ಲಕ್ನೋ :”ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳನ್ನು ತೆಗೆದುಹಾಕಲು ಆದೇಶಿಸಿದ ತಿಂಗಳುಗಳ ನಂತರ ಕೆಲವು ಜಿಲ್ಲೆಗಳಲ್ಲಿ ಅವುಗಳನ್ನು ಮರುಸ್ಥಾಪಿಸಲಾಗುತ್ತಿದೆ. ಇದು ಸ್ವೀಕಾರಾರ್ಹವಲ್ಲ” ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಿಡಿ ಕಾರಿದ್ದಾರೆ.
ಸರಕಾರದ ಹೇಳಿಕೆಯ ಪ್ರಕಾರ, ಜನರೊಂದಿಗೆ ತತ್ ಕ್ಷಣ ಸಂಪರ್ಕ ಮತ್ತು ಸಂವಹನ ಮೂಲಕ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಶುಕ್ರವಾರ ರಾತ್ರಿ ಎಲ್ಲಾ ಹಂತದ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯನ್ನು ಪರಿಶೀಲಿಸಿದ ಆದಿತ್ಯನಾಥ್, ”ಶಾಂತಿಯುತ ಕ್ರಿಸ್ಮಸ್ ಆಚರಣೆಗಳಿಗೆ ವ್ಯವಸ್ಥೆ ಮಾಡುವಂತೆ ಸೂಚಿಸಿದರು. ಆದರೆ ಯಾವುದೇ ಧಾರ್ಮಿಕ ಮತಾಂತರ ನಡೆಯದಂತೆ ನೋಡಿಕೊಳ್ಳಿ” ಎಂದರು.
”ಈ ವರ್ಷದ ಆರಂಭದಲ್ಲಿ ಏಪ್ರಿಲ್‌ನಲ್ಲಿ ರಾಜ್ಯ ಸರ್ಕಾರವು ಧಾರ್ಮಿಕ ಸ್ಥಳಗಳಿಂದ ಧ್ವನಿವರ್ಧಕಗಳನ್ನು ತೆಗೆದುಹಾಕುವ ಅಭಿಯಾನವನ್ನು ಕೈಗೊಂಡಿತ್ತು. ಧ್ವನಿವರ್ಧಕಗಳನ್ನು ತೆಗೆದುಹಾಕುವ ಅಭೂತಪೂರ್ವ ಪ್ರಕ್ರಿಯೆಯನ್ನು ನಾವು ಪೂರ್ಣಗೊಳಿಸಿದ್ದೇವೆ. ದೊಡ್ಡ ಸಾರ್ವಜನಿಕ ಹಿತಾಸಕ್ತಿಗೆ ಆದ್ಯತೆ ನೀಡಿ, ಜನರು ಸ್ವಯಂಪ್ರೇರಿತವಾಗಿ ಧ್ವನಿವರ್ಧಕಗಳನ್ನು ತೆಗೆದುಹಾಕಿದರು. ಇದು ದೇಶದಾದ್ಯಂತ ಮೆಚ್ಚುಗೆಗೆ ಪಾತ್ರವಾಯಿತು” ಎಂದು ಮುಖ್ಯಮಂತ್ರಿ ಯೋಗಿ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.
ತಮ್ಮ ಇತ್ತೀಚಿನ ಭೇಟಿಗಳ ಸಂದರ್ಭದಲ್ಲಿ ಕೆಲವು ಜಿಲ್ಲೆಗಳಲ್ಲಿ ಈ ಧ್ವನಿವರ್ಧಕಗಳನ್ನು ಮತ್ತೆ ಅಳವಡಿಸಲಾಗುತ್ತಿದೆ ಎಂದು ಅನುಭವವಾಯಿತು. ಇದು ಸ್ವೀಕಾರಾರ್ಹವಲ್ಲ ಎಂದು ಹೇಳಿದರು. ಎಂದು ಶನಿವಾರ ಸಿಎಂ ಹೇಳಿಕೆ ಉಲ್ಲೇಖಿಸಿ ಅಧಿಕೃತ ಪ್ರಕಟಣೆ ತಿಳಿಸಿದೆ.
ಮೇ ತಿಂಗಳಲ್ಲಿ ನಡೆದ ಪರಿಶೀಲನಾ ಸಭೆಯಲ್ಲಿ ಮುಖ್ಯಮಂತ್ರಿ ಆದಿತ್ಯನಾಥ್ ಅವರು ಒಂದು ಲಕ್ಷಕ್ಕೂ ಹೆಚ್ಚು ಧ್ವನಿವರ್ಧಕಗಳನ್ನು ತೆಗೆದುಹಾಕಲಾಗಿದೆ ಎಂದು ಹೇಳಿದ್ದರು. ಅವುಗಳನ್ನು ಮರುಸ್ಥಾಪಿಸದಂತೆ ನೋಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು.