Advertisement

ಲವ್‌ ಅಟ್‌ ಫ‌ಸ್ಟ್‌ “ಸೈಟ್‌’

06:00 AM Oct 15, 2018 | |

 ಸೈಟು, ಮನೆ, ಅಪಾರ್ಟ್‌ ಮೆಂಟ್‌ ಕೊಳ್ಳುವವರು  ಈಗ ಬ್ರೋಕರ್‌ಗಳ ಹಿಂದೆ ಹೋಗಬೇಕಿಲ್ಲ. ಮನೆ ಬೇಕಿತ್ತು, ಇಲ್ಲೆಲ್ಲಾದ್ರೂ ಇದೆಯಾ ಎಂದು ಕೇಳುತ್ತಾ  ಬೀದಿ, ಬೀದಿ ಅಲೆದು ಹುಡುಕುವ ಪರಿಸ್ಥಿತಿ ಇಲ್ಲ. ಆನ್‌ಲೈನ್‌ ಗೋಡೆಯ ಮೇಲೆ ರಿಯಲ್‌ ಎಸ್ಟೇಟ್‌ನ ಸಕಲ ಮಾಹಿತಿಯೂ ಲಭ್ಯ.  ಫ್ಲಿಪ್‌ ಕಾರ್ಟ್‌, ಅಮೇಜಾನ್‌ನಲ್ಲಿ ಶೂ, ಕಾಲುಚೀಲ ಕೊಂಡಷ್ಟೇ ಸುಲಭವಾಗಿ ಮನೆ, ಸೈಟುಗಳನ್ನೂ ಕೊಳ್ಳಬಹುದು. 

Advertisement

  ಬೀದಿಯ ಅಂಚಲ್ಲಿ ಅಂಗಡಿ. ಅದಕ್ಕೆ ಬಾಡಿಗೆ ಕಟ್ಟಿ -ಮನೆ, ಸೈಟು ಮಾರಲು, ಕೊಳ್ಳಲು ಇಲ್ಲಿ ವಿಚಾರಿಸಿ  - ಅಂತ ಬೋರ್ಡ್‌ ನೇತುಹಾಕಿಕೊಂಡು  ಕಾಯುತ್ತಾ ಕುಳಿತುಕೊಳ್ಳುವ ಬ್ರೋಕರ್‌ಗಳು. ಅವರು ಹುಡುಕಿ ಕೊಟ್ಟ ಮನೆ, ಸೈಟುಗಳ ವ್ಯವಹಾರದ  ಮೇಲೆ ಇಂತಿಷ್ಟು ಅಂತ ಕಮೀಷನ್‌ ಕೊಡುವುದು -ಈ  ಎಲ್ಲವೂ ಈಗ ನಿಧಾನಕ್ಕೆ ಕರಗುತ್ತಿದೆ.  ಕೈಯಲ್ಲೊಂದು ಮೊಬೈಲ್‌ ಇದ್ದರೆ,  ಅದಕ್ಕೆ ಇಂಟರ್‌ನೆಟ್‌ ಹಾಕಿಸಿದ್ದರೆ ಸಾಕು.  ಮೈಸೂರಿನ ಸರಸ್ವತಿಪುರಂನ ಸೈಟಿನ ಬೆಲೆ ಎಷ್ಟಿದೆ ಅಂತಲೂ, ಧಾರವಾಡದ ಸಾಧನಕೇರಿಯ ಪಕ್ಕದಲ್ಲಿರುವ ಮನೆಯ ಬೆಲೆಯನ್ನೂ, ಮಂಡ್ಯದ ಹೊಸ ಬೂದನೂರಿನ ತೊಟ್ಟಿ ಮನೆಯ ಮೌಲ್ಯವನ್ನೂ, ಮಂಗಳೂರಿನ ಕಾರ್‌ಸ್ಟ್ರೀಟ್‌ನ ಹೆಂಚಿನ ಮನೆಗೆ ಎಷ್ಟು ಕೊಡಬಹುದು ಅನ್ನುವುದನ್ನೂ  ಹತ್ತೇ ನಿಮಿಷದಲ್ಲಿ ತಿಳಿಯಬಹುದು. 

