Advertisement

ರಾಜ್ಯದಲ್ಲಿ ಲಾಟರಿ ಮುಖ್ಯಮಂತ್ರಿ

11:48 AM Jul 22, 2018 | Team Udayavani |

ಬೆಂಗಳೂರು: “ರಾಜ್ಯದಲ್ಲಿ ಲಾಟರಿ ಮುಖ್ಯಮಂತ್ರಿ ಅಧಿಕಾರದಲ್ಲಿದ್ದು ಮೂರನೇ ಸ್ಥಾನದಲ್ಲಿದ್ದರೂ ಪ್ರಥಮ ಬಹುಮಾನ ಪಡೆದಿದ್ದಾರೆ’ ಎಂದು ಮಾಜಿ ಉಪ ಮುಖ್ಯಮಂತ್ರಿ ಆರ್‌.ಅಶೋಕ್‌ ಲೇವಡಿ ಮಾಡಿದ್ದಾರೆ.

Advertisement

ಬೆಂಗಳೂರು ನಗರ ಬಿಜೆಪಿ ಕಾರ್ಯಕಾರಿಣಿ ಉದ್ಘಾಟಿಸಿ ಮಾತನಾಡಿದ ಅವರು, “ಕೇಂದ್ರದಲ್ಲಿ ಪಪ್ಪು ನೀತಿಯುಳ್ಳ ವಿರೋಧ ಪಕ್ಷ ಇದೆ. ರಾಜ್ಯದಲ್ಲಿ ಅಳುಮುಂಜಿ ಸರ್ಕಾರ ಇದೆ. ಸಮಾರಂಭಗಳಲ್ಲಿ ಟವಲ್‌ ಹಿಡಿದುಕೊಂಡ ಕೂಡಲೇ ಮುಖ್ಯಮಂತ್ರಿ ಯವರಿಗೆ ಅಳು ಬರುತ್ತದೆ. ಕುಮಾರಸ್ವಾಮಿ ಏಕೆ ಕಣ್ಣೀರು ಹಾಕ್ತಾರೆ ಎಂಬ ಬಗ್ಗೆ ಈ ಹಿಂದೆ ಜಮೀರ್‌ ಅಹಮದ್‌ ಚೆನ್ನಾಗಿ ಹೇಳುತ್ತಿದ್ದರು,’ ಎಂದರು. 

ಉಲ್ಟಾ ಹೊಡೆದ ಮನ್ನಾ: ಸಾಲಮನ್ನಾ ಮಾಡಿದರೆ ತಾನು ದೊಡ್ಡ ನಾಯಕ ಆಗಿಬಿಡುತ್ತೇನೆ ಎಂದು ಕುಮಾರಸ್ವಾಮಿ ಅಂದುಕೊಂಡಿದ್ದರು. ಆದರೆ, ಅದು ಅವರಿಗೆ ಉಲ್ಟಾ ಆಗಿದೆ. ರಾಜ್ಯದ ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳು ಪರಸ್ಪರ ಬಡಿದಾಟದಲ್ಲಿ ತೊಡಗಿದ್ದು, ಸರ್ಕಾರಕ್ಕೆ ಭವಿಷ್ಯವಿಲ್ಲ. ಕಾಂಗ್ರೆಸ್‌ನವರು ಮುಖ್ಯಮಂತ್ರಿ ಮೇಲೆ ಟೀಕಾಸ್ತ್ರದ ಕ್ಷಿಪಣಿ ಬಿಡುತ್ತಿದ್ದಾರೆ. ಈಗಾಗಲೇ ಕಚ್ಚಾಟ ಆರಂಭವಾಗಿದ್ದು ಯಾವಾಗ ಏನಾಗುತ್ತೋ ಗೊತ್ತಿಲ್ಲ ಎಂದು ಹೇಳಿದರು.

ಒಬ್ಬ ಸಚಿವರು ಶಾಸಕರನ್ನು ಕರೆದುಕೊಂಡು ಅಜ್ಮಿರ್‌ಗೆ ಹೋಗುತ್ತಾರೆ. ಸಚಿವ ಸ್ಥಾನ ಸಿಗದ ಎಂ.ಬಿ.ಪಾಟೀಲ್‌ ಕುದಿಯುತ್ತಿದ್ದಾರೆ. ಎಚ್‌. ಕೆ.ಪಾಟೀಲ್‌ ಸರ್ಕಾರಕ್ಕೆ ಲವ್‌ ಲೆಟರ್‌ ಬರೆಯುತ್ತಾರೆ. ಎರಡೂ ಪಕ್ಷಗಳಲ್ಲಿ ಸಮನ್ವಯತೆ ಇಲ್ಲ ಎಂಬುದಕ್ಕೆ ಇದು ಸಾಕ್ಷಿ ಎಂದು ಅಶೋಕ್‌ ತಿಳಿಸಿದರು.

