Advertisement
ಮರಗಳ ಲೂಟಿ ನಿರಂತರ: ತಾಲೂಕು ವ್ಯಾಪ್ತಿಗೆ ಬರುವ ಚಿಕ್ಕಮಣ್ಣುಗುಡ್ಡೆ, ತೆಂಗಿನಕಲ್ಲು, ಕಬ್ಟಾಳು, ಮಾಕಳಿ ಅರಣ್ಯ ಪ್ರದೇಶಗಳಲ್ಲಿ ಯಾವುದೇ ಅಡೆತಡೆಯಿಲ್ಲದೇ ಮರಗಳ ಲೂಟಿ ನಿರಂತರವಾಗಿ ಸಾಗಿದ್ದು, ಅರಣ್ಯದಲ್ಲಿದ್ದ ಬೆಲೆ ಬಾಳುವ ಹರ್ಕುಲೆಸ್, ಹೊನ್ನೆ, ನೀಲಗಿರಿ ಮರಗಳು ಈಗಾಗಲೇ ತಮ್ಮ ನೆಲೆ ಕಳೆದುಕೊಂಡಿವೆ. ಅರಣ್ಯ ವ್ಯಾಪ್ತಿಯ ಅಕ್ಕಪಕ್ಕದ ಗ್ರಾಮಗಳ ಪ್ರಭಾವಿಗಳ ಪಾಲಿಗೆ ಇಲ್ಲಿನ ಎಲ್ಲಾ ಮರಗಳು ಸಂಜೀವಿನಿಯಂತಾಗಿದ್ದು, ಅರಣ್ಯರೋಧನ ಹೇಳತೀರದಾಗಿದೆ.
Related Articles
Advertisement
ಕಾಡು ಪ್ರಾಣಿಗಳ ನಾಗಾಲೋಟ: ಮರಗಳನ್ನು ಕಡಿಯಲು ಯಂತ್ರಗಳನ್ನು ಬಳಕೆ ಮಾಡುತ್ತಿರುವುದರಿಂದ ಕಾಡುಪ್ರಾಣಿಗಳು ಶಬ್ದವಾದಾಗ ನಾಡಿನ ಕಡೆಗೆ ದಾಂಗುಡಿ ಇಡುತ್ತಿವೆ. ಪ್ರಮುಖವಾಗಿ ಚಿರತೆ, ಕರಡಿ, ಸೀಳುನಾಯಿಗಳು ಶಬ್ದಕ್ಕೆ ಗ್ರಾಮಗಳತ್ತ ಕಾಲ್ಕಿತ್ತರೆ, ನವಿಲು ಹಾಗೂ ಇತರ ಪಕ್ಷಿಗಳು ಕಾಡಿನ್ನು ಬಿಟ್ಟು ಹೊರಗೆ ಸಾಗುತ್ತಿವೆ.
ಇನ್ನು ಅರಣ್ಯ ಪ್ರದೇಶಗಳಲ್ಲಿ ಅಲ್ಲಲ್ಲಿ ವಿರಳವಾಗಿ ಬೆಳೆದಿರುವ ಶ್ರೀಗಂಧದ ಮರಗಳ ಕಡೆಗೆ ಕಳ್ಳರು ಹೆಚ್ಚಿನ ಗಮನ ಹರಿಸುತ್ತಿದ್ದು, ಸಣ್ಣ ಮರವಾದರೂ ಅದಕ್ಕೆ ಕೊಡಲಿ ಹಾಕುತ್ತಿದ್ದಾರೆ. ಸ್ವಲ್ಪ ಬೆಳೆದಿದ್ದರೂ ಅದನ್ನು ಕಡಿಯಲಾಗುತ್ತಿದೆ. ಇದು ಅರಣ್ಯ ಪ್ರದೇಶಗಳಲ್ಲಿ ಮಾತ್ರವಲ್ಲದೇ ಗ್ರಾಮಾಂತರ ಪ್ರದೇಶ ಹಾಗೂ ಅರಣ್ಯಕ್ಕೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿಯೂ ಸಾಗಿದೆ.
