ದಾವಣಗೆರೆ: ರಾಜ್ಯಾದ್ಯಂತ ಕರೆ ನೀಡಲಾಗಿರುವ ಲಾರಿ ಮುಷ್ಕರಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ ಎಂದು ಜಿಲ್ಲಾ ಲಾರಿ ಮಾಲೀಕರ ಸಂಘದ ಪದಾಧಿಕಾರಿಗಳು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸಂಘದ ಅಧ್ಯಕ್ಷ ನನ್ನುಸಾಬ್ ಶೇಕ್ ಸಿಂದೆ ಇತರೆ ಪದಾಧಿಕಾರಿಗಳು, ನ್ಯಾಯಯುತ ಬೇಡಿಕೆ ಈಡೇರಿಕೆಗೆ ಮುಷ್ಕರ ನಡೆಯುತ್ತಿದ್ದು, ಇದಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ ಎಂದರು. ಕೇಂದ್ರ ಸರ್ಕಾರ ಏಕಾಏಕಿ ಮೂರನೇ ವ್ಯಕ್ತಿ ವಾಹನ ವಿಮೆ ಏರಿಕೆ ಮಾಡಿದೆ. ಇದರಿಂದ ಎಲ್ಲಾ ರೀತಿಯ ವಾಹನಗಳಿಗೆ ತೊಂದರೆ ಆಗುತ್ತದೆ.
ಇದನ್ನು ನಾವು ಹಲವು ಬಾರಿ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವ ಯತ್ನಿಸಿದರೂ ಯಾವುದೇ ಪ್ರಯೋಜನ ಆಗಿಲ್ಲ. ಹಾಗಾಗಿ ನಮಗೆ ಮುಷ್ಕರ ಬಿಟ್ಟರೆ ಬೇರೆ ದಾರಿಯಿರಲಿಲ್ಲ. ರಾಜ್ಯ ಸಂಘಟನೆ ಪದಾಧಿಕಾರಿಗಳು ಮುಷ್ಕರಕ್ಕೆ ಕರೆಕೊಟ್ಟಾಗ ನಾವು ಬೆಂಬಲಿಸುವುದಾಗಿ ಹೇಳಿದ್ದೆವು ಎಂದರು.
ದಾವಣಗೆರೆ ಎಪಿಎಂಸಿ ಮಾರುಕಟ್ಟೆಯಲ್ಲಿ ಹಮಾಲಿ ಮಾಮೂಲಿ ಹೆಸರಲ್ಲಿ ಲಾರಿ ಮಾಲೀಕರು, ಚಾಲಕರಿಗೆ ಕಿರುಕುಳ ನೀಡಲಾಗುತ್ತದೆ. ಅಪರಿಚಿತ ಲಾರಿ ಚಾಲಕರು ಬಂದರಂತೂ ಅವರನ್ನು ಮಾಮೂಲಿಗೆ ಪೀಡಿಸುತ್ತಾರೆ. ಕೆಲವೊಮ್ಮೆ ಹಲ್ಲೆ ಸಹ ಮಾಡಿದ ದೃಷ್ಟಾಂತ ಇದೆ.
ಟ್ರಾನ್‌ಪೋರ್ಟ್ ಏಜೆಂಟರು ಬಾಡಿಗೆ ಮಾತನಾಡಿಕೊಂಡು ನಮಗೆ ವಹಿಸುತ್ತಾರೆ. ನಾವದನ್ನು ನಿಗದಿತ ಸ್ಥಳಕ್ಕೆ ತಲುಪಿಸುತ್ತೇವೆ. ಸಾಮಾನು ಇಳಿಸುವುದು ನಮ್ಮ ಕೆಲಸ ಅಲ್ಲ ಎಂದರು. ಇನ್ನು ದೇಶಾದ್ಯಂತ ಇರುವ ರಸ್ತೆ ಸೇವಾ ಶುಲ್ಕದಿಂದ ಸಹ ನಾವು ರೋಸಿ ಹೋಗಿದ್ದೇವೆ. ಟೋಲ್ ಸಂಗ್ರಹ ಯಾವುದಕ್ಕೆ ಎಂಬುದೇ ನಮಗೆ ಅರ್ಥ ಆಗುತ್ತಿಲ್ಲ. ಅವಧಿ ಮುಗಿದ ಮೇಲೆಯೂ ಟೋಲ್ ವಸೂಲಿ ನಡೆಯುತ್ತದೆ.
ಇದರ ಬದಲು ಡೀಸೆಲ್‌ನಲ್ಲಿ ಒಂದಿಷ್ಟು ಟೋಲ್ ಶುಲ್ಕ ಸೇರಿಸಿದರೆ ಒಳಿತು. ನಿರ್ವಹಣೆಗೆ ಬೇಕಾದ ಶುಲ್ಕ ವಸೂಲಿಗೆ ಬೇರೆ ಮಾರ್ಗ ಹುಡುಕುವುದು ಎಂದರು. ಸಂಘದ ಕಾರ್ಯದರ್ಶಿ ಓಂ ಪ್ರಕಾಶ್,ಬಿ. ಸುಭಾಷ್, ಬಸವರಾಜ, ಹಿದಾಯತ್ ಉಲ್ಲಾ, ಎನ್. ಬಾಬು, ಮೊಹಮದ್ ಆಲಿ, ಸಂಗಮೇಶ್ ಇತರರಿದ್ದರು.