ಲತಾ ಹೆಗಡೆ …. ಬಹುಶಃ ಇತ್ತೀಚಿನ ಒಂದೂವರೆ ವರ್ಷಗಳಿಂದ ಈ ಹೆಸರು ಚಿತ್ರರಂಗದಲ್ಲಿ ಓಡಾಡುತ್ತಲೇ ಇದೆ. ಅದರಲ್ಲೂ ಹೊಸ ಸಿನಿಮಾಗಳಿಗೆ ನಾಯಕಿ ಹುಡುಕಾಟದ ಸಮಯದಲ್ಲಿ ಈ ಹೆಸರು ಅದೆಷ್ಟು ಬಾರಿ ಕೇಳಿಬಂದಿತ್ತೋ ಲೆಕ್ಕವಿಲ್ಲ. ಆದರೆ, ಲತಾ ಹೆಗಡೆಯವರ ಯಾವ ಕನ್ನಡ ಸಿನಿಮಾವೂ ಬಿಡುಗಡೆಯಾಗಿರಲಿಲ್ಲ. ಈಗ ಲತಾ ಹೆಗಡೆಯ ಮೊದಲ ಕನ್ನಡ ಸಿನಿಮಾ ಈ ವಾರ ಬಿಡುಗಡೆಯಾಗುತ್ತಿದೆ.
ಅದು “ಅತಿರಥ’. ಮಹೇಶ್ ಬಾಬು ನಿರ್ದೇಶನದ “ಅತಿರಥ’ ಚಿತ್ರಕ್ಕೆ ಲತಾ ಹೆಗಡೆ ನಾಯಕಿಯಾಗಿ ಆಯ್ಕೆಯಾದ ದಿನದಿಂದ ಬೇರೆ ಬೇರೆ ಸಿನಿಮಾಗಳಲ್ಲೂ ಲತಾ ಹೆಗಡೆಯ ಹೆಸರು ಕೇಳಿಬಂದಿತ್ತು. “ಆ ಸಿನಿಮಾ ಒಪ್ಪಿಕೊಂಡರಂತೆ, ಈ ಸಿನಿಮಾದ ಮಾತುಕತೆಯಾಗಿದೆಯಂತೆ’ ಎಂದು. ಆದರೆ, “ಅತಿರಥ’ ನಂತರ ಲತಾ ಒಪ್ಪಿದ್ದು, ಒಂದೇ ಒಂದು ಸಿನಿಮಾ ಅದು “ಅನಂತು ವರ್ಸಸ್ ನುಸ್ರತ್’.
ಈ ವಾರ ಲತಾ ಹೆಗಡೆಯ ಮೊದಲ ಕನ್ನಡ ಚಿತ್ರ ಬಿಡುಗಡೆಯಾಗುತ್ತಿದೆ. ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಒಂದೂವರೆ ವರ್ಷಗಳ ನಂತರ ಸಿನಿಮಾ ಬಿಡುಗಡೆಯಾಗುತ್ತಿರುವುದರಿಂದ ಸಹಜವಾಗಿಯೇ ಲತಾ ಎಕ್ಸೈಟ್ ಆಗಿದ್ದಾರೆ. ಜೊತೆಗೆ ನಿರ್ದೇಶಕ ಮಹೇಶ್ ಬಾಬು ಅವರಿಂದ ಲಾಂಚ್ ಆದ ನಾಯಕಿಯರು ಚಿತ್ರರಂಗದಲ್ಲಿ ಬೆಳೆಯುತ್ತಾರೆಂಬ ಮಾತು ಕೂಡಾ ಚಾಲ್ತಿಯಲ್ಲಿರುವುದರಿಂದ ಈ ವಾರ ತಮ್ಮ ಅದೃಷ್ಟ ಪರೀಕ್ಷೆಗಾಗಿ ಎದುರು ನೋಡುತ್ತಿದ್ದಾರೆ.
“ಅತಿರಥ’ ಚಿತ್ರದಲ್ಲಿ “ಆ ದಿನಗಳು’ ಚೇತನ್ ನಾಯಕರಾಗಿದ್ದಾರೆ. ಅಂದಹಾಗೆ, ಲತಾ ಹೆಗಡೆ ಮೂಲತಃ ಶಿರಸಿಯವರು. ಆದರೆ ಅವರ ಕುಟುಂಬ ಲತಾ ಹೆಗಡೆ ಆರನೇ ಕ್ಲಾಸಿನಲ್ಲಿರುವಾಗ ನ್ಯೂಜಿಲೆಂಡ್‌ಗೆ ಶಿಫ್ಟ್ ಆಗಿದೆ. ಅಲ್ಲಿಗೆ ಲತಾ ಓದಿದ್ದು, ಬೆಳೆದಿದ್ದು ಎಲ್ಲವೂ ನ್ಯೂಜಿಲೆಂಡ್‌ನಲ್ಲಿ ಎಂದು ಪ್ರತ್ಯೇಕವಾಗಿ ಅಗತ್ಯವಿಲ್ಲ. ಲತಾ ಕುಟುಂಬ ವಿದೇಶದಲ್ಲಿದ್ದರೂ ಕನ್ನಡ ಪ್ರೀತಿ ಬಿಟ್ಟಿರಲಿಲ್ಲವಂತೆ. ಹಾಗಾಗಿಯೇ ಮನೆಯಲ್ಲಿ ಕನ್ನಡ ಮಾತನಾಡುತ್ತಾ, ಮಗಳಿಗೂ ಕನ್ನಡದ ಬಗ್ಗೆ ಹೇಳಿಕೊಟ್ಟಿದ್ದಾರೆ.
ಹಾಗಾಗಿಯೇ ನ್ಯೂಜಿಲೆಂಡ್‌ನಿಂದ ಬಂದ ಲತಾ ಸುಲಲಿತವಾಗಿ ಕನ್ನಡ ಮಾತನಾಡುತ್ತಾರೆ. ಜೊತೆಗೆ ಮಗಳು ಭಾರತಕ್ಕೆ ಹೋಗಬೇಕು, ಅಲ್ಲಿ ಏನಾದರೂ ಸಾಧನೆ ಮಾಡಬೇಕು. ಅದರಲ್ಲೂ ಕನ್ನಡ ನೆಲದಲ್ಲಿ ಆಕೆಯ ಸಾಧನೆಗೊಂದು ವೇದಿಕೆ ಸಿಗಬೇಕೆಂಬ ಆಸೆ ಇತ್ತಂತೆ. ಅದು ಈಗ ಈಡೇರಿದೆ. ಮೊದಲು ತೆಲುಗು, ತಮಿಳಿನಲ್ಲಿ ನಟಿಸಿದ ಲತಾ ಈಗ ಕನ್ನಡದಲ್ಲಿ ನಟಿಸಿದ್ದಾರೆ. ಈಗ ಎರಡನೇ ಸಿನಿಮಾ “ಅನಂತು ವರ್ಸಸ್ ನುಸ್ರತ್’ನಲ್ಲಿ ನುಸ್ರತ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.