ರಾಜ, ರಾಧೆಯನ್ನು ಮನಸಾರೆ ಪ್ರೀತಿಸುವುದೇನೋ ಹೌದು. ಆದರೆ, ಒಂದು ಯಡವಟ್ಟು ಮಾಡಿಕೊಂಡುಬಿಟ್ಟಿರುತ್ತಾನೆ. ಅವಳನ್ನು ಒಲಿಸಿಕೊಳ್ಳುವ ಸಲುವಾಗಿ, ತಾನೊಬ್ಬ ಮೆಕ್ಯಾನಿಕ್ ಎಂಬ ವಿಷಯವನ್ನು ಮುಚ್ಚಿಟ್ಟು, ಸಾಫ್ಟ್ವೇರ್ ಇಂಜಿನಿಯರ್ ಎಂದು ಸುಳ್ಳು ಹೇಳಿರುತ್ತಾನೆ. ಬರೀ ಪ್ರೀತಿಸುವ ಹುಡುಗಿಗಷ್ಟೇ ಅಲ್ಲ, ಹೆತ್ತ ತಾಯಿಗೂ ಸುಳ್ಳು ಹೇಳಿರುತ್ತಾನೆ. ಆದರೆ, ಅವನು ಕಟ್ಟಿರುವ ಸುಳ್ಳಿನ ಮಂಟಪ ಅವರಿಬ್ಬರ ಎದುರೇ ಕುಸಿಯುತ್ತದೆ.
ಬರೀ ಅಷ್ಟೇ ಅಲ್ಲ, ಅವರಿಬ್ಬರ ಎದುರಿಗೇ ಗಾಂಜ ಕೇಸ್‌ನಲ್ಲಿ ಪೊಲೀಸರ ವಶವಾಗುತ್ತಾನೆ. ಹಾಗಾದರೆ, ರಾಜನ ಕಥೆ ಮತ್ತು ಗತಿ ಏನು? “ರಾಜ ಲವ್ಸ್ ರಾಧೆ’ ಎಂಬ ಹೆಸರು ಮಾತ್ರ ಹೇಳಿದರೆ, ಇದೊಂದು ಪ್ರೇಮಕಥೆ ಎಂದು ಹೇಳಿಬಿಡಬಹುದು. ಇನ್ನು ಪೋಸ್ಟರ್ ಮಾತ್ರ ನೋಡಿದರೆ, ಇದೊಂದು ಕಾಮಿಡಿ ಸಿನಿಮಾ ಎಂದನಿಸಬಹುದು. “ರಾಜ ಲವ್ಸ್ ರಾಧೆ’ ಇವೆರೆಡರ ಮಿಶ್ರಣ ಎಂದರೆ ತಪ್ಪಿಲ್ಲ. ಇಲ್ಲಿ ಪ್ರೇಮದ ಜೊತೆಗೆ ಕಾಮಿಡಿ ಇದೆ.
ಇದು ಚಿತ್ರದ ಪ್ಲಸ್ಸೂ ಹೌದು, ಸಮಸ್ಯೆಯೂ ಹೌದು. ಏಕೆಂದರೆ, ಎರಡರ ಮಿಸಳಬಾಜಿಯಾಗಿರುವುದರಿಂದ, ಆ ಕಡೆ ಪ್ರೇಮದ ತೀವ್ರತೆಯೂ ಇಲ್ಲ, ಈ ಕಡೆ ಕಾಮಿಡಿಯು ಹೊಟ್ಟೆ ಹುಣ್ಣಾಗಿಸುವುದೂ ಇಲ್ಲ. ಈ ಚಿತ್ರದಿಂದ ಪ್ರೇಕ್ಷಕನಷ್ಟೇ ಅಲ್ಲ, ಚಿತ್ರರಂಗವೂ ತಿಳಿದುಕೊಳ್ಳಬೇಕಾದ ಪಾಠವೆಂದರೆ, ಹಾಸ್ಯನಟರು ಇದ್ದಾರೆ ಎಂದ ಮಾತ್ರಕ್ಕೆ ನಗು ಇರಲೇಬೇಕೆಂದೇನೂ ಇಲ್ಲ. ಹಾಗೆ ನೋಡಿದರೆ, ಚಿತ್ರದಲ್ಲಿರುವ ಹಾಸ್ಯ ನಟರ ಸಂಖ್ಯೆ ನೋಡಿದರೆ ಗಾಬರಿಯಾಗುತ್ತದೆ.
