Advertisement

ನಷ್ಟದ ನೆಪ: ಹಾಲು ಖರೀದಿ ದರ ಇಳಿಕೆ

06:00 AM Jun 06, 2018 | |

ಬೆಂಗಳೂರು: ಕೆಎಂಎಫ್ನ ಹಾಲು ಸಂಗ್ರಹಣೆಯಲ್ಲಿ ಏರಿಕೆಯಾಗುತ್ತಿದ್ದರೂ, ಹಾಲು ಮಾರಾಟ ಪ್ರಮಾಣದಲ್ಲಿ ನಿರೀಕ್ಷಿತ ಏರಿಕೆಯಾಗಿಲ್ಲ. ನಷ್ಟದ ಭೀತಿಯಿಂದ ಹಾಲು ಒಕ್ಕೂಟಗಳು ಇದರ ಭಾರವನ್ನು ಹೈನುಗಾರರ ಮೇಲೆ ಹಾಕಲು ಹೊರಟಿವೆ.  ಮಾರಾಟದ ಕೊರತೆ ಹಿನ್ನೆಲೆಯಲ್ಲಿ ಹಾಲು ಉತ್ಪಾದಕರ ಒಕ್ಕೂಟಗಳು ರೈತರಿಂದ ಖರೀದಿಸುವ ಹಾಲಿನ ದರದಲ್ಲಿ ಇಳಿಕೆ ಮಾಡಲಾರಂಭಿಸಿವೆ.

Advertisement

ಬೆಂಗಳೂರು,  ಕೋಲಾರ, ತುಮಕೂರು ಹಾಲು ಉತ್ಪಾದಕರ ಒಕ್ಕೂಟಗಳಲ್ಲಿ ಹಾಲು ಖರೀದಿ ದರ ಇಳಿಕೆಯಾಗಿದ್ದು, ನಷ್ಟ ಭರ್ತಿಗೆ ಇತರ ಒಕ್ಕೂಟಗಳಲ್ಲೂ ಖರೀದಿ ದರ ಇಳಿಸುವ ಸಾಧ್ಯತೆ ಇದೆ. ದ.ಕ. ಹಾಲು ಒಕ್ಕೂಟ ದರ ಇಳಿಕೆ ಪ್ರಕಟಿಸಿಲ್ಲ. ಸರಕಾರ ರೈತರಿಗೆ ನೀಡುವ ಐದು ರೂ. ಪ್ರೋತ್ಸಾಹ ಧನದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ.

ಮೇ 20ರಂದು 81.68 ಲಕ್ಷ ಲೀಟರ್‌ ಹಾಲು ಸಂಗ್ರಹವಾಗಿದ್ದು, ಇದು ಕೆಎಂಎಫ್ ಇತಿಹಾಸದಲ್ಲಿ ದಾಖಲೆ. ಜೂನ್‌ನಲ್ಲಿ ಹಾಲು ಉತ್ಪಾದನೆ ಇನ್ನಷ್ಟು ಹೆಚ್ಚುವ ನಿರೀಕ್ಷೆಯಿದೆ. ಆದರೆ ಮಾರಾಟ ಪ್ರಮಾಣ ಆಶಾದಾಯಕವಾಗಿಲ್ಲ. ಹಾಲು ಉತ್ಪಾದಕರ ಸಂಘಗಳ ಮೂಲಕ ನಿತ್ಯ ಸುಮಾರು 80 ಲಕ್ಷ ಲೀಟರ್‌ ಹಾಲು ಶೇಖರಣೆಯಾಗುತ್ತದೆ. ಇದರಲ್ಲಿ 36 ಲಕ್ಷ ಲೀಟರ್‌ನಷ್ಟು ಹಾಲು ಮಾತ್ರ ಮಾರಾಟವಾಗುತ್ತಿದೆ. ಹಾಗಾಗಿ ಉಳಿದಿದ್ದನ್ನು ಹಾಲಿನ ಪುಡಿಯಾಗಿ ಪರಿವರ್ತಿಸಲಾಗುತ್ತಿದ್ದು, ಇದಕ್ಕೆ ಹೆಚ್ಚುವರಿಯಾಗಿ ವೆಚ್ಚವಾಗುತ್ತದೆ. ಹಾಲಿನ ಪುಡಿ ಮಾರಾಟ ಕೂಡ ಆಶಾದಾಯಕವಾಗಿಲ್ಲ. ಹಾಗಾಗಿ ಒಕ್ಕೂಟಗಳು ನಷ್ಟ ಪ್ರಮಾಣ ತಗ್ಗಿಸಲು ರೈತರಿಂದ ಖರೀದಿಸುವ ಹಾಲಿನ ದರದಲ್ಲೇ ಇಳಿಕೆ ಮಾಡಲು ಮುಂದಾಗಿವೆ ಎಂದು ಮೂಲಗಳು ತಿಳಿಸಿವೆ.

