ಲಕ್ನೋ: ದೇಶಾದ್ಯಂತ ಲವ್ ಜಿಹಾದ್ ಕುರಿತು ಚರ್ಚೆ ನಡೆಯುತ್ತಿರುವ ನಡುವೆಯೇ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರಪ್ರದೇಶ ಸರ್ಕಾರ ಲವ್ ಜಿಹಾದ್ ಕಾನೂನನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಿರುವುದಾಗಿ ಟೈಮ್ಸ್ ನೌ ವರದಿ ಮಾಡಿದೆ.
ಉತ್ತರಪ್ರದೇಶದ ಮುಸ್ಲಿಂ ಯುವಕ ಹಾಗೂ ಹಿಂದೂ ಯುವತಿಯ ವಿವಾಹಕ್ಕೆ ಸಂಬಂಧಿಸಿದ ದೂರಿನ ವಿಚಾರಣೆ ನಡೆಸಿದ್ದ ಅಲಹಾಬಾದ್ ಹೈಕೋರ್ಟ್ ದ್ವಿಸದಸ್ಯ ಪೀಠ, ವೈಯಕ್ತಿಕ ಆಯ್ಕೆಯ ಸ್ವಾತಂತ್ರ್ಯದ ವಿಚಾರದಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ತೀರ್ಪು ನೀಡಿದ್ದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿರುವುದಾಗಿ ವರದಿ ಹೇಳಿದೆ.
ತಮ್ಮ ಮಗಳನ್ನು ಅಪಹರಿಸಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಳಿಸಿ ವಿವಾಹವಾಗಿರುವುದಾಗಿ ದೂರಿ ಯುವತಿಯ ಪೋಷಕರು ಸಲ್ಲಿಸಿದ್ದ ದೂರನ್ನು ಅಲಹಾಬಾದ್ ಹೈಕೋರ್ಟ್ ರದ್ದುಗೊಳಿಸಿ ಈ ತೀರ್ಪು ನೀಡಿತ್ತು.
ಲವ್ ಜಿಹಾದ್ ತಡೆಗಟ್ಟುವ ನಿಟ್ಟಿನಲ್ಲಿ ಶೀಘ್ರದಲ್ಲಿಯೇ ಕಾನೂನು ಜಾರಿಗೊಳಿಸುವುದಾಗಿ ಉತ್ತರಪ್ರದೇಶ ಸರ್ಕಾರ ತಿಳಿಸಿತ್ತು. ಅಲ್ಲದೇ ಲವ್ ಜಿಹಾದ್ ನಿಷೇಧಿಸುವ ಕಾನೂನು ಪ್ರಸ್ತಾಪವನ್ನು ಅಂಗೀಕರಿಸಲು ಕೇಂದ್ರ ಕಾನೂನು ಸಚಿವಾಲಯಕ್ಕೆ ಕಳುಹಿಸಿತ್ತು. ಏತನ್ಮಧ್ಯೆ ಉತ್ತರಪ್ರದೇಶದ ಸರ್ಕಾರ ಸುಗ್ರೀವಾಜ್ಞೆ ಮೂಲಕ ಲವ್ ಜಿಹಾದ್ ಕಾಯ್ದೆಯನ್ನು ಜಾರಿಗೊಳಿಸಿರುವುದಾಗಿ ವರದಿ ತಿಳಿಸಿದೆ.