Advertisement

ಕೊಪ್ಪಳದಲ್ಲಿ ಮತ್ತೆ ಅರಳಿದ ತಾವರೆ

03:29 PM May 24, 2019 | pallavi |

ಕೊಪ್ಪಳ: ಭಾರಿ ಕುತೂಹಲ ಮೂಡಿಸಿದ್ದ ಕೊಪ್ಪಳ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಮಲ ಹ್ಯಾಟ್ರಿಕ್‌ ಗೆಲುವು ಪಡೆಯುವುದರೊಂದಿಗೆ ಕ್ಷೇತ್ರವನ್ನು ಕೇಸರಿಮಯ ಮಾಡಿದೆ. ಎರಡನೇ ಅವಧಿಗೂ ಕರಡಿ ಕುಣಿತ ಮತ್ತೆ ಮುಂದುವರಿದಿದ್ದು, ಏಳು ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸುವುದರ ಮೂಲಕ ಕಾಂಗ್ರೆಸ್‌ಗೆ ಸೋಲುಣಿಸಿದೆ.

Advertisement

ಕಳೆದರಡು ತಿಂಗಳಿಂದ ಕಾವೇರಿದ್ದ ಲೋಕ ಸಮರಕ್ಕೆ ಗುರುವಾರ ತೆರೆ ಬಿದ್ದಿದೆ. ಹಾಲಿ ಸಂಸದ ಬಿಜೆಪಿ ಅಭ್ಯರ್ಥಿ ಸಂಗಣ್ಣ ಕರಡಿ ಅವರು 5,86,783 ಮತ ಪಡೆದಿದ್ದರೆ, ಕಾಂಗ್ರೆಸ್‌ ಅಭ್ಯರ್ಥಿ ರಾಜಶೇಖರ ಹಿಟ್ನಾಳ 5,48,386 ಮತ ಪಡೆದಿದ್ದಾರೆ. ಅಂಚೆ ಮತಗಳಲ್ಲೂ ಸಹ ಕರಡಿ 1786 ಮತ ಪಡೆದಿದ್ದರೆ, ಹಿಟ್ನಾಳ 813 ಮತಗಳನ್ನು ಪಡೆದಿದ್ದಾರೆ.

ಚುನಾವಣಾ ಆರಂಭದ ದಿನದಲ್ಲಿ ಕ್ಷೇತ್ರದಲ್ಲಿ ಭರ್ಜರಿ ಚರ್ಚೆ ನಡೆಯುತ್ತಿದ್ದವು. ಬಿಜೆಪಿಯಿಂದ ಹಾಲಿ ಸಂಸದ ಸಂಗಣ್ಣ ಕರಡಿಗೆ ಟಿಕೆಟ್ ಘೋಷಣೆ ಮಾಡದೇ ಹೈಕಮಾಂಡ್‌ ವಿಳಂಬ ಮಾಡಿತ್ತು. ಇದರಿಂದ ಕರಡಿಗೆ ಈ ಬರಿ ಟಿಕೆಟ್ ಕೈ ತಪ್ಪಲಿದೆ ಎನ್ನುವ ವಿಶ್ಲೇಷಣೆಗಳು ಶುರುವಾಗಿದ್ದವು. ಈ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಕರಡಿ ನಿರ್ಧಾರದಿಂದ ಹೈಕಮಾಂಡ್‌ ಮುನಿಸಿಕೊಂಡಿದ್ದು, ಕರಡಿಗೆ ಟಿಕೆಟ್ ನೀಡಲ್ಲ ಎನ್ನುವ ಲೆಕ್ಕಾಚಾರಗಳು ನಡೆದಿದ್ದವು. ಹಲವು ಡೋಲಾಯಮಾನಗಳ ಮಧ್ಯೆ, ಸಂಗಣ್ಣ ಕರಡಿ ಅವರು ಟಿಕೆಟ್ ಪಡೆದು ಕ್ಷೇತ್ರದ ತುಂಬಾ ಪ್ರಚಾರ ನಡೆಸಿದ್ದರು.