ಅರಣ್ಯ ರಕ್ಷಣೆಗೆ ಸಿಬ್ಬಂದಿ ಸಮಸ್ಯೆ: ತಾಲೂಕಿನಲ್ಲಿನ ಬಹುತೇಕ ಅರಣ್ಯ ಪ್ರದೇಶಗಳಲ್ಲಿ ರಕ್ಷಣೆಗಾಗಿ ನಿರ್ಮಿಸಿರುವ ಗಾರ್ಡ್‌ಗಳ ಸಂಖ್ಯೆ ಕಡಿಮೆ ಇದೆ. ಇದು ಕಳ್ಳರಿಗೆ ವರದಾನವಾಗಿ ಪರಿಣಮಿಸಿದೆ. ಪ್ರತಿ ಅರಣ್ಯ ಪ್ರದೇಶಕ್ಕೆ ಒಂದಿಬ್ಬರು ಗಾರ್ಡ್‌ಗಳನ್ನು ನೇಮಿಸಿರುವುದರಿಂದ ಅವರು, ಅರಣ್ಯ ಸುತ್ತುಹಾಕುವಷ್ಟರಲ್ಲಿ ಇನ್ನೊಂದು ಕಡೆ ಮರಗಳನ್ನು ಕಡಿದು ಸಾಗಿಸಿ ಆಗಿರುತ್ತದೆ. ಹೀಗಾಗಿ ಇದು ಕಳ್ಳರಿಗೆ ಸರಾಗವಾಗಿದ್ದು, ರಾತ್ರಿವೇಳೆಯಲ್ಲಿ ಮಾತ್ರವಲ್ಲದೆ, ಬೆಳಗಿನ ವೇಳೆಯಲ್ಲೂ ಗಾರ್ಡ್‌ಗಳ ಕಣ್ಣುತಪ್ಪಿಸಿ ಮರಗಳ ಮಾರಣ ಹೋಮ ಮಾಡಲಾಗುತ್ತಿದೆ.
ಅರಣ್ಯಗಳು ಅಳಿವಿನಂಚಿರುವ ಈ ಸಂದರ್ಭದಲ್ಲಿ ಅರಣ್ಯದಲ್ಲಿರುವ ಬೆಲೆ ಬಾಳುವ ಮರಗಳನ್ನು ಕಡಿದು ಅಕ್ರಮವಾಗಿ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿದ್ದರೂ ಯಾರೂ ಈ ಬಗ್ಗೆ ಗಮನಹರಿಸುತ್ತಿಲ್ಲ. ಅರಣ್ಯ ಇಲಾಖೆ ಈ ಬಗ್ಗೆ ಇನ್ನಾದರೂ ಗಮನಹರಿಸಿ ಮರಗಳ ಉಳಿವಿಗೆ ಮುಂದಾಗಬೇಕಿದೆ.
ಅರಣ್ಯ ಪ್ರದೇಶಗಳಲ್ಲಿ ಮರಗಳ ಕಡಿಯುವ ಪ್ರವೃತ್ತಿ ಹಿಂದಿನಿಂದಲೂ ನಡೆದುಕೊಂಡು ಬರುತ್ತಿದೆ. ಪ್ರಭಾವಿಗಳ ಹಿಡಿತಕ್ಕೆ ಸಿಲುಕಿ ಅರಣ್ಯ ನಾಶವಾಗುತ್ತಿದೆ. ಅರಣ್ಯ ಇಲಾಖೆ ಈ ಸಂಬಂಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ಅರಣ್ಯದಲ್ಲೇ ಮರಗಳನ್ನು ಹುಡುಕಿಕೊಂಡು ಹೋಗಬೇಕಾದ ಪರಿಸ್ಥಿತಿ ಎದುರಾಗಲಿದೆ.-ಎಂ.ರಾಮು, ರಾಜ್ಯ ಉಪಾಧ್ಯಕ್ಷ, ರೈತಸಂಘ
ಕಾಡುಗಳಲ್ಲಿ ಮರ ಕಡಿದರೆ ಕ್ರಿಮಿನಲ್ ಮೊಕದ್ದಮೆ ಹಾಕಲಾಗುತ್ತದೆ. ಕೃತ್ಯದಲ್ಲಿ ತೊಡಗಿರುವವರ ವಿರುದ್ಧ ಈ ಹಿಂದೆಯೂ ಮೊಕದ್ದಮೆ ದಾಖಲಾಗಿವೆ. ಮರಗಳನ್ನು ಕಡಿಯುವುದನ್ನು ಪರಿಣಾಮಕಾರಿಯಾಗಿ ನಿಯಂತ್ರಣ ಮಾಡಲಾಗುತ್ತಿದೆ. ರಾತ್ರಿವೇಳೆ ಕಣ್ಣುತಪ್ಪಿಸಿ ಕಡಿಯುತ್ತಿರುವುದರ ಬಗ್ಗೆ ಮಾಹಿತಿ ಇಲ್ಲ, ಈ ಬಗ್ಗೆ ನಿಗಾ ವಹಿಸಲಾಗುವುದು.
-ಮೊಹಮ್ಮದ್ ಮನ್ಸೂರ್, ವಲಯ ಅರಣ್ಯ ಅಧಿಕಾರಿ. * ಎಂ.ಶಿವಮಾದು.