Advertisement

ಎಲ್ಲೂ ಸಿಗಲಿಲ್ಲ ಒಂದು ಹಿಡಿ ಪ್ರೀತಿ…

09:18 AM Feb 13, 2020 | mahesh |

ನಾನೊಬ್ಬಳು ಹುಡುಗಿ ಎಂದು ಮನಸ್ಸು ಪದೇಪದೆ ಚೀರಿ ಹೇಳುತ್ತಿತ್ತು. ಆದರೆ, ಅಮ್ಮ – “ನೀನು ಹುಡುಗ. ಎಲ್ಲರ ಮುಂದೆಯೂ ಹುಡುಗನ ಹಾಗೇ ನಡೆದುಕೊಳ್ಳಬೇಕು’ ಎಂದು ನನ್ನಿಂದ ಆಣೆ, ಪ್ರಮಾಣ ಮಾಡಿಸಿಕೊಂಡಳು. ಅಮ್ಮನಿಗಾಗಿ, ಅವಳ ಪ್ರೀತಿ-ಮಮತೆ ಕಳೆದುಕೊಳ್ಳುವೆನೆಂಬ ಭಯದಿಂದಾಗಿ, ಹೊರ ಜಗತ್ತಿಗೆ ಹುಡುಗನಾಗಿ ಕಾಣಿಸಲು ಪ್ರಯತ್ನಿಸಿದೆ. ಹಾಗೆ ಮಾಡಿದಾಗಲ್ಲೆಲ್ಲ ನಾನು ನಾನಾಗಿರದ ಭಾವ ಕಾಡುತ್ತಿತ್ತು.

Advertisement

ರಚ್ಚೆ ಹಿಡಿದ ಮಗು ಓಡಿಬಂದು ತಾಯ ತೆಕ್ಕೆಗೆ ಬೀಳುವಂತೆ, ಭೂರಮೆಯ ತೆಕ್ಕೆಗೆ ಬೀಳುವ ಮಳೆಹನಿಗಳ ಆಟ ನೋಡುವುದು ನನಗೆ ತುಂಬಾ ಇಷ್ಟ. ಭೂಮಿ ತನ್ನ ಮಮತೆಯ ಕಡಲಲ್ಲಿ, ಮಳೆ ಹನಿಗಳನ್ನು ಸಂತೈಸುವ ಪರಿಯೂ ಸುಂದರ. ಎಷ್ಟೋ ಸಲ ಆತುರವಾಗಿ ಬರುವ ಭರದಲ್ಲಿ ನೀರ ಹನಿಯಾಗದೆ ಆಲಿಕಲ್ಲಾಗಿ ಅಪ್ಪಳಿಸುತ್ತಿದ್ದ ಆ ಆತುರಗಾರನನ್ನು ತನ್ನ ಮಮತೆಯ ಅಪ್ಪುಗೆಯಲ್ಲಿ ನೀರಾಗಿಸುವ ರೀತಿ ನೋಡುವಾಗೆಲ್ಲಾ, ಎಲ್ಲವನ್ನೂ ಅವು ಇರುವ ರೀತಿಯಲ್ಲಿಯೇ ಸಹಜವಾಗಿ ಒಪ್ಪಿಕೊಳ್ಳುವ ಪ್ರಕೃತಿಯ ಪಾಠವನ್ನು ಮನುಷ್ಯ ಯಾಕಿನ್ನೂ ಕಲಿತಿಲ್ಲ ಅಂತ ವಿಷಾದವಾಗುತ್ತದೆ.

