Advertisement

ಜೀವನದ ಕ್ಷಣಿಕತೆಯಲ್ಲಿ ಪ್ರೀತಿಯ ಹುಡುಕಾಟ

12:30 AM Feb 14, 2019 | |

ಇಂದು ಪ್ರೇಮಿಗಳ ದಿನ. ಭಾಷೆ- ಭಾವಗಳನ್ನು ಸಂಕೇತಗಳಲ್ಲಿ ಹಿಡಿದಿಡುವಂತೆ ಪ್ರೀತಿಯ ಪುಳಕವನ್ನು ಹಲವು ರೀತಿಯಲ್ಲಿ ತೋರಲೊಂದು ದಿನ. ಗಂಡು -ಹೆಣ್ಣಿನ ಈ ಸಂಬಂಧವೇ ಒಂದು ಮಧುರ ಕಾವ್ಯದಂತೆ, ಕಾವ್ಯದ ಮಾಧುರ್ಯ ಕಳೆದರೆ ಬಿಡಿಸಲಾಗದ ಒಗಟಿನಂತೆ. ಈ ಜಗತ್ತಿನಲ್ಲಿ ಪ್ರೇಮಿಗಳದ್ದೇ ಇನ್ನೊಂದು ಜಗತ್ತು. ಇತರರಿಗದು ಭ್ರಮಾಲೋಕವೆಂದೆನಿಸಿದರೂ ಪ್ರೇಮಿಗಳದ್ದು ನಿಖರ, ಸ್ಪಷ್ಟ. ಖಲೀಲ್‌ ಗಿಬ್ರಾನ್‌ನ ಕವಿತೆಯೊಂದರಲ್ಲಿ ಪ್ರೇಮಿಯೊಬ್ಬ ನಿವೇದಿಸುತ್ತಾನೆ.

Advertisement

ನೆನಪಿದೆಯೆ ಗೆಳತಿ
ಮರದ ಹರೆಯ ನೆರಳಲ್ಲಿ ಕುಳಿತು
ಜಗದ ಖಯಾಲಿಗಳಿಂದ ಮರೆಯಾಗಿದ್ದೆವು
ಹೃದಯದ ಪಾರಮಾರ್ಥಿಕ ರಹಸ್ಯಗಳನ್ನು 
ಎದೆಗೂಡು ಕಾಪಿಡುವಂತೆ

ಆದರೆ ಈ ಜಗತ್ತಿನಲ್ಲಿ ಸದಾ ವಿಹರಿಸಲು ಸಾಧ್ಯವಿಲ್ಲ. ವಾಸ್ತವದ ಜಗತ್ತು ಅವರನ್ನೆಬ್ಬಿಸುತ್ತದೆ. “ಒಬ್ಬರನ್ನೊಬ್ಬರು ಬಾಹುಗಳಲ್ಲಿ ಬಂಧಿಸಿ ಪವಡಿಸಿದರು ನೆರಳಿನಲ್ಲಿ /ಅವರು ಹಾಸಿಕೊಂಡ ನೆರಳು ಮರೆಯಾಗಿ ಬಿಸಿಲ ಬೇಗೆ ಅವರನ್ನೆಚ್ಚರಿಸಿತು.’ ಈ ಬಿಸಿಲ ಬೇಗೆ ಪ್ರೇಮಿಗಳನ್ನು ವಾಸ್ತವ ಲೋಕದ ಕಟ್ಟುಪಾಡುಗಳಿಗೆ ಒಳಪಡಿಸುತ್ತದೆ. ಕಟ್ಟುಪಾಡುಗಳಿಗೆ ಸಿಕ್ಕಿ ಪ್ರೀತಿ ಕಮರುತ್ತದೆ. ಸಮಾಜದ ರೀತಿ ರಿವಾಜುಗಳಷ್ಟೇ ವ್ಯಕ್ತಿ ನಿಷ್ಠವಾದ ಕಟ್ಟುಪಾಡುಗಳೂ ಪ್ರೀತಿಯ ನಡುವೆ ಕಂದಕವನ್ನು ಸೃಷ್ಟಿಸಬಹುದು. ಸಾಮಾಜಿಕ ಕಟ್ಟುಪಾಡುಗಳು ಗಂಡು- ಹೆಣ್ಣಿನ ಸಂಬಂಧವನ್ನು ವಿವಾಹದ ಚೌಕಟ್ಟಿನಲ್ಲಿರಿಸಿ ಅದನ್ನು ಜಾತಿ ಧರ್ಮದ ಪರಿಧಿಯೊಳಗೆಳೆದಾಗ ಪ್ರೀತಿ, ಗಂಡು ಹೆಣ್ಣಿನ ಸಂಬಂಧ- ಎಲ್ಲವೂ ಸಮಸ್ಯಾತ್ಮಕವಾಗಬಹುದು.

