Advertisement

Navratri Special: ಪ್ರೀತಿ ಒಂದೇ ಸಾಕು ಒಳಗಿನ ಭೋರ್ಗರೆವ ಯೋಚನೆಗಳ ತಣಿಸಲು

10:25 AM Oct 10, 2024 | Team Udayavani |

ಕೃಷ್ಣನ ಸುತ್ತಲ ಪ್ರೀತಿ ಕಥೆಗಳೇ ಹೀಗೆ. ಅದೇನೋ ಪರಿಶುದ್ಧ, ನಿಷ್ಕಲ್ಮಶವಾಗಿಯೂ ತನ್ನದಲ್ಲದ ಪಾಲಿನ ಪ್ರೀತಿಯನ್ನು ಅದರ ಪಾಲಿಗೆ ಬಿಟ್ಟು ಕೊಡುವುದು ಮತ್ತೊಂದು ತರಹದ ಪ್ರೀತಿ…

Advertisement

ಹೊಸ ಭಾವವದು, ದೇಹವಲ್ಲ ನೆರಳ ಸೋಕಿದಾಗಲೂ ಬಿಸಿ ಉಸಿರ ಭಾಸವಾದ ರೀತಿ… ಇದುವೇ ರಾಧೆಯ ತ್ಯಾಗದ ಪ್ರೀತಿ.

ಇನ್ನು ಆಶ್ಚರ್ಯ ಎಂಬಂತೆ ಒಬ್ಬಂಟಿಯಾಗಿ ಬಂಧ ಬೆಸೆವುದು ಮೀರಾಳ ಹೊಸರೀತಿಯ ಪ್ರೀತಿ.

ಕನಸುಗಳಲ್ಲಿ ಮುಗುಳ್ಳಗೆಯನ್ನೇ ಪಾರಿತೋಶಕದಂತೆ ಸ್ವೀಕರಿಸಿ, ಚಂದಿರನ ಬಯಸಿದಂತೆ ಕೈಗೆ ಸಿಗದ ಪ್ರೀತಿಗೆ ಬದುಕ ಮುಡಿಪಿಡುವುದು ಅದು ಮೀರಾಳ ಪ್ರೀತಿ. ಪದಗಳಲಿ ಹಾಡುಗಳಲ್ಲಿ ಅಪ್ಪುಗೆಯ ಬಿಸಿ ನೀಡುವ ಪ್ರೀತಿ. ಹೊಸರೀತಿ ಇದು ಇನ್ನೂ ಪಡೆಯದೇ ಕಳೆದುಕೊಳ್ಳುವ ಭೀತಿಯ ರೀತಿಯಲಿ ಚಿಗುರೊಡೆದ ಪ್ರೀತಿ.

ರುಕ್ಮಿಣಿಯ ಪ್ರೀತಿ ಮತ್ತೊಂದು ಕವಲದು, ಮೆಚ್ಚುಗೆಯ ಬಯಸದೆ ಹೆಚ್ಚಾಗಿರುವ ಹುಚ್ಚು ಪ್ರೀತಿ. ಜೊತೆ ಇದ್ದರೆ ಸಾಕು ಎಂಬ ತಾಳ್ಮೆಯ ಪ್ರೀತಿ. ನನ್ನದು ಎಂಬ ಸ್ವಾರ್ಥಕ್ಕೆ ನಿಲುಕದ ಪ್ರೀತಿ.

Advertisement

ಸತ್ಯಭಾಮೆಯ ಪ್ರೀತಿಯ ಪರಿ ಸ್ವಲ್ಪ ಬೇರೆ. ಬರಹಗಳಲಿ ಪದಗಳನ್ನೇ ಮೀರಿ ಹೋಗುವಷ್ಟು ಧೈರ್ಯ ಮಾಡುವ ಪ್ರೀತಿ. ಶರಣಾಗದೆ ಶರಣಾಗಿಸುವ ಹೊಸತ ರೀತಿ. ಮತ್ತೆ ಯಾರನ್ನು ಪ್ರೀತಿಸಲು ಬಿಡದ ಪ್ರೀತಿಯ ರೀತಿ. ಅದು ಮಾತ್ಸರ್ಯದಲ್ಲೂ ಉಚ್ಛವಾಗಿ ನಿಲ್ಲುವ ಒಲವು.