ನನಗೆ ಸರಿಯಾಗಿ ನೆನಪಿದೆ. ಇದೇ ರೀತಿ ಗಾಳಿ-ಮಳೆ ಸುರಿಯುತ್ತಿದ್ದ ಕಾಲದಲ್ಲೇ ಚಿಕ್ಕಮ್ಮನ ಮದುವೆ ನಡೆದಿದ್ದು. ನನಗಾಗ ಏಳೆಂಟು ವರ್ಷ ಇರಬೇಕು. ಚಿಕ್ಕಮ್ಮ, ಮದುಮಗಳಾಗಿ ಅಲಂಕರಿಸಿಕೊಳ್ಳುತ್ತಿದ್ದ ಪರಿ ಆಕರ್ಷಕವಾಗಿ ಕಂಡಿತ್ತು. ನಾನು ಅವಳ ಅಲಂಕಾರ ಸಾಮಗ್ರಿಗಳನ್ನು ಬಳಸಿ, ಅಕ್ಕನ ಡ್ರೆಸ್‌ ಹಾಕಿಕೊಂಡು ಬಂದಾಗ ಎಲ್ಲರೂ “ಥೇಟ್‌ ಹುಡುಗಿ ಥರಾನೇ ಕಾಣ್ತಿದ್ದೀಯ’ ಅಂತ ಕೆನ್ನೆ ಹಿಂಡಿ ಮುದ್ದು ಮಾಡಿದ್ದರು. ಅಂದು ಗಲ್ಲದ ಮೇಲೊಂದು ಕಪ್ಪು ಚುಕ್ಕಿ ಇಟ್ಟು, “ನನ್ನ ಬಂಗಾರಿ’ ಎಂದು ಮುದ್ದಾಡಿದ್ದ ಅಮ್ಮ ಈಗೇಕೆ ಹೀಗಾದಳು? ನನ್ನ ತಪ್ಪಾದರೂ ಏನು? ಎಷ್ಟು ಕಾಲವಾಯಿತು ಅಪ್ಪ-ಅಮ್ಮ, ಬಂಧು-ಬಳಗ ನನ್ನನ್ನು ಮಾತನಾಡಿಸಿ? ತಪ್ಪು ಮಾಡಿದ ಅಪರಾಧಿಗಳನ್ನೂ ಒಪ್ಪಿಕೊಳ್ಳುವ ಈ ಸಮಾಜ, ಏನೂ ತಪ್ಪು ಮಾಡದ ನಮ್ಮನ್ನು ಹೀನಾಯವಾಗಿ ಕಾಣುವುದೇಕೆ?

ಪ್ರೌಢಶಾಲೆಯಲ್ಲಿ ಇದ್ದಾಗ ಹೆಣ್ಣುಮಕ್ಕಳ ಶೌಚಾಲಯಕ್ಕೆ ಹೋದೆ ಎಂಬ ಕಾರಣಕ್ಕೆ ಬೆತ್ತದಿಂದ ಪೆಟ್ಟು ತಿಂದು ಆದ ಗಾಯದ ಕಲೆ ಇನ್ನೂ ಇದೆ. ಗಾಯದ ನೋವು ಮನಸ್ಸಿನಲ್ಲಿನ್ನೂ ಮಡುಗಟ್ಟಿದೆ. ಹುಡುಗಿಯ ರೀತಿ ವರ್ತಿಸುತ್ತೇನೆಂದು ಅಪ್ಪ-ಅಮ್ಮನ ಬಡಿತ, ಬೈಗುಳಗಳನ್ನು ತಿಂದದ್ದು ನೆನಪಿದೆ. ಆದರೆ, ಹೆತ್ತವರು ನನ್ನ ಬಳಿ ಕುಳಿತು, ಪ್ರೀತಿಯಿಂದ ಮಾತಾಡಿದ ದಿನಗಳು ನೆನಪಿನಲ್ಲೇ ಇಲ್ಲ. ನನ್ನ ವರ್ತನೆ, ಹೆಣ್ಣು ಮಕ್ಕಳ ರೀತಿ ಅಲಂಕರಿಸಿಕೊಳ್ಳುವುದು, ನನ್ನ ದೇಹದಲ್ಲಾದ ಬದಲಾವಣೆಗಳು ನನ್ನನ್ನು ನನ್ನವರಿಂದ ದೂರ ಮಾಡಿದವು. ಇದೇಕೆ ಹೀಗಾಗುತ್ತಿದೆ ಎಂಬ ಗೊಂದಲ, ಭಯ ಮನಸ್ಸಿನಲ್ಲಿ ಕೋಲಾಹಲ ಸೃಷ್ಟಿಸಿತ್ತು.

