Advertisement

ಸಾಂಗ್ಲಿ ಬಳಿ ಲಾರಿ ಪಲ್ಟಿ: ರಾಜ್ಯದ 10 ಕಾರ್ಮಿಕರ ಸಾವು

06:40 AM Oct 22, 2017 | Team Udayavani |

ಸಿಂದಗಿ/ಚಿಕ್ಕೋಡಿ: ಮಹಾರಾಷ್ಟ್ರದ ಸಾಂಗ್ಲಿಯ ತಾಸಗಾಂವ ಹತ್ತಿರ ಹಾಸು ಕಲ್ಲಿನ ಲಾರಿ ಪಲ್ಟಿಯಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ರಾಜ್ಯದ ಸಿಂದಗಿ, ಕಲಬುರ್ಗಿ ಮತ್ತು ಬೀದರ್‌ ಮೂಲದ 10 ಮಂದಿ ಕಾರ್ಮಿಕರು  ಸ್ಥಳದಲ್ಲೇ  ಮೃತಪಟ್ಟಿದ್ದು, 12 ಮಂದಿಗೆ ಗಂಭೀರ ಗಾಯಗಳಾದ ಘಟನೆ ಶನಿವಾರ ಬೆಳಗಿನ ಜಾವ ಸಂಭವಿಸಿದೆ.

Advertisement

ಮೃತರನ್ನು ಸಿಂದಗಿ ತಾಲೂಕಿನ ಚಾಂದಕವಠೆ ಗ್ರಾಮದ ನಿಸಾರಸಾಬ ಅಂಕಲಗಿ (37), ಪತ್ನಿ ಕಮರುಲಬಿ ನಿಸ್ಸಾರಸಾಬ ಅಂಕಲಗಿ (35), ಮಗಳು ಚಾಂದನಿ (12), ಭೀಮರಾಯ ಅಪ್ಪಣ್ಣ ಮಣೂರ (60), ಪತ್ನಿ ಅವ್ವಾಬಾಯಿ ಭೀಮರಾಯ ಮಣೂರ (55), ಮಗ ಅಪ್ಪಣ್ಣ ಭೀಮರಾಯ  (36) ಮಂಗಳೂರು ಗ್ರಾಮದ ಸಂಗವ್ವ ಸಿದ್ದಪ್ಪ ಕೊಗನೂರ (70), ಕಲಬುರ್ಗಿ ಜಿಲ್ಲೆ ಜೇವರ್ಗಿ ತಾಲೂಕಿನ ಕಣಮೇಶ್ವರ ಗ್ರಾಮದ ಶ್ರೀಮಂತಗೌಡ ಗೋಲ್ಲಾಳಪ್ಪಗೌಡ ಬಿರಾದಾರ (55), ಇಂಡಿ ತಾಲೂಕಿನ ಹತ್ತರಕಿ ಗ್ರಾಮದ ಬಕೀರ ರಾಯಪ್ಪ ರಾಠೊಡ (50), ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ರಾಮತೀರ್ಥವಾಡಿ ಗ್ರಾಮದ ಈರವ್ವ ಮಹಾದೇವಿ ದಂಡಗೂಲಿ (45) ಎಂದು ಗುರುತಿಸಲಾಗಿದೆ.

ನಸುಕಿನ ಜಾವ ಮಂಜು ಆವರಿಸಿದ್ದರಿಂದ ಸಾಂಗ್ಲಿ ಜಿಲ್ಲೆಯ ತಾಸಗಾಂವ ಕೌಟೆಮಹಾಕಾಳ ಬಳಿ ಸಿಂದಗಿ ಮೂಲದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಹಾಸು ಕಲ್ಲುಗಳು ಕಾರ್ಮಿಕರ ಮೇಲೆ ಬಿದ್ದಿದೆ. ಲಾರಿಯಲ್ಲಿದ್ದ 22 ಜನರಲ್ಲಿ 12 ಜನರು ಗಾಯಗೊಂಡಿದ್ದು,  ಸಾಂಗ್ಲಿ ಮತ್ತು ಮಿರಜ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೃಷಿ ಕಾರ್ಮಿಕರು ಮಹಾರಾಷ್ಟ್ರದ ಸತಾರಾ ಮತ್ತು ಕರಾಡದಲ್ಲಿನ ಶುಂಠಿ ಬೆಳೆ ಕಟಾವು ಮಾಡಲು ಹೊರಟಿದ್ದರು ಎನ್ನಲಾಗಿದೆ.

ಹಬ್ಬ ಮುಗಿಸಿ ಹೊರಟಿದ್ದರು!: ದೀಪಾವಳಿ ನಿಮಿತ್ತ ತಮ್ಮ ಹಳ್ಳಿಗೆ ಆಗಮಿಸಿ ಹಬ್ಬ ಮುಗಿಸಿಕೊಂಡು ಶುಕ್ರವಾರ ರಾತ್ರಿ ಹಾಸು ಕಲ್ಲು ತುಂಬಿದ ಲಾರಿಯಲ್ಲಿ  ಕರಾಡಕ್ಕೆ ಮರಳುತ್ತಿದ್ದರು. ಮಹಾರಾಷ್ಟ್ರದಲ್ಲಿ 4 ದಿನಗಳಿಂದ ಸಾರಿಗೆ ಸಂಸ್ಥೆಯ ನೌಕರರ ಮುಷ್ಕರ ನಡೆದಿದ್ದರಿಂದ ಮಹಾರಾಷ್ಟ್ರದ ಬಸ್‌ಗಳು ರಾಜ್ಯಕ್ಕೆ ಸಂಚಾರ ಸ್ಥಗಿತಗೊಳಿಸಿದ್ದವು. ಇದರಿಂದ ಇವರೆಲ್ಲರೂ ಲಾರಿಯಲ್ಲಿ ಪ್ರಯಾಣ ಮಾಡುತ್ತಿದ್ದರು. ಈ ಕುರಿತು ತಾಜಗಾವ ಪಟ್ಟಣದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next