 ಅಂದರೆ, ಮಂಗಳೂರು, ಮೈಸೂರು, ಬೆಂಗಳೂರುಗಳಂಥ ಪ್ರದೇಶದಲ್ಲಿ ಈಗಾಗಲೇ ರಿಯಲ್‌ಎಸ್ಟೇಟು ವೈಬ್‌ಸೈಟಿಗೆ ಬಂದು ಕುಳಿತಾಗಿದೆ. ಬಿಲ್ಡರ್‌ಗಳು, ವೆಬ್‌ಸೈಟುಗಳ ಜೊತೆ ನೇರ ಒಪ್ಪಂದ ಮಾಡಿಕೊಳ್ಳುವುದರಿಂದ. ಈಗ ಸಣ್ಣಪುಟ್ಟ ಏಜೆಂಟುಗಳಿಗೆ ಮಾರಣಾಂತಿಕ ಹೊಡೆತ ಬೀಳುತ್ತಿದೆ.  ಮುಖ್ಯವಾಗಿ ಕಮೀಷನ್‌ + ಮಾರ್ಜಿನ್‌  ಹಣಕ್ಕೆ ದೊಡ್ಡ ಏಟು ಬಿದ್ದಿದೆ.   99ಎಕ್ರೆ. ಕಾಮ್‌, ಕಾಮನ್‌ಫ್ಲೋರ್‌.ಕಾಮ್‌, ಹೌಸಿಂಗ್‌.ಕಾಮ್‌, ಇಂಡಿಯಾಹೋಮ್ಸ್‌.ಕಾಮ್‌, ಗ್ರಾಬ್‌ಹೌಸ್‌.ಕಾಮ್‌ ಹೀಗೆ ಹಲವಾರು ಕಂಪೆನಿಗಳು ಆನ್‌ಲೈನ್‌ನಲ್ಲಿ ಅಂಗಡಿ ತೆರೆದು ಸೈಟು, ಮನೆ, ಜಮೀನು, ಅಪಾರ್ಟ್‌ಮೆಂಟ್‌ಗಳ ಬಿಕರಿಗೆ ಕುಂತಿವೆ. ಇವು ಹೆಚ್ಚಾಗಿ ನಗರಪ್ರದೇಶದ ಸುತ್ತುಮುತ್ತಲ ರಿಯಲ್‌ ಎಸ್ಟೇಟ್‌ ಕಡೆ ಮಾತ್ರ ಗಮನಹರಿಸುತ್ತಿದೆ. ಸಕಲೇಶಪುರು, ಹಾಸನ ಮುಂತಾದ ಕಡೆ ಕಾಫಿ ತೋಟಗಳ ವ್ಯವಹಾರಕ್ಕೂ ಕೆಲವೊಂದು ವೆಬ್‌ಸೈಟ್‌ಗಳು ಕೈ ಹಾಕಿವೆ. ಹೀಗಾಗಿ, ಫ್ಲಿಪ್‌ ಕಾರ್ಟ್‌, ಅಮೇಜಾನ್‌ನಲ್ಲಿ ಶೂ, ಕಲುಚೀಲ ಕೊಂಡಷ್ಟೇ ಸುಲಭವಾಗಿ ಮನೆ, ಸೈಟುಗಳನ್ನೂ ಈಗ ಹುಡುಕಬಹುದು. 

