Advertisement

ಮಕ್ಕಳಿಗೆ ನಿಕಾನ್‌, ಕ್ಯಾನನ್‌, ಎಪ್ಸನ್‌ ನಾಮಕರಣ !

12:44 PM Jul 16, 2020 | mahesh |

ಬೆಳಗಾವಿ: ನಿಕಾನ್‌, ಕ್ಯಾನನ್‌ ಮತ್ತು ಎಪ್ಸನ್‌.. ಇವು ಮೂವರು ಮಕ್ಕಳ ಹೆಸರು! ಅರೇ, ಇದೇನಿದು ಕ್ಯಾಮರಾಗಳಿಗೆ ಇರುವ ಹೆಸರುಮಕ್ಕಳಿಗಾ ಎಂದು ಅಚ್ಚರಿಪಡಬೇಡಿ. ಛಾಯಾಗ್ರಹಣದಲ್ಲಿ ಅತೀವ ಆಸಕ್ತಿ ಹಾಗೂ ಕ್ಯಾಮೆರಾಗಳ ಮೇಲೆ ಅತಿಯಾದ ಮೋಹ ಹೊಂದಿರುವ ವೃತ್ತಿಪರ ಛಾಯಾಗ್ರಾಹಕರೊಬ್ಬರು ತಮ್ಮ ಈ ಪ್ರೀತಿಯನ್ನು ಮಕ್ಕಳ ಮೂಲಕ ತೋರಿಸಿದ್ದಾರೆ. ಅಷ್ಟೇ ಅಲ್ಲ ತಮ್ಮ ಮನೆಯನ್ನೇ ಒಂದು ಕ್ಯಾಮರಾ ಶೈಲಿಯಲ್ಲಿ ನಿರ್ಮಾಣ ಮಾಡುವ ಮೂಲಕ ಬೆರುಗುಗೊಳಿಸಿದ್ದಾರೆ.

Advertisement

ಬೆಳಗಾವಿಯ ಶಾಸ್ತ್ರಿ ನಗರದಲ್ಲಿರುವ 49 ವರ್ಷದ ರವಿ ಹೊಂಗಲ್‌ ವಿಶಿಷ್ಟ ಅಭಿರುಚಿಯ ವ್ಯಕ್ತಿ. ದೇಶದ ಗಮನ ಸೆಳೆದಿರುವ ಅಪರೂಪದ ಛಾಯಾಗ್ರಾಹಕ.
ಇವರು ಗಮನ ಸೆಳೆದಿದ್ದು ತಮ್ಮ ವಿನೂತನ ಶೈಲಿಯ ಮನೆಯಿಂದ ಎಂಬುದು ಬಹಳ ಜನರಿಗೆ ಗೊತ್ತಿಲ್ಲ. ಬಾಲ್ಯದಿಂದಲೂ ಕ್ಯಾಮೆರಾದಿಂದ ಆಕರ್ಷಿತರಾಗಿದ್ದ
ರವಿ, ಇದರಲ್ಲಿ ಹೆಚ್ಚು ಅಧ್ಯಯನ ಮಾಡಲಿಲ್ಲ. ಆದರೆ ಕ್ಯಾಮೆರಾದೊಂದಿಗೆ ಏನಾದರೂ ಮಾಡಬಹುದು ಎಂಬುದನ್ನು ಈಗ ನಿಜವಾಗಿಸಿದ್ದಾರೆ.

