Advertisement

ಸೋರುತ್ತಿದೆ ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣ

02:50 AM Jul 19, 2017 | Team Udayavani |

ಮಹಾನಗರ: ದಿನವೊಂದಕ್ಕೆ ಸಾವಿರಾರು ಪ್ರಯಾಣಿಕರು ಬಳಸುವ ಮಂಗಳೂರಿನ ಪ್ರಮುಖ ಸೆಂಟ್ರಲ್‌ ರೈಲ್ವೇ ನಿಲ್ದಾಣ ಸೋರತೊಡಗಿದೆ. ಅಂತಾರಾಷ್ಟ್ರೀಯ ಮಟ್ಟದ ಗುಣಮಟ್ಟಕ್ಕೆ ಪರಿವರ್ತನೆಯಾಗಲಿರುವ ರೈಲ್ವೇ ನಿಲ್ದಾಣದಲ್ಲಿ ಕೆಮರಾಗಳ ಅಸಮರ್ಪಕ ಕಾರ್ಯ ನಿರ್ವಹಣೆ, ಸೆಕ್ಯೂರಿಟಿ ಸಮಸ್ಯೆ, ದುರ್ಗಂಧ ಬೀರುತ್ತಿರುವ ಶೌಚಾಲಯ ಇತ್ಯಾದಿ ಸಮಸ್ಯೆಯೊಂದಿಗೆ ಸೋರುವ ಸಮಸ್ಯೆಯೂ ಸೇರಿಕೊಂಡಿದೆ. 

Advertisement

ಜತೆಗೆ ನಿಲ್ದಾಣದ ಹೊರಭಾಗದಲ್ಲಿ ಮಳೆಗಾಲದ ಸಂದರ್ಭದಲ್ಲಿ ಕೊಳಚೆ ನೀರು ಭಾರೀ ಪ್ರಮಾಣದಲ್ಲಿ ಹರಿಯುತ್ತಿದೆ. ನಿಲ್ದಾಣದ ಪಕ್ಕದಲ್ಲೇ ಇರುವ ಒಳಚರಂಡಿ ನೀರು ಸೇರಿಕೊಂಡು ಸಾರ್ವಜನಿಕರಿಗೆ ಸಾಕಷ್ಟು ಸಮಸ್ಯೆ ಸೃಷ್ಟಿಸಿದೆ. ಪ್ರಸ್ತುತ ನಿಲ್ದಾಣದೊಳಗೆ ಕೆಲವೆಡೆ ಮಳೆ ನೀರು ಸೋರುವ ಸಮಸ್ಯೆಯೂ ಸೇರಿಕೊಂಡಿದ್ದು, ಒಟ್ಟೂ ರೈಲ್ವೇ ನಿಲ್ದಾಣವೇ ಸಮಸ್ಯೆಗಳ ಆಗರವಾಗಿದೆ.

ಮೊದಲ ಪ್ಲ್ರಾಟ್‌ಫಾರ್ಮ್ನಲ್ಲೇ ಸಮಸ್ಯೆ
ಈ ರೈಲ್ವೇ ನಿಲ್ದಾಣದಲ್ಲಿ ಈಗಾಗಲೇ 3- 4 ಪ್ಯಾಟ್‌ಫಾರ್ಮ್ಗಳಿವೆಯಾದರೂ ಮೊದಲ ಪ್ಯಾಟ್‌ಫಾರ್ಮ್ನಲ್ಲೇ ಈ ಸಮಸ್ಯೆ ಕಾಣಿಸಿದೆ. ಮಂಗಳೂರಿನಿಂದ ರಾಜ್ಯದ ಹಾಗೂ ಹೊರ ರಾಜ್ಯದ ವಿವಿಧ ಪ್ರದೇಶಗಳಿಗೆ ಪ್ರಯಾಣ ಬೆಳೆಸಲು ಸಾವಿರಾರು ಮಂದಿ ಆನ್‌ಲೈನ್‌ ಅಥವಾ ನಿಲ್ದಾಣದಲ್ಲೇ ಟಿಕೆಟ್‌ ಖರೀದಿಸಿ ರೈಲಿನ ಮೂಲಕ ಪ್ರಯಾಣ ಬೆಳೆಸುತ್ತಾರೆ. ಈ ನಿಟ್ಟಿನಲ್ಲಿ ಪ್ರಯಾಣಿಕರು ತಮ್ಮ ರೈಲು ಗಾಡಿಗೆ ಒಂದು ಅಥವಾ ಇನ್ನೊಂದು ಪ್ಯಾಟ್‌ಫಾರ್ಮ್ಗೆ ಹೋಗಲೇಬೇಕು. ಹೀಗೆ ಸಾಗುವವರು ಎಷ್ಟು ಎಚ್ಚರ ವಹಿಸಿದರೂ ಸಾಕಾಗದು. ಯಾಕೆಂದರೆ ಮಳೆ ನೀರು ಹರಿದು ಇಲ್ಲಿನ ನೆಲ ಜಾರುತ್ತಿದ್ದು, ಪ್ರಯಾಣಿಕರು ಕೊಂಚ ಅವಸರ ಅಥವಾ ಕಣ್ತಪ್ಪಿದರೂ ಜಾರಿ ಬೀಳುವ ಸಾಧ್ಯತೆಯೇ ಹೆಚ್ಚು. ನಿಲ್ದಾಣದಲ್ಲಿ ಹಲವು ವಿದ್ಯುತ್‌ ಪೂರೈಕೆಯ ವಯರ್‌ ಗಳೂ ಇದ್ದು, ಮೇಲಿಂದ ನಿರಂತರ ಮಳೆ ನೀರು ಸೋರುತ್ತಿರುವುದರಿಂದ ಎಲ್ಲಾದರೂ ವಯರ್‌ಗಳ ಜಾಯಿಂಟ್‌ಗಳಿರುವಲ್ಲಿ ನೀರಿನ ಹನಿ ಬಿದ್ದಲ್ಲಿ ಗಂಭೀರ ಸಮಸ್ಯೆ ಉದ್ಭವಿಸೀತು ಎಂಬುದು ಪ್ರಯಾಣಿಕರ ಅಭಿಮತ. 

