ಕೊಪ್ಪಳ: ನಗರದ ಎಪಿಎಂಸಿ ಆವರಣದಲ್ಲಿ ರೈತರಿಗೆ, ವರ್ತಕರಿಗೆ ತೊಂದರೆಯಾಗುವ ರೀತಿಯಲ್ಲಿ ಲಾರಿಗಳನ್ನು ದಾರಿ ಇಲ್ಲದಂತೆ ನಿಲ್ಲಿಸಿದ್ದಕ್ಕೆ ಅಸಮಾಧಾನ ವ್ಯಕ್ತವಾಯಿತು. ಅಲ್ಲದೇ ಲೋಡ್ ಆಗಿರುವ ಲಾರಿಗಳಿಗೆ ಮಾರುಕಟ್ಟೆ ಶುಲ್ಕ ಪಡೆಯುವಂತೆ ವರ್ತಕಪ್ರತಿನಿ ಧಿಗಳು ಅಧಿಕಾರಿ ವರ್ಗಕ್ಕೆ ಒತ್ತಾಯಿಸಿದ ಪ್ರಸಂಗವೂ ಜರುಗಿತು.
ಸರ್ಕಾರ ಈಚೆಗೆ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದ ಬಳಿಕ ಎಪಿಎಂಸಿ ಆವರಣದಲ್ಲಿ ಧಾನ್ಯವನ್ನು ತುಂಬಿದ್ದ ಲಾರಿಗಳು ಸಂಚಾರ ಮಾಡಿದರೆ ಅದಕ್ಕೆ ಮಾರುಕಟ್ಟೆ ಶುಲ್ಕ ಪಡೆಯಬೇಕೆಂಬ ನಿಯಮವನ್ನೂ ಜಾರಿ ಮಾಡಿದೆ. ಆದರೆ ನಿತ್ಯವೂ ಈ ಎಪಿಎಂಸಿ ಆವರಣದಿಂದ ತೂಕದ ಯಂತ್ರದಲ್ಲಿ ಮೆಕ್ಕೆಜೋಳ ತೂಕ ಮಾಡಿ ಬಳಿಕ ಅನ್ಯಕಡೆ ರಫ್ತು ಆಗುತ್ತಿವೆ. ಇದಲ್ಲದೇ ನೂರಾರು ಲಾರಿಗಳನ್ನು ಎಪಿಎಂಸಿ ಆವರಣದ ಒಳಗಡೆಯೇ ಅಡ್ಡಾದಿಡ್ಡಿ ನಿಲ್ಲಿಸಿ ಸ್ಥಳೀಯ ವರ್ತಕರು-ರೈತರ ವಾಹನಗಳ ಸಂಚಾರಕ್ಕೆ ಅವಕಾಶ ಇಲ್ಲದಂತೆ ಮಾಡುತ್ತಿರುವುದಕ್ಕೆ ವರ್ತಕರು ಲಾರಿ ಚಾಲಕರು ಹಾಗೂ ಮೆಕ್ಕೆಜೋಳ ರಫ್ತು ಮಾಡುವವರ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದರು.
ಜೊತೆಗೆ ಎಪಿಎಂಸಿ ಆವರಣದೊಳಗೆ ನೂರಾರು ಲಾರಿಗಳು ಲೋಡ್ ಆಗಿ ಸಂಚಾರ ನಡೆಸುತ್ತಿದ್ದರೂ ಎಪಿಎಂಸಿ ಕಾರ್ಯದರ್ಶಿಗಳು ಮಾರುಕಟ್ಟೆ ಶುಲ್ಕ ಸಂಗ್ರಹ ಮಾಡುತ್ತಿಲ್ಲ. ಕಂಡರೂ ಕಾಣದಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ವರ್ತಕರು ಅಸಮಾಧಾನ ವ್ಯಕ್ತಪಡಿಸಿದರು. ಇನ್ನೂ ನೂರಾರು ಲಾರಿಗಳುಎಪಿಎಂಸಿ ಪಕ್ಕದಲ್ಲೇ ತೂಕ ಮಾಡುವ ಯಂತ್ರವಿರುವುದರಿಂದ ಆವರಣದ ಒಳಗೆ ಅಡ್ಡಾದಿಡ್ಡಿಯಾಗಿ ನಿಲ್ಲಿಸಿದ್ದಕ್ಕೂ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ:ಕೃಷಿ ಉತ್ಪನ್ನ ಸಾಗಿಸಲು ದ್ವಿಚಕ್ರ ವಾಹನಕ್ಕೆ ಟ್ರೈಲರ್ : ಎಲ್ಲರ ಗಮನ ಸೆಳೆದ ವಿನೂತನ ಪ್ರಯೋಗ
ಲಾರಿಗಳು ಅಂಗಡಿ ಬಾಗಿಲಿಗೆ ಅಡ್ಡವಾಗಿ ನಿಲ್ಲುತ್ತಿರುವುದರಿಂದ ನಮ್ಮ ಅಂಗಡಿಗಳಿಗೆ ಬರುವ ರೈತರಿಗೆ ತೊಂದರೆಯಾಗುತ್ತಿದೆ. ಆಟೋ, ಟಂಟಂಗಳಲ್ಲಿ ವಿವಿಧ ಧಾನ್ಯವನ್ನು ತರುವ ರೈತರು ಲಾರಿಗಳ ಸಾಲುನೋಡಿ ಅಂಗಡಿಗೆ ಬರಲೂ ಆಗದೇ ವಾಪಾಸ್ ತೆರಳಲೂ ಆಗದೇತೊಂದರೆ ಎದುರಿಸುತ್ತಿದ್ದಾರೆ. ಎಪಿಎಂಸಿ ಕಾರ್ಯದರ್ಶಿಗಳು ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಲಾರಿ ಚಾಲಕರಿಗೆ, ಮೆಕ್ಕೆಜೋಳವನ್ನು ಬೇರೆಡೆ ರಫ್ತು ಮಾಡುವ ಟ್ರೇಡಿಂಗ್ ಕಂಪನಿ ಮಾಲೀಕರಿಗೆ ಖಡಕ್ ಸೂಚನೆ ನೀಡಬೇಕೆಂದು ಒತ್ತಾಯಿಸಿದರು.