  ನಮ್ಮಲ್ಲಿ ಸುಮಾರು 354 ಮಿಲಿಯನ್‌ ಇಂಟರ್‌ನೆಟ್‌,  980 ಮಿಲಿಯನ್‌ ಮೊಬೈಲ್‌ ಬಳಕೆದಾರರಿದ್ದಾರೆ.  ಎಲ್ಲರ ಕಣ್ಣು ಈ ಕಡೆ ನೆಟ್ಟಿರುವುದರಿಂದ, ಇ.ಕಾಮರ್ಸ್‌ ದೊಡ್ಡ ಉದ್ಯಮವಾಗಿ ಮನ್ನುಗ್ಗುತ್ತಿದೆ.  

ಒಂದು ಮೂಲದ ಪ್ರಕಾರ, ಭಾರತದಲ್ಲಿ ಇಂಟರ್‌ನೆಟ್‌ ಪ್ರಭಾವದಿಂದಲೇ ಹೆಚ್ಚುಕಮ್ಮಿ 43 ಬಿಲಿಯನ್‌ ರಿಯಲ್‌ ಎಸ್ಟೇಟ್‌ ವ್ಯವಹಾರ ನಡೆದಿದೆಯಂತೆ. ಇದರಲ್ಲಿ 31 ಬಿಲಿಯನ್‌ ಸೈಟು, ಮನೆ, ಅಪಾರ್ಟ್‌ಮೆಂಟ್‌ಗಳದ್ದಾದರೆ, ಉಳಿಕೆ ವಾಣಿಜ್ಯ ಸ್ವತ್ತುಗಳಿಗೆ ಸಂಬಂಧಿಸಿದ್ದಾಗಿದೆ ಅನ್ನೋ ಮಾಹಿತಿ ಇದೆ. 

Advertisement

ಕಳೆದ ವರ್ಷ ಗೂಗಲ್‌ ಸಹಯೋಗದೊಂದಿಗೆ 99ಎಕ್ರೆ .ಕಾಮ್‌, ರಿಯಲ್‌ ಎಸ್ಟೇಟ್‌ ಶಾಪಿಂಗ್‌ ಫೆಸ್ಟಿವಲ್‌ ಆಯೋಜಿಸಿತ್ತು. ಇದರಲ್ಲಿ ದೇಶದ 20 ನಗರದ 200ಕ್ಕೂ ಹೆಚ್ಚು ಬಿಲ್ಡರ್‌ಗಳು ಭಾಗವಹಿಸಿದ್ದರು ಎಂದರೆ ವೆಬ್‌ವ್ಯವಹಾರ ಹೇಗಿರಬೇಡ?  ಈ  ರಿಯಲ್‌ ಎಸ್ಟೇಟ್‌ ಪೋರ್ಟಲ್‌ಗ‌ಳು ಸುಮ್ಮನೆ ಕೂತಿಲ್ಲ. ಬೇರೆ ಬೇರೆ ಹೂಡಿಕೆ ದಾರರನ್ನು ತನ್ನ ಕಡೆಗೆ ಆಕರ್ಷಿಸುತ್ತಿವೆ.  ಡೀಲ್‌ಕರಿ .ಕಾಮ್‌,  ಹೌಸಿಂಗ್‌.ಕಾಮ್‌ ಶೇ.30ರಷ್ಟು ಷೇರನ್ನು ಮಾರಾಟಮಾಡಿದೆ. ಇಂಡಿಯಾಹೋಮ್ಸ್‌.ಕಾಮ್‌. 310ಕೋಟಿ ಯಷ್ಟು ಷೇರು ಹೆಚ್ಚಿಸಿಕೊಂಡಿದೆ. ಕಾಮನ್‌ಫ್ಲೋರ್‌ .ಕಾಮ್‌, ಗ್ರಾಬ್‌ಹೌಸ್‌ .ಕಾಮ್‌ 2 ಮಿಲಿಯನ್‌ನಷ್ಟು  ಹೆಚ್ಚಿಸಿಕೊಂಡಿದೆಯಂತೆ.   

