Advertisement

ಸೋತದ್ದು ನಿಜ ಗೆದ್ದದ್ದೂ ಅಷ್ಟೇ ನಿಜ

08:29 PM Mar 13, 2020 | mahesh |

ಪ್ರತಿಯೊಬ್ಬರ ಜೀವನವೂ ಒಂದು ತಿರುವುಮುರುವಿನ ಹಾದಿ. ಈ ಹಾದಿಯಲ್ಲಿ ಸರಿಯಾಗಿ ನಡೆದವ ಮಾತ್ರ ತನ್ನ ಗುರಿ ತಲುಪುತ್ತಾನೆ. ದೀರ್ಘ‌ವಾದ ಪ್ರಯಾಣದಲ್ಲಿ ಅಲ್ಲಲ್ಲಿ ಸವಾಲುಗಳೆಂಬ ನಿಲ್ದಾಣಗಳು ಬರುತ್ತವೆ. ಅವುಗಳನ್ನು ಸಮಚಿತ್ತದಿಂದ ಸ್ವೀಕರಿಸಿದರೆ ಮಾತ್ರ ಉಳಿದ ಪ್ರಯಾಣಗಳತ್ತ ಮುನ್ನಡೆಯ
ಬಹುದಾಗಿದೆ.

Advertisement

ಇದಕ್ಕೆ ನನ್ನ ಜೀವನವೂ ಹೊರತಾಗಿರಲಿಲ್ಲ. ನಾನು ದ್ವಿತೀಯ ಪಿಯುಸಿಯಲ್ಲಿ ಒಂದು ವಿಷಯದಲ್ಲಿ ಫೇಲ್‌ ಆಗಿದ್ದೆ. ಮೊದಲ ವರ್ಷದ ಪಿಯುಸಿಯಲ್ಲಿ ಉತ್ತಮ ಅಂಕಗಳನ್ನು ಸಂಪಾದಿಸಿದ್ದರೂ ನಿರ್ಣಾಯಕ ದ್ವಿತೀಯ ಪಿಯುಸಿಯಲ್ಲಿ ಫೇಲ್‌ ಆಗಬೇಕಾಯಿತು. ಮಾತ್ರವಲ್ಲದೇ ನನ್ನ ಒಂದು ಕಾರಣಕ್ಕೆ ನಮ್ಮ ವಿಭಾಗ ಶೇ. 100 ಫ‌ಲಿತಾಂಶದಿಂದ ವಂಚಿತವಾಯಿತು. ಈ ಸಂದರ್ಭದಲ್ಲಿ ನಾನು ತುಂಬಾ ಕಹಿ ಅನುಭವಗಳನ್ನು ಕಂಡಿದ್ದೆ. ನನ್ನ ಸಹಪಾಠಿಗಳೆಲ್ಲರೂ ಪದವಿ ಕಾಲೇಜುಗಳ ಆಯ್ಕೆಯಲ್ಲಿ ನಿರತರಾಗಿರಬೇಕಾದರೆ ನಾನು ಮಾತ್ರ ಜೀವನವೇ ಹೋಯ್ತು ಎಂಬ ಚಿಂತೆಯಲ್ಲಿಯೇ ಇರುತ್ತಿದ್ದೆ.

ಆ ಸಂದರ್ಭ ಬರಬೇಕಾದ ಎಲ್ಲಾ ಕೆಟ್ಟ ಯೋಚನೆಗಳು ಬಂದಿದ್ದವು. ಅಂಕ ಕಡಿಮೆ ಬಂದ ಕಾರಣ ಉತ್ತರ ಪತ್ರಿಕೆಯನ್ನು ಮರುಮೌಲ್ಯಮಾಪನ ಮಾಡುವ ಆಯ್ಕೆ ಇತ್ತಾದರೂ ಪರೀಕ್ಷೆ ತುಸು ಕಷ್ಟವಿದ್ದ ಕಾರಣ ನನಗೆ ಪೂರ್ಣ ಧೈರ್ಯ ಇರಲಿಲ್ಲ. ಬದಲಾಗಿ ನಾನು ಮರು ಪರೀಕ್ಷೆಯನ್ನು ಎದುರಿಸುವ ತೀರ್ಮಾನಕ್ಕೆ ಬಂದೆ. ಕುಟುಂಬದ ಕಾರ್ಯಕ್ರಮಗಳು, ಮದುವೆಗಳಿಗೆ ತೆರಳಿದರೂ ಅಲ್ಲಿಯೂ ಅದೇ ಫ‌ಲಿತಾಂಶ ಎಷ್ಟು ಬಂತು ಎಂಬ ಮಾತುಗಳು. ಆದರೆ ನಾನು ಅವರಿಗೆ ಉತ್ತರಿಸುವ ಸ್ಥಿತಿಯಲ್ಲಿರಲಿಲ್ಲ. ಮನೆಯಲ್ಲಿ ಸಮಾಧಾನದ ಮಾತುಗಳ ಮಧ್ಯೆ ನುಸುಳುವ ಕಠಿನ ಪದಗಳು ನನ್ನನ್ನು ತುಂಬಾ ಘಾಸಿಗೊಳಿಸಿದ್ದವು. ಈ ಎಲ್ಲಾ ಸಂಕಟಗಳ ಮಧ್ಯೆ ನಾನು ಮರು ಪರೀಕ್ಷೆಗೆ ಸಿದ್ಧವಾಗಬೇಕಿತ್ತು.

ಇದನ್ನು ಸವಾಲಾಗಿ ಸ್ವೀಕರಿಸಿದ ನಾನು ದಿಟ್ಟವಾಗಿ ಪರೀಕ್ಷೆಯನ್ನು ಎದುರಿಸಿದೆ. ಅದರಲ್ಲಿ ನನ್ನ ನಿರೀಕ್ಷೆಗೂ ಮೀರಿದ ಅಂಕಗಳು ಪ್ರಾಪ್ತಿಸಿದ್ದವು. ಈ ಮೂಲಕ ಪ್ರಥಮ ದರ್ಜೆ ಶ್ರೇಣಿಯೊಂದಿಗೆ ಉತ್ತೀರ್ಣಗೊಂಡೆ. ವಾಣಿಜ್ಯ ವಿಷಯದಲ್ಲಿ ಪದವಿ ಪಡೆದು, ಇಂದು ಬ್ಯಾಂಕ್‌ ಉದ್ಯೋಗಿಯಾಗಿದ್ದೇನೆ. ಅಂದು ನಾನು ಅನುತ್ತೀರ್ಣಗೊಂಡ ನೋವಿನಲ್ಲಿ ದುಡುಕಿ ಏನಾದರೂ ತಪ್ಪು ನಡೆಯತ್ತ ಚಲಿಸಿದ್ದರೆ ಈ ಸುಂದರ ಜೀವನದಿಂದ ವಂಚಿತನಾಗುತ್ತಿದ್ದೆ.

-  ಶಶಾಂಕ ಎಸ್‌., ಕುಂದಾಪುರ

Advertisement
Advertisement

Udayavani is now on Telegram. Click here to join our channel and stay updated with the latest news.

Next