Advertisement

ಶಿರೂರು –ನೀರ್ಗದ್ದೆ; ಗ್ಯಾರೇಜ್‌ನಿಂದ ಲಾರಿ ಕಳವು

11:51 AM Jun 02, 2019 | Team Udayavani |

ಬೈಂದೂರು: ಬೈಂದೂರು ಆರಕ್ಷಕ ಠಾಣಾ ವ್ಯಾಪ್ತಿಯ ನೀರ್ಗದ್ದೆಯ ಗ್ಯಾರೇಜಿನಲ್ಲಿ ದುರಸ್ತಿಗಾಗಿ ನಿಲ್ಲಿಸಿದ್ದ ಲಾರಿಯನ್ನು ಕಳ್ಳರು ಶುಕ್ರವಾರ ರಾತ್ರಿ ಕದ್ದೊಯ್ದಿದ್ದಾರೆ.

Advertisement

ನರಸಿಂಹ ದೇವಾಡಿಗ ಎನ್ನುವವರ ಮೂಕಾಂಬಿಕಾ ಕೃಪಾ ಎನ್ನುವ ಲಾರಿಯನ್ನು ಬಾಡಿ ಕೆಲಸ ಸಹಿತ ದುರಸ್ತಿಗಾಗಿ ಗ್ಯಾರೇಜಿನಲ್ಲಿ ಇರಿಸಲಾಗಿತ್ತು. ಈ ಸಂದರ್ಭ ಅದರ ಬ್ಯಾಟರಿಯನ್ನೂ ತೆಗೆದಿಡಲಾಗಿತ್ತು. ಆದರೆ ಕಳ್ಳರು ಬೇರೆ ಬ್ಯಾಟರಿ ತಂದು ಲಾರಿಯನ್ನು ಒಯ್ದಿದ್ದಾರೆ.

ನಿರಂತರ ಕಳವು
ಈ ಭಾಗದಲ್ಲಿ 2-3 ವರ್ಷಗಳಿಂದ ನಿರಂತರ ಕಳ್ಳತನ ನಡೆಯುತ್ತಿದೆ. ಮೂರು ವರ್ಷಗಳ ಹಿಂದೆ ಇಲ್ಲಿನ ವೃದ್ಧ ದಂಪತಿಯ ಮನೆಯಿಂದ ಲಕ್ಷಾಂತರ ರೂ. ಮೌಲ್ಯದ ನಗ -ನಗದು ಕದ್ದೊಯ್ಯಲಾಗಿತ್ತು. ಬಳಿಕ ಸ್ಥಳೀಯ ಉದ್ಯೋಗಿಯೊಬ್ಬರ ಮನೆಯಿಂದ ಹಾಡಹಗಲೇ ಚಿನ್ನಾಭರಣ ಸಹಿತ 2.5 ಲ.ರೂ. ಮೌಲ್ಯದ ಸೊತ್ತನ್ನು ಕಳವು ಮಾಡಲಾಗಿತ್ತು. ಕಳೆದ ವರ್ಷ ನಿಲ್ಲಿಸಿದ್ದ 4 ಲಾರಿಗಳಿಂದ ಡೀಸೆಲ್‌ ಕದಿಯಲಾಗಿತ್ತು. ಬಳಿಕ ಲಾರಿಯೊಂದರ 6 ಟಯರ್‌ಗಳನ್ನು ಕದ್ದೊಯ್ಯಲಾಗಿತ್ತು. ಇಲ್ಲಿನ ಮನೆಯೊಂದರಿಂದ ಮೂರು ಸಲ ಕಳವು ಮಾಡಲಾಗಿತ್ತು. ಇತ್ತೀಚೆಗೆ ಸ್ಥಳೀಯ ಬೀಡಾ ಅಂಗಡಿಯೊಂದರಿಂದ ಗ್ಯಾಸ್‌ ಸಿಲಿಂಡರ್‌ ಕದ್ದೊಯ್ದು ಎ.ಟಿ.ಎಂ. ಕಳವಿಗೆ ಯತ್ನಿಸಲಾಗಿತ್ತು.

ಸ್ಥಳೀಯರ ಕೈವಾಡ ಶಂಕೆ
ಈ ಪರಿಸರದಲ್ಲಿ ಈಗಾಗಲೇ ಹತ್ತಕ್ಕೂ ಅಧಿಕ ಕಳವು ನಡೆದಿದ್ದು, ಸ್ಥಳೀಯರ ಕೈವಾಡದ ಶಂಕೆ ಎದ್ದು ಕಾಣುತ್ತಿದೆ.

ಸೂಕ್ತ ತನಿಖೆೆ: ಎಸ್‌.ಪಿ.
ಈ ಕುರಿತು ಪ್ರತಿಕ್ರಿಯಿಸಿದ ಎಸ್‌. ಪಿ. ನಿಶಾ ಜೇಮ್ಸ್‌ ಅವರು, ನೀರದ್ದೆ ಪ್ರಕರಣದ ಮಾಹಿತಿ ಸಿಕ್ಕಿದೆ. ಈ ಹಿಂದಿನ ಕಳ್ಳತನದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತೇನೆ. ಕಳವು ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next