 ಪರಿಸ್ಥಿತಿ ಹೇಗಿದೆ ಎಂದರೆ, ಪುಟ್ಟ ಇ.ಮೇಲ್‌ನಲ್ಲಿ ಯಾವ ಪ್ರದೇಶದಲ್ಲಿ, ಎಂಥ ಸೈಟು ಬೇಕು, ನಮ್ಮ ಬಜೆಟ್‌ ಎಷ್ಟು ಎಂಬ ವಿವರ ಹಾಕಿದರೆ ಸಾಕು. ದಂಡಿ, ದಂಡಿ ಮಾಹಿತಿಗಳು ಇನ್‌ಬಾಕ್ಸ್‌ನಲ್ಲಿ ಬಂದು ಪದ್ಮಾಸನ ಹಾಕುತ್ತವೆ.  ಇವಿಷ್ಟೇ ಅಲ್ಲ. ಸೈಟ್‌, ಫ್ಲಾಟ್‌ ವೀಕ್ಷಣೆಗೆ ಫೋನು ಮಾಡಿ, ನಿಮ್ಮ ಮನೆಯ ಡೋರಿನಿಂದ ಪಿಕಪ್‌-ಡ್ರಾಪ್‌ ವ್ಯವಸ್ಥೆಯೂ ಆಗುತ್ತದೆ.

 ಕೊಳ್ಳುವವರು  ಒಂದು ಸಲ ಆನ್‌ಲೈನ್‌ನಲ್ಲಿ ಲಾಗ್‌ ಇನ್‌ ಆಗಿ. ತಮ್ಮ ಬಜೆಟ್‌, ಸೈಟು, ಮನೆ ಕೊಳ್ಳುವ ಪ್ರದೇಶಗಳನ್ನು ಎಂಟ್ರಿ ಮಾಡಿದರೆ ಸಾಕು. ಬಿಲ್ಡರ್‌ಗಳಿಗೆ ಕೊಳ್ಳುವವರ ಮನೋಧರ್ಮ ಎಂಥದು, ಅವರು ಯಾವ ಪ್ರದೇಶವನ್ನು ಇಷ್ಟ ಪಡುತ್ತಾರೆ ಅನ್ನೋದು ತಿಳಿಯುತ್ತದೆ. ಇದರ ಆಧಾರದ ಮೇಲೆ ಬಜೆಟ್‌ಗೆ ಅನುಗುಣವಾಗಿ ರಿಯಲ್‌ ಎಸ್ಟೇಟ್‌ ಕೆಂಪನಿಗಳು ಸ್ವತ್ತಿನ ಮಾಹಿತಿಗಳನ್ನು ನೀಡುತ್ತವೆ. 

 ವೆಬ್‌ಸೈಟಲ್ಲಿ ಸುಳ್ಳು ಹೇಳುವಂತೆಯೂ ಇಲ್ಲ. ಏಕೆಂದರೆ, ಕೊಳ್ಳುವವರು ಪ್ರದೇಶದಲ್ಲಿ ಬಸ್‌ಸ್ಟಾಪ್‌ , ಎಟಿಎಂ, ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳು ಇದೆಯೋ ಇಲ್ಲವೋ ಅನ್ನೋದನ್ನು ಗೂಗಲ್‌ನಲ್ಲಿ ನೋಡಿಕೊಳ್ಳಬಹುದು.   ಸೈಟು ಬೆಸ್ಟೋ ಅಪಾರ್ಟಮೆಂಟ್‌ ಬೆಸ್ಟೋ ಅನ್ನೋ ಹೋಲಿಕೆಗಳೂ ಸಿಗುತ್ತವೆ. ಆ ಪ್ರದೇಶದಲ್ಲಿ ನಿಜವಾದ ಮಾರ್ಕೆಟ್‌ ಬೆಲೆ, ಸರ್ಕಾರಿ ನಿರ್ದೇಶಿತ ಬೆಲೆ ಎಷ್ಟಿದೆ, ತಾವು ಯಾವ ಬೆಲೆಗೆ ಬಿಕರಿ ಮಾಡುತ್ತಿದ್ದೇವೆ, ಇದರಿಂದ ನಿಮಗೆ ಉಳಿತಾಯ ಎಷ್ಟಾಗುತ್ತದೆ ಅನ್ನುವ ಮಾಹಿತಿ ಕೂಡ ಲಭ್ಯ. 

