Advertisement

ಪ್ರೀತಿಗೊಂದು ಕಾಲ

12:30 AM Feb 14, 2019 | |

ಅದೊಂದು ದಿನ ಸಾಯಂಕಾಲ ಅಗಸ ಲಕ್ಷ್ಮಪ್ಪನ ಕತ್ತೆ ಮನೆಯ ಹತ್ತಿರವೇ ಇದ್ದ ಹಾಳು ಬಿದ್ದ ಬಾವಿಯೊಂದರಲ್ಲಿ ಬಿದ್ದುಬಿಟ್ಟಿತು. ವಯಸ್ಸಾದ ಕತ್ತೆಯನ್ನು ಹೇಗೆ ತೊಲಗಿಸಬೇಕೆಂದು ಚಿಂತಿಸುತ್ತಿದವನು ಕತ್ತೆ ಬಾವಿಯಲ್ಲಿ ಬಿದ್ದಿದ್ದು ಒಳ್ಳೆಯದೇ ಆಯಿತೆಂದುಕೊಂಡನು. ಅವನು ಗುದ್ದಲಿಯಿಂದ ಬಾವಿಗೆ ಮಣ್ಣು ಹಾಕತೊಡಗಿದನು.

Advertisement

ಒಂದು ಊರಿನಲ್ಲಿ ಲಕ್ಷ್ಮಪ್ಪನೆಂಬ ಅಗಸನಿದ್ದನು. ಊರ ಜನರ ಬಟ್ಟೆಗಳನ್ನು ತೊಳೆದು ಅವುಗಳಿಗೆ ಗರಿ ಗರಿಯಾಗಿ ಇಸ್ತ್ರಿ ಮಾಡಿ ಕೊಡುವುದು ಅವನ ನಿತ್ಯದ ಕಾಯಕವಾಗಿತ್ತು. ಪ್ರತಿಯಾಗಿ ಜನರೂ ಅವನಿಗೆ ಹಣವನ್ನು ಕೊಡುತ್ತಿದ್ದರು. ತನ್ನ ಕಾಯಕದಲ್ಲಿ ಅವನು ಸುಖವಾಗಿದ್ದನು. ತನ್ನ ಕೆಲಸಕ್ಕಾಗಿ ಅವನು ಒಂದು ಕತ್ತೆಯನ್ನು ಸಾಕಿಕೊಂಡಿದ್ದನು. ದಿನಾಲೂ ಊರ ಜನರ ಬಟ್ಟೆಗಳನ್ನು ಮೂಟೆ ಕಟ್ಟಿ ಕತ್ತೆಯ ಮೇಲೆ ಹೊರಿಸುತ್ತಿದ್ದನು. ನಂತರ ಇಬ್ಬರೂ ನದಿಯ ತೀರಕ್ಕೆ ಹೋಗುತ್ತಿದ್ದರು. ಅಲ್ಲಿ ಅಗಸನು ಬಟ್ಟೆ ಒಗೆದು ಮರಳಿನ ಮೇಲೆ ಒಣಗಲು ಹಾಕುತಿದ್ದನು. ಅಲ್ಲಿಯವರೆಗೆ ಕತ್ತೆ ಪಕ್ಕದಲ್ಲೇ ಹುಲ್ಲು ಮೇಯುತ್ತಿತ್ತು. 

ತನ್ನ ಕೆಲಸವೆಲ್ಲಾ ಮುಗಿದ ಮೇಲೆ ಅಗಸ ಒಣಗಿದ ಬಟ್ಟೆಗಳನ್ನೆಲ್ಲಾ ಗಂಟು ಕಟ್ಟಿ ಕತ್ತೆಯನ್ನು ಕೂಗಿ ಕರೆಯುತ್ತಿದ್ದ. ಚೆನ್ನಾಗಿ ಮೇಯ್ದ ಕತ್ತೆಯು ಅವನ ಕರೆಗೆ ಓಡಿ ಬರುತಿತ್ತು. ಮತ್ತೆ ಅದರ ಬೆನ್ನಿನ ಮೇಲೆ ಬಟ್ಟೆಯ ಗಂಟನ್ನಿಟ್ಟು ಮನೆಗೆ ಹಿಂದಿರುಗುತ್ತಿದ್ದ. ಇದು ಅವನ ದಿನ ನಿತ್ಯದ ಕಾಯಕವಾಗಿತ್ತು. ದಿನಚರಿಯಲ್ಲಿ ಯಾವುದೇ ಬದಲಾವಣೆ ಇರುತ್ತಿರಲಿಲ್ಲ. ಕತ್ತೆ ಕೂಡಾ ಅಷ್ಟೇ ವಿಧೇಯತೆಯಿಂದ ಅವನ ಜೊತೆ ಹೊಂದಿಕೊಂಡು ಹೋಗುತ್ತಿತ್ತು. ಅವರಿಬ್ಬರ ನಡುವೆಯೂ ಅನೋನ್ಯತೆ ಬೆಳೆದಿತ್ತು. 