ಇತ್ತ ಕೈ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಮೊದಲ ಬಾರಿಗೆ ಲೋಕಸಭೆ ಪ್ರವೇಶಿಸಲು ಮಾಜಿ ಸಿಎಂ ಸಿದ್ದರಾಮಯ್ಯ ಬೆನ್ನು ಬಿದ್ದು ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಆದರೆ ಕೈನಲ್ಲೇ ಕೆ.ವಿರೂಪಾಕ್ಷಪ್ಪ ಹಾಗೂ ಬಸವನಗೌಡ ಬಾದರ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದರಿಂದ ಹಿಟ್ನಾಳ ಕುಟುಂಬಕ್ಕೆ ಟಿಕೆಟ್ ಒಲಿದ ಹಿನ್ನೆಲೆಯಲ್ಲಿ ಕೈನಲ್ಲೇ ಆಂತರಿಕ ಬೇಗುದಿ ಕಾಣಿಸಿಕೊಂಡಿತ್ತು. ಹಲವು ರಾಜಕೀಯ ಬೆಳವಣಿಗೆ ಮಧ್ಯೆ ಮುನಿಸಿನಲ್ಲಿದ್ದ ಇಬ್ಬರೂ ನಾಯಕರು ಕೈನಲ್ಲಿಯೇ ಉಳಿದು ಪ್ರಚಾರ ನಡೆಸಿದ್ದರು.

ಮತದಾರ ಅಭ್ಯರ್ಥಿಗಳು ತನ್ನ ತೀರ್ಪು ನೀಡಿದ್ದು, ಸಂಗಣ್ಣ ಕರಡಿ ಅವರು ಕೈ ಅಭ್ಯರ್ಥಿ ರಾಜಶೇಖರ ಹಿಟ್ನಾಳಗಿಂತ 38,397 ಮತಗಳ ಮುನ್ನಡೆ ಪಡೆದು ಗೆಲುವಿನ ನಗೆ ಬೀರಿದ್ದಾರೆ.

Advertisement

7 ಕ್ಷೇತ್ರಗಳಲ್ಲಿ ಕಮಲಕ್ಕೆ ಮುನ್ನಡೆ: ಎಂಟು ಕ್ಷೇತ್ರಗಳ ಪೈಕಿ ಬಿಜೆಪಿಗೆ ಏಳು ಕ್ಷೇತ್ರಗಳಲ್ಲಿ ಮುನ್ನಡೆ ದೊರೆತಿದ್ದು, ಈ ಪೈಕಿ ಸಿಂಧನೂರು ಕ್ಷೇತ್ರದಲ್ಲಿ 80 ಮತ, ಮಸ್ಕಿ ಕ್ಷೇತ್ರದಲ್ಲಿ 12071 ಮತ, ಕುಷ್ಟಗಿ ಕ್ಷೇತ್ರದಲ್ಲಿ 7825 ಮತ, ಕನಕಗಿರಿ ಕ್ಷೇತ್ರದಲ್ಲಿ 7296 ಮತ, ಗಂಗಾವತಿ ಕ್ಷೇತ್ರದಲ್ಲಿ 2536 ಮತ, ಯಲಬುರ್ಗಾ ಕ್ಷೇತ್ರದಲ್ಲಿ 8072 ಮತ, ಕೊಪ್ಪಳ ಕ್ಷೇತ್ರದಲ್ಲಿ 11678 ಮತಗಳಲ್ಲಿ ಸಂಗಣ್ಣ ಕರಡಿ ಮುನ್ನಡೆ ಸಾಧಿಸಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಸಿರಗುಪ್ಪಾ ಒಂದೇ ಕ್ಷೇತ್ರದಲ್ಲಿ ಮಾತ್ರ ಕಮಲಕ್ಕಿಂತ 12,134 ಮತ ಮುನ್ನಡೆ ಪಡೆದಿದ್ದು, ಬಿಟ್ಟರೆ ಮತ್ಯಾವ ಕ್ಷೇತ್ರದಲ್ಲೂ ಮುನ್ನಡೆ ಸಾಧಿಸಿಲ್ಲ.