ಥ್ರಿಡಿ ಟೂರ್‌
ಸೈಟು, ಮನೆ ತೋರಿಸುವುದಕ್ಕೂ ತಂತ್ರಜ್ಞಾನ ತಂದುಬಿಟ್ಟಿದೆ.  ಮನೆಯಲ್ಲೇ ಕೂತು, ನಾವೀಗ  ಕೊಳ್ಳುವ ಮನೆ ಹೇಗಿದೆ, ಯಾವ ದಿಕ್ಕಿಗೆ ಬಾಗಿಲು, ಗೋಡೆ ಹೇಗಿರುತ್ತದೆ ಎಂಬಂಥ ವಿವರವನ್ನು ತ್ರೀಡಿ ತಂತ್ರಜ್ಞಾನದ ಮೂಲಕ ನೋಡಬಹುದು. ಈ ಮೊದಲು ಆಸ್ತಿಗಳ ಮಾಹಿತಿಗಳನ್ನು ಬ್ರೋಕರ್‌ಗಳ್ಳೋ, ಮಾಲೀಕರೋ ಅಪ್‌ಲೋಡ್‌ ಮಾಡುತ್ತಿದ್ದರು. ಈಗ ವೆಬ್‌ಸೈಟ್‌ಗಳು ನೇರವಾಗಿ ಡೆವಲಪರ್‌ ಮೂಲಕ ಮಾಹಿತಿಗಳನ್ನು ಕೊಡುತ್ತವೆ. ತ್ರೀಡಿ ವ್ಯೂಗಳನ್ನು ನೋಡಿದರೆ ಕಂಪ್ಯೂಟರ್‌ ಮುಂದೆ ಕೂತಿದ್ದರೂ ನೇರ ಸೈಟನ್ನು/ ಫ್ಲ್ಯಾಟ್‌ ನೋಡಿಕೊಂಡು ಬಂದ ಅನುಭವ ಆಗುತ್ತದೆ. 

ಇದಕ್ಕೆ ಥ್ರಿಡಿ ಟೂರ್‌ ಅಂತಾರೆ.   ಇದರ ಜೊತೆಗೆ ಪ್ರೀ ಲಾಂಚ್‌ ಆಫ‌ರ್‌ಗಳನ್ನು ಬಿಡುಗಡೆ ಮಾಡುತ್ತಿವೆ. ಅದರ ಮಾಹಿತಿಯನ್ನು ಸುಲಭವಾಗಿ ಇ.ಮೇಲ್‌ ಅಥವಾ ಎಸ್‌ಎಂಎಸ್‌ ಅಥವಾ ವ್ಯಾಟ್ಸ್‌ಅಪ್‌ನಲ್ಲಿ ರವಾನಿಸುತ್ತಿವೆ.  ಬಹುತೇಕ ಸೈಟುಗಳು ಆಸ್ತಿ ಎಲ್ಲಿದೆ ಅನ್ನೋದಕ್ಕೆ ಲ್ಯಾಂಡ್‌ ಮಾರ್ಕ್‌ ಬೇಕಾದರೆ ಗೂಗಲ್‌ ಮ್ಯಾಪನ್ನು ಸೇರಿಸಿಸುತ್ತವೆ.  ಇದರಿಂದ ಸೈಟ್‌, ಮನೆ ಅಥವಾ ಫ್ಲಾಟ್‌ ಇರುವ ಜಾಗ ತಿಳಿಯುವುದು ಸುಲಭ.  