ಮಳೆ ಹನಿಗಳಿಂದಲೂ ಸಮಸ್ಯೆ
ಮಳೆ ಜೋರಾಗಿ ಬರುವಾಗ ಗಾಳಿಯ ಕಾರಣದಿಂದ ನೀರು ಪ್ಯಾಟ್‌ಫಾರ್ಮ್ ನತ್ತ ರಾಚುತ್ತಿದೆ. ಆದ ಕಾರಣ, ಪ್ರಯಾಣಿಕರು ಬಿದ್ದು ಅವಘಡ ಸಂಭವಿಸುವ ಸಾಧ್ಯತೆ ಇದೆ. ಇನ್ನು ಇಲ್ಲಿರುವ ಆಸನಗಳ ಮೇಲೂ ನೀರಿನ ಹನಿಗಳೂ ಬೀಳುವುದರಿಂದ ಕುಳಿತುಕೊಳ್ಳುವಂತೆಯೂ ಇಲ್ಲ. ಈ ಸಮಸ್ಯೆ ಮೊದಲ ಪ್ಯಾಟ್‌ಫಾರ್ಮ್ನಲ್ಲಿದ್ದು, ರೈಲು ಬೋಗಿಗಳು ಇರುವಲ್ಲಿಗೂ ಜನರು ಮಳೆಯಲ್ಲಿ ಒದ್ದೆಯಾಗಿಯೇ ಹೋಗಬೇಕಾಗಿದೆ. ಹಾಗಾಗಿ ಮೊದಲ ಪ್ಯಾಟ್‌ಫಾರ್ಮ್ನಲ್ಲಿ ಮಳೆ ನೀರು ಗಾಳಿಗೆ ರಾಚಿ ಒಳಗೆ ಹರಿಯದಂತೆ ಹಾಗೂ ಉಳಿದೆಡೆ ರೈಲಿನ ಹತ್ತಿರ ಸಾಗುವವರೆಗೂ ಶೀಟ್‌ಗಳನ್ನು ವಿಸ್ತರಿಸಿದಲ್ಲಿ ಅನುಕೂಲ ಎನ್ನುತ್ತಾರೆ ಪ್ರಯಾಣಿಕರು.

ಶೌಚಾಲಯ ಕಳಪೆ ನಿರ್ವಹಣೆ
ನಿಲ್ದಾಣದ ಮೊದಲೇ ಪ್ಯಾಟ್‌ಫಾರ್ಮ್ನ ಬದಿಯಲ್ಲಿ ಪುರುಷರಿಗೆ ಮೂತ್ರ ವಿಸರ್ಜನೆಗಾಗಿ ಶೌಚಾಲಯವಿದ್ದು, ಇದು ತೆರೆದಿರುತ್ತದೆ. ಇಲ್ಲಿ ಶುಚಿತ್ವದ ಕೊರತೆಯಿರುವುದರಿಂದ ಸುತ್ತಮುತ್ತಲಿನ ಪ್ರದೇಶದಲ್ಲಿ ನಿಲ್ಲಲೂ ಆಗುತ್ತಿಲ್ಲ. ಪ್ರಯಾಣಿಕರೂ ಮೂಗು ಮುಚ್ಚಿಕೊಂಡು ಹೋಗಬೇಕಾದ ಸ್ಥಿತಿಯಲ್ಲಿದೆ. ಇದನ್ನು ಕೂಡಲೇ ಸರಿಪಡಿಸಬೇಕೆಂಬುದು ಜನರ ಆಗ್ರಹ.
 

Advertisement

Advertisement

Udayavani is now on Telegram. Click here to join our channel and stay updated with the latest news.

Next