ರವಿ ಹೊಂಗಲ್‌ ಚಿಕ್ಕಂದಿನಲ್ಲಿಯೇ ಫೋಟೋಗ್ರಫಿ ಬಗ್ಗೆ ಆಸಕ್ತಿ ಹೊಂದಿದವರು. ತಮ್ಮ ಸಹೋದರನ ಛಾಯಾಗ್ರಹಣ ವೃತ್ತಿಯಿಂದ ಪ್ರೇರಿತಗೊಂಡು,
ಆರಂಭದ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳಿಗೆ, ನಾಟಕ ಮತ್ತು ಜಾತ್ರೆಯ ಜೊತೆಗೆ ಹೊರಾಂಗಣದ ಚಿತ್ರಗಳನ್ನು ತೆಗೆಯಲು ಹೋಗುತ್ತಿದ್ದರು. ಅಂದಿನ
ಪೆಂಟಾಕ್ಸ್‌ ಮತ್ತು ಜೆನಿಟ್‌ ಕ್ಯಾಮೆರಾಗಳೊಂದಿಗೆ ಚಿತ್ರಗಳನ್ನು ಕ್ಲಿಕ್‌ ಮಾಡುತ್ತಿದ್ದರು.

ವೃತ್ತಿಯಲ್ಲಿ ಒಳ್ಳೆಯ ಹೆಸರು ಬರಲಾರಂಭಿಸಿದಂತೆ ಬೆಳಗಾವಿಯಲ್ಲಿ ಒಂದು ಸ್ಟುಡಿಯೋ ತೆಗೆದರು. ಅದನ್ನು ತಮ್ಮ ಪತ್ನಿಗೆ ಸಮರ್ಪಿಸಿದರು. ಆದರೆ ಅವರ
ಆಸಕ್ತಿ ಮುಂದೆ ಮನೆಯ ರೂಪದಲ್ಲಿ ಹಾಗೂ ಮಕ್ಕಳ ಹೆಸರಿನ ಮೂಲಕ ಜಗತ್ತಿಗೆ ಪರಿಚಯವಾಗುತ್ತದೆ ಎಂದು ಯಾರೂ ಅಂದುಕೊಂಡಿರಲಿಲ್ಲ. ಸ್ವತಃ ರವಿ
ಹೊಂಗಲ ಸಹ ಇದನ್ನು ನಿರೀಕ್ಷೆ ಮಾಡಿರಲಿಲ್ಲ.

ಹೇಗಿದೆ ಮನೆ?: “ಕ್ಲಿಕ್‌’ ಎಂಬುದು ಬೆಳಗಾವಿಯ ಶಾಸ್ತ್ರಿ ನಗರದಲ್ಲಿರುವ ರವಿ ಅವರ ಬಂಗಲೆಯ ಹೆಸರು. ಬೆಂಗಳೂರು ಮತ್ತು ಬೆಳಗಾವಿಯ ಇಂಜಿನಿಯರ್‌ಗಳ ಮೂಲಕ 2018ರಲ್ಲಿ ನಿರ್ಮಾಣ ಮಾಡಿದ ಈ ಅಪರೂಪದ 3 ಮಹಡಿಯ ಮನೆಗೆ 71.63 ಲಕ್ಷ ರೂ. ವೆಚ್ಚ ಮಾಡಿದ್ದಾರೆ. ಮನೆಯ ಹೊರಭಾಗವು ಕ್ಯಾನನ್‌, ನಿಕ್ಸನ್‌ ಜೊತೆಗೆ ಲೆನ್ಸ್‌, ಪ್ಲ್ಯಾಷ್‌, ಶೋ ರೀಲ್‌, ಮೆಮೊರಿ ಕಾರ್ಡ್‌ ಮತ್ತು ವ್ಯೂವ್‌ ಫೈಂಡರ್‌ ಒಳಗೊಂಡಿದೆ. ಮನೆಯ ಮುಂಭಾಗದಲ್ಲಿರುವ ಪ್ಲ್ಯಾಶ್‌ದಲ್ಲಿ ಸ್ಲ್ಯಲ್‌
ಅಕ್ಷರಗಳನ್ನು ಜೋಡಿಸಲಾಗಿದೆ. ಅಲ್ಲದೆ ಮನೆಯೊಳಗೆ ಛಾವಣಿಗಳು ಮತ್ತು ಗೋಡೆಗಳು ಕ್ಯಾಮೆರಾದ ವಿವಿಧ ಭಾಗಗಳನ್ನು ಹೋಲುತ್ತವೆ. ಹೊರಗಿನಿಂದ ನೋಡಿದಾಗ ದೊಡ್ಡ ಕ್ಯಾಮರಾ ಲೆನ್ಸ್‌ ನೋಡಬಹುದು. ಇದು ನಿಜವಾಗಿಯೂ ಅಡುಗೆ ಮನೆಯ ದೊಡ್ಡ ವೃತ್ತಾಕಾರದ ಕಿಟಕಿ. ವಾಸ್ತವವಾಗಿ ಮಲಗುವ ಕೋಣೆಯ ಕಿಟಕಿ! ಪ್ರತಿ ಕಿಟಕಿ ಗ್ರಿಲ್‌ನಲ್ಲಿ ವಿವಿಧ ಕ್ಯಾಮರಾ ಕಂಪನಿಗಳ ಲೋಗೋಗಳಿವೆ. ನನ್ನ ಮೂರು ಮಕ್ಕಳನ್ನು ಪ್ರತಿನಿಧಿಸಲು ಮನೆಯ ಮೂರು ಮಹಡಿಗಳನ್ನು ಬಯಸಿದ್ದೆ. ಮೊದಲ ಮಹಡಿಯಲ್ಲಿ ಎಪ್ಸನ್‌ ಮುದ್ರಕದ ಅಂಶಗಳಿವೆ, ಎರಡನೆಯದು ನಿಕಾನ್‌ ಕ್ಯಾಮೆರಾದ ದೇಹವನ್ನು ಹೊಂದಿದೆ ಮತ್ತು ಮೂರನೇ ಮಹಡಿಯಲ್ಲಿ ಕ್ಯಾನನ್‌ ಕ್ಯಾಮೆರಾದ ಪ್ಲ್ಯಾಷ್‌ ಇದೆ ಎನ್ನುತ್ತಾರೆ ರವಿ.