 ಇದಲ್ಲದೇ,  ಡ್ರೋಣ್‌ ಕ್ಯಾಮರಾಗಳನ್ನು ಬಳಸಿಕೊಂಡು ಫೋಟೋ ಶೂಟ್‌ ಮಾಡುತ್ತಾರೆ. ಹೆಚ್ಚು ಕಮ್ಮಿ 180 ಮೀಟರ್‌ಗೂ ಅಧಿಕ ಎತ್ತರದಿಂದ ತೆಗೆಯುವುದರಿಂದ ನಾವು ಕೊಳ್ಳುವ ಪ್ರಾಪರ್ಟಿಯ ಸುತ್ತು ಮುತ್ತ ಏನೇನಿದೆ ಅನ್ನೋದನ್ನು ಸುಲಭವಾಗಿ ತಿಳಿಯಬಹುದು. 

 ಕೆಲವೊಂದು ವೆಬ್‌ಸೈಟ್‌ಗಳು ಬಿಲ್ಡರ್‌ಪೇಜ್‌ ಅಂತಲೇ ಶುರುಮಾಡಿವೆ. ತಾವು ಕೊಳ್ಳುವ ಬಿಲ್ಡರ್‌ಗಳ ಟ್ರ್ಯಾಕ್‌ ರೆಕಾರ್ಡ್‌ ಅನ್ನು ನೀಡುತ್ತವೆ. ಇನ್ನೂ ಕೆಲವು ವೆಬ್‌ಸೈಟ್‌ಗಳು ಒಂದು ಹೆಜ್ಜೆ ಮುಂದೆ ಹೋಗಿ- ಮಾರುವವರು, ಕೊಳ್ಳುವವರ ನಡುವೆ ಹೇಗೆ ಒಪ್ಪಂದಗಳನ್ನು ಮಾಡಿಕೊಳ್ಳಬೇಕು, ನಿಯಮಗಳು ಏನಿರಬೇಕು ಎನ್ನುವ ಅಗ್ರಿಮೆಂಟ್‌ ಡ್ರಾಫ್ಟ್ಗಳನ್ನೂ ಕೊಡುತ್ತವೆ.   ಒಂದು ವರದಿಯ ಪ್ರಕಾರ, ನಗರ ಪ್ರದೇಶದ ಆಸ್ತಿ ಹುಡುಕಾಟದ ಶೇ. 60ರಷ್ಟು ಮೊಬೈಲ್‌ ಫೋನುಗಳ ಮೂಲಕವೇ ಆಗುತ್ತಿದೆಯಂತೆ. ಇದರಿಂದ ಎಲ್ಲ ಸೈಟುಗಳ ವೆಬ್‌ಗಳು ಆಕರ್ಷಿಣೀಯ ಫೋಟೋಗಳನ್ನು, ಅದು ಮೊಬೈಲ್‌ ಫೋನುಗಳಲ್ಲಿ ಓಪನ್‌ ಆಗುವಂತೆ ನೋಡಿಕೊಳ್ಳುತ್ತಿದೆ. 

 ಏನೇ ಆಗಲಿ, ಮುಂದುವರಿದ ತಂತ್ರಜ್ಞಾನದ ಸೌಲಭ್ಯವು ಸೈಟು, ಮನೆಗಳನ್ನು ಹತ್ತಿರಕ್ಕೆ ತಂದಿವೆ. ಆದರೆ ನಿಖರತೆಯನ್ನು ನಾವೇ ಮಾಡಿಕೊಳ್ಳುವ ಅನಿವಾರ್ಯವೂ ಜೊತೆಯಾಗಿದೆ. 

