Advertisement

ಸೋಲು ಕೂಡ ಸಾಧ್ಯತೆಯೇ!

06:40 AM Apr 28, 2019 | mahesh |

ಸಾ ವಿದ್ಯಾಯಾ ವಿಮುಕ್ತಯೇ– ಇದು ಉಪನಿಷತ್ತಿನ ಮಾತು. who is educated is a free man ಎನ್ನುತ್ತದೆ ಆಂಗ್ಲೋಕ್ತಿ. Free from what? ಮುಕ್ತತೆ ಸಾಧ್ಯವಾಗಬೇಕಾದರೆ ಒತ್ತಡರಹಿತವಾದ ಕೆಲಸ ಇರಬೇಕು. ಮಕ್ಕಳ ಬೆನ್ನಿಗೆ ಪುಸ್ತಕಚೀಲ ಹೊರಿಸುವುದು ಹೆಚ್ಚಿನ ಒತ್ತಡವನ್ನು ಹೇರುವುದರ ಪ್ರತೀಕವೇ. ಆದರೆ ಸ್ಕೂಲ್‌ಬ್ಯಾಗ್‌ನ ಹೊರೆಯನ್ನಾದರೂ ಸಹಿಸಬಹುದು, ತಂದೆತಾಯಿಯರ ನಿರೀಕ್ಷೆಯ ಹೊರೆಯನ್ನು ಹೊತ್ತು ಸಾಗುವುದು ಹೇಗೆ? ಇದೊಂದು “ಭಾರ’ದ ಸ್ಥಿತಿ. ಇಂಥ ಸ್ಥಿತಿಯಲ್ಲಿ ಕಲಿಕೆ ಸಹಜವಾಗದೆ, “ಸುಂದರ’ವಾಗದೆ, ಅಂಕ ಗಳಿಸುವ ಜೂಜಾಟವಾಗುತ್ತದೆ. ಮಕ್ಕಳು ಅಂಕ ಪಡೆಯುವ ಯಂತ್ರಗಳಾಗಿ ಬಿಡುತ್ತಾರೆ. ಪೋಷಕರ ನಿರೀಕ್ಷೆ ಇಂದು ಯಾವ ಮಟ್ಟದಲ್ಲಿದೆ ಎಂದರೆ ಅವರಿಗೆ ಅವಕಾಶವಿರುತ್ತಿದ್ದರೆ ಕಂಪ್ಯೂಟರನ್ನೇ ಹೆರುತ್ತಿದ್ದರು. ನಮ್ಮಲ್ಲಿ ಅಂಗಹೀನರಾದವರು, ಮಾನಸಿಕವಾಗಿ ಅಸ್ವಸ್ಥರಾದವರು, ದುರ್ಬಲರು- ಎಲ್ಲರೂ ಬದುಕುತ್ತಾರೆ. ಅಂಕ ಕಡಿಮೆ ಬಂದವರಿಗೆ ಒಂದಿಷ್ಟು ಜಾಗವಿರಲಾರದೆ?

Advertisement

ಓದಿದವರಿಗೂ ಕೆಲವೊಮ್ಮೆ ಅವಕಾಶಗಳು ಸಿಗುವುದಿಲ್ಲ. ಯಾಕೆಂದರೆ ಇವರ ಗುರಿ ಸಿದ್ಧಮಾದರಿಯಲ್ಲಿಯೇ ಇರುತ್ತದೆ. ಸಿದ್ಧವಾದ ಮಾದರಿ- ಸೃಜನಶೀಲತೆಗೆ ಮತ್ತು ಚಿಂತನಶೀಲತೆಗೆ ಅವಕಾಶ ನೀಡುವುದಿಲ್ಲ. ಇಂದು ಕಾರ್ಖಾನೆಗಳಿಗೆ ಕೂಲಿಕಾರ್ಮಿಕರನ್ನು ಒದಗಿಸುವುದಕ್ಕೆ ನಮ್ಮ ಶಿಕ್ಷಣ ವ್ಯವಸ್ಥೆ ಮೀಸಲಾಗಿದೆ.

ಪ್ರತಿಯೊಬ್ಬರೂ ಶಾಲೆ ಕಲಿಯಬೇಕು ಎಂಬ ನಿಯಮವಿದೆ. ತಪ್ಪಲ್ಲ. ಅದು ಸರಿಯೇ. ಆದರೆ, ಶಾಲೆಯಲ್ಲಿ ಏನನ್ನು ಕಲಿಯಬೇಕು?

