Advertisement

ದುಡ್ಡಿಗಿಂತ ಮುಖ್ಯವಾದದ್ದು

09:43 AM Sep 11, 2019 | Team Udayavani |

ಜೀನ್‌ ಲೂಯಿ ರುಡೋಲ್ಫ್ ಅಗಾಸಿ ಹತ್ತೂಂಬತ್ತನೆ ಶತಮಾನದ ಪ್ರಸಿದ್ಧ ನ್ಯಾಚುರಲಿಸ್ಟ್‌ಗಳಲ್ಲಿ ಒಬ್ಬ. ಸ್ವಿಜರ್‌ಲ್ಯಾಂಡ್‌ ದೇಶದವನು. ಫಾಸಿಲ್‌ಗ‌ಳನ್ನು ಬಳಸಿಕೊಂಡು ಭೂಮಿಯ ಪ್ರಾಗೇತಿಹಾಸದ ಬಗ್ಗೆ ಸಂಶೋಧನೆ ನಡೆಸಿದವರಲ್ಲಿ ಪ್ರಮುಖ. ಜೀವಿಗಳ ವಿಕಾಸ ಹೇಗಾಯಿತೆಂಬ ವಿಷಯದಲ್ಲಿ ಅಗಾಸಿಯ ಸಿದ್ಧಾಂತಕ್ಕೂ ಚಾರ್ಲ್ಸ್‌ ಡಾರ್ವಿನ್ನನ ವಿಕಾಸವಾದಕ್ಕೂ ವ್ಯತ್ಯಾಸಗಳಿದ್ದರೂ ಜೀವವಿಜ್ಞಾನದಲ್ಲಿ ಅಗಾಸಿಯ ಸಾಧನೆ ಕಡಿಮೆಯದೇನೂ ಅಲ್ಲ. ಹಾರ್ವರ್ಡ್‌ಯಲ್ಲಿ ಪ್ರಾಣಿಶಾಸ್ತ್ರದ ಪ್ರಾಧ್ಯಾಪಕನೂ ಆಗಿದ್ದ ಅಗಾಸಿ ಅಮೆರಿಕದ ಶಿಕ್ಷಣ ಕ್ಷೇತ್ರವನ್ನು ಅಗಾಧವಾಗಿ ಪ್ರಭಾಸಿದವನು ಕೂಡ.

Advertisement

ಅದೊಂದು ದಿನ ಯಾವುದೋ ಸಂಘದ ಒಂದಷ್ಟು ಪದಾಧಿಕಾರಿಗಳು ಅಗಾಸಿಯನ್ನು ನೋಡಲು ಬಂದರು. ಆ ಸಮಯದಲ್ಲಿ ಆತ ಜೀವವಿಜ್ಞಾನದ ಒಂದು ಪ್ರಮುಖ ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದ. ಸಂಘದ ಸದಸ್ಯರು ಬಂದದ್ದು ಅಗಾಸಿಯನ್ನು ಒಂದು ಕಾರ್ಯಕ್ರಮಕ್ಕೆ ಮುಖ್ಯ ಭಾಷಣಕಾರನಾಗಿ ಕರೆಯುವುದಕ್ಕೆ. ನಾನು ಭಾಷಣ ಮಾಡಬೇಕೆಂದು ನೀವು ಹೇಳುತ್ತಿರುವ ವಿಷಯ, ನನ್ನ ಸದ್ಯದ ಸಂಶೋಧನೆಗೆ ಸಂಬಂಧಪಟ್ಟದ್ದಲ್ಲ. ಅದು ಸಂಪೂರ್ಣ ಬೇರೆಯೇ ವಿಷಯ. ಅದರ ಕುರಿತು ಮಾತಾಡಬೇಕಾದರೆ ನಾನು ಅದಕ್ಕೂ ಒಂದಷ್ಟು ತಯಾರಿ ಮಾಡಿಕೊಳ್ಳಬೇಕು. ಅದಕ್ಕೆ ಮತ್ತಷ್ಟು ಸಮಯ ಬೇಕು. ನನ್ನ ಸದ್ಯದ ಸಂಶೋಧನೆಯ ಕೆಲಸದ ಮಧ್ಯದಲ್ಲಿ ನನಗೆ ಅಂಥಾದ್ದಕ್ಕೆಲ್ಲ ಸಮಯವಿಲ್ಲ. ಆದ್ದರಿಂದ ನಿಮ್ಮ ಕಾರ್ಯಕ್ರಮಕ್ಕೆ ಬಂದು ಭಾಷಣ ಮಾಡಲು ಸಾಧ್ಯಲ್ಲ, ಕ್ಷಮಿಸಿ ಎಂದು ಒಂದು ಭಾಷಣವನ್ನೇ ಮಾಡಿಬಿಟ್ಟ ಅಗಾಸಿ! ಆದರೆ, ಬಂದವರು ಬರಿಗೈಯಲ್ಲಿ ಮರಳುವುದಿಲ್ಲ ಎಂದು ನಿರ್ಧರಿಸಿಯೇ ಬಂದಂತಿತ್ತು. ಕಾರ್ಯಕ್ರಮಕ್ಕೆ ಬರಬೇಕೆಂದು ಅವರು ಬಗೆ ಬಗೆಯಾಗಿ ಅಗಾಸಿಯನ್ನು ಬೇಡಿಕೊಂಡರು. ಕೊನೆಯ ಅಸ್ತ್ರವೆಂಬಂತೆ ಆ ತಂಡದ ನೇತೃತ್ವ ವಹಿಸಿದ್ದ ವ್ಯಕ್ತಿ, ಪ್ರೊಫೆಸರ್‌ ಅಗಾಸಿಯವರೇ, ನಿಮ್ಮ ಭಾಷಣಕ್ಕೆ ನಾವು ಒಂದು ಒಳ್ಳೆಯ ಮೊತ್ತದ ಸಂಭಾವನೆಯನ್ನೂ ಕೊಡುತ್ತೇವೆ ಎಂದ. ಅಷ್ಟು ಹೊತ್ತು ಸಮಾಧಾನದಿಂದ ಮಾತಾಡುತ್ತಿದ್ದ ಅಗಾಸಿ ಈಗ ಕೋಪದಿಂದ ಕೂಗಿದ: ಏನಂದುಕೊಂಡಿದ್ದೀರಿ ನನ್ನನ್ನು? ನನ್ನ ಅಮೂಲ್ಯ ಸಮಯವನ್ನು ದುಡ್ಡು ಸಂಪಾದಿಸುತ್ತ ಹಾಳುಮಾಡಬೇಕೆಂದು ಹೇಳುತ್ತಿದ್ದೀರಾ? ಅದಕ್ಕೆಲ್ಲ ಅವಕಾಶ ಕೊಡುವವನು ನಾನಲ್ಲ!

ರೋಹಿತ್‌ ಚಕ್ರತೀರ್ಥ

Advertisement

Udayavani is now on Telegram. Click here to join our channel and stay updated with the latest news.

Next