ತೆಲಸಂಗ: ಸಮೀಟದ ಐಗಳಿ ಠಾಣೆಯಲ್ಲಿ ಪೋಕ್ಸೋ ಕಾಯದೆ ಅಡಿಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಲವ್ ಜಿಹಾದ್ ತಡೆಗಟ್ಟುವಂತೆ ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗ ದಳ ಕಾರ್ಯಕರ್ತರು ಶುಕ್ರವಾರ ಗ್ರಾಮದಲ್ಲಿ ಪ್ರತಿಭಟಿಸಿದರು.
ಗ್ರಾಮದ ಮೆರವಣಿಗೆ ನಡೆಸಿದ ಕಾರ್ಯಕರ್ತರು ಛತ್ರಪತಿ ಶಿವಾಜಿ ವೃತ್ತದಿಂದ ಹೊರಟು ಉಪತಹಶೀಲ್ದಾರ್ ಕಚೇರಿಗೆ ತೆರಳಿ, ಸಮಾಜದಲ್ಲಿ ಶಾಂತಿ ಕದಡುವ ಲವ್ ಜಿಹಾದ್ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇಂತಹ ಕೃತ್ಯಗಳ ಮೂಲಕ ಹಿಂದು ಸಮಾಜವನ್ನು ಒಡೆಯುವ ಹುನ್ನಾರ ನಡೆಯುತ್ತಿದೆ. ತೆಲಸಂಗ ಗ್ರಾಮದ ಮುಸ್ಲಿಂ ಯುವಕನೋರ್ವ ಹಿಂದು ಅಪ್ರಾಪ್ತ ಬಾಲಕಿಗೆ ಮತ್ತು ಬರುವ ಮಾತ್ರೆ ಕೊಟ್ಟು ಅತ್ಯಾಚಾರ ಎಸೆಗಿದ್ದು ಅತ್ಯಂತ ಅಮಾನವಿಯ ಕೃತ್ಯ. ಇದನ್ನು ಸಂಘಟಿತ ಹಿಂದು ಸಮಾಜ ಖಂಡಿಸುತ್ತದೆ. ಸಮಾಜಕ್ಕೆ ಕಂಟಕವಾಗಿ ಕಾಡುತ್ತಿರುವ ಈ ಲವ್ ಜಿಹಾದ್, ಮತಾಂತರ, ಗೋಹತ್ಯೆ ಇಂತಹ ಹಲವಾರು ದುಷ್ಕೃತ್ಯ ನಿಲ್ಲಿಸದೆ ಹೋದರೆ ತೀರ್ವ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಮನವಿ ಸಲ್ಲಿಸಿದರು.
ನಂತರ ಮುಖ್ಯ ಬಜಾರದ ಲಕ್ಷ್ಮೀ ದೇವಸ್ಥಾನದ ಆವರಣದಲ್ಲಿ ಸಾರ್ವಜನಿಕ ಸಭೆ ನಡೆಯಿತು. ವಿಶ್ವ ಹಿಂದು ಪರಿಷತ್ ಜಿಲ್ಲಾ ಸಂಚಾಲಕ ವಿಠಲ ಮಾತನಾಡಿ, ಜಗತ್ತಿಗೆ ಧರ್ಮದ, ಸಂಸ್ಕಾರದ ಪಾಠವನ್ನು ಕಲಿಸಿಕೊಟ್ಟ ಹಿಂದು ಧರ್ಮದ ಮೇಲೆ ಅನ್ಯಾಯ ನಡೆದರೆ ಸಹಿಸಲು ಸಾಧ್ಯವಿಲ್ಲ. ಲವ್ ಜಿಹಾದ್ ಸೇರಿದಂತೆ ಅನೇಕ ಮಾರ್ಗಗಳಿಂದ ಭಾರತವನ್ನು ಅಭದ್ರಗೊಳಿಸುವ, ಹಿಂದು ಧರ್ಮವನ್ನು ಮುಗಿಸಬೇಕೆನ್ನುವ ಷಡ್ಯಂತ್ರ ನಡೆಯುತ್ತಿದೆ.
ಧರ್ಮದ, ದೇಶದ ವಿಷಯ ಬಂದಾಗ ಹಿಂದುಗಳು ರಾಜಿ ಆದ ಉದಾಹರಣೆಯೇ ಇಲ್ಲ. ಹಿಂದುಗಳು ಯಾರ ಮೇಲೂ ಅನ್ಯಾಯವೆಸಗುವುದಿಲ್ಲ ಎಂಬುದಕ್ಕೆ ಇತಿಹಾಸವೇ ಸಾಕ್ಷಿ. ಲವ್ ಜಿಹಾದ್‌ಗೆ ಬಲಿಯಾದ ಹಿಂದು ಯುವತಿಯರು ಇಂದು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ. ಇದು ಇವತ್ತು ತೆಲಸಂಗ ಗ್ರಾಮಕ್ಕೂ ಕಾಲಿರಿಸಿದೆ. ಇದರಿಂದ ಹಿಂದು ಯುವತಿಯರು ಎಚ್ಚೆತ್ತುಕೊಳ್ಳಬೇಕು ಎಂದು ಕರೆ ನೀಡಿದರು.
ಸಾನ್ನಿಧ್ಯ ವಹಿಸಿದ್ದ ವಿರೇಶ್ವರ ದೇವರು ಮಾತನಾಡಿ, ಈ ಮಣ್ಣಿನ ಸಂಸ್ಕೃತಿಯನ್ನು ಅಳಿಸಲು ಯಾರಿಂದಲೂ ಸಾಧ್ಯವಾಗಿಲ್ಲ ಎಂಬುದನ್ನು ಇತಿಹಾಸವೇ ಹೇಳುತ್ತದೆ. ಇಂತಹ ಜಗತ್ತನ್ನೇ ಗೆಲ್ಲುವ ಶಕ್ತಿ ಇರುವ ಭಾರತಿಯ ಸಂಸ್ಕೃತಿಯ ನೆಲದಲ್ಲಿ ಕೋಮುಭಾವನೆ ಹರಡದಂತೆ ಒಟ್ಟಾಗಿ ಒಂದಾಗಿ ನಡೆಯೋಣ. ಅನ್ಯಾಯ ಅತ್ಯಾಚಾರಗಳಿಗೆ ಕೊನೆ ಹಾಡೋಣ ಎಂದರು. ಜಿಲ್ಲಾ ಧರ್ಮಾಚಾರ್ಯ ಸಂಯೋಜಕ ವೆಂಕಟೇಶ ದೇಶಪಾಂಡೆ, ಸಂತೋಷ ಕುಲಕರ್ಣಿ, ಕೇಶವ ಉಂಡೋಡಿ, ಈಶ್ವರ ಉಂಡೋಡಿ, ಜಗದೀಶ ಮಠದ, ಶ್ರೀಶೈಲ ಶೆಲ್ಲೆಪ್ಪಗೋಳ, ನಾಗರಾಜ ಉಂಡೋಡಿ, ಬಸು ಸಾವಳಗಿ, ಸಹದೇವ ದಶವಂತ, ಹಣಮಂತ ಸಾವಳಗಿ, ಕಾಸಪ್ಪ ಸೇರಿದಂತೆ ಅನೇಕರು ಇದ್ದರು.