ಸಿನಿಮಾ ಸೆಳೆತವೇ ಹಾಗೆ. ಒಂದೊಮ್ಮೆ ಸಿನಿಮಾ ಮಾಡುವ ಆಸೆ ಹುಟ್ಟುಕೊಂಡರೆ ಅದು ವರ್ಷಗಳು ಕಳೆದರೂ ಆ ಆಸೆ ಬತ್ತುವುದಿಲ್ಲ. ಅಂಥದ್ದೊಂದು ಆಸೆ ಇಟ್ಟುಕೊಂಡಿದ್ದ ಮಾಧ್ಯಮ ಗೆಳೆಯರು ಕೊನೆಗೂ ಒಂದು ಸಿನಿಮಾ ಮಾಡುವ ಮೂಲಕ ಆಸೆ ಈಡೇರಿಸಿಕೊಂಡಿದ್ದಾರೆ. ಹೌದು, ‘ಗೋರಿ’ ಮೂಲಕ ಮಾಧ್ಯಮ ಗೆಳೆಯರು ಕನಸು ನನಸಾಗಿಸಿಕೊಂಡಿದ್ದಾರೆ.
ಹಾವೇರಿಯ ಚಾನೆಲ್ವೊಂದರಲ್ಲಿ ಕೆಲಸ ಮಾಡುತ್ತಿದ್ದ ಗೆಳೆಯರಿಗೆ ಸಿನಿಮಾ ಮಾಡಬೇಕೆಂಬ ಆಸೆ ಹೆಚ್ಚಾಗಿತ್ತು. ಆದರೆ, ಸರಿಯಾದ ಬೆಂಬಲ ಇರಲಿಲ್ಲ. ಗಾಂಧಿನಗರದ ದಾರಿಯೂ ಸಿಕ್ಕಿರಲಿಲ್ಲ. ಬರೋಬ್ಬರಿ ಎಂಟು ವರ್ಷಗಳ ಬಳಿಕ ಕೊನೆಗೂ ಆ ಆಸೆ ಈಡೇರಿಸಿಕೊಂಡ ತೃಪ್ತ ಭಾವ ಅವರದು. ಇಷ್ಟಕ್ಕೂ ಇಲ್ಲೀಗ ಹೇಳಹೊರಟಿರುವ ವಿಷಯ, ಮಾಧ್ಯಮದಲ್ಲಿ ಕೆಲಸ ಮಾಡುತ್ತಿರುವ ಗೋಪಾಲಕೃಷ್ಣ, ಕಿರಣ್, ಜಗ್ಗಿನ್ ಮತ್ತಿತರ ಗೆಳೆಯರ ಬಗ್ಗೆ. ಹೌದು, ಇವರೆಲ್ಲರೂ ಹಾವೇರಿಯ ಸ್ಥಳೀಯ ಚಾನೆಲ್ನಲ್ಲಿ ಕೆಲಸ ಮಾಡುತ್ತಿದ್ದವರು. ಈಗ ‘ಗೋರಿ’ ಸಿನಿಮಾ ಮಾಡಿದ್ದಾರೆ. ಇತ್ತೀಚೆಗೆ ಆ ಬಗ್ಗೆ ಹೇಳಲೆಂದೇ ಪತ್ರಕರ್ತರ ಮುಂದೆ ಬಂದಿದ್ದರು.
ಮೊದಲು ಮಾತಿಗಿಳಿದದ್ದು ನಿರ್ದೇಶಕ ಗೋಪಾಲಕೃಷ್ಣ. ‘ಹೀರೋ ಆಗಬೇಕೆಂಬ ಕಿರಣ್ ಆಸೆ ಈಡೇರಿದೆ. ಇದು ಪ್ರೀತಿ ಮತ್ತು ಸ್ನೇಹದ ನಡುವಿನ ಕಥೆ. ಸತ್ತ ಮೇಲೆ ಪ್ರತಿ ಮನುಷ್ಯನ ಗೋರಿಗೆ ಅದರದ್ದೇ ಆದ ಜೀವನದ ಕಥೆ ಇರುತ್ತೆ. ಈ ಚಿತ್ರದಲ್ಲಿ ಆ ಗೋರಿಯ ಕಥೆಯನ್ನ ಮೂರು ಜನ ಹೇಳುತ್ತಾ ಹೋಗುತ್ತಾರೆ. ಯಾರ ಗೋರಿಯ ಕಥೆ ಹೇಳುತ್ತಾರೆ ಎಂಬುದು ಒನ್‌ಲೈನ್. ಜಾತಿ ಮತ್ತು ಧರ್ಮಕ್ಕಿಂತ ಮಿಗಿಲಾದದ್ದು ಸ್ನೇಹ ಮತ್ತು ಪ್ರೀತಿ. ಆ ಪ್ರೀತಿ, ಮತ್ತು ಸ್ನೇಹಕ್ಕಿಂತ ಮಿಗಿಲಾದದ್ದು ಮಾನವೀಯತೆ. ಆ ವಿಷಯವನ್ನೇ ಇಲ್ಲಿ ಸೂಕ್ಷ್ಮವಾಗಿ ಹೇಳಹೊರಟಿದ್ದೇನೆ’ ಎಂದರು ಗೋಪಾಲಕೃಷ್ಣ.