Advertisement

ಇದೆಂಥಾ ಹೆಸರೆಂದು ಮೂಗು ಮುರಿದರು!
ಕ್ಯಾಮರಾ ಶೈಲಿಯ ಮನೆ ಹಾಗೂ ಮಕ್ಕಳಿಗೆ ಕ್ಯಾಮರಾಗಳ ಹೆಸರಿನ ಬಗ್ಗೆ “ಉದಯವಾಣಿ’ ಜತೆ ತಮ್ಮ ಅನುಭವ ಹಂಚಿಕೊಂಡ ರವಿ ಹೊಂಗಲ್‌, ಮದುವೆ ಯಾದಾಗ ಮಗುವಿಗೆ ಕ್ಯಾಮರಾ ಹೆಸರು ಇಡಬೇಕು ಎಂಬ ಆಸೆಯಿಂದ ಪತ್ನಿ ಕೃಪಾ ಅವರ ಮುಂದೆ ಪ್ರಸ್ತಾಪಿಸಿದೆ. ಅದಕ್ಕೆ ಅವರ ಸಮ್ಮತಿ ಸಿಕ್ಕಿತು. ಆದರೆ ಮನೆಯವರು ಇದೆಂಥಾ ಹೆಸರು ಎಂದು ಅಚ್ಚರಿಪಟ್ಟರು. ಆಕ್ಷೇಪ ಸಹ ಮಾಡಿದರು. ಆದರೆ 2000ರಲ್ಲಿ ಗಂಡು ಮಗುವಾದಾಗ ಅದಕ್ಕೆ ಕ್ಯಾನನ್‌ ಎಂದು ಹೆಸರಿಟ್ಟೆ. ನಂತರ 2002ರಲ್ಲಿ ಹುಟ್ಟಿದ ಮಗುವಿಗೆ ನಿಕಾನ್‌ ಎಂದು ನಾಮಕರಣ ಮಾಡಿದೆ. ಮೂರನೇಯದು ಹೆಣ್ಣು ಮಗುವಾದರೆ ಸೋನಿ ಎಂದು ಹೆಸರಿಡಬೇಕು ಎಂದು ಕೊಂಡಿದ್ದೆ. ಆದರೆ ಗಂಡು ಮಗುವಾಗಿದ್ದರಿಂದ ಹುಡುಕಾಡಿ ಎಪ್ಸನ್‌ ಎಂದು ಹೆಸರಿಟ್ಟೆ ಎಂದು ನೆನಪಿಸಿಕೊಂಡರು.


