ಬೆಂಗಳೂರು: ವಿಮಾನಯಾನ ಕ್ಷೇತ್ರದಲ್ಲಿ ಇಡೀ ಜಗತ್ತಿನಲ್ಲಿಯೇ ಭಾರತ ಮೂರನೇ ಅತಿ ದೊಡ್ಡ ಮಾರುಕಟ್ಟೆ ಎಂದು ಪರಿಗಣಿಸಲ್ಪಟ್ಟಿದೆ. ಇದರಿಂದ ಸದ್ಯದಲ್ಲೇ ಸಹಸ್ರಾರು ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ಖ್ಯಾತ ವೈಮಾನಿಕ ತಂತ್ರಜ್ಞ ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಡಾ.ಕೋಟ ಹರಿನಾರಾಯಣ್ ತಿಳಿಸಿದರು.
ಯಲಹಂಕದ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಪ್ರಸಿದ್ಧ ವಿಜ್ಞಾನಿ ವಿಕ್ರಂ ಸಾರಾಭಾಯಿ ಅವರ ಜನ್ಮ ಶತಮಾನೋತ್ಸವ ಪ್ರಯುಕ್ತ ಆಯೋಜಿಸಿದ್ದ “ಏರೋವಿಶನ್-2019′ ಆರು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ಹಾಗೂ ಕಾರ್ಯಕಮ್ಮಟ ಉದ್ಘಾಟಿಸಿ ಮಾತನಾಡಿದರು.
ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗಷ್ಟೇ ಸೀಮಿತವಾಗಿದ್ದ ವೈಮಾನಿಕ ಮಾರುಕಟ್ಟೆಯ ಅವಕಾಶಗಳು ಈಗ ಭಾರತದಲ್ಲೂ ಪ್ರಾಪ್ತವಾಗಲಿವೆ. ಇದಕ್ಕೆ ಇಂಬು ಕೊಡುವಂತೆ 19 ಆಸನಗಳ ಸಣ್ಣ ವಿಮಾನಗಳ ತಯಾರಿಕೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಇದರಿಂದ ಅತ್ಯಂತ ಕಿರಿದಾದ ರನ್‌ವೇಗಳಲ್ಲೂ ವಿಮಾನ ಲ್ಯಾಂಡ್ ಆಗಲಿದ್ದು, ಸಣ್ಣಪುಟ್ಟ ಪಟ್ಟಣಗಳ ನಡುವೆ ಕೂಡ ವಿಮಾನಗಳು ಸಂಚರಿಸಲಿವೆ ಎಂದರು.
ಭಾರತ ಸರ್ಕಾರದ “ಉಡಾನ್’ ಯೋಜನೆಯ ಅನುಷ್ಠಾನದಿಂದ ಸಣ್ಣಪುಟ್ಟ ನಗರ, ಪಟ್ಟಣಗಳಿಗೂ ವಾಯು ಸಾರಿಗೆ ಲಭ್ಯವಾಗಲಿದೆ. ಅಷ್ಟೇ ಅಲ್ಲದೆ ವಾಣಿಜ್ಯ ಹಾಗೂ ಕೈಗಾರಿಕೆಗಳ ಅಭಿವೃದ್ಧಿಗೂ ಉಡಾನ್ ನೆರವಾಗಲಿದೆ. ಪ್ರಸ್ತುತ ವರ್ಷದಲ್ಲಿಯೇ ನೂರಕ್ಕೂ ಹೆಚ್ಚು ಹೊಸ ವಿಮಾನ ನಿಲ್ದಾಣಗಳು ಕಾರ್ಯಾಚರಣೆಗೆ ಸಿದ್ಧವಾಗಲಿವೆ ಎಂದರು.
ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಹಿರಿಯ ವಿಜ್ಞಾನಿ, ಪದ್ಮಶ್ರೀ ಡಾ. ಪ್ರಹ್ಲಾದ ರಾಮರಾವ್ ಅವರು ಮಾತನಾಡಿ, ವೈಮಾನಿಕ ತಂತ್ರಜ್ಞಾನದ ಅಭಿವೃದ್ಧಿ ಕುರಿತ ಸಂಗತಿಗಳನ್ನು ವಿದ್ಯಾರ್ಥಿಗಳು ಪ್ರಾತ್ಯಕ್ಷಿಕೆಗಳ ಮೂಲಕ ಮನನ ಮಾಡಿಕೊಳ್ಳಲು ಸಾಧ್ಯವಾಗುವಂತೆ ಈ ರಾಷ್ಟ್ರೀಯ ಕಾರ್ಯಾಗಾರವನ್ನು ಆಯೋಜಿಸಲಾಗಿದೆ ಎಂದರು.
ಕಾರ್ಯಾಗಾರದಲ್ಲಿ ವೈಮಾನಿಕ ತಂತ್ರಜ್ಞಾನ ಅಭಿವೃದ್ಧಿ ಸಂಸ್ಥೆಯ ವಿಶ್ರಾಂತ ನಿರ್ದೇಶಕ ಹಾಗೂ ಹಿರಿಯ ವಿಜ್ಞಾನಿ ಡಾ. ಪಿ.ಎಸ್. ಕೃಷ್ಣನ್, ಕರ್ನಾಟಕ ಕೇಂದ್ರೀಯ ವಿವಿ ಕುಲಪತಿ ಪ್ರೊ. ಎನ್.ಆರ್. ಶೆಟ್ಟಿ , ಎನ್‌ಎಂಐಟಿ ಪ್ರಾಂಶುಪಾಲ ಡಾ. ಹೆಚ್.ಸಿ. ನಾಗರಾಜ್, ಪ್ರೊ. ಪಿ.ಕೆ. ದಾಶ್, ಆಡಳಿತಾ—ಕಾರಿ ರೋಹಿತ್ ಪೂಂಜ ಹಾಗೂ ಅಕಾಡೆಮಿಕ್ ಡೀನ್ ಪ್ರೊ. ಶ್ರೀಧರ್ ಸೇರಿದಂತೆ 400ಕ್ಕೂ ಅ—ಕ ವೈಮಾನಿಕ ತಂತ್ರಜ್ಞಾನದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.