ಬೆಂಗಳೂರು: ನಕಲಿ ಡಿಡಿ ಮೂಲಕ ಕೋಸಮಟ್ಟಂ ಫೈನಾನ್ಸ್ ಲಿಮಿಟೆಡ್‌ಗೆ 95.45 ಲಕ್ಷ ರೂ. ವಂಚಿಸಿ ಕಳೆದ ಎರಡು ವರ್ಷದಿಂದ ತಲೆಮರೆಸಿಕೊಂಡಿರುವ ಆರೋಪಿ ಗಣೇಶ್ ರಾವ್ ಎಂಬುವರನ್ನು ಬಂಧಿಸಿ ಮಾ.24ರೊಳಗೆ ಹಾಜರು ಪಡಿಸುವಂತೆ 4ನೇ ಎಸಿಎಂಎಂ ನ್ಯಾಯಾಲಯ ರಾಜಾಜಿನಗರ ಪೊಲೀಸರಿಗೆ ನಿರ್ದೇಶನ ನೀಡಿದೆ.
ನಕಲಿ ಡಿಡಿ ನೀಡಿ ವಂಚನೆ ಮಾಡಿರುವ ಆರೋಪದ ತನಿಖೆ ಕೈಗೊಂಡಿರುವ ರಾಜಾಜಿನಗರ ಪೊಲೀಸರು ಆರೋಪಿಯ ಬಂಧನಕ್ಕೆ ಲುಕ್‌ಔಟ್ ನೊಟೀಸ್ ಜಾರಿಗೊಳಿಸಿದರೂ ಪತ್ತೆಯಾಗಿಲ್ಲ. ಈ ಸಂಬಂಧ ವಿಚಾರಣೆ ನಡೆಸಿದ ನ್ಯಾಯಾಲಯ, ಮಾ. 24ರೊಳಗೆ ಆರೋಪಿಯನ್ನು ಬಂಧಿಸಿ ಹಾಜರುಪಡಿಸುವಂತೆ ಸೂಚನೆ ನೀಡಿದೆ.
ಗಣೇಶ್ ರಾವ್ ನಿವೃತ್ತ ಕಾನ್‌ಸ್ಟೆàಬಲ್ ಆಗಿದ್ದು, ಹಲವು ಮಂದಿಗೆ ವಂಚನೆ ಮಾಡಿರುವ ಆರೋಪಗಳು ಕೇಳಿಬಂದಿವೆ. ಕೋಸಮಟ್ಟಂ ಫೈನಾನ್ಸ್‌ನಲ್ಲಿ ಅಡವಿಟ್ಟಿದ್ದ ಚಿನ್ನಾಭರಣಗಳನ್ನು ಬಿಡಿಸಿಕೊಳ್ಳುವ ಸಂಬಂಧ ಆರೋಪಿ ಗಣೇಶ್ ರಾವ್ ಡಿಡಿ ನೀಡಿ ನೀಡಿದ್ದರು. ಸಂಸ್ಥೆಯವರು ಡಿಡಿಯನ್ನು ಬ್ಯಾಂಕ್‌ಗೆ ಹಾಕಿದಾಗ ಆರೋಪಿ ನೀಡಿರುವ ಡಿಡಿ ನಕಲಿ ಎಂಬುದು ಬಹಿರಂಗಗೊಂಡಿತ್ತು.
2014ರಲ್ಲಿ ಘಟನೆ ನಡೆದಿದ್ದು, ಸಂಸ್ಥೆಯವರು ರಾಜಾಜಿನಗರ ಪೊಲೀಸರಿಗೆ ದೂರು ನೀಡಿದ್ದಾರೆ. ತನಿಖೆ ಕೈಗೊಂಡ ಪೊಲೀಸರು ಆರೋಪಿ ಬಂಧನಕ್ಕಾಗಿ ಹುಡುಕಾಟ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. 2014ರ ಡಿ.10ರಂದು ನಾಪತ್ತೆಯಾಗಿರುವ ಆರೋಪಿಯನ್ನು ಸೆರೆ ಹಿಡಿಯಲು ಲುಕ್‌ಔಟ್ ನೊಟೀಸ್ ಜಾರಿಗೊಳಿಸಲಾಗಿತ್ತು.
ಗಣೇಶ್ ರಾವ್ ಪ್ರಮುಖ ಆರೋಪಿಯಾಗಿದ್ದು, ಈತನ ಜತೆ ಇತರರು ಭಾಗಿಯಾಗಿದ್ದಾರೆ. ಅವರ ಬಂಧನಕ್ಕೂ ಪೊಲೀಸರು ಬಲೆ ಬೀಸಿದ್ದಾರೆ. ಮಹಾಲಕ್ಷ್ಮೀಲೇಔಟ್‌ನಲ್ಲಿನ ತನ್ನ ಮನೆಯನ್ನು ಮೂವರಿಗೆ ಮಾರಾಟ ಮಾಡಿರುವ ಬಗ್ಗೆಯೂ ಗಣೇಶ್ ರಾವ್ ವಿರುದ್ಧ ಆರೋಪಗಳು ಕೇಳಿಬಂದಿದೆ.