Advertisement

ಸರ್ಕಾರಿ ಶಾಲೆಗೆ ಬರಪೂರ ಕೊಡುಗೆ

05:19 PM Sep 29, 2018 | Team Udayavani |

ಭಟ್ಕಳ: ಒಂದು ಊರಿನ ಅಭಿವೃದ್ಧಿಯನ್ನು ನೋಡಬೇಕಾದರೆ ಆ ಊರಿನ ದೇವಾಲಯಗಳನ್ನು ನೋಡಬೇಕು ಇಲ್ಲವೇ ಶಾಲೆಗಳನ್ನು ನೊಡಬೇಕು ಎನ್ನುವುದು ಹಿರಿಯರ ಮಾತು. ಇದು ಮುರ್ಡೇಶ್ವರಕ್ಕೆ ಅಕ್ಷರಶಃ ಒಪ್ಪುವಂತಹ ಮಾತಾಗಿದೆ. ಇಲ್ಲಿನ ದೇವಾಲಯ ನೋಡಿದರೆ ಸಂಪೂರ್ಣ ಊರಿನ ಪರಿಚಯವೇ ಆಗುತ್ತದೆ. ಅದೇ ರೀತಿಯಾಗಿ ಇಲ್ಲಿನ ಸರಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆ, ಕನ್ನಡ ಶಾಲೆಯೂ ಊರಿನ ಪರಿಚಯವನ್ನೇ ಮಾಡಿಸುತ್ತಾ ಆಕರ್ಷಣೀಯವಾಗಿದೆ ಎಂದರೆ ತಪ್ಪಾಗಲಾರದು.

Advertisement

ಇದಕ್ಕೆ ಕಾರಣ ಇಲ್ಲಿನ ಹಳೆ ವಿದ್ಯಾರ್ಥಿಗಳು. ಸಮಾನ ಮನಸ್ಕ ಹಳೆ ವಿದ್ಯಾರ್ಥಿಗಳು ಸೇರಿ ತಮ್ಮ ಶಾಲೆಗೆ ಏನಾದರೊಂದು ಕೊಡುಗೆ ನೀಡಬೇಕೆಂದು ಯೋಚಿಸಿ ಕೈಗೊಂಡ ಕಾರ್ಯಕ್ರಮ ಇಂದು ಶಾಲೆಗೆ ಸುಮಾರು ಆರು ಲಕ್ಷಕ್ಕೂ ಹೆಚ್ಚು ಕೊಡುಗೆಗಳ ಮಹಾಪೂರವೇ ಹರಿದು ಬಂದಿದೆ. ವಿದ್ಯಾರ್ಥಿಗಳ ಪಾಲಿಗೆ ಜ್ಞಾನ ದೇಗುಲವೇ ಆಗಿರುವ ಶಾಲೆಯಲ್ಲಿಂದು ಎಲ್ಲ ಮೂಲ ಸೌಲಭ್ಯಗಳು ಲಭ್ಯವಾಗಿದೆ.

ಕಳೆದ ಹಲವು ವರ್ಷಗಳಿಂದ ಇದೇ ಶಾಲೆಯಲ್ಲಿ ಕಲಿತು ಉದ್ಯೋಗದ ನಿಮಿತ್ತ ಬೇರೆ ಬೇರೆ ಊರಿನಲ್ಲಿ ವಾಸಿಸುವವರು ಯೋಚಿಸಿದ್ದು ಒಂದೇ. ನಾವು ಕಲಿತ ಶಾಲೆಗೆ ಏನಾದರೊಂದು ಕೊಡುಗೆ ನೀಡಬೇಕು ಎನ್ನುವುದು. ಇಂದಿನ ವೇಗದ ಜೀವನದಲ್ಲಿ ತಮ್ಮ ತಮ್ಮ ಕಾರ್ಯಗಳನ್ನೇ ಮಾಡಿಕೊಂಡಿರುವುದು ಕಷ್ಟವಾದರೂ ಸುಮಾರು 25ಕ್ಕೂ ಹೆಚ್ಚು ಹಳೇ ವಿದ್ಯಾರ್ಥಿಗಳು ಮನಸ್ಸು ಮಾಡಿ ಶಾಲೆಯನ್ನು ದತ್ತು ತೆಗೆದುಕೊಂಡು ಅಭಿವೃದ್ಧಿಯತ್ತ ಸಾಗಿದರು. ಒಮ್ಮೆ ಆರಂಭವಾದ ಅಭಿವೃದ್ಧಿ ಕಾರ್ಯ ಎಂದೂ ನಿಲ್ಲಲೇ ಇಲ್ಲ. ಈಗಾಗಲೇ ಸುಮಾರು ಆರು ಲಕ್ಷಕ್ಕೂ ಹೆಚ್ಚು ವಸ್ತು ರೂಪದ ಸಹಕಾರ ಮಾಡಿದ್ದರೆ. ಇನ್ನೂ ಹತ್ತು ಹಲವು ಯೋಜನೆಗಳನ್ನು ಹಾಕಿಕೊಂಡಿದ್ದು, ಯಾವುದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದು ಇವರ ಉದ್ದೇಶವಾಗಿದೆ.

