Advertisement

Uppinangady ಗ್ಯಾರೇಜ್‌ಗೆ ನುಗ್ಗಿದ ಲಾರಿ: ಪಲ್ಟಿಯಾದ ಟೆಂಪೋ

12:13 AM Jan 10, 2024 | Team Udayavani |

ಉಪ್ಪಿನಂಗಡಿ: ಕೆಲವೇ ಕೆಲವು ಕ್ಷಣದೊಳಗೆ ಎರಡು ಅಪಘಾತಗಳು ಒಂದೇ ಪ್ರದೇಶದಲ್ಲಿ ನಡೆದ ಘಟನೆ ಪೆರ್ನೆಯಲ್ಲಿ ನಡೆದಿದೆ. ಎರಡೂ ಘಟನೆಗಳಲ್ಲೂ ಜನರು ಯಾವುದೇ ಅನಾಹುತವಿಲ್ಲದೆ ಪಾರಾಗಿದ್ದಾರೆ.

Advertisement

ಜ. 8ರ ಸಂಜೆ ಪೆರ್ನೆ ಜಂಕ್ಷನ್‌ನಿಂದ ಕೆಲವೇ ದೂರದಲ್ಲಿ ಈ ಅಪಘಾತಗಳು ಸಂಭವಿಸಿದ್ದು, ಮೊದಲಿಗೆ ನಿಲ್ಲಿಸಿದ್ದ ಈಚರ್‌ ಲಾರಿಯೊಂದು ಇಳಿಜಾರು ಪ್ರದೇಶದಲ್ಲಿ ತನ್ನಷ್ಟಕ್ಕೆ ಹಿಮ್ಮುಖವಾಗಿ ಚಲಿಸಿ ರಸ್ತೆ ಬದಿಯಲ್ಲಿದ್ದ ಚಂದ್ರಶೇಖರ್‌ ಅವರ ಗ್ಯಾರೇಜಿಗೆ ನುಗ್ಗಿದೆ. ಈ ಸಂದರ್ಭ ಗ್ಯಾರೇಜ್‌ನಲ್ಲಿ ಯಾರೂ ಇಲ್ಲದ್ದರಿಂದ ಅಪಾಯವೇನೂ ಸಂಭವಿಸಿಲ್ಲ.

ಆದರೆ ಗ್ಯಾರೇಜ್‌ ಮುಂದೆ ನಿಲ್ಲಿಸಿದ್ದ ಎರಡು ಬೈಕ್‌ಗಳಿಗೆ ಹಾಗೂ ಗ್ಯಾರೇಜ್‌ಗೆ ಹಾನಿಯಾಗಿದೆ. ಇದು ನಡೆದ ಕೆಲವೇ ಕ್ಷಣಗಳಲ್ಲಿ ಅದೇ ಪ್ರದೇಶದಲ್ಲಿ ಉಪ್ಪಿನಂಗಡಿಯಿಂದ ಮಾಣಿ ಕಡೆಗೆ ತೆರಳುತ್ತಿದ್ದ ಮಿನಿ ಟೆಂಪೋವೊಂದರ ಬ್ರೇಕ್‌ ವೈಫ‌ಲ್ಯಕ್ಕೀಡಾಗಿದ್ದು, ಈ ಸಂದರ್ಭ ಗ್ಯಾರೇಜ್‌ಗೆ ಲಾರಿ ನುಗ್ಗಿದ್ದರಿಂದ ಅಲ್ಲಿ ಜನಸಂದಣಿ ಸೇರಿತ್ತು. ಆಗ ಸಮಯ ಪ್ರಜ್ಞೆ ಮೆರೆದ ಮಿನಿ ಟೆಂಪೋ ಚಾಲಕ ಇನ್ನೊಂದು ಬದಿಗೆ ಮಿನಿ ಟೆಂಪೋವನ್ನು ಚಲಾಯಿಸಿದ್ದು, ಅದು ಅಲ್ಲಿಯೇ ಇದ್ದ ಗದ್ದೆಗೆ ಉರುಳಿ ಬಿದ್ದಿದೆ. ಅದೃಷ್ಟವಶಾತ್‌ ಚಾಲಕ ಅಪಾಯದಿಂದ ಪಾರಾಗಿದ್ದಾನೆ. ಅಪಘಾತವಾದಾಗ ಕಿರಣ್‌ ಶೆಟ್ಟಿ ಪೆರ್ನೆ ಹಾಗೂ ಇತರರು ಸಕಾಲಕ್ಕೆ ನೆರವಿಗೆ ಬಂದರು.

ಮೂರನೇ ಬಾರಿಗೆ ಅವಘಡಕ್ಕೆ ಸಿಲುಕಿದ ಗ್ಯಾರೇಜ್‌
ಕೆಲವು ವರ್ಷಗಳ ಹಿಂದೆ ಚಂದ್ರಶೇಖರ್‌ರವರ ಗ್ಯಾರೇಜ್‌ ಬಳಿಯೇ ಗ್ಯಾಸ್‌ ಟ್ಯಾಂಕರ್‌ ಉರುಳಿ ಬಿದ್ದು ಬೆಂಕಿ ಹತ್ತಿಕೊಂಡು ಸ್ಫೋಟಗೊಂಡಾಗ ಹಲವರ ಸಾವು-ನೋವು, ಭಾರೀ ಹಾನಿ ಸಂಭವಿಸಿದಲ್ಲದೆ, ಗ್ಯಾರೇಜ್‌ ಕೂಡಾ ಸುಟ್ಟು ಹೋಗಿತ್ತು. ಬಳಿಕ ಆ ಸ್ಥಳ ಬಿಟ್ಟು ಪೆರ್ನೆಯ ಕಟ್ಟಡವೊಂದರಲ್ಲಿ ಇವರು ಗ್ಯಾರೇಜ್‌ ಆರಂಭಿಸಿದ್ದರು. ಅದು ಕೂಡಾ ಒಂದು ದಿನ ರಾತ್ರಿ ಸಮಯದಲ್ಲಿ ಆಕಸ್ಮಿಕವಾಗಿ ಉಂಟಾದ ಬೆಂಕಿಗೆ ಆಹುತಿಯಾಗಿತ್ತು. ಬಳಿಕ ಈ ಗ್ಯಾರೇಜ್‌ ಈಗ ಇದ್ದ ಸ್ಥಳಕ್ಕೆ ಸ್ಥಳಾಂತರವಾಗಿದ್ದು, ಇದು ಕೂಡಾ ಲಾರಿ ನುಗ್ಗಿ ಸಂಪೂರ್ಣ ಹಾನಿಯಾಗಿದೆ. ಅದೃಷ್ಟವಶಾತ್‌ ಈ ಮೂರು ಅವಘಡಗಳು ಸಂಭವಿಸಿದಾಗಲೂ ಚಂದ್ರಶೇಖರ್‌ ಅವರು ಸ್ಥಳದಲ್ಲಿಲ್ಲದ ಕಾರಣದಿಂದ ಅಪಾಯದಿಂದ ಪಾರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next