ಸಹೋದರನ ಕ್ಷೇತ್ರದಲ್ಲೇ ಹಿನ್ನೆಡೆ: ಕಾಂಗ್ರೆಸ್‌ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಅವರು ಸಿಂಧನೂರು, ಕುಷ್ಟಗಿ, ಗಂಗಾವತಿ ಹಾಗೂ ಸಿರಗುಪ್ಪಾ ಕ್ಷೇತ್ರಗಳ ಮೇಲೆ ಭಾರಿ ನಿರೀಕ್ಷೆಯನ್ನಿಟ್ಟೇ ಹೆಚ್ಚು ಪ್ರಚಾರ ನಡೆಸಿದ್ದರು. ಆದರೆ ಕಾಂಗ್ರೆಸ್‌ ರಾಜಕೀಯ ಲೆಕ್ಕಾಚಾರಗಳೆಲ್ಲವೂ ಉಲಾr ಹೊಡೆದಂತೆ ಕಾಣುತ್ತಿದೆ. ಮೋದಿ ಅಲೆ, ಯುವಕರ ಕುಣಿತವೇ ಕೈ ಸೋಲಿಗೆ ಕಾರಣವಾಗಿದೆ ಎಂದೆನ್ನಲಾಗುತ್ತಿದೆ. ಅಚ್ಚರಿಯೆಂದರೆ, ಕೊಪ್ಪಳ ವಿಧಾನಸಭಾ ಕ್ಷೇತ್ರವನ್ನು 2ನೇ ಅವಧಿಗೂ ಕಾಂಗ್ರೆಸ್‌ ಶಾಸಕ ರಾಘವೇಂದ್ರ ಹಿಟ್ನಾಳ ಅವರು ಪ್ರತಿನಿಧಿಸುತ್ತಿದ್ದರೂ ಇದೇ ಕ್ಷೇತ್ರದಲ್ಲಿ ಕಾಂಗ್ರೆಸ್‌ 11,678 ಮತಗಳ ಹಿನ್ನಡೆ ಅನುಭವಿಸಿದೆ. ಪ್ರಸ್ತುತ ಚುನಾವಣೆಯ ಫಲಿತಾಂಶ ಕೈ ಪಾಳೆಯದ ಲೆಕ್ಕವನ್ನೆಲ್ಲ ಉಲಾr ಮಾಡಿದೆ. ಇಲ್ಲಿ ಮೋದಿ ಮ್ಯಾಜಿಕ್‌ ಆಟ ನಡೆದಿದೆ ಎನ್ನುವ ಮಾತಿದ್ದರೂ ಕರಡಿಯ ಅಭಿವೃದ್ಧಿ ಮಾತು ಕೇಳಿ ಬಂದಿವೆ. ಜತೆಗೆ ಯುವ ಸಮೂಹ ದೇಶ ಭಕ್ತಿಯ ಮಾತನ್ನಾಡಿದ್ದಾರೆ. ಹಳ್ಳಿ ಹಳ್ಳಿಯಲ್ಲಿ ಮೋದಿ ಹವಾ ಜೋರಾಗಿರುವುದನ್ನು ಅಲ್ಲಗಳೆಯುವಂತಿಲ್ಲ.

•ಕೈ ಶಾಸಕರ ಕ್ಷೇತ್ರಗಳಲ್ಲಿ ಕಮಲಕ್ಕೆ ಲೀಡ್‌

•ನಡೆಯಲಿಲ್ಲ ಕ್ಷೇತ್ರದೊಳಗೆ ಮೈತ್ರಿಯಾಟ

•ಕಾಂಗ್ರೆಸ್‌ಗೆ ಸಿಗುತ್ತಿಲ್ಲ ರಣತಂತ್ರ ಲೆಕ್ಕ

•ಕಳೆದ ಬಾರಿಗಿಂತ ಕರಡಿಗೆ ಭರ್ಜರಿ ಲೀಡ್‌

ಗೆದ್ದ ಅಭ್ಯರ್ಥಿ ಪರಿಚಯ
ಸಂಗಣ್ಣ ಕರಡಿ ಅವರು ಮೂಲತಃ ಕೂಕನಪಳ್ಳಿ ಗ್ರಾಮದವರು. 1978ರಲ್ಲಿ ಟಿಡಿಬಿ ತಾಲೂಕು ಡೆವಲಪ್‌ಮೆಂಟ್ ಬೋರ್ಡ್‌ ಸದಸ್ಯರಾಗಿ ಆಯ್ಕೆಯಾಗಿ, 1983-88ರಲ್ಲಿ ಇರಕಲ್ಗಡಾ ಜಿಪಂ ಕ್ಷೇತ್ರದ ಸದಸ್ಯರಾಗಿ ಕಾರ್ಯಾಭಾರ ಮಾಡಿದ್ದಾರೆ. ಬಳಿಕ 1994ರಲ್ಲಿ ಪಿಎಲ್ಡಿ ಬ್ಯಾಂಕ್‌ ಅಧ್ಯಕ್ಷರಾಗಿ, 1994ರಲ್ಲಿ ಮೊದಲ ಬಾರಿಗೆ ಪಕ್ಷೇತರ ಶಾಸಕರಾಗಿ ಆಯ್ಕೆಯಾಗಿ, ಅಲ್ಲಿಂದ ಜಿಲ್ಲೆಯಲ್ಲಿ ಚಿರಪರಿಚಿತರಾದರು. 1999 ಶಾಸಕರಾಗಿ ಆಯ್ಕೆಯಾಗಿದ್ದಾರೆ. 2008 ಶಾಸಕ, 2013-2016ರವರೆಗೂ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. 2010 ಶಾಸಕ, 2014 ಬಿಜೆಪಿ ಸಂಸದರಾಗಿ ಮೊದಲ ಬಾರಿಗೆ ಆಯ್ಕೆಯಾಗಿದ್ದಾರೆ. ಪ್ರಸ್ತುತ 2019ರ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಸಂಸದರಾಗಿ 2ನೇ ಅವಧಿಗೆ ಆಯ್ಕೆಯಾಗಿದ್ದಾರೆ.
ಸಂಗಣ್ಣ ಕರಡಿ ಕೈ ಹಿಡಿದ ರೈಲ್ವೆ ಕಾಮಗಾರಿ-ಮೋದಿ ಅಲೆ
ಕೊಪ್ಪಳ: ಸಂಗಣ್ಣ ಕರಡಿ ಅವರು 2014ರಲ್ಲಿ ಮೊದಲ ಬಾರಿಗೆ ಲೋಕಸಭೆಗೆ ಆಯ್ಕೆಯಾದ ಬಳಿಕ ರೈಲ್ವೇ ಯೋಜನೆಗಳು ಸೇರಿದಂತೆ ರಾಷ್ಟ್ರೀಯ ಹೆದ್ದಾರಿಗಳ ಕಾಮಗಾರಿಗಳಿಗೆ ಹೆಚ್ಚು ಒತ್ತು ನೀಡಿದ್ದಾರೆ. ಕ್ಷೇತ್ರದಲ್ಲಿ ಹಲವು ಕೆಳ ಸೇತುವೆ, ಮೇಲ್ಸೇತುವೆ ನಿರ್ಮಾಣಕ್ಕೆ ಒತ್ತು ನೀಡಿದ್ದಾರೆ. ಕ್ಷೇತ್ರದಲ್ಲಿನ ಅಭಿವೃದ್ಧಿ ಕೆಲಸಗಳು ಬಿಜೆಪಿ ಅಭ್ಯರ್ಥಿ ಸಂಗಣ್ಣ ಕರಡಿಗೆ ಅವರ ಗೆಲುವಿಗೆ ಕಾರಣವಾಗಿದೆ.

ಪ್ರಧಾನಿ ನರೇಂದ್ರ ಮೋದಿಯ ಬಗ್ಗೆ ಕ್ಷೇತ್ರದ ತುಂಬ ದೊಡ್ಡ ಅಲೆ ಸೃಷ್ಟಿಯಾಗಿತ್ತು. ಅಲ್ಲದೇ ಪ್ರಚಾರಕ್ಕೆ ಪ್ರಧಾನಿ ಮೋದಿ ಅವರು ಕ್ಷೇತ್ರ ವ್ಯಾಪ್ತಿಯ ಗಂಗಾವತಿಯಲ್ಲಿ ಬೃಹತ್‌ ಪ್ರಮಾಣದ ಪ್ರಚಾರ ರ್ಯಾಲಿ ನಡೆಸಿದ ಮೇಲಂತೂ ಮತ್ತಷ್ಟು ಸಂಗಣ್ಣ ಕರಡಿ ಪರ ಒಲವು ಹೆಚ್ಚಾಯಿತು. ಯುವಕರು ಮೋದಿ ಮಾತಿಗೆ ಮನಸೋತು ದೇಶದ ರಕ್ಷಣೆ, ಭದ್ರತೆಯ ಕುರಿತು ಹೆಚ್ಚಿನ ಮಹತ್ವ ನೀಡಿ ಬಿಜೆಪಿ ಬೆಂಬಲಿಸಿದ್ದಾರೆ. ಜೊತೆಗೆ ಎಂಟೂ ವಿಧಾನಸಭಾ ಕ್ಷೇತ್ರಗಳಲ್ಲಿ ಲಿಂಗಾಯತ ಮತಗಳ ಪ್ರಾಬಲ್ಯ ಇರುವುದರಿಂದ, ಲಿಂಗಾಯತ್‌ ಸಮಾಜದವರಾದ ಸಂಗಣ್ಣ ಕರಡಿ ಅವರ ಬುಟ್ಟಿಗೆ ಕ್ಷೇತ್ರದ ದೊಡ್ಡ ಸಮುದಾಯದ ಮತಗಳು ಸರಾಗವಾರಿ ಹರಿದು ಬಂದಿವೆ ಎಂಬ ಮಾತುಗಳು ಕೇಳಿ ಬಂದಿವೆ. ಇದರೊಟ್ಟಿಗೆ ದಲಿತ, ನಾಯಕ ಸೇರಿದಂತೆ ಮೊದಲ ಬಾರಿಗೆ ಅಲ್ಪಸಂಖ್ಯಾತ ಸಮುದಾಯದ ಮತಗಳು ಕೇಸರಿ ಪಾಳಯಕ್ಕೆ ಬಂದ ಕುರಿತು ಅವರೇ ಹೇಳಿಕೊಂಡಿದ್ದಾರೆ. ಇನ್ನೂ ಸಿಂಧನೂರು ಗಡಿ ಭಾಗದಲ್ಲಿ ತೆಲಗು ಭಾಷಿಕರು ಸೇರಿದಂತೆ ಬಾಂಗ್ಲಾದೇಶಿ ವಲಸಿಗರು ಹಲವು ವರ್ಷಗಳಿಂದ ನೆಲೆಸಿದ್ದಾರೆ. ಈ ಹಿಂದೆಯೂ ಅವರು ನಮಗೆ ಶಾಶ್ವತ ಭಾರತದ ಪೌರತ್ವ ನೀಡುವಂತೆ ಒತ್ತಾಯ ಮಾಡಿದ್ದರು. ಸಂಸದರು ಕೇಂದ್ರ ಮಟ್ಟದಲ್ಲಿ ಅವರ ಪ್ರಸ್ತಾವನೆ ಕೊಂಡೊಯ್ದಿದ್ದರು. ಕೇಂದ್ರವೂ ಪೌರತ್ವಕ್ಕೆ ಒಪ್ಪಿಗೆ ಸೂಚಿಸಿ ಅಧಿಸೂಚನೆ ಹೊರಡಿಸಿದ್ದರಿಂದ ಬಾಂಗ್ಲಾ ವಲಸಿಗರು ಕರಡಿಗೆ ಜೈ ಎಂದಿದ್ದಾರೆ. ಇನ್ನೂ ತುಂಗಭದ್ರಾ ಡ್ಯಾಂ ಬಳಿ ನವಲಿ ಜಲಾಶಯದ ಪ್ರಸ್ತಾಪ ಮಾಡಿದ್ದರಿಂದ ಎಡದಂಡೆ ಕಾಲುವೆ ಭಾಗದ ರೈತರು ಬಿಜೆಪಿಯ ಕರಡಿ ಪರ ನಿಂತಿರುವುದನ್ನು ಅಲ್ಲಗಳೆಯುವಂತಿಲ್ಲ.

