ತೀರ್ಥಹಳ್ಳಿ: ಅಂದು… ಅಣ್ಣಾವ್ರ ಆಗುಂಬೆಯ ಪ್ರೇಮ ಸಂಜೆಯ ಎಂದು ಹಾಡನ್ನು ಹೇಳಿಕೊಂಡು ಓಡಾಡುತ್ತಿದ್ದ ಪ್ರವಾಸಿಗರು ಇಂದು…. ಅಲ್ಲಿ ಸುರಿಯುತ್ತಿರುವ ಪ್ಲಾಸ್ಟಿಕ್ ಕಸವನ್ನು ನೋಡಿ ಎಲ್ಲರೂ ಮೂಗು ಮುಚ್ಚಿಕೊಂಡು ಓಡಾಡುವಂತಹ ಪರಿಸ್ಥಿತಿ ಪ್ರವಾಸಿಗರ ಮನೆಗೆದ್ದ ತಾಲೂಕಿನ ಆಗುಂಬೆಯಲ್ಲಿ ಆಗಿದೆ.
ಸ್ಥಳೀಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಆಗುಂಬೆ ಕಾಡಿನಲ್ಲಿ ಎಲ್ಲಿ ನೋಡಿದರೂ ಕಸವೋ ಕಸ ಹಾಗೂ ಪ್ಲಾಸ್ಟಿಕ್ ಮಯವಾಗಿದೆ. ವಿಶ್ವದ ಕಾಳಿಂಗ ಸರ್ಪಗಳ ಆವಾಸಸ್ಥಾನ ಆಗಿರುವ ಆಗುಂಬೆಯಲ್ಲಿ ಕಾಲಿಟ್ಟಲ್ಲಿ ಮಧ್ಯದ ಬಾಟಲ್ ಗಳು, ಕಣ್ಣು ಹಾಯಿಸಿದ್ದಲ್ಲಿ ಕಸದ ರಾಶಿ. ಒಟ್ಟಿನಲ್ಲಿ ಭ್ರಷ್ಟ ವ್ಯವಸ್ಥೆಗೆ ಸೊರಗಿ ಹೋಗಿದೆ ಆಗುಂಬೆ.
ಆಗುಂಬೆಯ ಕಾಡು ಈಗ ತ್ಯಾಜ್ಯ ವಸ್ತುಗಳ ಸಂಗ್ರಹಕವಂತಾಗಿದೆ. ಪಶ್ಚಿಮ ಘಟ್ಟದ ನೆಚ್ಚಿನ ತಾಣಕ್ಕೆ ಪ್ರವಾಸಿಗರನ್ನು ಈಗ ಕಸದ ರಾಶಿಯೊಂದಿಗೆ ಸ್ವಾಗತ ಮಾಡುವ ಪರಿಸ್ಥಿತಿ ಬಂದಿದೆ. ಈ ಪ್ರದೇಶಕ್ಕೆ ಕಸ ತಂದು ಹಾಕುತ್ತಿರುವುದು ಆಗುಂಬೆ ಗ್ರಾಮ ಪಂಚಾಯಿತಿಯೇ ಎಂಬುವುದು ವಿಪರ್ಯಾಸ.
ಕಸ ಹಾಕುತ್ತಿರುವ ಜಾಗದ ಸಮೀಪದಲ್ಲೇ ಆಗುಂಬೆ ರೈನ್ ಫಾರೆಸ್ಟ್ ರಿಸರ್ಚ್ ಸೆಂಟರ್ ಇದ್ದು ಪ್ರವಾಸಿಗರು ತಂದ ತ್ಯಾಜ್ಯವೂ ಕೂಡ ಇಲ್ಲೇ ವಿಲೇವಾರಿ ಆಗುತ್ತಿದೆ. ಸರಿಯಾದ ನಿರ್ವಹಣೆ ಇಲ್ಲದೆ ಕಸ ವಿಲೇವಾರಿ ಮಾಡುತ್ತಿರುವ ಗ್ರಾಮ ಪಂಚಾಯತ್ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.