ಮಾಫಿಯಾ ನಗರ: ಬಿಬಿಎಂಪಿ ವಿಭಜನೆಗೆ ಯಾವುದೇ ಕಾರಣಕ್ಕೂ ಅವಕಾಶ ಕೊಡುವುದಿಲ್ಲ. ಇಂತಹ ಕ್ರಮಕ್ಕೆ ಮುಂದಾದರೆ ಬಿಜೆಪಿ ತೀವ್ರ ಹೋರಾಟ ನಡೆಸಲಿದೆ. ಬೆಂಗಳೂರನ್ನು ಕಸದ ಮಾಫಿಯಾ, ಡ್ರಗ್‌ ಮಾಫಿಯಾ ನಗರವನ್ನಾಗಿ ಮಾಡಲಾಗಿದ್ದು ಎರಡೂ ಮಾಫಿಯಾ ನಿಯಂತ್ರಿಸುವ ಶಕ್ತಿ ರಾಜ್ಯ ಸರ್ಕಾರಕ್ಕೆ ಇಲ್ಲ ಎಂದು ತಿಳಿಸಿದರು.

Advertisement

ಶಾಸಕ ಡಾ. ಸಿ.ಎನ್‌.ಅಶ್ವಥ್‌ನಾರಾಯಣ, ನಗರ ಘಟಕ ಅಧ್ಯಕ್ಷ ಸದಾಶಿವ, ನಗರ ಜಿಲ್ಲಾ ಘಟಕದ ಅಧ್ಯಕ್ಷ ಸುಬ್ಬ ನರಸಿಂಹ ಉಪಸ್ಥಿತರಿದ್ದರು. ಕಾರ್ಯಕಾರಿಣಿಗೆ ಕೇಂದ್ರ ಸಚಿವರಾದ ಅನಂತಕುಮಾರ್‌, ಡಿ.ವಿ.ಸದಾನಂದಗೌಡ ಗೈರು ಹಾಜರಾಗಿದ್ದರು. ಇದೇ ಸಂದರ್ಭದಲ್ಲಿ ವಿಧಾನಪರಿಷತ್‌ಗೆ ಹೊಸದಾಗಿ ಆಯ್ಕೆಯಾದ ರವಿಕುಮಾರ್‌, ಕೆ.ಪಿ.ನಂಜುಂಡಿ, ಅ.ದೇವೇಗೌಡ ಅವರನ್ನು ಸನ್ಮಾನಿಸಲಾಯಿತು. 

ರಾಹುಲ್‌ ಪಪ್ಪು ಅನ್ನೊದು ಸಾಬೀತು
“ಸಂಸತ್ತು ಗ್ರಾಮ ಪಂಚಾಯಿತಿ ಅಲ್ಲ. ಕಾರ್ಪೊರೇಷನ್‌ ಸಹ ಅಲ್ಲ. 120 ಕೋಟಿ ಜನರನ್ನು ಪ್ರತಿನಿಧಿಸುವ ಶ್ರೇಷ್ಠ ಸ್ಥಾನ. ಅಂತಹ ಜಾಗದಲ್ಲಿ ಹೇಗೆ ನಡೆದುಕೊಳ್ಳಬೇಕು ಅನ್ನುವುದೂ ರಾಹುಲ್‌ ಗಾಂಧಿಗೆ ಗೊತ್ತಿಲ್ಲ. ಸಂಸತ್‌ನಲ್ಲಿ ಕಣ್ಣು ಹೊಡೆಯುವ ಮೂಲಕ ರಾಹುಲ್‌, ಕಾಂಗ್ರೆಸ್ಸಿಗರಿಂದಲೇ ಟೀಕೆಗೆ ಗುರಿಯಾಗಿದ್ದಾರೆ.ನಿಜವಾಗಿಯೂ ತಾನೇ ಪಪ್ಪು ಎಂಬುದನ್ನು ರಾಹುಲ್‌ಗಾಂಧಿ ಶುಕ್ರವಾರ ಸಂಸತ್‌ನಲ್ಲಿ ಬೀತುಪಡಿಸಿದ್ದಾರೆ,’ ಎಂದು ಆರ್‌.ಅಶೋಕ್‌ ಲೇವಡಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next