ಕೈ ಹಿಡಿಯಲಿಲ್ಲ ಸಾಂಪ್ರದಾಯಿಕ ಮತ; ಶಮನವಾಗಲಿಲ್ಲ ಭಿನ್ನಮತ
ಕೊಪ್ಪಳ: ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಕೆ. ರಾಜಶೇಖರ ಹಿಟ್ನಾಳ ಟಿಕೆಟ್ ತಂದ ಬೆನ್ನಲ್ಲೇ ಕಾಂಗ್ರೆಸ್‌ನಲ್ಲೇ ಆಂತರಿಕ ಕಲಹ ಶುರುವಾಗಿತ್ತು. ಕಾಂಗ್ರೆಸ್‌ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ, ಬಸವನಗೌಡ ಬಾದರ್ಲಿ ಅವರು ಹಿಟ್ನಾಳ ಕುಟುಂಬದ ವಿರುದ್ಧ ಒಳಗೊಳಗೆ ಸಿಡಿದೆದ್ದಿದ್ದರು. ಪರಿಸ್ಥಿತಿ ಪ್ರತಿಭಟನೆಯ ಹಂತಕ್ಕೂ ಹೋಗಿ ಕೊನೆ ಗಳಿಗೆಯಲ್ಲಿ ಕೈಯೊಳಗೆ ಅಸಮಾಧಾನ ತಣ್ಣಗಾಗಿತ್ತು. ಆದರೂ ಪಕ್ಷದೊಳಗಿನ ಭಿನ್ನಮತ ಬೂದಿ ಮುಚ್ಚಿದ ಕೆಂಡದಂತಿತ್ತು. ಜೊತೆಗೆ ಹಿಟ್ನಾಳ ಕುಟುಂಬ ರಾಜಕಾರಣ ಈ ಬಾರಿ ಕ್ಷೇತ್ರದಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಗುರಿಯಾಗಿ ಟೀಕಾ ಪ್ರಹಾರಗಳು ಕೇಳಿ ಬಂದವು.
ಇದು ಒಂದು ರೀತಿ ಸೋಲಿಗೆ ಕಾರಣವಾಗಿದೆ. ಜೊತೆಗೆ ಜಿಲ್ಲೆಯ ಐದು ಕ್ಷೇತ್ರದಲ್ಲಿ ರಾಜಶೇಖರ ಹಿಟ್ನಾಳ ಪರಿಚಿತವಿದ್ದರೆ ಉಳಿದ ಸಿಂಧನೂರು, ಸಿರಗುಪ್ಪಾ ಹಾಗೂ ಮಸ್ಕಿ ಕ್ಷೇತ್ರದಲ್ಲಿ ಮುಖ ಪರಿಚಯವಿಲ್ಲ. ಟಿಕೆಟ್ ಸಿಕ್ಕ ಬಳಿಕವಷ್ಟೇ ಆ ಕ್ಷೇತ್ರಗಳತ್ತ ಮುಖ ಮಾಡಿದ್ದರು. ಇನ್ನೂ ಅಷ್ಟೊಂದು ಪರಿಚಿತರಿಲ್ಲದೇ ಇರುವುದು. ಇನ್ನೂ ಪ್ರಚಾರದುದ್ದಕ್ಕೂ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ಅವರನ್ನು ಹೊರತಪಡಿಸಿದರೆ ಜಿಲ್ಲೆಯ ಪ್ರಭಾವಿ ಮುಖಂಡರಾದ ರಾಯರಡ್ಡಿ ಅಷ್ಟೊಂದು ದೊಡ್ಡ ಮಟ್ಟದ ಪ್ರಚಾರಕ್ಕಿಳಿಯಲಿಲ್ಲ. ಶಾಸಕ ಅಮರೇಗೌಡ ಸ್ವಲ್ಪ ಮಟ್ಟಿಗೆ ಪ್ರಚಾರ ನಡೆಸಿ ಸುಮ್ಮನಾದರು. ಫಾರವರ್ಡ್‌ ಬ್ಯಾಕವರ್ಡ್‌ ಮತಗಳಲ್ಲಿ ಕೈಗೆ ಫಾರವರ್ಡ್‌ ಮತ ಬಂದಿದ್ದೆ ತುಂಬ ಕಡಿಮೆ. ಜೊತೆಗೆ ಈ ಬಾರಿ ಅಲ್ಪಸಂಖ್ಯಾತ ಮತಗಳು ಕಾಂಗ್ರೆಸ್‌ಗೆ ಕೈ ಕೊಟ್ಟಿರುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ. ಜೊತೆಗೆ ಆರು ಕ್ಷೇತ್ರಗಳ ಮೇಲೆ ಅತಿಯಾದ ಮುನ್ನಡೆ ಸಿಗುವ ವಿಶ್ವಾಸವನ್ನಿಟ್ಟಿದ್ದರು. ಕೊಪ್ಪಳ ಕ್ಷೇತ್ರದಲ್ಲೇ 20 ಸಾವಿರ ಮತ ಮುನ್ನಡೆ ಸಿಗುವ ಮಾತನ್ನಾಡಿದ್ದರು.
ಆಂಧ್ರ, ತೆಲಗು ಭಾಷಿಕರ ಮತಗಳು ಕೂಡ ಕೈ ಕೊಟ್ಟಿವೆ. ಮೈತ್ರಿ ಅಭ್ಯರ್ಥಿ ಪಕ್ಷವಾದ ಜೆಡಿಎಸ್‌ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡರು. ಜೆಡಿಎಸ್‌ ಮುಖಂಡರು ದೊಡ್ಡಮಟ್ಟದ ಪ್ರಚಾರ ನಡೆಸಿರಲಿಲ್ಲ. ತಮ್ಮನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ಜೆಡಿಎಸ್‌ ಮುಖಂಡರು ಆರಂಭದಲ್ಲೇ ಅಸಮಾಧಾನ ಹೊರಹಾಕಿ ಮೈತ್ರಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಸಂದೇಶ ರವಾನಿಸಿದ್ದರು.

