ಶಿವಮೊಗ್ಗ: ಮಹಾನಗರದ ಪಾಲಿಕೆಯಲ್ಲಿ 20 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಭರ್ಜರಿ ಜಯಭೇರಿ ಬಾರಿಸಿದೆ. ಈ ಮೂಲಕ ಜಿಲ್ಲೆಯಲ್ಲಿ ಬಿಜೆಪಿ ಮತ್ತೂಮ್ಮೆ ಶಕ್ತಿಪ್ರದರ್ಶನ ಮಾಡಿದೆ.
ಶಿವಮೊಗ್ಗ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಶಾಸಕ ಕೆ.ಎಸ್. ಈಶ್ವರಪ್ಪ ಲಕ್ಷಕ್ಕೂ ಹೆಚ್ಚು ಮತಗಳನ್ನು ಪಡೆಯುವ ಮೂಲಕ ಭಾರೀ ಅಂತರದಿಂದ ಗೆದ್ದಿದ್ದರು. ಇದೇ ಹುಮ್ಮಸಿನಲ್ಲಿ ಪಾಲಿಕೆ ಟಿಕೆಟ್ ಹಂಚಿಕೆಯಲ್ಲೂ ತಮ್ಮ ಬೆಂಬಲಿಗರಿಗೆ ಟಿಕೆಟ್ ಕೊಡಿಸಲು ಯಶಸ್ವಿಯಾಗಿದ್ದರು. ಈಗ ಬಿಜೆಪಿ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದಿರುವುದರಿಂದ ಜಿಲ್ಲೆಯಲ್ಲಿ ಕೆ.ಎಸ್.ಈಶ್ವರಪ್ಪ ಅವರ ಶಕ್ತಿ ದ್ವಿಗುಣಗೊಂಡಿದೆ.
ಸೋತ ಕಾಂಗ್ರೆಸ್: ಕಳೆದ ಬಾರಿ 12 ಸ್ಥಾನಗಳಿಸಿದ್ದ ಕಾಂಗ್ರೆಸ್ ಈ ಬಾರಿ 7 ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ. ಅಲ್ಲದೇ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಕೂಡ ಬಂದು ಪ್ರಚಾರ ಮಾಡಿದ್ದರು. ಅಲ್ಲದೇ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತದಲ್ಲಿರುವುದರಿಂದ ಹೆಚ್ಚಿನ ಫೈಟ್ ನಿರೀಕ್ಷಿಸಬಹುದು ಎನ್ನಲಾಗಿತ್ತಾದರೂ ಕೊನೆ ಕ್ಷಣದಲ್ಲಿ ಎಲ್ಲವೂ ಉಲ್ಟಾ ಆಗಿದೆ. ಈ ಗೆದ್ದಿರುವ ಅಭ್ಯರ್ಥಿಗಳು ವೈಯಕ್ತಿಕ ವರ್ಚಸ್ಸಿನಿಂದ ಗೆದ್ದಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ. ಕೊನೆ ದಿನ ಪಟ್ಟಿ ಬಿಡುಗಡೆ ಮಾಡಿದ್ದು ಸಹ ಹಿನ್ನಡೆಗೆ ಕಾರಣವಿರಬಹುದು
ಕೈಹಿಡಿದ ಸಂಘಟನೆ, ಹಿಂದುತ್ವ ಅಲೆ: ಹಿಂದುತ್ವ ಮತ್ತು ಮೋದಿ ಅಲೆ ಮೇಲೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿದ್ದ ಬಿಜೆಪಿಗೆ ಪಾಲಿಕೆ ಚುನಾವಣೆಗೆ ಇದೇ ಅಜೆಂಡಾ ವರ್ಕೌಟ್ ಆಗಿದೆ. ಅಲ್ಲದೇ ಕ್ಯಾಂಡಿಡೇಟ್ ಆಯ್ಕೆ ವಿಚಾರದಲ್ಲಿ ಶಾಸಕ ಕೆ.ಎಸ್.ಈಶ್ವರಪ್ಪ ಅವರು ಏಕಪಕ್ಷೀಯ ನಿರ್ಣಯ ಕೈಗೊಂಡಿದ್ದರು ಎನ್ನಲಾದರೂ ಸಂಘಟನಾತ್ಮಕ ಪ್ರಚಾರದಿಂದ ಪಾಲಿಕೆಯನ್ನು ತೆಕ್ಕೆಗೆ ತೆಗೆದುಕೊಂಡಿದ್ದಾರೆ. ಅಲ್ಲದೇ ಸೋಷಿಯಲ್ ಮೀಡಿಯಾ ಸಮರ್ಥವಾಗಿ ಬಳಸಿಕೊಂಡಿದ್ದು,
ಎಂಎಲ್‌ಸಿ ಆಯನೂರು ಮಂಜುನಾಥ್, ಎಸ್.ರುದ್ರೇಗೌಡ, ಕೆ.ಎಸ್.ಈಶ್ವರಪ್ಪ, ಅಶೋಕ್ ನಾಯ್ಕ ವಾರ್ಡ್‌ಗಳನ್ನು
ಹಂಚಿಕೊಂಡು ಪ್ರಚಾರಕ್ಕೆ ಇಳಿದ ಕಾರಣ ಮುಸ್ಲಿಂ ಪ್ರಾಬಲ್ಯವುಳ್ಳ ಏರಿಯಾಗಳಲ್ಲೂ ಬಿಜೆಪಿ ಜಯಗಳಿಸಿದೆ. ಬಿಜೆಪಿಯಿಂದ ಅಧಿಕ ಮಂದಿ ಬಂಡಾಯ ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದರು.
ಅವರನ್ನು ಹಿರಿಯ ಮುಖಂಡರು ಮನವೊಲಿಸಿ ಕಣದಿಂದ ಹಿಂದೆ ಸರಿಯುವಂತೆ ಮಾಡಿದ್ದು ಕೆಲಕಡೆ ಪ್ಲಸ್ ಆಗಿದೆ.
ಹಿಂದುತ್ವ ಅಜೆಂಡಾ ಹೊಂದಿದ್ದ ಬಿಜೆಪಿ 35 ಜನರಲ್ಲಿ ಏಕೈಕ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತು. ಕಾಂಗ್ರೆಸ್-ಜೆಡಿಎಸ್ ತಲಾ 7 ಜನರಿಗೆ ಟಿಕೆಟ್ ನೀಡಿತ್ತು. ಕಾಂಗ್ರೆಸ್‌ನಿಂದ ಇಬ್ಬರು, ಎಸ್‌ಡಿಪಿಐನಿಂದ ಓರ್ವ ಮಹಿಳೆ ಮುಸ್ಲಿಂ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.