Advertisement
ಒಂದು ಮನರಂಜನಾತ್ಮಕ ಚಿತ್ರದಲ್ಲಿ ಏನೆಲ್ಲಾ ಇರಬೇಕೋ ಅವೆಲ್ಲವೂ “ಲಂಬೋದರ’ನಲ್ಲಿದೆ. ಒಂದೇ ಮಾತಲ್ಲಿ ಹೇಳುವುದಾದರೆ, ಯುವಕರನ್ನೇ ಕೇಂದ್ರೀಕರಿಸಿ ಮಾಡಿರುವ ಚಿತ್ರವಿದು. ಹಾಗಂತ, ಪೋಲಿತನವೇ ಇಲ್ಲಿಲ್ಲ. ತುಂಟತನದ ಜೊತೆಗೆ ಬದುಕಿನ ಸಾರ, ಪ್ರೀತಿಯ ಪಾಕ ಎಲ್ಲವೂ ತುಂಬಿಕೊಂಡಿದೆ. ಒಂದು ಸರಳ ಕಥೆಗೆ ಇಲ್ಲಿ ಚಿತ್ರಕಥೆಯೇ ಮೂಲಾಧಾರ. ಇಲ್ಲಿ ಚುರುಕಾಗಿರುವ ಚಿತ್ರಕಥೆ ಸುಮ್ಮನೆ ನೋಡಿಸಿಕೊಂಡು ಹೋಗುತ್ತದೆ.
Related Articles
Advertisement
ಇನ್ನು, ಲಂಬೋದರನ ಹುಡುಗಾಟಿಕೆಯನ್ನು ಅಷ್ಟೇ ಮಜವಾಗಿ ನಿರೂಪಿಸಿರುವ ನಿರ್ದೇಶಕರ ಕೆಲಸ ಆಗಾಗ ಖುಷಿ ಕೊಡುತ್ತದೆ. ಜೊತೆಗೆ ಅಲ್ಲಲ್ಲಿ ನಗುವನ್ನೂ ತರಿಸುತ್ತದೆ. ಈಗಿನ ಕಾಲದ ಹುಡುಗರ ಅಭಿರುಚಿ ಹೇಗೆಲ್ಲಾ ಇರುತ್ತೆ ಎಂಬ ವಾಸ್ತವ ಚಿತ್ರಣದೊಂದಿಗೆ ಮೊದಲರ್ಧ ಮುಗಿದರೆ, ಶಾಲೆ ದಿನಗಳ ನೆನಪಿಗೆ ಜಾರುವ ಲಂಬೋದರನ ಪ್ರಾಯದ ಕ್ಷಣಗಳ ಆಟಾಟೋಪಗಳ ಜೊತೆ ಒಂದಷ್ಟು ಭಾವನಾತ್ಮಕ ಸನ್ನಿವೇಶಗಳೊಂದಿಗೆ ಅರ್ಥಪೂರ್ಣ ಸಂದೇಶದೊಂದಿಗೆ ದ್ವಿತಿಯಾರ್ಧ ಪೂರ್ಣಗೊಳ್ಳುತ್ತದೆ.
ಇಲ್ಲಿ ಕಥೆಯಲ್ಲಿ ಗಟ್ಟಿತನವಿದೆಯೋ ಇಲ್ಲವೋ ಅದನ್ನು ಪಕ್ಕಕ್ಕಿಟ್ಟು ನೋಡುವುದಾದರೆ, ಮನರಂಜನೆಗೆ ಕೊರತೆಯಿಲ್ಲ. ನೋಡುಗರು ಎಲ್ಲೋ ಒಂದು ಕಡೆ ಸೀಟಿಗೆ ಒರಗಿಕೊಳ್ಳುವ ಹೊತ್ತಿಗೇ ಚಂದದ ಹಾಡುಗಳು ಕಾಣಿಸಿಕೊಂಡು ಮತ್ತಷ್ಟು ಉತ್ಸಾಹ ತುಂಬುವ ಮೂಲಕ “ಲಂಬೋದರ’ ತನ್ನ ಮೈಲೇಜ್ ಹೆಚ್ಚಿಸಿಕೊಳ್ಳಲು ಸಹಕಾರಿಯಾಗಿವೆ. ಎಲ್ಲಾ ವಯಸ್ಸಿನ ಹುಡುಗರಿಗೂ ಆಗುವಂತಹ ಬದಲಾವಣೆಗಳು ಲಂಬೋದರನಲ್ಲೂ ಆಗುತ್ತವೆ.
ಆದರೆ, ನೂರೆಂಟು ವಿಘ್ನಗಳು ಎದುರಾಗುವ ಮೂಲಕ ಇಡೀ ಚಿತ್ರದುದ್ದಕ್ಕೂ ಲಂಬೋದರ ಪಡುವ ಪರಿಪಾಟಿಲು ನಗೆಗಡಲಲ್ಲಿ ತೇಲಿಸುತ್ತದೆ, ಹುಡುಗಿಯನ್ನು ಮುಟ್ಟಬೇಕು, ಅಪ್ಪಿಕೊಳ್ಳಬೇಕು ಎಂಬ ಮನಸ್ಥಿತಿ ಇರುವ ಲಂಬೋದರನಿಗೆ ಹುಡುಗಿಯ ಸ್ಪರ್ಶವಾಗುತ್ತಾ, ಪ್ರೀತಿ ಸಿಗುತ್ತಾ, ಆ ಪ್ರೀತಿ ಮಧ್ಯೆ ಕಳೆದುಕೊಂಡ ಅಮ್ಮನ ಮಮತೆ, ಅಪ್ಪನ ವಾತ್ಸಲ್ಯ, ಗೆಳೆಯರ ಪ್ರೀತಿ ಮತ್ತೆ ಸಿಗುತ್ತಾ ಅನ್ನೋದೇ ಕಥೆ.
ಬದುಕನ್ನು ಸೋಮಾರಿಯಾಗಿಸಿಕೊಂಡ ಲಂಬೋದರ ಬದುಕನ್ನೆ ಹೇಗೆ ಪ್ರೀತಿಸ್ತಾನೆ ಎಂಬುದೇ ಕಥೆ. ಕುತೂಹಲವಿದ್ದರೆ, ಲಂಬೋದರನ ಮನರಂಜನೆ ಪಡೆದು ಬರಬಹುದು. ಯೋಗಿ ಇಲ್ಲಿ ಸಂಪೂರ್ಣ ಬದಲಾಗಿದ್ದಾರೆ. ಅವರ ಪಾತ್ರ ಎಂದಿಗಿಂತಲೂ ಹೊಸದಾಗಿದೆ. ಅದನ್ನು ಅಷ್ಟೇ ಚೆನ್ನಾಗಿ ತೂಗಿಸಿಕೊಂಡು ಹೋಗಿದ್ದಾರೆ. ಈ ಪಾತ್ರ ಮೂಲಕ ಮತ್ತಷ್ಟು ನಟನೆಯಲ್ಲಿ ಸೈ ಎನಿಸಿಕೊಂಡಿದ್ದಾರೆ.
ಇನ್ನು, ಫೈಟ್ ವಿಷಯದಲ್ಲೂ ಹಿಂದೆ ಬಿದ್ದಿಲ್ಲ. ಆಕಾಂಕ್ಷ ಗ್ಲಾಮರ್‌ಗಷ್ಟೇ ಸೀಮಿತ. ಅಚ್ಯುತಕುಮಾರ, ಅರುಣಬಾಲರಾಜ್ ಅಪ್ಪ, ಅಮ್ಮನಾಗಿ ಇಷ್ಟವಾಗುತ್ತಾರೆ. ಧರ್ಮಣ್ಣ, ಸಿದ್ದು ಇತರೆ ಪಾತ್ರಗಳು ಇರುವಷ್ಟು ಕಾಲ ಗಮನಸೆಳೆಯುತ್ತವೆ. ಕಾರ್ತಿಕ್ ಶರ್ಮ ಸಂಗೀತದ ಎರಡು ಹಾಡುಗಳು ಗುನುಗುವಂತಿವೆ. ಮಿಥುನ್ ಮುಕುಂದನ್ ಹಿನ್ನೆಲೆ ಸಂಗೀತ ಚಿತ್ರದ ವೇಗ ಹೆಚ್ಚಿಸಿದೆ. ಅರವಿಂದ್ ಕಶ್ಯಪ್ ಅವರ ಛಾಯಾಗ್ರಹಣ ಚಿತ್ರಕ್ಕೆ ಪೂರಕ.
ಚಿತ್ರ: ಲಂಬೋದರ ನಿರ್ಮಾಣ: ವಿಶ್ವೇಶ್ವರ.ಪಿ., ರಾಘವೇಂದ್ರ ಭಟ್
ನಿರ್ದೇಶನ: ಕೆ.ಕೃಷ್ಣರಾಜ್
ತಾರಾಗಣ: ಯೋಗಿ, ಆಕಾಂಕ್ಷ, ಅಚ್ಯುತಕುಮಾರ್, ಅರುಣ ಬಾಲರಾಜ್, ಧರ್ಮಣ್ಣ, ಸಿದ್ದು ಮೂಲಿಮನಿ ಇತರರು. * ವಿಜಯ್ ಭರಮಸಾಗರ