ಜನರ ತೀರ್ಪಿಗೆ ತಲೆಬಾಗಲೇ ಬೇಕಿದೆ. ಪ್ರಧಾನಿ ನರೇಂದ್ರ ಮೋದಿ ಅಲೆಗೆ ಮೈತ್ರಿಕೂಟದ ಅಭ್ಯರ್ಥಿಗಳು ಕೊಚ್ಚಿ ಹೋಗಿದ್ದಾರೆ. ಇಂದಿರಾಗಾಂಧಿ ಪ್ರಧಾನಿಯಾಗಿದ್ದ ವೇಳೆ ಕಾಂಗ್ರೆಸ್‌ನಿಂದ ಯಾರೇ ಸ್ಪರ್ಧಿಸಿದ್ದರೂ ಗೆದ್ದು ಬರುತ್ತಿದ್ದರು. ಅದರಂತೆ ಈಗ ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದಾರೆ. ಮೋದಿ ಅಲೆಯೊಂದೇ ಮಾನದಂಡವಾಗಿದೆ.

· ಅಮರೇಗೌಡ ಪಾಟೀಲ ಬಯ್ನಾಪುರ, ಶಾಸಕ

ಕೊಪ್ಪಳ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಸೋಲಿಗೆ ಜಿಲ್ಲಾಧ್ಯಕ್ಷ ಶಿವರಾಜ್‌ ತಂಗಡಗಿ ನೇರ ಕಾರಣ. ಚುನಾವಣೆಯ ಪ್ರಚಾರ ಸೇರಿ ಪ್ರತಿಯೊಂದು ವಿಷಯದಲ್ಲೂ ಜೆಡಿಎಸ್‌ ಕಾರ್ಯಕರ್ತರು ಹಾಗೂ ಹಳೆಯ ಕಾಂಗ್ರೆಸ್‌ ಮುಖಂಡರನ್ನು ನಿರ್ಲಕ್ಷ ್ಯ ಮಾಡಿದ ಪರಿಣಾಮವೇ ಕಾಂಗ್ರೆಸ್‌ ಅಭ್ಯರ್ಥಿ ಸೋಲಿಗೆ ಪ್ರಮುಖ ಕಾರಣವಾಗಿದೆ.

· ಎಚ್.ಆರ್‌. ಶ್ರೀನಾಥ, ಜೆಡಿಎಸ್‌ ಮುಖಂಡ

ಅಂಚೆ ಮತದಲ್ಲೂ ಮುಂದೆ

ಕೊಪ್ಪಳ: ಲೋಕಸಭಾ ಕ್ಷೇತ್ರದ ಮತ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಸಂಗಣ್ಣ ಕರಡಿಗೆ 21 ಸುತ್ತುಗಳ ಮತಗಳ ಎಣಿಕೆಯಲ್ಲೂ ಮುನ್ನಡೆ ಕಾಯ್ದುಕೊಳ್ಳುವ ಮೂಲಕ ಗೆಲುವಿನ ನಗೆ ಬೀರಿದ್ದಾರೆ. ಹಿಟ್ನಾಳಗೆ ಒಂದೇ ಒಂದು ಸುತ್ತಿನಲ್ಲೂ ಮುನ್ನಡೆ ಸಿಗಲೇ ಇಲ್ಲ.