ವೈಯಕ್ತಿಕ ಕಟ್ಟುಪಾಡುಗಳೂ ಕೆಲವೊಮ್ಮೆ ಪ್ರೀತಿಯ ದಾರಿಯಲ್ಲಿ ಸಮಸ್ಯೆಗಳನ್ನು ತಂದೊಡ್ಡುತ್ತವೆ. ವೈಯಕ್ತಿಕ ಆಸೆ , ಆಕಾಂಕ್ಷೆಗಳು ಒಂದಾಗಿದ್ದ ಹಾದಿಯಲ್ಲಿ ಕವಲುಗಳನ್ನು ತರಬಹುದು. ಇಂದಿನ ದಿನಗಳಲ್ಲಿ ನಾವು ಹೆಚ್ಚು ಹೆಚ್ಚು ವ್ಯಕ್ತಿಕೇಂದ್ರಿತವಾಗುತ್ತಿದ್ದೇವೆ. ಅದು ಕೆಲವೊಮ್ಮೆ ಸ್ವಾರ್ಥ ಎನ್ನಿಸಬಹುದು. ವಿದೇಶದಿಂದ ಕರೆ ಮಾಡಿದ ವಿದ್ಯಾರ್ಥಿನಿಯೊಬ್ಬಳು “ಸರ್‌ ಪರ್ಸನಲ್‌ ಅಂದ್ರೆ ಏನು?’ ಎಂದಳು. ಗಂಡ ಹೆಂಡಿರ ಮಧ್ಯೆ “ಪರ್ಸನಲ್‌’ ಅಂದ್ರೆ ಏನು?” ಎಂದಳು. ನನ್ನ ಗಂಡನಿಗೆ ನನ್ನ ಬಗ್ಗೆ ಎಲ್ಲವನ್ನೂ ತಿಳಿಸುತ್ತೇನೆ. ಆದರೆ ನಾನೂ ಅವರ ಬಗ್ಗೆ, ಸಹೋದ್ಯೋಗಿಗಳ ಬಗ್ಗೆ ತಿಳಿದರೆ ತಪ್ಪೇನು?’ ಎಂದಳು. ಸಂಬಂಧಗಳ ಮಧ್ಯೆ ಗುಟ್ಟುಗಳಿರಬಾರದು ಎಂದು ಅವಳು ಅಪೇಕ್ಷಿಸಿದ್ದರೆ ಸರಿ. ಆದಾಗ್ಯೂ ಗಿಬ್ರಾನ್‌ ಹೇಳುವಂತೆ
ಆದರೂ ಇರಲಿ ಒಂದಷ್ಟು ತಾವು
ನಮ್ಮಿಬ್ಬರ ಅನ್ಯೋನ್ಯತೆಯ ನಡುವೆ
ಸುರಲೋಕದ ಹವೆಯು ಸರಾಗ ಹಬ್ಬಿ
ಕುಣಿದಾಡಲಿ ನಮ್ಮ ನಡುವೆ
ಅದು ಸಾಧ್ಯವಾಗುವುದು ಪ್ರೇಮಿಗಳಿಬ್ಬರ ಮಧ್ಯೆ ಅತಿಯಾದ ನಿರೀಕ್ಷೆಗಳಿಲ್ಲದಾಗ. ಗಾಢವಾಗಿ ಪ್ರೀತಿಸಿದಷ್ಟೇ ಮುಖ್ಯವಾಗಿ ಇಬ್ಬರ ನಡುವೆ ನಂಬಿಕೆಯೆಂಬ ತಂತಿಯೊಂದು ಮೀಟಬೇಕು. ಪ್ರೀತಿ ನೇರ ಸರಳವಾಗಿದ್ದಷ್ಟೂ ಅದು ತನಗೆ ತಾನೇ ರಕ್ಷಾ ಕವಚವಾಗಿರುತ್ತದೆ. ಗಿಬ್ರಾನ್‌ನ ಈ ಸಾಲುಗಳು ಪ್ರೀತಿಯ ಮುಕ್ತತೆಯನ್ನು ಕೊಂಡಾಡುತ್ತದೆ.