ಬುದ್ಧಿ ತಿಳಿದ ದಿನದಿಂದ, ಕನ್ನಡಿಯಲ್ಲಿ ಕಾಣುವ ಅಂಗಿ-ಚಡ್ಡಿ, ಕ್ರಾಪ್‌ ಬಾಚಿದ ಹುಡುಗನನ್ನು ನಾನೆಂದು ಒಪ್ಪಿಕೊಳ್ಳಲು ಸಾಧ್ಯವಾಗಲೇ ಇಲ್ಲ. ನಾನೊಬ್ಬಳು ಹುಡುಗಿ ಎಂದು ಮನಸ್ಸು ಪದೇಪದೆ ಚೀರಿ ಹೇಳುತ್ತಿತ್ತು. ಆದರೆ, ಅಮ್ಮ – “ನೀನು ಹುಡುಗ. ಎಲ್ಲರ ಮುಂದೆಯೂ ಹುಡುಗನ ಹಾಗೇ ನಡೆದುಕೊಳ್ಳಬೇಕು’ ಎಂದು ನನ್ನಿಂದ ಆಣೆ, ಪ್ರಮಾಣ ಮಾಡಿಸಿಕೊಂಡಳು. ಅಮ್ಮನಿಗಾಗಿ, ಅವಳ ಪ್ರೀತಿ-ಮಮತೆ ಕಳೆದುಕೊಳ್ಳುವೆನೆಂಬ ಭಯದಿಂದಾಗಿ, ಹೊರ ಜಗತ್ತಿಗೆ ಹುಡುಗನಾಗಿ ಕಾಣಿಸಲು ಪ್ರಯತ್ನಿಸಿದೆ. ಹಾಗೆ ಮಾಡಿದಾಗಲ್ಲೆಲ್ಲ ನಾನು ನಾನಾಗಿರದ ಭಾವ ಕಾಡುತ್ತಿತ್ತು. ಈ ಛದ್ಮವೇಷವ ಒಗೆಯಬೇಕು ಎನಿಸುತ್ತಿತ್ತು. ಈ ದೇಹ, ರೂಪಗಳ ಬಂಧನ ಕಳಚಿ ಸ್ವತಂತ್ರವಾಗುತ್ತೇನೆಂದು ಆತ್ಮಹತ್ಯೆಗೂ ಯತ್ನಿಸಿ, ಸೋತಿದ್ದೆ. ಜೀವ ಮಾತ್ರ ಈ ದೇಹಕ್ಕೆ ಅಂಟಿಕೊಂಡಿತ್ತು, ಜೀವಂತಿಕೆ ಎಂದೋ ಸತ್ತು ಹೋಗಿತ್ತು.

Advertisement

ಹನ್ನೆರಡು ವರ್ಷದ ಈ ಗೃಹಬಂಧನ ನನಗೆ ಹಿಂಸೆಯಾಗಿತ್ತು. ಅಜ್ಜನ ಪುಸ್ತಕ ಭಂಡಾರ, ಈ ನಾಲ್ಕು ಗೋಡೆ, ಆ ಒಂದು ಕಿಟಕಿ, ಇವಿಷ್ಟೇ ನನ್ನ ಪ್ರಪಂಚ. ಅದರ ಹೊರಬಂದರೆ ಬೈಗುಳ,ತಿರಸ್ಕಾರ, ವ್ಯಂಗ್ಯನೋಟ … ಒಮ್ಮೆ ಈ ಬಂಧನ ಬಿಡಿಸಿಕೊಂಡು, ಮನೆ ಬಿಟ್ಟು ಓಡಿ ಹೋದ ನನಗೆ ಸಿಕ್ಕಿದ್ದು ಶಾಲಿನಿ ಅಕ್ಕ. ಅವಳೂ ನನ್ನ ಹಾಗೆ ಮನೆ ಬಿಟ್ಟು ಓಡಿ ಬಂದು, ನಮ್ಮಂತೆಯೇ ಇರುವ ಒಂದು ಬಳಗ ಸೇರಿಕೊಂಡಿದ್ದಳು. ಇಂಥ ಪ್ರತಿ ಬಳಗಕ್ಕೂ ಒಬ್ಬರು ಗುರು ಇದ್ದು ಅವರನ್ನು ಉಳಿದವರೆಲ್ಲಾ ಮನೆಯ ಹಿರಿಯರಂತೆ ನಡೆಸಿಕೊಳ್ಳುವುದು ಪದ್ಧತಿ. ಅಲ್ಲಿ ನನಗೆ ಕುಟುಂಬದ ಪ್ರೀತಿ ಸಿಕ್ಕಿತ್ತು. ಆದರೆ, ಅದು ಕೂಡಾ ತುಂಬಾ ಕಾಲ ಉಳಿಯಲಿಲ್ಲ. ಶಾಲಿನಿ ಎಂಬ ಪ್ರೀತಿಯ ಒರತೆ, ನೋವಿನಿಂದ ನರಳಿ ನನ್ನ ಮಡಿಲಲ್ಲೇ ಬತ್ತಿದ್ದು ಇಂದಿಗೂ ನೆನಪಿದೆ. ಲಿಂಗ ಪರಿವರ್ತನೆಯ (castration) ಪ್ರಕ್ರಿಯೆಗೆ ಒಳಗಾಗಿ, ನಂತರದ ದಿನಗಳಲ್ಲಿ ಸರಿಯಾದ ಆರೈಕೆ ಸಿಗದೇ ಸೋಂಕಿಗೆ ಒಳಗಾಗಿ, ನನ್ನ ಕಣ್ಣೆದುರಿಗೇ ಆಕೆ ಪ್ರಾಣ ಬಿಟ್ಟಾಗ ಅವಳ ಒದ್ದಾಟ, ಸಂಕಟ, ನೋವು ನನ್ನನ್ನು ಬಹುವಾಗಿ ಕಾಡಿತ್ತು.ಅದಾಗಿ ಸ್ವಲ್ಪ ದಿನಗಳಲ್ಲಿ ಹಣಕ್ಕಾಗಿ ರೌಡಿಗಳ ದಾಳಿಯಿಂದ ಪ್ರಾಣಬಿಟ್ಟ ಮಾಲಾ ಅಕ್ಕನ ಸಾವು ನನ್ನನು ಪುನಃ ಮನೆಗೆ ವಾಪಸ್‌ ಹೋಗಲು ಪ್ರೇರೇಪಿಸಿತ್ತು.

