಕ ನೈಜ ಸಾಹಸವನ್ನೇ ಮಾಡಿದ್ದಾಗಿ ಹೇಳಿಕೊಂಡರು. ಅಭಿಷೇಕ್ ಶೆಟ್ಟಿ ಕಥೆ ಮತ್ತು ಸಂಭಾಷಣೆ ಬರೆದಿದ್ದು, ಚಿತ್ರದಲ್ಲಿ ಬರುವ ಒಂದು ಮಾಸ್ ಡೈಲಾಗ್ ಹೇಳುವ ಮೂಲಕ ಇದು ಕಮರ್ಷಿಯಲ್ ಚಿತ್ರ ಅಂದರು. ಚಿತ್ರಕ್ಕೆ ಚಂದನ್ ಶೆಟ್ಟಿ ಸಂಗೀತ ನೀಡಿದ್ದು, ಶೀರ್ಷಿಕೆ ಗೀತೆಗೆ ಸಾಹಿತ್ಯ ಬರೆದು ಹಾಡಿದ್ದಾರಂತೆ. ರವಿವರ್ಮ ಅವರ ಛಾಯಾಗ್ರಹಣವಿದೆ. ವಿಶ್ವ ಅವರ ಸಂಕಲನವಿದೆ. ಚಿತ್ರದಲ್ಲಿ ಭಜರಂಗಿ ಲೋಕಿ, ಶರತ್‌ಲೋಹಿತಾಶ್ವ, ನವ್ಯ, ಅಖೀಲಾ, ಸಂದೀಪ್, ಪ್ರದೀಪ್ ಪೂಜಾರಿ, ವರದನ್, ರಾಜು ತಾಳಿಕೋಟೆ, ಮಿತ್ರ, ಉಮೇಶ್ ಇತರರು ಇದ್ದಾರೆ.