ಪ್ರೀತಿಸೋಣ ಒಬ್ಬರನ್ನೊಬ್ಬರು
ಪ್ರೀತಿಯ ಒಪ್ಪಂದಗಳನ್ನು ಮಾಡಿಕೊಳ್ಳದೆ
ಮುಂಜಾವಿನ ಶರಧಿಯಂತೆ ಹಬ್ಬಿರಲಿ ಅದು    
ಆತ್ಮಗಳ ಕಿನಾರೆಗಳ ಮಧ್ಯೆ
ಸಂಬಂಧಗಳ ಮಧ್ಯೆ ಅಂತಹ ಒಂದು ತಾವು ಇದ್ದಾಗಲೇ ವ್ಯಕ್ತಿಯೊಬ್ಬನ ವ್ಯಕ್ತಿತ್ವದ ಸಾಧ್ಯತೆಗಳಿಗೆ ಅವಕಾಶ ಒದಗಿ ಬರುತ್ತದೆ.
ಸಮಾನ ಅಭಿರುಚಿಗಳು ಇದ್ದಾಗ ಜೀವನದ ತೇರೆಳೆಯುವುದು ಸುಲಭ. ಜೀವನವನ್ನು ಒಂದು ಹಡಗಿನ ಪಯಣಕ್ಕೆ ಹೋಲಿಸಿದ ವರ ಕವಿ ಬೇಂದ್ರೆ “ಸಪ್ಪೆ ಜೀವನಕ್ಕಿಂತ ಉಪ್ಪು ನೀರೂ ಲೇಸು’ ಎನ್ನುತ್ತಾರೆ. ಒಳ್ಳೆಯ ಅಭಿರುಚಿ, ಸಮಾನ ಮನಸ್ಕತೆ ಹಾಗೂ ಪರಸ್ಪರ ಪ್ರೀತಿ ,ವಿಶ್ವಾಸವಿದ್ದಾಗ ಜೀವನದ ಹಲವು ಸವಾಲುಗಳನ್ನು ಮೀರಿಯೂ ಪ್ರೀತಿ ಬದುಕನ್ನು ಸಹ್ಯವಾಗಿಸುವುದಷ್ಟೇ ಅಲ್ಲ, ಹಸನಾಗಿಸುತ್ತದೆ; ಸಾರ್ಥಕತೆ ಮೂಡಿಸುತ್ತದೆ. ಇಂತಹ ಪ್ರೀತಿಗೆ ಬಡತನದ ಬೇಗೆ ಅಡ್ಡಬರುವುದಿಲ್ಲ. ತೋಳುಗಳಿಗೆ ತೋಳಿನ ಆಧಾರವಿರಲು ಎಣಿಸಲಾರದಷ್ಟು ಮುತ್ತುಗಳು ಕೆನ್ನೆ ತುಂಬಾ ….

Advertisement

“ಒಲವೇ ನಮ್ಮ ಬದುಕು -ಬಳಸಿಕೊಂಡೆವದನೆ ನಾವು ಅದಕು ಇದಕು ಎದಕೂ’ ಎಂಬಂತೆ ಪ್ರೀತಿಯು ಜೀವನದ ಪಯಣದಲ್ಲಿ ನಿರಂತರವಾಗಿ ನೆರವಾಗಬಲ್ಲದು. ಅದಕ್ಕಾಗಿ ನಮ್ಮನ್ನು ಪ್ರೀತಿಸುವಷ್ಟೇ ಮುಖ್ಯವಾಗಿ ಸಂಗಾತಿಯನ್ನು ಅರಿತುಕೊಳ್ಳಬೇಕು. ಕಳೆದುಕೊಳ್ಳುವುದರಲ್ಲೇ ಗಳಿಸಲು ಸಾಧ್ಯವಾಗುವುದು ಒಲವಿನಲ್ಲಿ ಮಾತ್ರ. ಇಂದಿನ ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮತ ಪಂಥಗಳ ಹೊಯ್ದಾಟದಲ್ಲಿ, ಕುರುಡು ಕಾಂಚಾಣದ ಕುಣಿತದಲ್ಲಿ ಲೌಕಿಕ ಉಪಭೋಗಗಳ ಕ್ಷಣಿಕತೆಯಲ್ಲಿ, ದೇಶ ಪ್ರಾಂತ್ಯಗಳ ವೈಷಮ್ಯದ ಉರಿಯಡಿಯಲ್ಲಿನ ಕತ್ತಲೆಯಲ್ಲಿ ಪ್ರೀತಿ ಮಾತ್ರ ಶ್ರೀರಕ್ಷೆಯಾಗಬಲ್ಲದು. ಹಾಗಾಗಿಯೇ ಡೋವರ್‌ ಬೀಚ್‌ ಕವಿತೆಯಲ್ಲಿ ಮ್ಯಾಥ್ಯೂ ಅರ್ನಲ್ಡ್‌ನ ಕೊನೆಯ ಸಾಲುಗಳು ಮುಖ್ಯವಾಗುತ್ತವೆ. 

