Advertisement

ಯುವ ನ್ಯೂರಾನ್‌

06:00 AM Nov 02, 2018 | |

ವೈದ್ಯಕೀಯ ವಿಜ್ಞಾನದಲ್ಲಿ ಬರುವ “ನ್ಯೂರಾನ್‌’ ಎಂಬ ಹೆಸರನ್ನು ಇಟ್ಟುಕೊಂಡು ಈಗ ಕನ್ನಡದಲ್ಲಿ ಚಿತ್ರವೊಂದು ಸೆಟ್ಟೇರಿದೆ. “ನ್ಯೂರಾನ್‌’ ಎಂದ ಕೂಡಲೇ ಇದೇನಾದ್ರೂ ವೈಜ್ಞಾನಿಕ ಕಥಾಹಂದರ ಸಿನಿಮಾ ಇರಬಹುದಾ ಅಂತ ನೀವು ಭಾವಿಸಿದ್ದರೆ, ನಿಮ್ಮ ಊಹೆ ತಪ್ಪು. ಅಂದಹಾಗೆ ಈ “ನ್ಯೂರಾನ್‌’ ವೈಜ್ಞಾನಿಕ ಕಥಾಹಂದರದ ಸಿನಿಮಾವಲ್ಲದಿದ್ದರೂ, ಸಿನಿಮಾದಲ್ಲಿ ಒಂದಷ್ಟು ವೈಜ್ಞಾನಿಕ ಅಂಶಗಳು ಇರಲಿದೆಯಂತೆ. ಮೆದುಳಿನಿಂದ ದೇಹದ ಇತರ ಭಾಗಗಳಿಗೆ ಸಂವಹನ ಕಲ್ಪಿಸುವ “ನ್ಯೂರಾನ್‌’ ಬಗ್ಗೆ ನೀವೆಲ್ಲ ಕೇಳಿರುತ್ತೀರಿ. ಅದೇ ಪರಿಕಲ್ಪನೆಯನ್ನು ಇಟ್ಟುಕೊಂಡು ಚಿತ್ರತಂಡ ಈ ಸಿನಿಮಾವನ್ನು ಸಸ್ಪೆನ್ಸ್‌, ಥ್ರಿಲ್ಲರ್‌ ಶೈಲಿಯಲ್ಲಿ ತೆರೆಮೇಲೆ ಹೇಳಲು ಹೊರಟಿದೆ.

Advertisement

ಇತ್ತೀಚೆಗೆ “ನ್ಯೂರಾನ್‌’ ಚಿತ್ರದ ಮುಹೂರ್ತ ಸಮಾರಂಭ ಕಂಠೀರವ ಸ್ಟುಡಿಯೋದಲ್ಲಿ ಅದ್ದೂರಿಯಾಗಿ ನೆರವೇರಿತು. ಚಿತ್ರದ ಮೊದಲ ದೃಶ್ಯಕ್ಕೆ ನಟ ಕಂ ನಿರ್ದೇಶಕ ಕ್ರೇಜಿಸ್ಟಾರ್‌ ವಿ.ರವಿಚಂದ್ರನ್‌ ಕ್ಲಾಪ್‌ ಮಾಡಿ ಶುಭ ಕೋರಿದರು. ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್‌.ಎ ಚಿನ್ನೇಗೌಡ, ಚಲನಚಿತ್ರ ಅಕಾಡೆಮಿ ಅಧ್ಯಕ್ಷ ನಾಗತಿಹಳ್ಳಿ ಚಂದ್ರಶೇಖರ್‌, ಸಾ.ರಾ ಗೋವಿಂದು, ಕೆ. ಮಂಜು, ಭಾ.ಮಾ ಹರೀಶ್‌, ನಿರ್ದೇಶಕರಾದ ಎ.ಪಿ ಅರ್ಜುನ್‌, ಪ್ರೀತಂ ಗುಬ್ಬಿ, ಜಗದೀಶ್‌ ಕಾರಂತ್‌ ಮೊದಲಾದವರು ಸಮಾರಂಭದಲ್ಲಿ ಹಾಜರಿದ್ದು ಚಿತ್ರತಂಡಕ್ಕೆ ಶುಭ ಹಾರೈಸಿದರು. 

ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ  ವಿಕಾಸ್‌ ಪುಷ್ಪಗಿರಿ,”ನ್ಯೂರಾನ್‌ ಸಿನಿಮಾದಲ್ಲಿ ಹೀರೋ, ಹೀರೋಯಿನ್‌ ಅಂತ ಯಾವ ಪಾತ್ರಗಳು ಇರುವುದಿಲ್ಲ. ಚಿತ್ರದಲ್ಲಿ ಒಟ್ಟು ಎಂಟು ಪಾತ್ರಗಳಿದ್ದು, ಎಲ್ಲಾ ಪಾತ್ರಗಳಿಗೂ ತನ್ನದೇ ಆದ ಪ್ರಾಮುಖ್ಯತೆ ಇರುತ್ತದೆ. ಸಿನಿಮಾದ ಕೊನೆಯಲ್ಲಿ ಈ ಶೀರ್ಷಿಕೆ ಏಕೆ ಇಟ್ಟಿದ್ದೇವೆ ಎಂಬುದು ಗೊತ್ತಾಗುತ್ತದೆ. ಕನ್ನಡದಲ್ಲಿ ಅಪರೂಪ ಎನ್ನಬಹುದಾದ ಕಥೆಯೊಂದನ್ನು ದೊಡ್ಡ ಬಜೆಟ್‌ನಲ್ಲಿ ಪ್ರೇಕ್ಷಕರ ಮುಂದೆ ತರುತ್ತಿದ್ದೇವೆ’ ಎನ್ನುತ್ತಾರೆ. 

ಈ ಚಿತ್ರವನ್ನು ವಿನಯ್‌ ಕುಮಾರ್‌ ವಿ.ಆರ್‌ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಛಾಯಾಗ್ರಹಕ ಶೋಯೆಬ್‌ ಅಹಮದ್‌ ಕೆ.ಎಂ “ನ್ಯೂರಾನ್‌’ ಚಿತ್ರದ ದೃಶ್ಯಗಳನ್ನು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದರೆ, ಶ್ರೀಧರ್‌ ವೈ.ಎಸ್‌ ಸಂಕಲನ ಕಾರ್ಯ ನಿರ್ವಹಿಸುತ್ತಿದ್ದಾರೆ. ಚಿತ್ರದ ಹಾಡುಗಳಿಗೆ ಗುರುಕಿರಣ್‌ ಸಂಗೀತ ಸಂಯೋಜಿಸುತ್ತಿದ್ದಾರೆ. ವಿ. ನಾಗೇಂದ್ರ ಪ್ರಸಾದ್‌ ಚಿತ್ರದ ಹಾಡುಗಳಿಗೆ ಸಾಹಿತ್ಯವನ್ನು, ಶ್ರೀಹರ್ಷ ಸಂಭಾಷಣೆ ಬರೆಯುತ್ತಿದ್ದಾರೆ. ಚಿತ್ರಕ್ಕೆ ವಿಕಾಸ್‌ ಪುಷ್ಪಗಿರಿ, ರವಿ ಜೈ ಚಿತ್ರಕ್ಕೆ ಕಥೆಯನ್ನು ಬರೆದಿದ್ದಾರೆ. ಶಿವಕುಮಾರ್‌ ಕಲಾ ನಿರ್ದೇಶನ ಚಿತ್ರದಲ್ಲಿದೆ. “ನ್ಯೂರಾನ್‌’ ಚಿತ್ರದಲ್ಲಿ ನವನಟ ಯುವ, ಕಬೀರ್‌ ಸಿಂಗ್‌, ನೇಹಾ ಪಾಟೀಲ್‌, ಜೈ ಜಗದೀಶ್‌, ವೈಷ್ಣವಿ ಚಂದ್ರ ಮೆನನ್‌, ವರ್ಷಾ, ಶಿಲ್ಪಾ ಶೆಟ್ಟಿ, ಅರವಿಂದ್‌ ರಾವ್‌ ಮೊದಲಾದ ಕಲಾವಿದರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಸದ್ಯ ಮುಹೂರ್ತವನ್ನು ಆಚರಿಸಿಕೊಂಡಿರುವ “ನ್ಯೂರಾನ್‌’ ಚಿತ್ರದ ಚಿತ್ರೀಕರಣ ಇದೇ ವಾರದಿಂದ ಸಕಲೇಶಪುರ, ಬೆಂಗಳೂರು ಹಾಗು ಸಿಂಗಾಪುರದಲ್ಲಿ ಸುಮಾರು 45 ದಿನಗಳ ಕಾಲ ನಡೆಯಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next