ಮೊದಲ ಸುತ್ತಿನಲ್ಲಿ ಬಿಜೆಪಿ ಅಭ್ಯರ್ಥಿ ಕರಡಿ 32,730 ಮತ ಪಡೆದರೆ, ಕಾಂಗ್ರೆಸ್‌ ಅಭ್ಯರ್ಥಿ ಹಿಟ್ನಾಳ 26469 ಮತ ಪಡೆದರು. 2ನೇ ಸುತ್ತಿನಲ್ಲಿ ಕರಡಿ- 65,237, ಹಿಟ್ನಾಳ 54,070, 3ನೇ ಸುತ್ತಿನಲ್ಲಿ ಕರಡಿ-98,282, ಹಿಟ್ನಾಳ 82,117, 4ನೇ ಸುತ್ತಿನಲ್ಲಿ ಕರಡಿ-1,31,387, ಹಿಟ್ನಾಳ 1,12,443, 5ನೇ ಸುತ್ತಿನಲ್ಲಿ ಕರಡಿ-1,63,798, ಹಿಟ್ನಾಳ 1,42,618, 6ನೇ ಸುತ್ತಿನಲ್ಲಿ ಕರಡಿ ಸಂಗಣ್ಣ 1,97,138, ಹಿಟ್ನಾಳ 1,71,392, 7ನೇ ಸುತ್ತಿನಲ್ಲಿ ಕರಡಿ-2,27,800, ಹಿಟ್ನಾಳ 2,02,427, 8ನೇ ಸುತ್ತಿನಲ್ಲಿ ಕರಡಿ- 2,58,403, ಹಿಟ್ನಾಳ 2,34,261, 9ನೇ ಸುತ್ತಿನಲ್ಲಿ ಕರಡಿ-2,91,101, ಹಿಟ್ನಾಳ 2,64,120, 10ನೇ ಸುತ್ತಿನಲ್ಲಿ ಕರಡಿ 3,20,568, ಹಿಟ್ನಾಳ 2,95,081, 11ನೇ ಸುತ್ತಿನಲ್ಲಿ ಕರಡಿ 3,51,543, ಹಿಟ್ನಾಳ 3,23,746, 12ನೇ ಸುತ್ತಿನಲ್ಲಿ ಕರಡಿ 3,85,507, ಹಿಟ್ನಾಳ 3,56,408, 13ನೇ ಸುತ್ತಿನಲ್ಲಿ ಕರಡಿ 4,20,473, ಹಿಟ್ನಾಳ 3,87,015, 14ನೇ ಸುತ್ತಿನಲ್ಲಿ ಕರಡಿ 4,54,401, ಹಿಟ್ನಾಳ 4,20,354, 15ನೇ ಸುತ್ತಿನಲ್ಲಿ ಕರಡಿ 4,88,131, ಹಿಟ್ನಾಳ 4,51,618, 16ನೇ ಸುತ್ತಿನಲ್ಲಿ ಕರಡಿ 5,19,852, ಹಿಟ್ನಾಳ 4,83,244, 17ನೇ ಸುತ್ತಿನಲ್ಲಿ ಕರಡಿ 5,43,656, ಹಿಟ್ನಾಳ 5,06,682, 18ನೇ ಸುತ್ತಿನಲ್ಲಿ ಕರಡಿ 5,63,938, ಹಿಟ್ನಾಳ 5,25,830, 19ನೇ ಸುತ್ತಿನಲ್ಲಿ ಕರಡಿ 5,76,616, ಹಿಟ್ನಾಳ 5,39,391,20ನೇ ಸುತ್ತಿನಲ್ಲಿ ಕರಡಿ 5,83,407, ಹಿಟ್ನಾಳ 5,45,358,21ನೇ ಸುತ್ತಿನಲ್ಲಿ ಕರಡಿ 5,84,997, ಹಿಟ್ನಾಳ 5,47,573 ಮತಗಳನ್ನು ಪಡೆದಿದ್ದಾರೆ.

ಅಂಚೆ ಮತದಲ್ಲೂ ಮುಂದೆ

ಅಂಚೆ ಮತ ಎಣಿಕೆಯಲ್ಲೂ ಸಂಗಣ್ಣ ಕರಡಿ ಹೆಚ್ಚಿನ ಮತ ಪಡೆದು ಗೆಲುವಿನ ನಗೆ ಬೀರಿದ್ದಾರೆ. ಕರಡಿ 1786 ಮತ ಪಡೆದಿದ್ದರೆ, ಕಾಂಗ್ರೆಸ್‌ನ ರಾಜಶೇಖರ ಹಿಟ್ನಾಳ 813 ಮತ ಪಡೆದಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next