ವರ್ಷಗಳು ಉರುಳಿತು. ಊರು ಬೆಳೆಯತೊಡಗಿತು. ಜನರ ಸಂಖ್ಯೆಯೂ ಜಾಸ್ತಿಯಾಯಿತು. ಲಕ್ಷ್ಮಪ್ಪನಿಗೆ ಗಿರಾಕಿಗಳೂ ಹೆಚ್ಚಿದರು. ಹೆಚ್ಚು ಹೆಚ್ಚು ಜನರು ಆತನಿಗೆ ಬಟ್ಟೆಗಳನ್ನು ನೀಡುತ್ತಿದ್ದರು. ಕತ್ತೆಗೂ ವಯಸ್ಸಾಯಿತು. ಹಿಂದಿನಂತೆ ದೊಡ್ಡ ಗಂಟನ್ನು ಹೊರಲು ಸಾಧ್ಯವಾಗುತ್ತಿರಲಿಲ್ಲ. ಏದುಸಿರು ಬಿಡುತ್ತಾ ಬಟ್ಟೆಗಳನ್ನು ಹೊರುತ್ತಿತ್ತು. ಲಕ್ಷ್ಮಪ್ಪ ತನ್ನ ಕತ್ತೆ ಮೊದಲಿನ ಹಾಗೆ, ಅದೇ ಲವಲವಿಕೆಯಿಂದ ಕೆಲಸ ಮಾಡಲಿ ಎಂದು ಅಪೇಕ್ಷೆ ಪಡುತಿದ್ದ. ಯಜಮಾನನ ಉತ್ಸಾಹಕ್ಕೆ ತಕ್ಕಂತೆ ವರ್ತಿಸಬೇಕೆಂದು ಕತ್ತೆಗೆ ಅನ್ನಿಸಿದರೂ ಸಾಧ್ಯವಾಗುತ್ತಿರಲಿಲ್ಲ. 

ನಿಧಾನವಾಗಿ ಹೆಜ್ಜೆ ಹಾಕುತ್ತಾ ಹೋಗುತ್ತಿದ್ದ ಕತ್ತೆಯ ಲಕ್ಷ್ಮಪ್ಪನಿಗೆ ಮೇಲೆ ಜಿಗುಪ್ಸೆ ಮೂಡತೊಡಗಿತು. ಇದು ಕತ್ತೆಗೂ ಅರಿವಾಗತೊಡಗಿತು. ಅದೊಂದು ದಿನ ಸಾಯಂಕಾಲ ಮನೆಯ ಹತ್ತಿರವೇ ಇದ್ದ ಹಾಳು ಬಿದ್ದ ಬಾವಿಯೊಂದರಲ್ಲಿ ಕತ್ತೆ ಬಿದ್ದುಬಿಟ್ಟಿತು. ಪೆಟ್ಟಾದ ಕತ್ತೆ ಕೂಗಲಾರಂಭಿಸಿತು. ಇದು ಲಕ್ಷ್ಮಪ್ಪನ ಗಮನಕ್ಕೆ ಬಂದಿತು. ವಯಸ್ಸಾದ ಕತ್ತೆಯನ್ನು ಹೇಗೆ ತೊಲಗಿಸಬೇಕೆಂದು ಚಿಂತಿಸುತ್ತಿದವನು ಕತ್ತೆ ಬಾವಿಯಲ್ಲಿ ಬಿದ್ದಿದ್ದು ಒಳ್ಳೆಯದೇ ಆಯಿತೆಂದುಕೊಂಡನು. ಕತ್ತೆ ಬಾವಿಗೆ ಬಿದ್ದರೂ ತಾನು ಏನೂ ಸಹಾಯ ಮಾಡಲಿಲ್ಲ ಎಂದು ಊರವರಿಗೆ ತಿಳಿದರೆ ತನ್ನ ಗೌರವಕ್ಕೆ ಧಕ್ಕೆಯಾಗುತ್ತದೆ ಎಂಬುದು ಅವನಿಗೆ ಗೊತ್ತಿತ್ತು. ಆದ್ದರಿಂದ ಕತ್ತೆಯನ್ನು ಬಾವಿಯೊಳಗೆಯೇ ಮಣ್ಣು ಮುಚ್ಚಿ ಹೂತು ಹಾಕಿದರೆ ಯಾರಿಗೂ ಓನೂ ತಿಳಿಯುವುದಿಲ್ಲ ಎಂದು ಕೆಟ್ಟ ಯೋಚನೆ ಅವನಿಗೆ ಬಂದಿತು. 