ಮಿಷಲ್‌ ಫ್ರಿಕೊ ಎಂಬ ಶಿಕ್ಷಣ ತಜ್ಞ ವ್ಯಂಗ್ಯವಾಗಿ ಹೇಳುತ್ತಾನೆ, “ಜೈಲಿನಲ್ಲಿ ಕೈದಿಗಳನ್ನು ಹಿಡಿತದಲ್ಲಿಟ್ಟುಕೊಳ್ಳುವ ಶಿಸ್ತಿನ ಕ್ರಮದಲ್ಲಿಯೇ ಶಾಲೆಯಲ್ಲಿ ವಿದ್ಯಾರ್ಥಿಗಳನ್ನು ನಿಯಂತ್ರಿಸಲಾಗುತ್ತದೆ’ ನಿಜವಾಗಿ, ಮಕ್ಕಳಿಗೆ ಇಂಥ ಬಂಧನವಲ್ಲ , ಒಳ ಬದುಕಿನ ಏಕಾಂತಕ್ಕೆ ಅವಕಾಶ ಇರಬೇಕು.

ನಮ್ಮ ಶಿಕ್ಷಣದಲ್ಲಿ ಸೂಕ್ಷ್ಮಜ್ಞತೆ ಇಲ್ಲದಿರುವುದಕ್ಕೆ ಒಂದು ಉದಾಹರಣೆ ನೋಡಿ. ಇತಿಹಾಸವನ್ನು ಕಲಿಸುವಾಗ ಗುಪ್ತರ ಕಾಲದ “ಸುವರ್ಣ ಯುಗ’ ಎಂದು ಪದೇ ಪದೇ ಹೇಳುತ್ತೇವೆ. ಆದರೆ, ಸುವರ್ಣ ಯುಗ ಹೇಗೆ? ಸುವರ್ಣ ಯುಗವೆಂದರೆ ಏನು? ರಾಜರು ಮಾತ್ರ ಸುಖವಾಗಿದ್ದರೆ? ಪ್ರಜೆಗಳಿಗೂ ಆ ಸುವರ್ಣ ಯುಗವಿತ್ತೆ?- ಇಂಥ ಪ್ರಶ್ನೆಗಳನ್ನು ಕೇಳುವಂತೆ ವಿದ್ಯಾರ್ಥಿಯನ್ನು ಸಿದ್ಧಗೊಳಿಸಬೇಕು. ಯುದ್ಧ ಮಾಡಿ ರಾಜರು ಗೆದ್ದ ಕತೆಯನ್ನು ಹೇಳುತ್ತೇವೆ, ಯುದ್ಧವೆಂಬ ಹಿಂಸಾಮಾರ್ಗದ ಕುರಿತು ಏನೂ ಹೇಳುವುದಿಲ್ಲ. ಮೊದಲಿನವರು ಏನನ್ನು ಕಲಿಸಿದ್ದಾರೆಯೋ ಅದನ್ನೇ ಮುಂದಿನವರು ಕಲಿಸುತ್ತಾರೆ.

Advertisement

Failure ಕೂಡ ಒಂದು ಸಾಧ್ಯತೆ. ಅದೊಂದು ಆಯ್ಕೆಯೂ ಆಗಬಹುದು. ಫೆಯಿಲ್‌ ಆದರೆ ಬದುಕೇ ಮುಗಿಯಿತು ಎಂಬ ಭಾವನೆ ಮೂಡಿಸಲಾಗುತ್ತದೆ. ಕೆಲವೊಮ್ಮೆ ವಿದ್ಯಾರ್ಥಿಗಳು ಅನುತ್ತೀರ್ಣರಾಗುವುದಕ್ಕೆ ಅವರಷ್ಟೇ ಕಾರಣರಲ್ಲ, ಶಾಲಾ ವ್ಯವಸ್ಥೆಯೂ ಕಾರಣವೇ. ಹತ್ತನೆಯ ತರಗತಿಯಲ್ಲಿ ಫೇಲ್‌ ಆದ ವಿದ್ಯಾರ್ಥಿಯೊಬ್ಬ , ಹತ್ತನೆಯ ತರಗತಿಯವರೆಗೆ ಕಲಿತು ಬಂದದ್ದನ್ನು ಹೇಗೆ ನಿರಾಕರಿಸುವುದು? ಅವನನ್ನು ಬುದ್ಧಿಮಾಂದ್ಯನೆನ್ನುವುದೆ? ನಿಜವಾಗಿ ಬುದ್ಧಿಮಾಂದ್ಯರೇ ಜೀನಿಯಸ್‌ಗಳು. ಫೇಲ್‌ ಆದವರಲ್ಲಿ ಕೀಳರಿಮೆಯನ್ನು ಮೂಡಿಸುವುದರಿಂದ ಅವರು ಖನ್ನರಾಗುತ್ತಾರೆ, ಆತ್ಮಹತ್ಯೆಗೆ ಶರಣಾಗುವವರೂ ಇದ್ದಾರೆ.

ಶಿಕ್ಷಣ ವ್ಯವಸ್ಥೆಯೆ ಇಂಥ ಅಮಾನವೀಯ ಬೆಳವಣಿಗೆಗೆ ಕಾರಣವಾಗುವುದಾದರೆ ಅದರ ಸಾರ್ಥಕತೆ ಏನು?

Advertisement

Udayavani is now on Telegram. Click here to join our channel and stay updated with the latest news.

Next