ಸತ್ಯಭಾಮೆಯ ರುಕ್ಮಿಣಿಯ ನಡುವೆ ಕಲಹಗಳಿಗೇನು ಕಮ್ಮಿ ಇಲ್ಲ. ಬಾಡುವ ಪಾರಿಜಾತದ ಪರಿ ಕೂಡ ಇಲ್ಲಿಂದಲೇ ಶುರು. ಬಾಳೆ ಎಲೆಯ ನಡುವಿನ ಗಡಿ ಕೂಡ ಸತ್ಯಭಾಮೆಯ ಮತ್ಸರದ ಫಲವೇ.

ಹಾಗಾದರೆ ಪ್ರೀತಿಗೆ ರೀತಿ ಎಂಬುದು ಇಲ್ಲ ಅಲ್ವಾ? ಸರಿ ತಪ್ಪುಗಳ ಪರಿವೆ ಇಲ್ಲ, ಕಷ್ಟ ಸುಖದ ಭೇದ ಇಲ್ಲ. ನಮ್ಮ ತೊದಲನು ತೊಲಳನೂ ಸ್ವೀಕರಿಸುವುದು ಪ್ರೀತಿ. ಪ್ರೀತಿ ಇರುವಿಕೆ ಒಂದೇ ಸಾಕು ಒಳಗಿನ ಭೋರ್ಗರೆವ ಯೋಚನೆಗಳ ತಣಿಸಲು. ಜಾತ್ರೆಯ ಜನ ಜಂಗುಳಿಯಲಿ ನಾವು ಪ್ರೀತಿಸುವವರು ಇಲ್ಲವಾದಲ್ಲಿ ಒಬ್ಬಂಟಿ ಎಂಬಷ್ಟು ಮೌನ. ಆದರೆ ಪ್ರೀತಿ ಜೊತೆಗಿರಲಿ, ಜನ ಜಂಗುಳಿಯಲ್ಲೂ ಸಮುದ್ರದಂತೆ ಶಾಂತ…

ಅಂದಿನ ಪ್ರೀತಿಗೆ ರೀತಿ ಇಲ್ಲ, ಭೀತಿ ಇಲ್ಲ, ಮಿತಿ ಇಲ್ಲ ಅಲ್ವಾ

ಆದರೆ ಇಂದಿನ ಪ್ರೀತಿ? ಬೇಲಿ ಇರದ ಪಂಜರ, ಬಂಧಿಯಾದ ಬಂಧ ಹಾಗಾದರೆ ಬದಲಾಯಿತೆ ಪ್ರೀತಿಯ ರೀತಿ?

ಕೈಗೆಟುಕದ ಪ್ರೀತಿ ನಿರಾಶೆಯಲ್ಲಿ ಕೊನೆಯಾದರೆ, ತನ್ನದು ಎಂಬ ಸ್ವಾರ್ಥದ ಪ್ರೀತಿಯ ಪರಾಕಾಷ್ಟೆ ಮತ್ಸರ. ರಾಧೆ ಮತ್ತು ಮೀರಾಳ ನಿರಾಶೆಯ ಪ್ರೀತಿಗೆ ಬಂಧನ ಇಲ್ಲ, ಸತ್ಯಭಾಮೆಯ ಮತ್ಸರದ ಪ್ರೀತಿಗೆ ದಿಗ್ಬಂಧನವೇ ಎಲ್ಲ. ರುಕ್ಮಿಣಿಯ ಪ್ರೀತಿಯಲ್ಲಿ ಸ್ವಾತಂತ್ರವೇ ಎಲ್ಲಾ. ಈ ಕಥೆಗಳು ಕೃಷ್ಣನದೆ ಆದರೂ ಪ್ರತಿ ಕಥೆಗೆ ಉಸಿರು ಪ್ರಿಯತಮೆಯೇ ಅಲ್ವಾ.

ತೇಜಸ್ವಿನಿ

Advertisement

Udayavani is now on Telegram. Click here to join our channel and stay updated with the latest news.

Next