ಪ್ರೀತಿಯ ಅನೂಹ್ಯ ಸಾಧ್ಯತೆಗಳಿಗೆ ದೊಡ್ಡ ಸವಾಲೆಂದರೆ ಕಾಲ. ಕಾಲವು ಮನುಷ್ಯರ ಮೇಲೆ ಅವ್ಯಾಹತವಾಗಿ ಎರಗುತ್ತಲೇ ಇರುತ್ತದೆ. ಕಾಲದ ಹೊಡೆತಕ್ಕೆ ಸಿಲುಕುವ ಮನುಷ್ಯನ ಕ್ಷಣ ಭಂಗುರತೆಯನ್ನು ಸಾರುವ ಕೀಟ್ಸ್‌ನ ಕವಿತೆಗಳು ಮನುಷ್ಯ ಪ್ರೇಮದ ಕ್ಷಣಿಕತೆ ಹಾಗೂ ಕಲೆಯ ಶಾಶ್ವತತೆಯನ್ನು ಬಿಂಬಿಸುತ್ತವೆ. ಸ್ತಬ್ದ ಚಿತ್ರದಲ್ಲಿ ಸೆರೆಯಾದ ಪ್ರೇಮಿಗಳು ಇನ್ನೇನು ಪರಸ್ಪರ ಚುಂಬಿಸಬೇಕು ಆದರೆ ಸಂಪನ್ನಗೊಳ್ಳದ ಆ ಕ್ಷಣದಲ್ಲೇ ಪ್ರೇಮಿಗಳ ಕಾತುರತೆಯನ್ನು ಸ್ತಬ್ದ ಚಿತ್ರ ಸೆರೆಹಿಡಿಯುತ್ತದೆ. ಕವಿ ಪ್ರೇಮಿಯನ್ನು ಸಂತೈಸುತ್ತಿದ್ದಾನೆ. 

“ಖನ್ನನಾಗಬೇಡ, ಕಾಲದ ಕ್ಷಣಿಕತೆಯಲ್ಲಿ ನಿನ್ನ ಪ್ರೇಯಸಿ ಕಳೆದು ಹೋಗುವುದಿಲ್ಲ’ ಎಂದು. ಪುರಾಣದ ಕಥೆಗಳು, ಕಾಳಿದಾಸನ ಪ್ರೇಮಕಾವ್ಯ, ಜನಪದ ಪ್ರೇಮ ಕಥಾನಕಗಳು ಎಲ್ಲವೂ ಕಾಲದ ಪ್ರವಾಹದೆದುರು ನೆಲೆಯೂರುವ ಪ್ರೀತಿಯ ಅಮರತ್ವದ ಪ್ರತೀಕಗಳು. ಕಾವ್ಯದ ಹಾಗೂ ಕಲೆಯ ಆಚೆಗೆ ನಾವೆಲ್ಲರೂ ಕಾಲದ ಬಂಧಿಗಳೇ. ತಮ್ಮ ಬೆನ್ನಟ್ಟುವ ಕಾಲದ ಕುದುರೆಗಳ ಕ್ರೂರ ಚಲನೆಯ ಲಯವರಿತ ಪ್ರೇಮಿ ಸಂಕೋಚ ಸ್ವಭಾವದ ತನ್ನ ಪ್ರೇಯಸಿಯಲ್ಲಿ ಮಾಡುವ ಪ್ರೇಮ ನಿವೇದನೆ ಆಂಡ್ರೂ ಮಾರ್ವೆಲ್ಲನ ಒಂದು ಜನಪ್ರಿಯ ಕವಿತೆಯ ವಸ್ತು.

ನಿಜ, ಕಾಲ ಮತ್ತು ಪ್ರೀತಿ ಎರಡನ್ನೂ ಸಂತೃಪ್ತಿಯಿಂದ ಮೊಗೆದು ಅನುಭವಿಸುವುದು ಸಾಧ್ಯವೇ? ಕಾಲದ ಕೊಳದಲ್ಲಿ ಕಳೆದು ಹೋಗುವ ನಶ್ವರ ಬದುಕಿನಲ್ಲಿ ಪ್ರೀತಿಯ ಹುಡುಕಾಟದ ಕುರಿತಾದ ಕವಿತೆಯ ಕೆಲವು ಸಾಲುಗಳು
ಬೊಗಸೆಯಲಿ ನಿನ್ನನ್ನೆತ್ತಿ ಕುಡಿವ ಧಾವಂತ 
ನೀನು ಸರಸರನೆ ಕೆಳಗಿಳಿವೆ ; ಚೆಲ್ಲು ಹಠ
ಅಂಗೈಯಲಿ ಹೊಳೆವ ಅಮೃತದ ಬಿಂದುವೇ
ಎಂದು ಕುಡಿದೇನು ನಿನ್ನ
ಇನ್ನೆಂದೂ ಬೇಡದಂತೆ.

ವಿಷ್ಣುಮೂರ್ತಿ ಪ್ರಭು

Advertisement

Udayavani is now on Telegram. Click here to join our channel and stay updated with the latest news.

Next