ಎಚ್ಚರವಿರಲಿ
– ವೆಬ್‌ ಸೈಟ್‌, ಆಸ್ತಿ ಕೊಳ್ಳುವ ಒಂದು ಟೂಲ್‌ ಮಾತ್ರ. ಅಲ್ಲಿ ಸಿಗುವ ಎಲ್ಲ ಮಾಹಿತಿಯೂ ಸರಿಯಾಗೇ ಇರುತ್ತದೆ ಅಂತ ಹೇಳಲು ಆಗದು. 
– ಲೇಔಟ್‌ನ ಅಕುcಯಲ್‌ ಫೋಟೋಸ್‌ ಅಂತ ಹೆಸರಿದ್ದರೂ, ನಿಜವೇ ಅನ್ನೋದನ್ನು ಕ್ರಾಸ್‌ ಚೆಕ್‌ ಮಾಡಬೇಕಾಗುತ್ತದೆ.  
– ಕೆಲವು ವೆಬ್‌ಸೈಟ್‌ಗಳ ಮುಖ್ಯಸ್ಥರು ದಾಖಲೆಗಳನ್ನು ಒದಗಿಸುವ ಮೂಲಕ ಸ್ಪರ್ಧೆಗೆ ಹೊಸ ತಿರುವನ್ನು ನೀಡಿದ್ದಾರೆ. ಅದೇನೇ ಇದ್ದರೂ 40-50 ವರ್ಷದ ದಾಖಲೆಗಳ ಪರಿಶೀಲನೆ, ಸ್ಥಳೀಯ ಇಲಾಖೆಯ ಲೇಔಟ್‌ ನಿರ್ಮಾಣದ ಅನುಮತಿ, ಕಟ್ಟಡ ನಿರ್ಮಾಣದ ಅನುಮತಿ ಪತ್ರಗಳು ಬಹಳ ಮುಖ್ಯವಾಗುತ್ತವೆ. ಅಂತಿಮವಾಗಿ ಇದು ಸರಿ ಇದೆಯೇ ಅಂತ ನೋಡುವುದೇ ಜವಾಬ್ದಾರಿ ನಿಮ್ಮದೇ. 
–    ಕೆರೆ, ರಾಜಕಾಲುವೆ, ಗೋಮಾಳ ಭೂಮಿಯ ಒತ್ತುವರಿಯಾಗಿದ್ದರೆ ವೆಬ್‌ಸೈಟ್‌ನಲ್ಲಿ ಅಂಥ ಮಾಹಿತಿ ಖಂಡಿತ ತಿಳಿಯುವುದಿಲ್ಲ. ಅದು ಖಾತೆ ಹೊಂದಿದ್ದು, ಅನುಭವದಲ್ಲಿ ಇದ್ದರೂ ಭವಿಷ್ಯದಲ್ಲಿ ತೊಂದರೆ ಆಗುವ ಸಾಧ್ಯತೆ ಇರುತ್ತದೆ. 
– ನಿಮ್ಮ ಹತ್ತಿರ ಹಣ ಪಡೆದು ಕಮಿಟ್‌ ಮಾಡಿಸುವ ರಣತಂತ್ರಗಳೂ ಚಾಲ್ತಿಯಲ್ಲಿರುತ್ತವೆ ಎಚ್ಚರ. ಇವೆಲ್ಲವೂ ನೀವು ವೆಬ್‌ಸೈಟುಗಳಲ್ಲಿ ಸೈಟು/ಮನೆ ನೋಡಿದ ನಂತರದ ಪ್ರಕ್ರಿಯೆಗಳು. 
– ಥ್ರಿàಡಿ ತಂತ್ರಜ್ಞಾನದಲ್ಲಿ ಮನೆ ಹೀಗಿರಬಹುದು, ಆಗಿರಬಹುದು ಅಂತ ತೋರಿಸಬಹುದು. ಆದರೆ, ನಿಜಕ್ಕೂ ಹಾಗೇ ಇದೆಯೇ ಅನ್ನೋದನ್ನು ನೀವು ಕಣ್ಣಾರೆ ಕಂಡೇ ಖಚಿತಪಡಿಸಿಕೊಳ್ಳಬೇಕು.

ಕಟ್ಟೆ ಗುರುರಾಜ್‌

Advertisement

Udayavani is now on Telegram. Click here to join our channel and stay updated with the latest news.

Next