ವಹಿವಾಟಿಗೆ ಅನುಗುಣವಾಗಿ ಏರಿಳಿತ
ಕೆಎಂಎಫ್ ಅಧೀನದಲ್ಲಿರುವ 14 ಜಿಲ್ಲಾ ಹಾಲು ಒಕ್ಕೂಟಗಳ ಪೈಕಿ 3-4 ಒಕ್ಕೂಟಗಳು ರೈತರಿಂದ ಹಾಲು ಖರೀದಿಸುವ ದರವನ್ನು ಕಡಿಮೆ ಮಾಡಿದ್ದಾರೆ.

ಎಲ್ಲೆಲ್ಲಿ ಇಳಿಕೆ?
ಬೆಂಗಳೂರು ಹಾಲು ಒಕ್ಕೂಟ ವ್ಯಾಪ್ತಿಯಲ್ಲಿ ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ರಾಮನಗರ ಜಿಲ್ಲೆಯಿದ್ದು, ರೈತರಿಂದ ಖರೀದಿಸುವ ಹಾಲಿನ ದರ 25 ರೂ.ನಿಂದ 23 ರೂ.ಗೆ ಇಳಿಕೆಯಾಗಿದೆ. ಮೇ 23ರಂದು ಒಕ್ಕೂಟದ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧಾರ ಕೈಗೊಂಡಿದ್ದು, ಜೂ.1ರಿಂದ ಜಾರಿಗೆ ಬಂದಿದೆ. ಕೋಲಾರ, ತುಮಕೂರು ಒಕ್ಕೂಟಗಳಲ್ಲಿ 1 ರೂ. ಇಳಿಕೆಯಾಗಿದೆ. ಧಾರವಾಡ, ಬೆಳಗಾವಿ, ಶಿವಮೊಗ್ಗದಲ್ಲಿ 21.50 ರೂ. ಗೆ ಖರೀದಿಸಲಾಗಿದ್ದು, ರಾಜ್ಯದಲ್ಲೇ ಅತಿ ಕಡಿಮೆ ದರ ಎನಿಸಿದೆ.

Advertisement

ಮಾರಾಟ ತಂತ್ರಗಾರಿಕೆ ವೈಫ‌ಲ್ಯ
ಕೆಎಂಎಫ್ ಹಾಲು ಗುಣಮಟ್ಟದಿಂದ ಕೂಡಿದ್ದು, ಭಾರೀ ಬೇಡಿಕೆಯಿದೆ. ಆದರೆ ಮಾರುಕಟ್ಟೆ ತಂತ್ರಗಾರಿಕೆ ವೈಫ‌ಲ್ಯ, ಹೊಸ ಪ್ರದೇಶಗಳಲ್ಲಿ ವಹಿವಾಟು ವಿಸ್ತರಣೆ, ಹೊಸ ಗ್ರಾಹಕರನ್ನು ಸೆಳೆಯುವ ಕಾರ್ಯದಲ್ಲೂ ಒಕ್ಕೂಟ ಹಿಂದಿದೆ. ನಗರ ಪ್ರದೇಶದ ಅಪಾರ್ಟ್‌ ಮೆಂಟ್‌ಗಳು, ಹೊಸ ಬಡಾವಣೆಗಳಲ್ಲಿ ಮಳಿಗೆಗಳನ್ನು ತೆರೆಯುವ ಕಾರ್ಯ ನಡೆಯುತ್ತಿಲ್ಲ. ಹಲವೆಡೆ ಬೆಳಗ್ಗೆ 7 ಗಂಟೆ ನಂತರವೇ ಹಾಲು ಸಿಗದ ಸ್ಥಿತಿ ಇದೆ. ಶುಭ ಸಮಾರಂಭಗಳಿಗೆ ಹಾಲು, ಮೊಸರು, ತುಪ್ಪ, ಐಸ್‌ಕ್ರೀಮ್‌ಗಳನ್ನು ಸಕಾಲದಲ್ಲಿ ಪೂರೈಕೆಯಲ್ಲಿನ ವ್ಯತ್ಯಯವೂ ವಹಿವಾಟಿನ ಹಿನ್ನಡೆಗೆ ಕಾರಣವಾಗಿದೆ. ಈ ಲೋಪಗಳನ್ನು ಸರಿಪಡಿಸಿಕೊಂಡು ಮಾರಾಟ ವ್ಯವಸ್ಥೆಯನ್ನು ಸುಧಾರಿಸಿದರೆ ಹೆಚ್ಚಿನ ವಹಿವಾಟು ನಡೆಸಲು ಅವಕಾಶವಿದೆ ಎಂದು ಮೂಲಗಳು ಹೇಳಿವೆ.

Advertisement

Udayavani is now on Telegram. Click here to join our channel and stay updated with the latest news.

Next