ಬಾಹ್ಯ ಶಿಕ್ಷಣದಿಂದ ಪದವಿ ಪಡೆದ ನಾನು ಹೆದರುವುದು ಯಾವುದಕ್ಕೆ? ಅಷ್ಟೆಲ್ಲಾ ವರ್ಷಗಳ ಕಾಲ ಪುಸ್ತಕಗಳನ್ನು ಓದುತ್ತಾ ಗೈದ ತಪಸ್ಸು ವ್ಯರ್ಥವಾಗಲು ಬಿಡುವುದು ಸರಿಯೇ? ನನ್ನಿಷ್ಟದ ಚಿತ್ರಕಲೆ ಮತ್ತು ಬರವಣಿಗೆ, ನನಗಾಗಿ ಕಾಯುತ್ತಿದ್ದವೆಂದು ತೋರುತ್ತದೆ. ಕಲಾಲೋಕದಲ್ಲಿ ದೇಹ, ರೂಪದ ಹಂಗಿಲ್ಲ. ಅಲ್ಲಿ ಭಾವನೆಗಳೇ ಜೀವಾಳ. ನಿಧಾನವಾಗಿ ಪತ್ರಿಕೆ, ಮಾಸಪತ್ರಿಕೆಗಳಲ್ಲಿ ನನ್ನ ಬರಹ, ಚಿತ್ರಕಲೆ ಕಾಣಿಸಿಕೊಂಡವು. ಪ್ರಶಸ್ತಿಗಳು ಅರಸಿ ಬಂತು. ಆದರೆ ನಾನೀಗ ಯಾವ ರೂಪ, ಗುರುತಿನ ಆಕಾಂಕ್ಷಿಯಲ್ಲ. ಆತ್ಮದ ಮೇಲಿನ ಹೊದಿಕೆ ಈ ದೇಹ. ನಾವು ನಾವಾಗಿರಲು ನಮ್ಮ ಮನಸ್ಸು ಆತ್ಮದೊಂದಿಗೆ ಬೆಸೆದುಕೊಂಡಿರಬೇಕು ಹೊರತು ದೇಹದೊಂದಿಗೆ ಅಲ್ಲ. ಈ ಆತ್ಮಕ್ಕೆ ಹಾಕಿದ ದೇಹ ಎಂಬ ಹೊದಿಕೆ ತೆಗೆದೊಗೆದರೆ ನಾವೆಲ್ಲರೂ ಒಂದೇ ಅಲ್ಲವೇ. ಅಲ್ಲಿ ಲಿಂಗ, ರೂಪ ,ಆಕಾರವೆಲ್ಲ ಗೌಣ!

-ಪೂರ್ಣಿಮಾ ಹೆಗಡೆ

Advertisement

Udayavani is now on Telegram. Click here to join our channel and stay updated with the latest news.

Next