Advertisement
ಬೆಂಗಳೂರಿನಿಂದ ಉಡುಪಿಗೆ ಸಿಮೆಂಟ್ ಲೋಡ್ ಹೇರಿಕೊಂಡು ಬರುತ್ತಿದ್ದ ಲಾರಿ ಚಾಲಕ ಚಿಕ್ಕಮಗಳೂರು ನಿವಾಸಿ ರಾಘವೇಂದ್ರ (40) ಹಲ್ಲೆಗೊಳಗಾದವರು. ರಾಘವೇಂದ್ರ ಬೆಂಗಳೂರಿನಿಂದ ಸಿಮೆಂಟ್ ತುಂಬಿದ ಲಾರಿ ಚಲಾಯಿಸಿಕೊಂಡು ಬರುತ್ತಿದ್ದ ವೇಳೆ ಎಂಜಿರ ಬಳಿ ಮೂತ್ರಶಂಕೆಗೆಂದು ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸಿದ್ದರು. ಪುನಃ ಲಾರಿಯನ್ನು ಏರುವ ವೇಳೆಗೆ ಬೆಂಗಳೂರು ಕಡೆಯಿಂದ ಬಂದ ಕೆಂಪು ಬಣ್ಣದ ಮಹಿಂದ್ರಾ ಕಾರಿನಿಂದ ಇಳಿದ ಐವರ ತಂಡ ಏಕಾಏಕಿ ಚಾಲಕನ ಮೇಲೆ ಹಲ್ಲೆ ನಡೆಸಿತು. ತಮಿಳು ಭಾಷೆ ಮಾತನಾಡುತ್ತಿದ್ದ ಅವರು ರಾಘವೇಂದ್ರ ಅವರ ಕಾಲು, ಎದೆ, ಬೆನ್ನಿಗೆ ಚೂರಿಯಿಂದ ಇರಿದು ಗಾಯಗೊಳಿಸಿದರು. ಪ್ರತಿರೋಧ ಒಡ್ಡಿದ್ದರಿಂದ ಚಾಲಕನ ಮೇಲೆ ಕಾಲಿನಿಂದ ತುಳಿದು ಹಲ್ಲೆ ನಡೆಸಿ 17,000 ರೂ. ನಗದು, ಮೊಬೈಲ್, ಎಟಿಎಂ ಕಾರ್ಡ್ ಮೊದಲಾದವುಗಳನ್ನು ಕಸಿದುಕೊಂಡು ಮಂಗಳೂರು ಕಡೆಗೆ ಪರಾರಿಯಾದರು. ಗಾಯ ಗೊಂಡ ಚಾಲಕ ನೆಲ್ಯಾಡಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಸಕಲೇಶಪುರದಿಂದ ಉಪ್ಪಿನಂಗಡಿ ವರೆಗೆ ಹೆದ್ದಾರಿಯ ಅಲ್ಲಲ್ಲಿ ನಿರ್ಜನ ಪ್ರದೇಶಗಳಿರುವುದರಿಂದ ಈ ಭಾಗದಲ್ಲಿ ದರೋಡೆ ಇನ್ನಿತರ ದುಷ್ಕೃತ್ಯಗಳು ನಡೆಯುತ್ತಿದ್ದು ಎರಡು ದಿನಗಳ ಹಿಂದೆ ಶಿರಾಡಿ ಬಳಿ ದರೋಡೆ ನಡೆದು ಲಕ್ಷಾಂತರ ರೂ. ದೋಚಿದ ಘಟನೆ ಬೆನ್ನಿಗೇ ಪ್ರಕರಣ ಮರುಕಳಿಸಿರುವುದು ರಾತ್ರಿ ಪ್ರಯಾಣಿಕರಲ್ಲಿ ಆತಂಕ ಮೂಡಿಸಿದೆ.
Related Articles
Advertisement
ರಾತ್ರಿ ವೇಳೆ ಮರಳು, ಡಾಮರು, ಡೀಸೆಲ್ ಕಳವು ಮೊದಲಾದ ಅಕ್ರಮ ಚಟುವಟಿಕೆಗಳನ್ನು ನಡೆಸುವ ತಂಡಗಳು ಈ ಭಾಗದಲ್ಲಿ ಕಾರ್ಯಾಚರಿಸುತ್ತಿದ್ದು ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.ಘಟನಾ ಸ್ಥಳಕ್ಕೆ ಬಂಟ್ವಾಳ ಡಿವೈಎಸ್‌ಪಿ ರವೀಶ್ ಸಿ.ಆರ್., ಧರ್ಮಸ್ಥಳ ಠಾಣೆ ಸರ್ಕಲ್ ಇನ್ಸ್ ಪೆಕ್ಟರ್ ನಾಗೇಶ್ ಕದ್ರಿ, ಪಿಎಸ್‌ಐ ರಾಮ ನಾಯಕ್ ಹಾಗೂ ನೆಲ್ಯಾಡಿ ಹೊರ ಠಾಣಾ ಸಿಬಂದಿ ಭೇಟಿ ನೀಡಿ ಪರಿಶೀಲಿಸಿದರು.
ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.