ಯಾವುದೋ ಒಂದು ಉದ್ಯೋಗದಲ್ಲಿದ್ದುಕೊಂಡು ತಾವು ತಮ್ಮ ಸಂಸಾರ ಎನ್ನುವ ಜಂಜಾಟದಲ್ಲಿಯೇ ಇರುವವರ ನಡುವೆ ನಾವು ಇಂತಹ ಹಳೇ ವಿದ್ಯಾರ್ಥಿಗಳನ್ನು ನೆನಸಬೇಕಾಗಿದೆ. ಒಂದು ಊರಿನ ಶಾಲೆಯನ್ನ ನಂದಗೋಕುಲವನ್ನಾಗಿಸಿದ ಇವರ ಶ್ರಮ ನಿಜಕ್ಕೂ ಸಾರ್ಥಕವಾಗಬೇಕಾದರೆ, ಇಲ್ಲಿನ ವಿದ್ಯಾರ್ಥಿಗಳು ಉತ್ತಮ ವಿದ್ಯಾಭ್ಯಾಸವನ್ನು ಮಾಡಿ, ರಾಜ್ಯ ರಾಷ್ಟ್ರ ಮಟ್ಟದಲ್ಲಿ ಮಿಂಚಬೇಕು. ಹಳೇ ವಿದ್ಯಾರ್ಥಿಗಳ ಸಂಘದಿಂದ ಇನ್ನೂ ಹೆಚ್ಚಿನ ಸಹಾಯ ಸಹಕಾರ ದೊರೆಯಲಿ ಎಂದು ಎಲ್ಲರ ಹಾರೈಕೆಯಾಗಿದೆ.

ಲಕ್ಷಾಂತರ ರೂಪಾಯಿಗಳ ನೆರವು
ಈಗಾಗಲೇ ವಿದ್ಯಾರ್ಥಿಗಳಿಗೆ ಕುಳಿತು ಕೊಳ್ಳಲು ನೆಲಕ್ಕೆ ಉತ್ತಮ ಟೈಲ್ಸ್‌ಗಳನ್ನು ಅಳವಡಿಸಿದ್ದು, ಶುದ್ಧ ಕುಡಿಯುವ ನೀರಿನ ಸೌಲಭ್ಯ, ಮಧ್ಯಾಹ್ನದ ಬಿಸಿಯೂಟಕ್ಕೆ ಅಗತ್ಯವಿರುವ ಸೌಲಭ್ಯಗಳು, ಶಾಲೆ ದಾಖಲೆಗಳನ್ನು ಇಟ್ಟುಕೊಳ್ಳಲು ಉತ್ತಮ ದರ್ಜೆಯ ಕಪಾಟು, ರ್ಯಾಕ್ಸ್‌ಗಳು, ಶಾಲೆಗೆ ಪೈಂಟಿಂಗ್‌ ಅಲ್ಲದೇ ಆಂಗ್ಲ ಮಾಧ್ಯಮ ಶಾಲೆಗಳಿಗಿಂತ ತಮ್ಮ ಶಾಲೆಯಲ್ಲಿ ಯಾವುದೇ ಕೊರತೆ ಇಲ್ಲ ಎಂದು ವಿದ್ಯಾರ್ಥಿಗಳಿಗೆ ಅನಿಸುವುದಕ್ಕೋಸ್ಕರ ಸುಮಾರು ಎರಡು ಲಕ್ಷ ರೂಪಾಯಿ ವೆಚ್ಚದಲ್ಲಿ ಕಂಪ್ಯೂಟರ್‌, ಯುಪಿಎಸ್‌ ಕೊಡುಗೆ ನೀಡಿರುವುದು ಮಾತ್ರ ಇವರ ಶಾಲಾ ಪ್ರೇಮಕ್ಕೆ ಸಾಕ್ಷಿಯಾಗಿದೆ. ಕಂಪ್ಯೂಟರ್‌ಗಳನ್ನು ಮೆ. ನಗ್ರಾವಿಯೇಶನ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ಕಂಪೆನಿಯವರು ದೇಣಿಗೆ ನೀಡಿದ್ದಾರೆ. ಉಳಿದಂತೆ ಎಲ್ಲವನ್ನು ಹಳೇ ವಿದ್ಯಾರ್ಥಿಗಳು ತಮ್ಮ ಸಂಘದ ಮೂಲಕವೇ ನೀಡಿದ್ದು, ಲಕ್ಷಾಂತರ ರೂಪಾಯಿಗಳ ನೆರವು ಹರಿದು ಬರುವಲ್ಲಿ ಇವರ ಶ್ರಮ ಮಾತ್ರ ಮೆಚ್ಚತಕ್ಕದ್ದೇ ಆಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next