ಲಕ್ನೋ : ‘ಭಗವಾನ್ ಹನುಮಾನ್ ಓರ್ವ ಮುಸ್ಲಿಮನಾಗಿದ್ದ; ಅಂತೆಯೇ ಮುಸ್ಲಿಮರಲ್ಲಿನ ಹೆಸರುಗಳು ಬಹುತೇಕ ಭಗವಾನ್ ಹನುಮನ ಹೆಸರಿನಂತೇ ಇವೆ’ ಎಂದು ಹೇಳುವ ಮೂಲಕ ಉತ್ತರ ಪ್ರದೇಶದ ಬಿಜೆಪಿ ಎಂಎಲ್‌ಸಿ ಬುಕ್ಕಲ್ ನವಾಬ್ ವಿವಾದ ಸೃಷ್ಟಿಸಿದ್ದಾರೆ.
“ಭಗವಾನ್ ಹನುಮ ಓರ್ವ ಮುಸ್ಲಿಮನಾಗಿದ್ದ ಎಂಬುದು ನನ್ನ ನಂಬಿಕೆ. ಆದುದರಿಂದಲೇ ಇಸ್ಲಾಂ ನಲ್ಲಿನ ಅನೇಕ ಹೆಸರುಗಳು ಭಗವಾನ್ ಹನುಮನ ಹೆಸರನ್ನೇ ಹೋಲುತ್ತವೆ; ಉದಾಹರಣೆಗೆ ರೆಹಮಾನ್, ರಮ್ಜಾನ್, ಫರ್ಮಾನ್, ಝೀಶನ್, ಕುರ್ಬಾನ್, ಇತ್ಯಾದಿ. ಈ ಬಗೆಯ ಪದಗಳು ಇಸ್ಲಾಮ್ ನಲ್ಲಿ ಮಾತ್ರವೇ ಕಂಡುಬರುತ್ತವೆ” ಎಂದು ಬುಕ್ಕಲ್ ನವಾಬ್ ಅವರು ಎಎನ್‌ಐ ಸುದ್ದಿ ಸಂಸ್ಥೆ ಜತೆಗೆ ಮಾತನಾಡುತ್ತಾ ಹೇಳಿದರು.
“ಇಸ್ಲಾಂ ನಲ್ಲಿನ ಈ ಹೆಸರುಗಳೆಲ್ಲ ಭಗವಾನ ಹನುಮನ ಹೆಸರಿನಿಂದಲೇ ಪಡೆದುದಾಗಿವೆ. ಒಂದೊಮ್ಮೆ ಭಗವಾನ್ ಹನುಮಾನ್ ಇಲ್ಲದಿರುತ್ತಿದ್ದರೆ ಇಸ್ಲಾಂ ನಲ್ಲಿ ಈ ಹೆಸರುಗಳೇ ಇರುತ್ತಿರಲಿಲ್ಲ” ಎಂದು ಬುಕ್ಕಲ್ ಹೇಳಿದರು.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಈಚೆಗೆ ರಾಜಸ್ಥಾನದಲ್ಲಿ ಚುನಾವಣಾ ಪ್ರಚಾರಾಭಿಯಾನ ಕೈಗೊಂಡ ವೇಳೆ ಅಲ್ವಾರ್‌ನಲ್ಲಿ ಮಾಡಿದ್ದ ಭಾಷಣದಲ್ಲಿ “ಭಗವಾನ್ ಹನುಮಾನ್ ಓರ್ವ ದಲಿತನಾಗಿದ್ದ’ ಎಂದು ಹೇಳಿ ವಿವಾದ ಸೃಷ್ಟಿಸಿದ್ದರು.
“ಹನುಮಾನ್ ಅರಣ್ಯವಾಸಿ, ಅವಕಾಶ ವಂಚಿತ ಮತ್ತು ಓರ್ವ ದಲಿತ. ಆದರೂ ಬಜರಂಗಿ ಬಲಿ ಇಡಿಯ ಭಾರತದ – ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮದ – ಜನ ಸಮುದಾಯವನ್ನು ಪರಸ್ಪರ ಬೆಸೆಯುವ ಮಹತ್ತರ ಕೆಲಸ ಮಾಡಿದ್ದ’ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದರು.