ಎನ್.ಆರ್.ಪುರ: ಕಳೆದ ಐದು ವರ್ಷಗಳಿಂದ ರಾಜ್ಯದ ಕಾಂಗ್ರೆಸ್ ಸರ್ಕಾರ ಜನಪರ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸದೆ ಸತ್ತು ಹೋಗಿತ್ತು. ಅಂತ ಸತ್ತು ಹೋದ ಸರ್ಕಾರದ ಶಾಸಕನಾಗಿದ್ದು ನನ್ನ ದುರಾದೃಷ್ಟ ಎಂದು ಶಾಸಕ ಡಿ.ಎನ್.ಜೀವರಾಜ್ ಹೇಳಿದರು.
ಅವರು ಪಟ್ಟಣದ ವಾಟರ್ ಟ್ಯಾಂಕ್ ಸಮೀಪದ ರಂಗಮಂದಿರದಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿ, ಕಾಂಗ್ರೆಸ್ ಪಕ್ಷ ಕಳೆದ ಐದು ವರ್ಷಗಳಿಂದ ಅಭಿವೃದ್ಧಿಗಾಗಿ ಕ್ಷೇತ್ರಕ್ಕೆ ನೀಡುವ ಅನುದಾನದಲ್ಲಿ ತಾರತಮ್ಯ ವೆಸಗಿದೆ. ಯೋಜನೆ ಸವಲತ್ತುಗಳನ್ನು ಕಡಿತಗೊಳಿಸಿ, ಎಲ್ಲಾ ಯೋಜನೆಯ ಫಲಾನುಭವಿಗಳನ್ನು ಲಾಟರಿ ಎತ್ತಿ ಆಯ್ಕೆ ಮಾಡುವ ಸ್ಥಿತಿ ನಿರ್ಮಾಣ ಮಾಡಿದೆ. ಇದಕ್ಕೆ ಕಾಂಗ್ರೆಸ್ ಸರ್ಕಾರ ಲಾಟರಿ ಸರ್ಕಾರವಾಗಿದೆ ಎಂದು ವ್ಯಂಗ್ಯವಾಡಿದರು. ಬಡವರ ಅಂತ್ಯ ಸಂಸ್ಕಾರಕ್ಕೆ ನೀಡುವ ಹಣವನ್ನು ನೀಡದೆ ಸಾವಿನ ಮನೆಗೂ ದುಡ್ಡು ನೀಡಿಲ್ಲ. ಈ ಕ್ಷೇತ್ರದಲ್ಲಿ ಹಿಂದೆ ಕಳೆದ 58 ವರ್ಷಗಳಿಂದ ಜನರು ಕಾಂಗ್ರೆಸ್ಸಿಗೆ, ಜೆಡಿಎಸ್ ಮತ ಹಾಕಿ ಗೆಲ್ಲಿಸಿದ್ದರು. ಆಗಿನಿಂದಲೂ ಏನು ಅಭಿವೃದ್ಧಿ ಮಾಡಿಲ್ಲ. ಬಿಜೆಪಿಯವರು ದಲಿತ ವಿರೋಧಿಗಳು ಎನ್ನುವ ಕಾಂಗ್ರೆಸ್ , ರಾಷ್ಟ್ರಪತಿ
ಹುದ್ದೆಯನ್ನು ರಾಮನಾಥಕೋವಿಂದ್ ರವರಿಗೆ ಬಿಜೆಪಿ ನೀಡಿದೆ ಎನ್ನುವುದರ ಅರಿವಿರಲಿ.
ಹಕ್ಕುಪತ್ರ ವಿತರಿಸುವ ವೇಳೆ ಗೋಮಾಳ ಜಾಗಕ್ಕೆ ನೀಡದಂತೆ ಇದ್ದ ತಡೆಯಾಜ್ಞೆಯನ್ನು ರೈತರೊಂದಿಗೆ ಸಭೆ ಸೇರಿ ತಡೆಯಾಜ್ಞೆ ತೆರವುಗೊಳಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದೇನೆ. ಸಿಎಂ ಖುದ್ದು ಬಂದು ಶಂಕುಸ್ಥಾಪನೆ ಮಾಡಿದ ಕಾಮಗಾರಿಯೇ ಇನ್ನು ಪ್ರಾರಂಭಿಸಿಲ್ಲ. ಇನ್ನು ಭರವಸೆ ಹೇಗೆ ಕೊಡುತ್ತಾರೆ ಎಂದು ಪ್ರಶ್ನಿಸಿದರು.
ರಾಜ್ಯ ಬಿಜೆಪಿ ಅಲ್ಪ ಸಂಖ್ಯಾತ ಮೋರ್ಚಾ ಕಾರ್ಯದರ್ಶಿ ಪಿ.ಜೆ.ಆ್ಯಂಟೋನಿ ಮಾತನಾಡಿ, ನರೇಂದ್ರ ಮೋದಿಯವರು ಹೇಳಿದ ಹಾಗೆ ಸಬ್‌ಕಾ ಸಾಥ್ ಸಬ್‌ಕಾ ವಿಕಾಸ್ ಎಂಬುವುದು ನಮ್ಮ ಶೃಂಗೇರಿ ಕ್ಷೇತ್ರದಲ್ಲಿ ಸಾಬೀತಾಗಿದೆ. ಶೃಂಗೇರಿ ಕ್ಷೇತ್ರದ ಬಿಜೆಪಿ ಶಾಸಕರು ಶಾಂತಿಯ ಸಂಕೇತವಾಗಿದ್ದಾರೆ. ಎಲ್ಲಾ ಸಮುದಾಯದವರನ್ನೂ ಒಂದುಗೂಡಿಸಿಕೊಂಡು ಅಭಿವೃದ್ಧಿ ಮಾಡಿದ್ದಾರೆ ಎಂದರು.
ಕೇರಳದ ವೀಕ್ಷಕ ರಜೀಶ್, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪುಣ್ಯಪಾಲ್ ಬಿ.ಎಸ್. ಆಶೀಶ್‌ಕುಮಾರ್ ತರೀಕೆರೆ ಬಿಜೆಪಿ ಉಸ್ತುವಾರಿ ಎಂ.ಆರ್.ರವಿಶಂಕರ್, ನಗರ ಘಟಕದ ಅಧ್ಯಕ್ಷ ಟಿ.ಆರ್.ಜಯರಾಂ, ಪ.ಪಂ. ಅಧ್ಯಕ್ಷ ಆರ್. ರಾಜಶೇಖರ್, ಉಪಾಧ್ಯಕ್ಷೆ ಸಾವಿತ್ರಿ, ತಾ.ಪಂ. ಅಧ್ಯಕ್ಷೆ ಈ.ಸಿ.ಜಯಶ್ರೀ ಮೋಹನ, ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಪಿ.ಸುಧಾಕರಾಚಾರಿ, ಪ.ಪಂ. ಸದಸ್ಯರುಗಳಾದ ನಾಗರತ್ನ, ಆಶಾ ಶ್ರೀನಾಥ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ಎಸ್. ಗೋಪಾಲ್ ಮತ್ತಿತರರು ಉಪಸ್ಥಿತರಿದ್ದರು.