ಬಾಗಲಕೋಟೆ: ಬಸವರಾಜ ಬೊಮ್ಮಾಯಿ ಅವರು ರಾಜ್ಯದ ನೂತನ ಮುಖ್ಯಮಂತ್ರಿಯಾಗಿದ್ದು, ಈ ಭಾಗದ ಪ್ರಮುಖ ಸಮಸ್ಯೆಗಳಿಗೆ ಮುಕ್ತಿ ದೊರೆಯಲಿದೆ ಎಂಬ ಆಶಾಭಾವ ವ್ಯಕ್ತವಾಗುತ್ತಿದೆ. ಅದರಲ್ಲೂ ಬಸವನಾಡು ಬಾಗಲಕೋಟೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ನಾಡಿನ ನೂತನ ದೊರೆ ಸಂಕಲ್ಪ ತೋರುತ್ತಾರೆಂಬ ವಿಶ್ವಾಸದ ಮಾತುಗಳೂ ಕೇಳಿ ಬರುತ್ತಿವೆ.
ಹೌದು. ಬಸವರಾಜ ಬೊಮ್ಮಾಯಿ ಅವರೇ ಈ ರಾಜ್ಯದ ಜಲ ಸಂಪನ್ಮೂಲ ಸಚಿವರಾಗಿದ್ದ ವೇಳೆ ಕೃಷ್ಣಾ ನ್ಯಾಯಾಧಿಕರಣದ ಅಂತಿಮ ತೀರ್ಪು ಹೊರ ಬಿದ್ದಿತ್ತು. ಆಲಮಟ್ಟಿ ಜಲಾಶಯವನ್ನು ಈಗಿರುವ 519.60 ಮೀಟರ್‌ನಿಂದ 524.256 ಮೀಟರ್‌ಗೆ ಎತ್ತರಿಸುವ ಜತೆಗೆ ಇನ್ನೂ ಹೆಚ್ಚುವರಿಯಾಗಿ 100 ಟಿಎಂಸಿ ಅಡಿ ನೀರು ಸಂಗ್ರಹಿಸಲು ಅಧಿಕೃತ ಅನುಮೋದನೆ ದೊರೆತು ಅದಾಗಲೇ 11 ವರ್ಷ ಕಳೆದಿವೆ. ಆದರೆ ಈವರೆಗೂ ಯೋಜನೆ ಪೂರ್ಣಗೊಳಿಸುವ ಸಂಕಲ್ಪವಾಗಿಲ್ಲ. ಕೃಷ್ಣಾ ಮೇಲ್ದಂಡೆ ಯೋಜನೆ ಬಗ್ಗೆ ಸಮಗ್ರವಾದ ಆಳಗಲ ಅರಿತಿರುವ ಬೊಮ್ಮಾಯಿ ಅವರೇ ಇದೀಗ ಸಿಎಂ ಆಗಿದ್ದು, ಜಲಾಶಯ ಎತ್ತರಿಸುವ, ಮುಳುಗಡೆಯಾಗುವ 22 ಗ್ರಾಮಗಳ ಸ್ಥಳಾಂತರ ಹಾಗೂ ಸ್ವಾಧೀನಗೊಳ್ಳಲಿರುವ 1.36 ಲಕ್ಷ ಹೆಕ್ಟೇರ್ ಭೂಮಿಯ ರೈತರಿಗೆ ಹೆಚ್ಚಿನ ಪರಿಹಾರಧನ ದೊರೆಯಲಿದೆ ಎಂಬ ನಿರೀಕ್ಷೆ ಗಟ್ಟಿಗೊಂಡಿವೆ.
ಪ್ರವಾಸಿ ತಾಣಗಳಿಗೆ ಬರಲಿ ಶುಕ್ರದೆಸೆ:
ವಿಶ್ವದ ನಾನಾ ಭಗಕ್ಕೂ ಪರಿಚಿತವಾಗಿರುವ ಬಾದಾಮಿ ಚಾಲುಕ್ಯರ ಕಾಲದ ಪ್ರವಾಸಿ ತಾಣಗಳ ಸಮಗ್ರ ಅಭಿವೃದ್ಧಿಯ ಮಾತುಗಳು ಘೋಷಣೆಗೆ ಸಿಮೀತವಾಗಿವೆ ಹೊರತು, ಕೃತಿಯಲ್ಲಿ ಆಗುತ್ತಿಲ್ಲ. ಪಟ್ಟದಕಲ್ಲ, ಬಾದಾಮಿ, ಐಹೊಳೆ ಹಾಗೂ ಬಸವಣ್ಣನವರ ಐಕ್ಯ ಸ್ಥಳ ಕೂಡಲಸಂಗಮವನ್ನು ಅಕ್ಷರಧಾಮ ಮಾದರಿ ಸಮಗ್ರ ಅಭಿವೃದ್ಧಿ ಹೀಗೆ ಹಲವು ಪ್ರವಾಸಿ ತಾಣಗಳು ಅಭಿವೃದ್ಧಿಗೊಂಡರೆ ಅದು ಆರ್ಥಿಕತೆ ಬಲವರ್ಧನೆಗೂ ಕಾರಣವಾಗಲಿದೆ. ಜಿಲ್ಲೆಯ ನೇಕಾರರು, ಹಲವು ಸಮಸ್ಯೆ ಎದುರಿಸುತ್ತಿದ್ದಾರೆ. ಅವರ ಸಮಸ್ಯೆಗಳೂ ಮುಕ್ತಿಗೊಂಡು, ಪಾರಂಪರಿಕೆ ನೇಕಾರಿಗೆ ಇನ್ನಷ್ಟು ಗಟ್ಟಿಗೊಳ್ಳಲಿ ಎಂಬುದು ಹಲವರ ಒತ್ತಾಸೆ. ಇದೆಲ್ಲದರ ಮಧ್ಯೆ ಮುಳುಗಡೆಯ ಬಾಗಲಕೋಟೆ ಜಿಲ್ಲೆ ಸಮಗ್ರ ನೀರಾವರಿ, ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದೆ. ಕೈಗಾರಿಕೆ ಕ್ಷೇತ್ರದಲ್ಲಂತೂ ಅತ್ಯಂತ ಹಿಂದುಳಿದಿದೆ. ಸ್ಥಳೀಯವಾಗಿ ಹಲವು ರೀತಿಯ ಕೈಗಾರಿಕೆಗಳು ಸ್ಥಾಪನೆಗೊಂಡರೆ, ಸ್ಥಳೀಯ ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯಲಿದೆ.
ಒಟ್ಟಾರೆ ಬಸವರಾಜ ಬೊಮ್ಮಾಯಿ ಅವರು ನೂತನ ಸಿಎಂ ಆಗಿದ್ದಕ್ಕೆ ಈ ಭಾಗದ ಹಲವು ಭರವಸೆಗಳು ಚಿಗುರೊಡೆದಿವೆ. ಮುಖ್ಯವಾಗಿ ಯುಕೆಪಿ ಯೋಜನೆ ಪೂರ್ಣಗೊಳ್ಳಬೇಕು. ಪ್ರವಾಸಿ ತಾಣಗಳು ಅಭಿವೃದ್ಧಿಯಾಗಬೇಕೆಂಬುದು ಈ ಭಾಗದ ಜನರ ಬಹು ದಿನಗಳ ಬೇಡಿಕೆ.