ಪತ್ನಿಯೂ ಈಗ ಫೋಟೋಗ್ರಾಫ‌ರ್‌!
ಮೂವರು ಮಕ್ಕಳಿಗೆ ಕ್ಯಾನನ್‌, ನಿಕಾನ್‌ ಮತ್ತು ಎಪ್ಸನ್‌ ಎಂದು ನಾಮಕರಣ ಮಾಡಿದ ನಂತರ ತಮ್ಮ ಸಿದ್ಧಾರ್ಥ ಹೆಸರಿನ ಸ್ಟುಡಿಯೋಗೆ ಪತ್ನಿ (ಕೃಪಾ)
ಹೆಸರು ರಾಣಿ ಎಂದು ಮರುನಾಮಕರಣ ಮಾಡಿದ್ದಾರೆ. ಪತ್ನಿ ಕೃಪಾ ಕೂಡ ಈಗ ಛಾಯಾಗ್ರಾಹಕರಾಗಿದ್ದಾರೆ. ಎರಡನೇ ಮಗ ನಿಕಾನ್‌ ತಮ್ಮ ಶಿಕ್ಷಣದ ನಂತರ
ಛಾಯಾಗ್ರಾಹಕರಾಗಲು ಬಯಸಿದ್ದಾರೆ. ಏ.26ರಂದು ಅಕ್ಷಯ ತೃತೀಯ ದಿನದಂದು ಭರ್ಜರಿ ಉದ್ಘಾಟನೆ ಯೋಜಿಸಿದ್ದೆವು. ಆದರೆ ಕೋವಿಡ್ ಹಿನ್ನೆಲೆಯಲ್ಲಿ ಕುಟುಂಬಸ್ಥರು ಮಾತ್ರ ಸೇರಿ ಕಾರ್ಯಕ್ರಮ ಮಾಡಿದ್ದೇವೆ. ರಸ್ತೆಯಲ್ಲಿ ಹೋಗುವ ಜನ ಮನೆ ನೋಡಿ ಸೆಲ್ಫಿ ತೆಗೆದುಕೊಳ್ಳುತ್ತಾರೆ ಎನ್ನುತ್ತಾರೆ ರವಿ.

ಕಳೆದ 33 ವರ್ಷಗಳಿಂದ ಫೂಟೋಗ್ರಫಿ ವೃತ್ತಿಯಲ್ಲಿದ್ದೇನೆ. ಮೊದಲಿನಂತೆ ಈಗ ಬೇಡಿಕೆ ಇಲ್ಲ. ಆದರೆ ಇದರಿಂದ ತೃಪ್ತಿಕಂಡಿದ್ದೇನೆ. ಸಾಮಾಜಿಕ ಜಾಲತಾಣದಲ್ಲಿ ಮನೆಯ ಫೋಟೋ ನೋಡಿ ಕ್ಯಾನನ್‌ ಕಂಪನಿಯವರು ಫೋನ್‌ ಮಾಡಿ ಅಭಿನಂದನೆ ಹೇಳಿದರು. ಇದರಿಂದ ಸಂತೋಷವಾಯಿತು. ವೃತ್ತಿ ಆಯ್ಕೆ ಸಾರ್ಥಕವಾಯಿತು. 
ರವಿ ಹೊಂಗಲ್‌

ಕೇಶವ ಆದಿ

Advertisement

Udayavani is now on Telegram. Click here to join our channel and stay updated with the latest news.

Next