ಬೆಂಗಳೂರು: ಅಖೀಲ ಭಾರತ ಮೋಟಾರು ಟ್ರಾನ್ಸ್‌ಪೊರ್ಟ್ ಕಾಂಗ್ರೆಸ್ ಆರಂಭಿಸಿರುವ ಮುಷ್ಕರ ಬುಧವಾರ ಆರನೇ ದಿನ ಪೂರೈಸಲಿದೆ. ಹೋರಾಟ ತೀವ್ರಗೊಳಿಸಲು ಮುಂದಾಗಿರುವ ಸರಕು ಸಾಗಣೆದಾರರು ಕೈಗಾರಿಕೆಗಳಿಗೆ ಕಚ್ಚಾ ಪದಾರ್ಥ ಹಾಗೂ ಸಿದ್ಧ ಉತ್ಪನ್ನ ಸಾಗಣೆಯನ್ನು ಸಂಪೂರ್ಣ ಸ್ಥಗಿತಗೊಳಿಸುವ ಮೂಲಕ ವ್ಯಾಪಾರ- ವ್ಯವಹಾರಕ್ಕೆ ಬಿಸಿ ಮುಟ್ಟಿಸಲು ಮುಂದಾಗಿದ್ದಾರೆ.
ಬುಧವಾರ ಇಡೀ ದಿನ ಆಹಾರ ಧಾನ್ಯ, ಬೇಳೆಕಾಳು ಪೂರೈಕೆ ಸ್ಥಗಿತಗೊಂಡಿದ್ದರಿಂದ ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ವ್ಯಾಪಾರ- ವಹಿವಾಟಿನಲ್ಲಿ ವ್ಯತ್ಯಯ ಉಂಟಾಗಿತ್ತು. ಇದರಿಂದ ಕೆಲ ಅಗತ್ಯ ವಸ್ತುಗಳ ಕೊರತೆಯುಂಟಾಗುವ ಭೀತಿ ಕಾಡಲಾರಂಭಿಸಿದೆ.
ಸರಕು ಸಾಗಣೆ ವಾಹನಗಳನ್ನು ಸ್ಥಗಿತಗೊಳಿಸಿ ಮುಷ್ಕರ ನಡೆಸಲಾಗುತ್ತಿದೆ. ಧಾನ್ಯ, ಬೇಳೆಕಾಳು ಸಾಗಣೆಗೆ ಅಡ್ಡಿಯಾದರೆ ಸಾರ್ವಜನಿಕರು ಮಾತ್ರವಲ್ಲದೆ ರೈತರಿಗೆ ತೊಂದರೆಯಾಗುತ್ತದೆ. ಹಾಗಾಗಿ ಉದ್ಯಮಗಳಿಗೆ ಅಗತ್ಯವಾದ ಕಚ್ಚಾ ಸಾಮಗ್ರಿ ಹಾಗೂ ಸಿದ್ಧ ಉತ್ಪನ್ನಗಳ ಸಾಗಣೆಗೆ ಅವಕಾಶ ನೀಡದೆ ಹೋರಾಟ ತೀವ್ರಗೊಳಿಸಲು ನಿರ್ಧರಿಸಲಾಗಿದೆ.
ಯಾವುದೇ ಕಾರಣಕ್ಕೂ ಟೋಲ್ ಸಂಬಂಧಿತ ಬೇಡಿಕೆ ಈಡೇರಿಸುವವರೆಗೆ ಹೋರಾಟ ಮುಂದುವರಿಸಲಾಗುವುದು ಎಂದು ಅಖೀಲ ಭಾರತ ಮೋಟಾರು ಟ್ರಾನ್ಸ್‌ಪೊàರ್ಟ್ ಕಾಂಗ್ರೆಸ್ ವ್ಯವಸ್ಥಾಪಕ ಸಮಿತಿ ಸದಸ್ಯ ಕೆ.ಜಿ.ರವೀಂದ್ರ ತಿಳಿಸಿದರು.
ಎಪಿಎಂಸಿಗೆ ಸಾಗಣೆ ಸ್ಥಗಿತ: ನಗರದ ಎಪಿಎಂಸಿ ಮಾರುಕಟ್ಟೆಗೆ ನಿತ್ಯ 400ಕ್ಕೂ ಹೆಚ್ಚು ಲಾರಿಗಳಲ್ಲಿ ಧಾನ್ಯ, ಬೇಳೆಕಾಳು ಇತರೆ ವಸ್ತುಗಳು ಪೂರೈಕೆಯಾಗುತ್ತವೆ. ಆದರೆ ಬುಧವಾರ ಸರಕು ಸಾಗಣೆ ಸಂಪೂರ್ಣ ಸ್ಥಗಿತವಾಗಿದ್ದರಿಂದ ಮಾರುಕಟ್ಟೆಗೆ ಯಾವುದೇ ಸರಕು ಪೂರೈಕೆಯಾಗಿಲ್ಲ, ಮಾರುಕಟ್ಟೆಯಿಂದ ಇತರೆಡೆಗೂ ಸರಕು ವಿತರಣೆಯಾಗಿಲ್ಲ. ಹಾಗಾಗಿ ಹಳೆಯ ದಾಸ್ತಾನಿನಲ್ಲೇ ವ್ಯಾಪಾರಿಗಳು ವಹಿವಾಟು ನಡೆಸುವಂತಾಗಿತ್ತು.
ಬುಧವಾರ ಮಾರುಕಟ್ಟೆಗೆ ಒಂದು ಲಾರಿ ಸರಕು ಕೂಡ ಪೂರೈಕೆಯಾಗಿಲ್ಲ. ಹಾಗಾಗಿ ವಹಿವಾಟು ಕುಸಿದಿತ್ತು. ಜತೆಗೆ ಕೆಲ ವಸ್ತುಗಳ ಬೆಲೆಯು ಏರಿಳಿತವಾಗಲಾರಂಭಿಸಿದೆ. ಗುರುವಾರದಿಂದ ಮಾರುಕಟ್ಟೆಗೆ ಸರಕು ಸಾಗಣೆ ಶುರುವಾದರೆ ತೊಂದರೆಯಾಗುವುದಿಲ್ಲ.
ಒಂದೊಮ್ಮೆ ಮಾರುಕಟ್ಟೆಗೆ ಸರಕು ಹೊತ್ತು ಬರುವ ವಾಹನಗಳ ಸಂಚಾರವೂ ಸ್ಥಗಿತಗೊಂಡರೆ ಕೆಲ ವಸ್ತುಗಳ ಕೊರತೆ ತಲೆದೋರಲಿದೆ ಎಂದು ಬೆಂಗಳೂರು ಧಾನ್ಯ ವರ್ತಕರ ಸಂಘದ ಉಪಾಧ್ಯಕ್ಷ ಪ್ರಸನ್ನ ಕುಮಾರ್ ಹೇಳಿದರು.
ಯಶವಂತಪುರ ಎಪಿಎಂಸಿ ಮಾರುಕಟ್ಟೆಯಲ್ಲಿ ಬುಧವಾರ ಸರಕು ಸಾಗಣೆದಾರರು ಧರಣಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಗುರುವಾರ ಒಕ್ಕೂಟದ ದಕ್ಷಿಣದ ವಲಯದ ಮುಖಂಡರ ಸಭೆ ನಿಗದಿಯಾಗಿದ್ದು, ಮುಂದಿನ ಹೋರಾಟದ ಬಗ್ಗೆ ಚರ್ಚಿಸಲಾಗುವುದು.