ಸಾಧು ಕೋಕಿಲ, ರಂಗಾಯಣ ರಘು, ಟೆನ್ನಿಸ್ ಕೃಷ್ಣ ಹೊರತುಪಡಿಸಿದರೆ ಮಿಕ್ಕಂತೆ ಕುರಿ ಪ್ರತಾಪ್, ಪವನ್, ಮಿತ್ರ, ತಬಲಾ ನಾಣಿ, ಕುರಿ ರಂಗ, ಎಲ್ಲಕ್ಕಿಂತ ಹೆಚ್ಚಾಗಿ ರವಿಶಂಕರ್ … ಹೀಗೆ ನಗಿಸಬಹುದಾದ ದೊಡ್ಡ ಸಂಖ್ಯೆಯೇ ಇದೆ. ಆದರೆ, ನಗಿಸುವುದಕ್ಕೆ ಪ್ರಸಂಗಗಳೇ ಇಲ್ಲವಾದ್ದರಿಂದ, ಅವರ ಅಭಿನಯ ಸರ್ಕಸ್‌ನಂತೆ ಕಾಣುತ್ತದೆ. ಈ ನಿಟ್ಟಿನಲ್ಲಿ ಚಿತ್ರಕ್ಕೆ ಕಥೆಯನ್ನೂ ಬರೆದಿರುವ ನಿರ್ದೇಶಕ ರಾಜಶೇಖರ್ ಇನ್ನೂ ಸಾಕಷ್ಟು ಶ್ರಮ ಹಾಕಬೇಕಿತ್ತು.
ಇಷ್ಟೊಂದು ಹಾಸ್ಯನಟರನ್ನು ಒಂದೇ ಚಿತ್ರದಲ್ಲಿ ಸೇರಿಸುವಾಗ, ಅವರಿಗೆ ಸೂಕ್ತವಾದ ಪ್ರಸಂಗಗಳನ್ನು ಬರೆಯುವ ಮತ್ತು ನಗು ಉಕ್ಕಿಸುವ ಅವಶ್ಯಕತೆ ಹೆಚ್ಚಿತ್ತು. ಆದರೆ, ಅಂತಹ ಪ್ರಸಂಗಗಳೇ ಚಿತ್ರದಲ್ಲಿಲ್ಲ. ಚಿತ್ರದ ಆರಂಭದಿಂದ ಕೊನೆಯವರೆಗೂ ಒಂದೇ ಒಂದು ಪ್ರಸಂಗ ನಗು ತರಿಸುವುದಿಲ್ಲ. ವಿಜಯ್ ಅವರ ಒಂದಿಷ್ಟು ಸಂಭಾಷಣೆಗಳು ನಗು ತರಿಸುವುದು ಬಿಟ್ಟರೆ, ಮಿಕ್ಕಂತೆ ಚಿತ್ರದಲ್ಲಿ ಪ್ರೇಕ್ಷಕ ನಗುವುದಕ್ಕಿಂತ ಬೇಸರಗೊಳ್ಳುವುದೇ ಹೆಚ್ಚು.
ಚಿತ್ರದಲ್ಲಿ ದೊಡ್ಡ ತಾರಾಬಳಗವಿದೆ. ಈ ಪೈಕಿ ವಿಜಯ್ ರಾಘವೇಂದ್ರ, ರವಿಶಂಕರ್, ಶೋಭರಾಜ್ ಮುಂತಾದವರು ಗಮನಸೆಳೆಯುತ್ತಾರೆ. ಗ್ಲಾಮರ್‌ಗೆ ಶುಭಾ ಪೂಂಜಾ ಇದ್ದಾರೆ. ಚಿದಾನಂದ್ ಛಾಯಾಗ್ರಹಣ ಅಲ್ಲಲ್ಲಿ ಕಣ್ಸೆಳೆಯುತ್ತದೆ. ವೀರ್ ಸಮರ್ಥ್ ಸಂಗೀತದಲ್ಲಿ ಒಂದೆರೆಡು ಹಾಡುಗಳು ಗುನುಗುವಂತಿವೆ.
ಚಿತ್ರ: ರಾಜ ಲವ್ಸ್ ರಾಧೆ
ನಿರ್ದೇಶನ: ರಾಜಶೇಖರ್
ನಿರ್ಮಾಣ: ಎಚ್.ಎಲ್.ಎನ್. ರಾಜ್
ತಾರಾಗಣ: ವಿಜಯ್ ರಾಘವೇಂದ್ರ, ರಾಧಿಕಾ ಪ್ರೀತಿ, ರವಿಶಂಕರ್, ತಬಲಾ ನಾಣಿ, ಶೋಭರಾಜ್ ಮುಂತಾದವರು
* ಚೇತನ್ ನಾಡಿಗೇರ್