Advertisement

ಲಕ್ಷ್ಮಪ್ಪ ಕತ್ತಲೆಯಲ್ಲಿ ಒಬ್ಬನೇ ಒಂದು ಸಲಿಕೆ, ಗುದ್ದಲಿ ತೆಗೆದುಕೊಂಡು ಹೋದ. ಮಣ್ಣನ್ನು ಅಗೆದು ಬಾವಿಯೊಳಕ್ಕೆ ಹಾಕತೊಡಗಿದ. ಆದರೆ ಕತ್ತೆ ಯೋಚಿಸಿದ್ದೇ ಬೇರೆ. ಯಜಮಾನ ತನ್ನನ್ನು ಮೇಲಕ್ಕೆತ್ತಲು ಮಣ್ಣನ್ನು ಹಾಕುತ್ತಿದ್ದಾನೆ ಎಂದುಕೊಂಡಿತು ಕತ್ತೆ. ಅದಕ್ಕೇ ಅಗಸ ಮಣ್ಣು ಹಾಕಿದಂತೆಲ್ಲಾ ಅದರ ಮೇಲೆ ಹತ್ತಿ ನಿಲ್ಲುತ್ತಿತ್ತು. ಕತ್ತಲಾದ್ದರಿಂದ ಅಗಸನಿಗೆ ಇದು ತಿಳಿಯಲಿಲ್ಲ. ಅವನು ಮಣ್ಣು ತುಂಬುತ್ತಲೇ ಹೋದ. ಬೆಳಗ್ಗಿನ ಜಾವ ಆಗುವಷ್ಟರಲ್ಲಿ ಅಗಸ ಬಾವಿಯ ಕಂಠಪೂರ್ತಿ ಮಣ್ಣು ತುಂಬಿದ್ದ. ಕತ್ತೆ ಬಾವಿಯ ಮೇಲಕ್ಕೆ ಜಿಗಿದು ಬಂದಿತು. ಅಗಸನ ಹತ್ತಿರ ಬಂದು ಗೌರವಪೂರ್ವಕವಾಗಿ ತಲೆ ಬಾಗಿಸಿತು. ರಾತ್ರಿ ಸಾಯಿಸಲೆಂದು ಹೊರಟಿದ್ದ ಪ್ರಾಣಿ ಅವನ ಎದುರಿಗೆ ಬಂದು ನಿಂತಿದ್ದು ಕಂಡು ಅಗಸನಿಗೆ ನಾಚಿಕೆಯಾಯಿತು. ಕತ್ತೆಯನ್ನು ಕರೆದುಕೊಂಡು ಮನೆಗೆ ಹೊರಟ. ಹಿಂದಿರುಗುವಾಗ ಕತ್ತಲಲ್ಲಿ ಲಕ್ಷ್ಮಪ್ಪ ತೆರೆದ ಬಾವಿಯೊಂದಕ್ಕೆ ಬಿದ್ದುಬಿಟ್ಟ. ಕೈಕಾಲುಗಳಿಗೆ ಪೆಟ್ಟಾಗಿ ಕೂಗಿದ. ಯಜಮಾನನಿಗೆ ಒದಗಿದ ದುಸ್ಥಿತಿಗೆ ಮರುಗಿದ ಕತ್ತೆ ತನ್ನ ಕುತ್ತಿಗೆಯಲ್ಲಿದ್ದ ಹಗ್ಗವನ್ನು ಬಾವಿಯೊಳಕ್ಕೆ ಇಳಿಬಿಟ್ಟಿತು. ಲಕ್ಷ್ಮಪ್ಪ ಹಗ್ಗವನ್ನು ಬಿಗಿಯಾಗಿ ಹಿಡಿದುಕೊಂಡ. ಕತ್ತೆ ತನ್ನ ಬಲವನ್ನೆಲ್ಲಾ ಒಗ್ಗೂಡಿಸಿ ಮುಂದಕ್ಕೆ ಎಳೆಯಿತು. ಲಕ್ಷ್ಮಪ್ಪನ ಜೀವ ಉಳಿಯಿತು. ಅವನಿಗೆ ಏನು ಹೇಳಬೇಕೆಂದೇ ತಿಳಿಯಲಿಲ್ಲ. ಅಶಕ್ತವಾಗಿದ್ದ ಕತ್ತೆಯೇ ಅವನ ಜೀವ ಉಳಿಸಿತ್ತು. ಅವನು ಪ್ರೀತಿಯಿಂದ ಕತ್ತೆಯ ತಲೆ ನೇವರಿಸಿದ. ಇಬ್ಬರೂ ಮನೆ ಕಡೆ ಹೊರಟರು.

ಭೋಜರಾಜ ಸೊಪ್ಪಿಮಠ

Advertisement

Udayavani is now on Telegram. Click here to join our channel and stay updated with the latest news.

Next