ನಾಯಕ ಕಿರಣ್ ಮಾತನಾಡಿ, ‘ನಿಜಕ್ಕೂ ನಾನು ಅಂದುಕೊಂಡಿರಲಿಲ್ಲ. ನನ್ನ ಪ್ರಯತ್ನಕ್ಕೆ ಗೆಳೆಯರ ಇಷ್ಟೊಂದು ಸಹಕಾರ ಸಿಗುತ್ತೆ ಅಂತ. ಆಸೆ ಇಟ್ಟುಕೊಂಡೇ ಈ ಕ್ಷೇತ್ರಕ್ಕೆ ಬಂದವನು. ಇದು ನಿನ್ನೆ ಮೊನ್ನೆಯ ಕನಸಲ್ಲ. ಹಾವೇರಿಯ ಲೋಕಲ್ ಚಾನೆಲ್ನಲ್ಲಿ ಕೆಲಸ ಮಾಡುವಾಗ ಸಿನಿಮಾ ಪ್ರಯತ್ನ ಇತ್ತು. ನಾನು, ನಿರ್ದೇಶಕ ಗೋಪಾಲಕೃಷ್ಣ, ಗೀತೆ ಬರೆದ ಮಾಲತೇಶ್ ಜಗ್ಗಿನ್ ಎಲ್ಲರೂ ಒಟ್ಟಿಗೆ ಬೆಳೆದವರು. ಎಲ್ಲೋ ಒಂದು ಕಡೆ ವಿಶ್ವಾಸ ಇತ್ತು. ಆ ಕನಸು ಸಾಕಾರವಾಗಲು ಇಷ್ಟು ವರ್ಷವಾಯ್ತು. ನಿರ್ದೇಶಕ ಗೆಳೆಯ ನನಗಾಗಿ ಎರಡು ವರ್ಷದ ಹಿಂದೆ ಒಳ್ಳೆಯ ಕೆಲಸ ಬಿಟ್ಟು, ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಚಿತ್ರ ಮಾಡಿದ್ದಾರೆ.ಚಿತ್ರಕ್ಕೆ ಇನ್ನು ಫೈಟ್ ಮತ್ತು ಒಂದು ಹಾಡು ಬಾಕಿ ಇದೆ’ ಎಂದರು ಕಿರಣ್.
ಚಿತ್ರಕ್ಕೆ ವಿನು ಮನಸು ಸಂಗೀತ ನೀಡಿದ್ದು, ನಾಲ್ಕು ಹಾಡುಗಳನ್ನು ಕೊಟ್ಟಿದ್ದಾರೆ. ಚಿತ್ರಕ್ಕೆ ಮೊದಲ ಸಲ ಎರಡು ಹಾಡು ಬರೆದಿರುವ ಪತ್ರಕರ್ತ ಮಾಲತೇಶ್ ಜಗ್ಗಿನ್, ‘ನನಗಿದು ಮೊದಲ ಅನುಭವ. ಇಲ್ಲಿ ಭಾವನೆಗಳ ನೋಟವಿದೆ. ಕಥೆಗೆ ಪೂರಕವಾದ ಹಾಡು ರಚಿಸಿದ್ದೇನೆ’ ಎಂದ ಜಗ್ಗಿನ್, ಕೆ.ಕಲ್ಯಾಣ್, ಶಿವುಬೇರಗಿ ಸಾಹಿತ್ಯವಿದೆ ಎಂದರು. ನಾಯಕಿ ಸ್ಮಿತಾ ಪಾತ್ರ ಕುರಿತು ಹೇಳಿಕೊಂಡರು. ಶ್ರೇಯಾ ಅಂಜಶ್ರೀ, ಪ್ರಕಾಶ್, ನಿವೃತ್ತ ಶಿಕ್ಷಕ ಎಚ್.ಡಿ.ಜಗ್ಗಿನ್, ಛಾಯಾಗ್ರಾಹಕ ಮಂಜುನಾಥ್ ಹೆಗಡೆ ಮಾತನಾಡಿದರು.