ನವದೆಹಲಿ: ಈಗಾಗಲೇ ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿಯನ್ನು ಕಳೆದುಕೊಂಡಿದ್ದು, ಇದೀಗ ಮತ್ತೊಂದು ಮಸೀದಿಯನ್ನು ಕಳೆದುಕೊಳ್ಳಲು ಬಯಸುವುದಿಲ್ಲ ಎಂದು ಆಲ್ ಇಂಡಿಯಾ ಮಜ್ಲೀಸ್ ಎ ಇತ್ತೇಹಾದುಲ್ ಮುಸ್ಲಿಮೀನ್ (ಎಐಎಂಐಎಂ) ವರಿಷ್ಠ ಅಸಾದುದ್ದೀನ್ ಒವೈಸಿ ಜ್ಞಾನವಾಪಿ ಮಸೀದಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಾರಾಣಸಿ ಕೋರ್ಟ್ ತೀರ್ಪಿಗೆ ಈ ಪ್ರತಿಕ್ರಿಯೆ ನೀಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:‘ಸಕುಟುಂಬ ಸಮೇತ’ ಸಿನಿಮಾಗೆ ಬನ್ನಿ! ರಿಲೀಸ್ ಗೆ ಮುನ್ನವೇ ಡಬಲ್ ಲಾಭದ ಖುಷಿ
ಜ್ಞಾನವಾಪಿ ಮಸೀದಿ ಮತ್ತು ಶೃಂಗಾರ ಗೌರಿ ಪ್ರಕರಣ 1991ರ ಪೂಜಾ ಸ್ಥಳಗಳ ಕಾಯ್ದೆಯ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಒವೈಸಿ ತಿಳಿಸಿರುವುದಾಗಿ ಎಎನ್ ಐ ವರದಿ ಮಾಡಿದೆ.
ಜ್ಞಾನವಾಪಿ ಮಸೀದಿ ಆವರಣದೊಳಗೆ ವಿಡಿಯೋ ಚಿತ್ರೀಕರಣ ಮತ್ತು ಸಮೀಕ್ಷೆ ನಡೆಸಲು ನೇಮಕ ಮಾಡಿದ್ದ ಕೋರ್ಟ್ ಕಮಿಷನರ್ ಅಜಯ್ ಮಿಶ್ರಾ ಅವರನ್ನು ಬದಲಾಯಿಸಬೇಕೆಂಬ ಮನವಿಯನ್ನೂ ವಾರಾಣಸಿ ಕೋರ್ಟ್ ವಜಾಗೊಳಿಸಿದೆ ಎಂದು ಒವೈಸಿ ಆರೋಪಿಸಿದ್ದಾರೆ.
ಜ್ಞಾನವಾಪಿ ಮಸೀದಿ ಸಮೀಕ್ಷೆ ಕುರಿತಂತೆ ವಾರಾಣಸಿ ಕೋರ್ಟ್ ತೆಗೆದುಕೊಂಡಿರುವ ನಿರ್ಧಾರ, ಬಾಬ್ರಿ ಮಸೀದಿ ಸ್ಥಳದ ವಿವಾದದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಉಲ್ಲಂಘನೆಯಾಗಿದೆ ಎಂದು ಅಸಾದುದ್ದೀನ್ ಒವೈಸಿ ದೂರಿದ್ದಾರೆ.
1991ರ ಪೂಜಾ ಸ್ಥಳಗಳ ಕಾಯ್ದೆಯ ಪ್ರಕಾರ, ಯಾವುದೇ ವ್ಯಕ್ತಿ, ಯಾವುದೇ ಧಾರ್ಮಿಕ ಪಂಗಡದ, ಯಾವುದೇ ಪೂಜಾ ಸ್ಥಳವನ್ನು ವಿಭಿನ್ನ ಪಂಗಡದ ಪೂಜಾ ಸ್ಥಳವನ್ನಾಗಿ ಪರಿವರ್ತಿಸಬಾರದು ಎಂದಿದೆ. ಈ ನಿಟ್ಟಿನಲ್ಲಿ ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಮತ್ತು ಮಸೀದಿ ಆಡಳಿತ ಮಂಡಳಿ ಸುಪ್ರೀಂಕೋರ್ಟ್ ಮೆಟ್ಟಿಲೇರಬೇಕು. ನಾವು ಈಗಾಗಲೇ ಬಾಬ್ರಿ ಮಸೀದಿಯನ್ನು ಕಳೆದುಕೊಂಡಿದ್ದು, ಇದೀಗ ಇನ್ನೊಂದು ಮಸೀದಿಯನ್ನು ಕಳೆದುಕೊಳ್ಳುವುದನ್ನು ನಾನು ಬಯಸುವುದಿಲ್ಲ ಎಂದು ಒವೈಸಿ ತಿಳಿಸಿರುವುದಾಗಿ ವರದಿ ವಿವರಿಸಿದೆ.